December 24, 2024

Newsnap Kannada

The World at your finger tips!

ragi bele

ಆರೋಗ್ಯ ರಕ್ಷಕ ರಾಗಿ (RAGI)

Spread the love

ನಮ್ಮ ಕರುನಾಡಿನ ಸಾಂಪ್ರದಾಯಿಕ ಬೆಳೆ (RAGI) ರಾಗಿ,ರಾಗಿ ತಿನ್ನುವವನಿಗೆ ರೋಗವಿಲ್ಲ, ರಾಗಿ ತಿಂದವ ನಿರೋಗಿ’ ಎಂಬ ಮಾತುಗಳನ್ನು ನಮ್ಮ ಗ್ರಾಮೀಣ ಜನತೆಯ ಬಾಯಲ್ಲಿ ಕೇಳುತ್ತೇವೆ,

ragi ball

ಈ ಮಾತುಗಳು ಸತ್ಯ ಎಂಬುದನ್ನು ರಾಗಿಯು ಸಾಬೀತು ಪಡಿಸಿದೆ. ‘ಹಿಟ್ಟಂ ತಿಂದವ ಬೆಟ್ಟವಂ ಕಿತ್ತಿಟ್ಟ’ ಎನ್ನುತ್ತಾರೆ ನಮ್ಮ ಪೂರ್ವಿಕರು, ಅಂದರೆ ರಾಗಿ ಮುದ್ದೆ ಉಂಡವ ಬೆಟ್ಟ ಕಿತ್ತಿಡುವಷ್ಟು ಬಲಶಾಲಿಯಾಗಿರುತ್ತಾನೆ.

ರಾಗಿ (RAGI) ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನೊಳಗೊಂಡಿದೆ, ರಾಗಿ ಒಂದು ಅತ್ಯತ್ತಮ ಆಹಾರದ ಬೆಳೆಯಾಗಿದೆ, ಮಕ್ಕಳು ಹಾಗೂ ದೊಡ್ಡವರೆನ್ನದೆ ರಾಗಿಯನ್ನು ಉಪಯೋಗಿಸಬಹುದು.

ರಾಗಿ ಬೇಸಾಯದಲ್ಲಿ ಭಾರತಕ್ಕೆ ಅಗ್ರಸ್ಥಾನವಿದೆ. ಕರ್ನಾಟಕ ಬಿಟ್ಟರೆ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲೂ ರಾಗಿ ಪ್ರಮುಖ ಬೆಳೆಯಾಗಿದೆ.

ರಾಗಿ ಮುದ್ದೆಯ ಜನಪ್ರಿಯತೆ ಎಷ್ಟಿದೆ ಅಂದ್ರೆ ಸಿಎಫ್‌ಟಿ ಆರ್‌ಐ ರಾಗಿ ಮುದ್ದೆ ತಯಾರಿಸುವ ಯಂತ್ರವನ್ನೇ ವಿನ್ಯಾಸಗೊಳಿಸಿದೆ.

ರಾಗಿಯಿಂದ ತಯಾರಿಸುವ ಪ್ರತಿಯೊಂದು ಅಹಾರ ಪದಾರ್ಥವು ದೇಹಕ್ಕೆ ತಂಪು ಮತ್ತು ಆರೋಗ್ಯ ವರ್ಧಕ ರಾಗಿ ಧಾನ್ಯಗಳಲ್ಲಿ ಶ್ರೇಷ್ಠವಾದುದು. ಅದಕ್ಕಿರುವ ಮಹತ್ವ ಘನತೆ ಬೇರೆ ಧಾನ್ಯಗಳಿಗಿಲ್ಲ, ರಾಗಿಯಿಂದ ಮಾಡಲಾದ ರಾಗಿಮುದ್ದೆ ದೇಹಕ್ಕೆ ತುಂಬಾ ತಂಪು. ರಾಗಿ ಗಂಜಿಗೆ ಚಿಟಿಕೆ ಉಪ್ಪು ಹಾಗೂ ಮಜ್ಜಿಗೆಯೊಂದಿಗೆ ಸೇವಿಸಿ ಬಳಲಿಕೆ ಮಾಯವಾಗಿ ಶರೀರವು ಹಾಯೆನಿಸುವುದು.

ಪೋಷಕಾಂಶಗಳ ವಿವರ :

100 ಗ್ರಾಂ ರಾಗಿಯಲ್ಲಿನ ಪೋಷಕಾಂಶಗಳ ವಿವರ ಕೆಳಕಂಡಂತಿದೆ:

  • ಪ್ರೋಟಿನ್ – 7.3 ಗ್ರಾಂ
  • ಕೊಬ್ಬು -1.3 ಗ್ರಾಂ
  • ಪಿಷ್ಟ – 72 ಗ್ರಾಂ
  • ಖನಿಜಾಂಶ -2.7 ಗ್ರಾಂ
  • ಸುಣ್ಣದಂಶ -3.44 ಗಾಂ
  • ನಾರಿನಂಶ —3.6ಗ್ರಾಂ

ರಾಗಿಯ (RAGI) ಉಪಯೋಗಗಳು:

  1. ದೇಹದ ಕೊಬ್ಬನ್ನು ಹಾಗೂ ತೂಕ ಇಳಿಸುವಲ್ಲಿ ಸಹಕಾರಿ
  2. ಮೂಳೆಗಳನ್ನು ಬಲಪಡಿಸುವ ಶಕ್ತಿಯನ್ನು ಇದು ಹೊಂದಿದೆ.
  3. ಮಧುಮೇಹದ ಅಸ್ಪಸ್ಥತೆಗಳ ಅಪಾಯ ಮಟ್ಟವನ್ನು ರಾಗಿ ಮುದ್ದೆ ಕಡಿಮೆ ಮಾಡುತ್ತದೆ.
  4. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
  5. ಮಲಬದ್ಧತೆಗೆ ಉಪಯೋಗಕಾರಿ
  6. ಥೈರಾಯ್ಡ್ ಸಮಸ್ಯೆಗಳಿಂದ ಪರಿಹಾರ.
  7. ತಾಯಂದಿರಿಗೆ ಹಿಮೋಗ್ಲೋಬೀನ್ ಮಟ್ಟವನ್ನು ಸುಧಾರಿಸಲು ಮತ್ತು ಹಾಲಿನ ಉತ್ಪಾದನೆಯಲ್ಲಿ ರಾಗಿ ಸಹಕಾರಿಯಾದುದು.
  8. ರಾಗಿ ತಂಪು ಗುಣ ಹೊಂದಿರುವ ಸ್ವಾತಿಕ ಆಹಾರ.

ರಾಗಿ ಕಾಳುಗಳು

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಅಬ್ಬೂರು ಗ್ರಾಮದವರಾದ ಶ್ರೀನಿವಾಸ ಅವರು ರಾಗಿಯ ಕಾಳುಗಳನ್ನು ವಿಭಿನ್ನ ರೀತಿಯಲ್ಲಿ ಬಳಸಿದ್ದಾರೆ,

1 kg ರಾಗಿಯಲ್ಲಿ 3,42,249 ರಾಗಿ ಕಾಳುಗಳು ಇರುತ್ತವೆ ಎಂದು,ಅತಿ ಕ್ಲಿಷ್ಟಕರವಾದ ಪ್ರಯತ್ನದಲ್ಲಿ ಯಶಸ್ವಿ ಆಗಿದ್ದಾರೆ.

ಶ್ರೀನಿವಾಸ್ ಅವರ ಸಾಧನೆಗೆ ಕರ್ನಾಟಕ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ (Karnataka book of record) ಲಭಿಸಿದೆ.

ಆಹಾರದಲ್ಲಿ ರಾಗಿಯ ಬಳಕೆ: ರಾಗಿಹಿಟ್ಟಿನಿಂದ

  1. ರೊಟ್ಟಿ
  2. ಮುದ್ದೆ
  3. ದೋಸೆ
  4. ಗಂಜಿ
  5. ಹಾಲ್ ಬಾಯಿ(ಸಿಹಿ)

ಮಕ್ಕಳ ಪೌಷ್ಠಿಕ ಆಹಾರ

ಒಡ್ಡರಾಗಿ ಹಿಟ್ಟು ಅಥವಾ ರಾಗಿ ಮಣ್ಣೆ
ಇದು ಅತ್ಯಂತ ಮಿಟಮಿನ್ ಯುಕ್ತ ಅಹಾರ. ಜೀರ್ಣಸಿಕೊಳ್ಳುಲು ಸುಲಭ ಇದನ್ನು ಸೇವಿಸಿ ಬೆಳೆದ ಮಕ್ಕಳು ಬಹಳ ಆರೋಗ್ಯದಿಂದಲೂ ಗಟ್ಟಿ -ಮುಟ್ಟಾಗಿಯೂ ಇರುತ್ತಾರೆ.

ಹುರಿ ಹಿಟ್ಟು

  • 1 kg ರಾಗಿಗೆ
  • 1/2 ಲೋಟ ನೀರಿಗೆ
  • 1/2 ಚಮಚ ಉಪ್ಪು

ಹಾಕಿ ಮಿಕ್ಸ್ ಮಾಡಿ,ಒಂದು ಬಿಳಿ ಬಟ್ಟೆಯ ಮೇಲೆ ಹಾಕಿ ,
ನಂತರ stove ಮೇಲೆ ದಪ್ಪ ತಳದ ಬಾಣಲೆ ಇಟ್ಟು , ರಾಗಿಯನ್ನು ಸ್ವಲ್ಪ ಸ್ವಲ್ಪವೇ ಹಾಕಿ ಹುರಿದರೆ ಅರಳು ಬರುತ್ತದೆ, ಅದನ್ನು ನುಣ್ಣಗೆ ಬೀಸಿ ಪುಡಿ ಮಾಡಿಸಿದರೆ ಹುರಿಹಿಟ್ಟು ರೆಡಿ.

ಹುರಿಹಿಟ್ಟಿಗೆ ಸರಿಯಾದ ಪ್ರಮಾಣದಲ್ಲಿ ಹಾಲು, ಬೆಲ್ಲದ ಪುಡಿ, ಕಾಯಿತುರಿ, ಯಾಲಕ್ಕಿ ಪುಡಿ ಸೇರಿಸಿ ಸೇವಿಸಿದರೆ,ಬಹಳ ಚೆನ್ನಾಗಿರುತ್ತದೆ.

ರಾಗಿ ಅಂಬಲಿ

ರಾಗಿ ಅಂಬಲಿಯನ್ನು ಹೇಗೆ ತಯಾರಿಸುವುದು ಮತ್ತು ಇದನ್ನು ಕುಡಿಯುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳೋಣ. ವಿಶೇಷವಾಗಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ರಾಗಿ ಅಂಬಲಿ ಹೆಚ್ಚು ಸಹಾಯಕವಾಗಿದೆ.

ಬೇಕಾಗುವ ಸಾಮಾಗ್ರಿಗಳು

  1. ರಾಗಿ ಹಿಟ್ಟು – ಅರ್ಧ ಕಪ್
  2. ಕತ್ತರಿಸಿದ ಈರುಳ್ಳಿ – ಅರ್ಧ ಕಪ್
  3. ಕತ್ತರಿಸಿದ ಹಸಿ ಮೆಣಸಿನಕಾಯಿ – ಒಂದು ಚಮಚ
  4. ಕತ್ತರಿಸಿದ ಕೊತ್ತಂಬರಿ ಸೊಪ್ಪು – ಎರಡು ಚಮಚ
  5. ಉಪ್ಪು – ರುಚಿಗೆ ಬೇಕಾದಷ್ಟು
  6. ಜೀರಿಗೆ ಪುಡಿ – ಒಂದು ಚಮಚ
  7. ಕರಿಬೇವು – 6 ಎಲೆಗಳು,
  8. ಮಜ್ಜಿಗೆ – ಎರಡು ಕಪ್
  9. ನಿಂಬೆಹಣ್ಣು – ಒಂದು
  10. ನೀರು – ಅರ್ಧ ಲೀಟರ್

ಮಾಡುವ ವಿಧಾನ :

  • ಮೊದಲಿಗೆ ಒಂದು ಕಪ್ ನೀರಿನಲ್ಲಿ ಅರ್ಧ ಕಪ್ ರಾಗಿ ಹಿಟ್ಟನ್ನು ಹಾಕಿ, ಗಂಟು ಬರದಂತೆ ಮಿಕ್ಸ್ ಮಾಡಿ ಇಟ್ಟುಕೊಳ್ಳಿ.
  • ಅರ್ಧ ಲೀಟರ್ ನೀರನ್ನು ಕುದಿಸಿ ಅದರಲ್ಲಿ ನಾವು ಮೊದಲು ತಯಾರಿ ಮಾಡಿಕೊಂಡ ರಾಗಿ ಮಿಶ್ರಣವನ್ನು ಇದರಲ್ಲಿ ಹಾಕಿ.
  • ಸುಮಾರು 7 ನಿಮಿಷಗಳ ಕಾಲ ಚೆನ್ನಾಗಿ ಉಂಡೆ ಬಾರದಂತೆ ಕುದಿಸಿರಿ.
  • ಬಳಿಕ ಅದು ತಣ್ಣಗಾದ ಮೇಲೆ ಅದಕ್ಕೆ ಮಜ್ಜಿಗೆ, ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ಕರಿಬೇವು, ರುಚಿಗೆ ಬೇಕಾದಷ್ಟು ಉಪ್ಪು, ಜೀರಿಗೆ ಪುಡಿ ಹಾಕಿ ಮಿಕ್ಸ್ ಮಾಡಿ.
  • ಈಗ ಅದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಬೆರೆಸಿ ರಾಗಿ ಅಂಬಲಿ ಸವಿಯಿರಿ.

“ರಾಗಿ ತಂದೀರ”

ಪುರಂದರದಾಸರು ಸಹ ರಾಗಿಯ ಮಹತ್ವವನ್ನು ತಮ್ಮ ಕೃತಿಗಳ ಮೂಲಕ ಸಾರಿದ್ದಾರೆ.

ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ರಾಗಿ ತಂದೀರಾ.

ಡೆಲ್ಲಿಯಲ್ಲಿ ರಾಗಿ ಮುದ್ದೆ ಫೇಮಸ್ ಮಾಡಿದ ದೊಡ್ಡಗೌಡ್ರು !

ರಾಗಿ ಮುದ್ದೆಯಿಂದಲೇ ಆರೋಗ್ಯ ಭಾಗ್ಯ ಕಾಪಾಡಿಕೊಂಡು ಬಂದ, ರಾಗಿ ಮುದ್ದೆ ಪ್ರಿಯರಾದ ಮಾಜಿ ಪ್ರಧಾನ ಮಂತ್ರಿ ದೇವೇಗೌಡ್ರು ಮುದ್ದೆ ( Ragi Ball) ಡೆಲ್ಲಿಗೆ ಪರಿಚಯಿಸಿದರು.

1996 ರಲ್ಲಿ 10 ತಿಂಗಳು ಕಾಲ ಪ್ರಧಾನಿಯಾಗಿದ್ದ ದೇವೇಗೌಡ್ರು ಡೆಲ್ಲಿಯ ತಮ್ಮ ನಿವಾಸದಲ್ಲಿ ನಿತ್ಯವೂ ಊಟಕ್ಕೆ ರಾಗಿ ಮುದ್ದೆ ಮಾಡುವ ಅಡುಗೆ ಭಟ್ಟನನ್ನೇ ಕರೆದುಕೊಂಡು ಹೋಗಿದ್ದು ಇತಿಹಾಸವಾಗಿದೆ.

ಆಗಿನಿಂದಲೂ ದೆಹಲಿಯ ಕರ್ನಾಟಕ ಭವನದಲ್ಲಿ ರಾಗಿ ಮುದ್ದೆ ಹಾಗೂ ಸೊಪ್ಪು ಸಾರು ಊಟ ಮಾಮೂಲಿಯಾಗಿದೆ.

Copyright © All rights reserved Newsnap | Newsever by AF themes.
error: Content is protected !!