January 28, 2026

Newsnap Kannada

The World at your finger tips!

L1

ಗೌರವಧನ ಹೆಚ್ಚಳಕ್ಕೆ ನಿರ್ಲಕ್ಷ್ಯ

Spread the love

ಬೆಂಗಳೂರು

ಕರ್ನಾಟಕ ರಾಜ್ಯದ ಪದವಿ ಕಾಲೇಜುಗಳಲ್ಲಿ 14,456 ಅತಿಥಿ ಉಪನ್ಯಾಸಕರು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ 3054 ಅತಿಥಿ ಉಪನ್ಯಾಸಕರ ಸಂಬಳ ಹಾಗೂ ಸೌಲಭ್ಯ ವಿಷಯ ದಲ್ಲಿ ಸರ್ಕಾರದ ನಿರ್ಲಕ್ಷ್ಯ ಹೆಚ್ಚಾಗಿದೆ.
ಈ ಕುರಿತಂತೆ ಅತಿಥಿ ಉಪನ್ಯಾಸ ಸಂಘದ ಪದಾಧಿಕಾರಿ ರಮೇಶ್ ಬಾಬು ಮುಖ್ಯ ಮಂತ್ರಿ ಗಳಿಗೆ ಪತ್ರ ಬರೆದು ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಪದವಿ ಕಾಲೇಜುಗಳಲ್ಲಿ ಕ್ರಮವಾಗಿ 11,000 ಹಾಗೂ 13,000 ರೂಪಾಯಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ 8000 ರು. ಗೌರವ ಧನವನ್ನು ಅತಿಥಿ ಉಪನ್ಯಾಸಕರಿಗೆ ನೀಡಲಾಗುತ್ತಿದೆ. ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಅತಿಥಿ ಉಪನ್ಯಾಸಕರಿಗೆ ಮಾಸಿಕ 5000 ರೂಪಾಯಿಗಳ ಹೆಚ್ಚುವರಿ ಗೌರವ ಧನ ನೀಡಲು ತೀರ್ಮಾನವಾಗಿದ್ದರೂ ಜಾರಿ ಆಗಲಿಲ್ಲ. ತದನಂತರ ಈಗಿನ ಸರ್ಕಾರದಲ್ಲಿ ಐದು ಸಾವಿರ ರುಗಳನ್ನು ಹೆಚ್ಚು ಮಾಡಲು ಮುಖ್ಯಮಂತ್ರಿಗಳ ಸೂಚನೆ ಇದ್ದರೂ ಅಧಿಕಾರಿಗಳು ಜಾರಿ ಮಾಡುತ್ತಿಲ್ಲ ಎಂದಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆ ಆದ ಪರಿಣಾಮ ಮಾರ್ಚ್ 22 ರಿಂದ ಪದವಿ ತರಗತಿಗಳ ಶೈಕ್ಷಣಿಕ ಚಟುವಟಿಕೆಗಳನ್ನು ನಿಲ್ಲಿಸಲಾಯಿತು. ನಿಯಮಾನುಸಾರ ಮಾರ್ಚ್ ಪೂರ್ಣ ತಿಂಗಳ ಗೌರವ ಧನವನ್ನು ಅತಿಥಿ ಉಪನ್ಯಾಸಕರಿಗೆ ಪಾವತಿ ಮಾಡಬೇಕಾಗಿತ್ತು. ಈ ಸಂಬಂಧ ಬಜೆಟ್ ಅನುಗುಣವಾಗಿ ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ಹಣ ಬಿಡುಗಡೆ ಆಗಿರುತ್ತದೆ. ಆದರೆ ಬಹಳಷ್ಟು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಮಾರ್ಚ್ ಪೂರ್ಣ ತಿಂಗಳ ಗೌರವ ಧನ ಪಾವತಿ ಮಾಡಿರುವುದಿಲ್ಲ ಎಂದು ಹೇಳಿದ್ದಾರೆ.
ಕೆಲವು ಕಾಲೇಜುಗಳಲ್ಲಿ ಮಾರ್ಚ್ 21ರವರಗೆ ಅರ್ಧ ವೇತನ ಪಾವತಿ ಮಾಡಲಾಗಿದೆ. ಸರ್ಕಾರದ ಸೂಚನೆ/ನಿರ್ದೇಶನ ಇಲ್ಲದ ಕಾರಣ ಆಯಾ ಕಾಲೇಜಿನ ಪ್ರಾಂಶುಪಾಲರ ಖಾತೆಯಲ್ಲಿ ಹಣ ಇದ್ದರೂ ಅತಿಥಿ ಉಪನ್ಯಾಸಕರಿಗೆ ಪಾವತಿ ಮಾಡಿರುವುದಿಲ್ಲ. ಈ ಮೂಲಕ ಅತಿಥಿ ಉಪನ್ಯಾಸಕರನ್ನು ಶೋಷಣೆ ಮಾಡಲಾಗಿದೆ.

ಪ್ರತಿ ಅತಿಥಿ ಉಪನ್ಯಾಸಕರಿಗೆ ಮಾಸಿಕ ಕನಿಷ್ಟ ಇಪ್ಪತೈದು ಸಾವಿರ ರೂಪಾಯಿ ಗೌರವ ಧನ, ಸೇವಾ ಬದ್ರತೆ, ವರ್ಷದ 12 ತಿಂಗಳ ಪಾವತಿ, ಇತರೆ ಸೇವಾ ಸೌಲಭ್ಯ ಮತ್ತು ನಿರಂತರ ಕಾರ್ಯಭಾರ ಹಂಚಿಕೆಯ ಅವರ ಬೇಡಿಕೆಗಳು ಇದುವರಗೆ ಜಾರಿ ಆಗಿರುವುದಿಲ್ಲ. ರಾಜ್ಯ ಸರ್ಕಾರವು ಅವರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಗಣಿಸಿ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳಲ್ಲಿ ಕೋರಿದ್ದಾರೆ

error: Content is protected !!