November 15, 2024

Newsnap Kannada

The World at your finger tips!

sarvapalli radakrishna

ಕತ್ತಲಿನಿಂದ ಬೆಳಕಿನತ್ತ ಕೈ ಹಿಡಿದು‌ ನಡೆಸುವವನೇ ಗುರು

Spread the love

ಆಶಾ.ಎಲ್.ಎಸ್, ಶಿವಮೊಗ್ಗ.

ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋಭವ. ಹೀಗೆ ಜನಕರ ನಂತರದ ಸ್ಥಾನ ಗುರುಗಳಿಗೆ. ಗುರುಗಳಿಗೆ ಅಷ್ಟು ಮಹತ್ವ ನೀಡಲಾಗಿದೆ.

sarve

ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು. ಹುಟ್ಟಿದಂದಿನಿಂದ ಅಂಬೆಗಾಲಿಟ್ಟು, ನಡೆದಾಡುವವರೆಗೂ, ಸಂಬಂಧಗಳನ್ನು ಪರಿಚಯಿಸುತ್ತಾ, ನಂತರವೂ ಜೀವನ ಸಂಸ್ಕಾರಗಳನ್ನು ಕಲಿಸುವವಳು ಜನನಿ. ನಂತರ ಬರುವವರೇ ಸದ್ಗುರು. ಜೀವನದ ಅರಿವಿನ ಶಿಕ್ಷಣ ನೀಡುವರು.

ಆ ಕರಿಹಲಗೆ ಮೇಲಿನ ಅಕ್ಷರಗಳನ್ನು ಮರೆವುದುಂಟೇ. ಅಕ್ಕರೆಯಲಿ ನಮ್ಮ ಕರಪಿಡಿದು ಕೈಗಳಿಗೆ ಧೀಶಕ್ತಿಯ ತುಂಬಿ ಬರೆಸಿದ ಕೈಗಳಿಂದ ಅಡಿಗಡಿಗೂ ತಪ್ಪುಗಳ ತಿದ್ದಿ ಸರಿಮಾರ್ಗಗಳ ತೋರಿದವರು ಶಿಕ್ಷಕರು. ಮನಕೆ ಸಂಸ್ಕಾರ ಜೀವನದ ಬೆಳಕು ಶಿಕ್ಷಣ. ಜ್ಞಾನ ವಿಜ್ಞಾನ ದೇಶದ ಪ್ರಗತಿ ಜನಮನದಲಿ ದೇಶಭಕ್ತಿ ಅಭಿಮಾನ ತುಂಬುವುದು ಶಿಕ್ಷಣ. ಶಿಕ್ಷಕರೇ ದೇಶದ ಶಿಲ್ಪಿಗಳು.

ನಾವು ಎಷ್ಟು ಓದಿದ್ದೇವೆ ಎನ್ನುವುದು ಮುಖ್ಯವಲ್ಲ. ನಿಜವಾದ ಶಿಕ್ಷಣ ಅಂದರೆ, ಬೇರೇಯವರೊಂದಿಗಿನ ನಮ್ಮ ನಡವಳಿಕಯೇ ನಮ್ಮ ಸಂಸ್ಕಾರ.

ಮುಂದೆ ಗುರಿ ಹಿಂದೆ ಗುರು ಇರಬೇಕು ಅಂತಾರೆ. ಗುರಿಯ ತಲುಪಲು ಸೂಕ್ತ ಗುರುಗಳ ಮಾರ್ಗದರ್ಶನ ಮುಖ್ಯವಾಗಿ ಬೇಕು. ಜೀವನ ಬೆಳಕಾಗಲು ಶಿಕ್ಷಣ ಮಹತ್ವಪೂರ್ಣ ವಾದುದಾಗಿದೆ.

ಹರ ಮುನಿದರೆ ಗುರು ಕಾಯ್ವನು, ಗುರು ಮುನಿದರೆ ಯಾರು ಕಾಯ್ವರು. ಹರ ಮುನಿದರೂ ಗುರು ಕಾಯ್ವನು ಎನ್ನುವಂತೆ, ಗುರುವೆಂಬ ದೇವರ ಆಶೀರ್ವಾದ ಸದಾ ಕಾಯುತಲಿರಲಿ. ‘ಗು’ ಎಂದರೆ ಕತ್ತಲು ‘ರು’ ಎಂದರೆ ಬೆಳಕು. ಕತ್ತಲಿನಿಂದ ಬೆಳಕಿನೆಡೆಗೆ ಒಯ್ಯುವವನೇ ಗುರು. ಗುರು ಎಂಬ ಶಬ್ದಕ್ಕೆ ದೊಡ್ಡದೂ, ದಾರಿ ತೋರುವವ ಎಂಬ ಅರ್ಥಗಳಿವೆ.

ಗುರು ಚರಿತ್ರೆಯ ಎರಡನೆ ಅಧ್ಯಾಯದಲ್ಲಿ ಗುರು ಎಂಬ ಬಗ್ಗೆ- ‘ಗ’ ಕಾರವು ಸಿದ್ಧಿಯನ್ನು ಕೊಡುವಂತಹದ್ದು, ‘ರ’ ಕಾರವು ಪಾಪವನ್ನು ಸುಡುವಂತಹದ್ದು, ‘ಉ’ ಕಾರವು ವಿಷ್ಣು ಸ್ವರೂಪವುಳ್ಳದ್ದು ಎಂದು ಉಲ್ಲೇಖವಿದೆ. ‘ಗು’ ಎಂದರೆ ಕತ್ತಲು, ‘ರು’ ಎಂದರೆ ಬೆಳಕು. ಕತ್ತಲಿನಿಂದ ಬೆಳಕಿನೆಡೆಗೆ ಒಯ್ಯುವವನೇ ಗುರು. ಗುರು ಎಂಬ ಶಬ್ದಕ್ಕೆ ದೊಡ್ಡದೂ, ದಾರಿ ತೋರುವವ ಎಂಬ ಅರ್ಥಗಳಿವೆ.

ಸೆಪ್ಟೆಂಬರ್ ೫ ರಂದು ಭಾರತರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ನೆನಪಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ವೃತ್ತಿಗಳಲ್ಲಿ ಅತ್ಯಂತ ಶ್ರೇಷ್ಠ ವೃತ್ತಿ ಬೋಧನಾ ವೃತ್ತಿ. ಮಕ್ಕಳ ಗುರಿಯನ್ನು ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ.

ಮೌಲ್ಯಯುತವಾದ ಸಮಾಜವನ್ನು ರೂಪಿಸುವ ಶಿಕ್ಷಕರಿಗೆ ತಮ್ಮದೇ ಆದ ದಿನವೊಂದನ್ನು ಆಚರಿಸಿ, ಸಂಭ್ರಮಿಸುವ ದಿನವೇ ಈ ಶಿಕ್ಷಕರ ದಿನಾಚರಣೆ.

ನಾವು ಬದುಕಿನ ಕೊನೆಯವರೆಗೂ ಕಲಿಯುವುದು ಇದ್ದೇ ಇದೆ. ಅದಕ್ಕಾಗಿ ಹಂತಹಂತವಾಗಿ ಗುರುವಿನ ಬದಲಾವಣೆ ಇರುತ್ತದೆ. ಪ್ರಾಥಮಿಕ ಹಂತದಿಂದ ಕಾಲೇಜು ಹಂತದವರೆಗೂ ಗುರುಗಳ ಬದಲಾವಣೆ ಬೇಕಾಗುತ್ತದೆ.

ನಮಗೆ ಶಿಕ್ಷಣ ಹೇಳಿಕೊಟ್ಟ ಎಲ್ಲಾ ಗುರುಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಾತಃಸ್ಮರಣೀಯರಾಗಿದ್ದಾರೆ. ಕೆಲವರು ದಂಡಂ ದಶಗುಣಂ ಅನ್ನುವವರಿದ್ದರೆ, ಕೆಲವರು ಮೃದು ಧೋರಣೆಯವರಿರುತ್ತಾರೆ. ಎಲ್ಲರೂ ಸಾಮಾನ್ಯವಾಗಿ ನೆನಪಿನಲ್ಲಿಟ್ಞುಕೊಂಡಿರುತ್ತೇವೆ.

ಡಿವಿಜಿಯವರು ಮರುಳ ಮುನಿಯನ ಕಗ್ಗದಲ್ಲಿ 372 ರಲ್ಲಿ ಗುರುವಿನ ಹೀಗೆಂದಿದ್ದಾರೆ- “
ಗುರುವಿಲ್ಲವೆನಬೇಡ, ಜಗವೇ ಜಗದ್ಗುರುವು, ಅರಿ ಮಿತ್ರ, ವಿಭು, ಭೃತ್ಯ, ಸತಿ, ಪುತ್ರ, ವರ್ಗ, ಪರಿಪರಿಯ ಪಾಠಗಳ ಕಲಿಸುತಿರ್ಪರ ನಿನಗೆ ಅರಿತುಕೊಳ್ಳುವ ನಾವು ಮರುಳ ಮುನಿಯ” . ಅಂದರೆ ಪ್ರಕೃತಿಯೇ ಜಗದ್ಗುರು, ಶತೃ, ಮಿತ್ರ, ಒಡೆಯ, ಸೇವಕ, ಪತ್ನಿ, ಪುತ್ರ, ಮತ್ತಿತರು, ನಿನಗೆ ಪರಿಪರಿಯ ಪಾಠವನ್ನು ಕಲಿಸುತ್ತಿದ್ದಾರೆ. ಅವರಿಂದ ನೀನು ಪಾಠ ಕಲಿತುಕೋ ಎನ್ನುತ್ತಾರೆ ಡಿವಿಜಿಯವರು.

ಹಾಗೆಯೇ ಸರ್ವಜ್ಞ ರ ಒಂದು ವಚನದಲ್ಲಿ ಹೀಗೆನ್ನುತ್ತಾರೆ. ತಂದೆಗೂ ಗುರುವಿಗೂ ಒಂದು ಅಂತರವುಂಟು. ತಂದೆ ತೋರ್ವ ಶ್ರೀ ಗುರುವಾ, ಗುರುರಾಯ ಬಂಧನವ ಕಳೆವ ಸರ್ವಜ್ಞ’ ಎಂದು. ಇದು ಅಕ್ಷರಶಃ ಸತ್ಯ.
ಆತ್ಮಜ್ಞಾನ, ಆತ್ಮವಿಶ್ವಾಸ, ಆತ್ಮಗೌರವವನ್ನು ಕಲಿಸುವವನೇ ನಿಜವಾದ ಗುರು ಅಥವಾ ಶಿಕ್ಷಕ ಎನಿಸುತ್ತಾನೆ.

ವಿದ್ಯಾರ್ಥಿಗಳ ಜೀವನ ಮತ್ತು ವೃತ್ತಿಗೆ ಸೂಕ್ತರೂಪ ನೀಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವವರು ಶಿಕ್ಷಕರು. ಹೀಗಾಗಿ ಶಿಕ್ಷಕರನ್ನು ನೆನಪಿಸಿಕೊಳ್ಳುವುದು ಮತ್ತು ಗೌರವಿಸುವುದು ಈ ಆಚರಣೆಯ ಉದ್ದೇಶ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಘೋಷವಾಕ್ಯ ಕೇಳಿರುತ್ತೇವೆ. ಅಂತಹ ಭವಿಷ್ಯದ ಪ್ರಜೆಗಳನ್ನು ಸಿದ್ಧಪಡಿಸುವ ಹಾಗೂ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಹೊಣೆ ಶಿಕ್ಷಕರ ಮೇಲಿರುತ್ತದೆ. ಜಯಾಪಜಯಗಳನ್ನು ಜೀವನದಲ್ಲಿ ಸಮಚಿತ್ತದಿಂದ ಕ್ರೀಡಾಸ್ಫೂರ್ತಿ ಯಿಂದ ಎದುರಿಸುವ ಸಾರ್ಥಕ ಮನೋಭಾವಕ್ಕೆ ತಳಹದಿ ಹಾಕಿಕೊಡಬೇಕು. ಜೀವನದಲ್ಲಿ ವಿದ್ಯಾಲಯದಲ್ಲಿ ಕಲಿಯುವ ಪಾಠವು ಒಂದೆಡೆಯಾದರೆ, ಅನುಭವದಿಂದ ಕಲಿಯುವ ಪಾಠಗಳು, ಕಾರಣಕರ್ತರು ಸಹ ಗುರುಗಳೇ. ಏಕೆಂದರೆ ಜೀವನಪಾಠವನ್ನು ಅವರಿಂದ ಕಲಿತಿರುತ್ತೇವೆ, ಕಲಿಯುತ್ತಿರುತ್ತೇವೆ.

asha shivamogga
ಆಶಾ.ಎಲ್.ಎಸ್, ಶಿವಮೊಗ್ಗ.
Copyright © All rights reserved Newsnap | Newsever by AF themes.
error: Content is protected !!