ಜೆಎಸ್ ಟಿ ಕೇಂದ್ರದ ಮೇಲೆ ಒತ್ತಡದ ತಂತ್ರ – ಸಾಲ ಮಾಡಲು ಸುತಾರಾಂ ನಕಾರ

Team Newsnap
3 Min Read
Center bowed to people's opposition – GST exemption on 14 items including rice, curd ಜನರ ವಿರೋಧಕ್ಕೆ ಮಣಿದ ಕೇಂದ್ರ – ಅಕ್ಕಿ, ಮೊಸರು ಸೇರಿದಂತೆ 14 ವಸ್ತುಗಳ ಮೇಲೆ ಜಿಎಸ್‍ಟಿ ವಿನಾಯಿತಿ #Thenewsnap #Latestnews #India #Central_Government #Indian_government #GST #Bengaluru

ಬೆಂಗಳೂರು

ಜಿಎಸ್‌ಟಿ ಸಭೆಯಲ್ಲಿ ರಾಜ್ಯಗಳಿಗೆ ಆರ್‌ಬಿಐನಿಂದ ಸಾಲ ಪಡೆಯಲು ಕೇಂದ್ರ ಸಲಹೆ ಮಾಡಿರುವುದನ್ನು ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ಒಪ್ಪಿಕೊಂಡಿದ್ದರೆ ಬಿಜೆಪಿಯೇತರ ರಾಜ್ಯ ಸರ್ಕಾರಗಳು ವಿರೋಧ ವ್ಯಕ್ತಪಡಿಸಿವೆ. ಕೇಂದ್ರ ಸರ್ಕಾರ ಜಿಎಸ್‌ಟಿ ಕಾಯ್ದೆಯಂತೆ ಪರಿಹಾರ ನೀಡಬೇಕು. ಕೇಂದ್ರವೇ ಸಾಲ ಮಾಡಿ ನಮಗೆ ಪರಿಹಾರ ನೀಡಲಿ ಎಂಬುದು ರಾಜ್ಯ ಸರ್ಕಾರಗಳ ವಾದ. ಕೇಂದ್ರ ಸರ್ಕಾರ ೭ ದಿನಗಳ ಅವಕಾಶ ನೀಡಿದ್ದು ಕೇಂದ್ರ ಹಣಕಾಸು ಸಚಿವರು ಎಲ್ಲ ರಾಜ್ಯಗಳ ಹಣಕಾಸು ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. 

ಈಗಿನ ಸನ್ನಿವೇಶದಲ್ಲಿ ರಾಜ್ಯ ಸರ್ಕಾರಗಳು ಸಾಲ ಮಾಡಲು ಹಿಂಜರಿಯುತ್ತಿವೆ. ಸಾಲ ಮಾಡಿದರೆ ಮುಂದಿನ ದಿನಗಳಲ್ಲಿ ಅದನ್ನು ಮರುಪಾವತಿ ಮಾಡುವುದು ಕಷ್ಟ. ಅಲ್ಲದೆ ೨೦೨೧ ರ ನಂತರ ಪರಿಸ್ಥಿತಿ ಹೇಗಿರುತ್ತದೆ ಎಂಬುದು ಯಾರಿಗೂ ತಿಳಿಯದು. ಕೇಂದ್ರ ಸರ್ಕಾರವಾದರೆ ಅದಕ್ಕೆ ಹಣಕಾಸು ಸಂಪನ್ಮೂಲ ಇರುತ್ತದೆ. ಅಲ್ಲದೆ ಕೊರೊನಾ ನಿಧಿಯನ್ನು ಹೊಂದಿದೆ. ರಾಜ್ಯ ಸರ್ಕಾರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಿಎಸ್‌ಆರ್ ಹಣ ನೀಡಿದರೆ ವಿನಾಯಿತಿ ನೀಡುವುದಾಗಿ ಪ್ರಕಟಿಸಿಲ್ಲ. ಪಿಎಂ ಕೇರ್ ಫಂಡ್ ಲೆಕ್ಕವನ್ನೂ ಕೊಡದೆ ರಾಜ್ಯಗಳಿಗೆ ತಮ್ಮದೇ ಆದ ನಿಧಿ ಸ್ಥಾಪಿಸಿಕೊಳ್ಳಲು ಅವಕಾಶ ನೀಡದೇ ಇರುವುದು ಅಸಮಧಾನಕ್ಕೆ ಕಾರಣವಾಗಿದೆ. 

ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಸಾಲದ ವ್ಯವಸ್ಥೆ ಮಾಡಿದ್ದರೂ ಬ್ಯಾಂಕ್‌ಗಳು ಅದನ್ನು ಬಳಸಿಕೊಳ್ಳಲು ಮುಂದೆ ಬರುತ್ತಿಲ್ಲ. ಉದ್ಯಮಿಗಳಿಗೆ ಸಾಲ ನೀಡಿದರೆ ಹಣ ಮರುಪಾವತಿ ಕಷ್ಟ ಎಂದು ಬ್ಯಾಂಕ್‌ಗಳು ಭಾವಿಸಿವೆ. ಹೀಗಾಗಿ ಬ್ಯಾಂಕ್‌ಗಳು ಸಾಲ ವಿತರಣೆಗೆ ಮುಂದಾಗುತ್ತಿಲ್ಲ. ಜಿಎಸ್‌ಟಿ ಸಭೆಯಲ್ಲಿ ರಾಜ್ಯ ಸರ್ಕಾರಗಳಿಗೆ ಸಾಲ ತೆಗೆದುಕೊಳ್ಳಲು ಅವಕಾಶ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಇದಕ್ಕಿಂತ ಕೇಂದ್ರವೇ ಸಾಲ ತೆಗೆದುಕೊಂಡು ರಾಜ್ಯಗಳಿಗೆ ಆದಾಯದ ರೂಪದಲ್ಲಿ ನೀಡುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ರಾಜ್ಯಗಳು ಸಾಲ ತೆಗೆದುಕೊಂಡು ನಿಭಾಯಿಸುವುದು ಕಷ್ಟ. ೨೦೨೨ ನಂತರ ಸಾಲವನ್ನು ಮರುಪಾವತಿ ಮಾಡಬೇಕು. ಆ ವೇಳೆಗೆ ಆರ್ಥಿಕ ಪರಿಸ್ಥಿತಿ ಉತ್ತಮಗೊಂಡಿರುತ್ತದೆ ಎಂದು ಹೇಳುವ ಹಾಗಿಲ್ಲ. ಆಗ ಜಿಎಸ್‌ಟಿ ಮೇಲೆ ವಿಧಿಸಿರುವ ಹೆಚ್ಚಿನ ಸೆಸ್ ಮತ್ತೆ ೫ ವರ್ಷ ವಿಸ್ತರಿಸಬೇಕಾಗುತ್ತದೆ. ಅಂದರೆ ಜನಸಾಮಾನ್ಯರ ಹೆಚ್ಚುವರಿ ಹೊರೆ ಬೀಳಲಿದೆ. ಅದಕ್ಕೆ ಪರ್ಯಾಯವಾಗಿ ಜಿಎಸ್‌ಟಿ ಕಾಯ್ದೆಯಂತೆ ಪರಿಹಾರ ನೀಡುವುದು ಕೇಂದ್ರದ ಕರ್ತವ್ಯ. ಅದನ್ನು ಮುಂದುವರಿಸುವುದು ಸೂಕ್ತ. ಆಗ ಜಿಎಸ್‌ಟಿ ಪದ್ಧತಿ ನೆಲೆವೂರಲು ಸಾಧ್ಯವಾಗಲಿದೆ.

ಈಗ ಕೇಂದ್ರ ಸರ್ಕಾರ ರಾಜ್ಯಗಳಿಗೆ ಎರಡು ಅವಕಾಶಗಳನ್ನು ನೀಡಿದೆ. ಮೊದಲನೆಯದು ಕೇಂದ್ರ ನೀಡುವ ಪರಿಹಾರದಲ್ಲಿ ಕೊರತೆ ಬೀಳುವುದನ್ನು ಆರ್‌ಬಿಐ ಮೂಲಕ ವಿಶೇಷ ಸಾಲ ಪಡೆಯುವುದು. ಎರಡನೆಯದು ಇಡೀ ವರ್ಷದ ಪರಿಹಾರವನ್ನು ಸಾಲದ ರೂಪದಲ್ಲಿ ಪಡೆದು ೨೦೨೨ ರಿಂದ ಸೆಸ್ ಸಂಗ್ರಹಿಸಿ ಸಾಲವನ್ನು ತೀರಿಸುವುದು. ಜಿಎಸ್‌ಟಿ ನಿಯಮದಂತೆ ಕೇಂದ್ರ ಸರ್ಕಾರ ೩ ಲಕ್ಷ ಕೋಟಿ ರೂ. ಪರಿಹಾರ ನೀಡಬೇಕು. ಸೆಸ್ ಸಂಗ್ರಹ ೬೫ ಸಾವಿರ ಕೋಟಿ ರೂ. ಉಳಿದ ೨.೩೫ ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ಪಡೆಯಬೇಕು. ಕೇಂದ್ರ ಸರ್ಕಾರ ರಾಜ್ಯಗಳಿಗೆ ೭ ದಿನಗಳ ಕಾಲಾವಕಾಶ ನೀಡಿದೆ. ಕರ್ನಾಟಕ ಸರ್ಕಾರ ಪರಿಹಾರ ರೂಪದಲ್ಲಿ ೧೩,೭೬೪ ಕೋಟಿ ರೂ. ಪಡೆಯಬಹುದು. ಅಥವ ಇಡೀ ವರ್ಷದ ಒಟ್ಟು ೩೦,೭೬೪ ಕೋಟಿ ರೂ. ಪರಿಹಾರ ಪಡೆಬಹುದು. ಇದನ್ನು ಸಾಲದ ರೂಪದಲ್ಲಿ ಪಡೆಯುವುದಕ್ಕೆ ಅವಕಾಶ ಇರುವುದರಿಂದ ಕರ್ನಾಟಕ ಎರಡನೇ ಸೂತ್ರವನ್ನು ಒಪ್ಪಿಕೊಳ್ಳಬಹುದು. ಮಹಾರಾಷ್ಟç ಸರ್ಕಾರ ಈಗಾಗಲೇ ಸ್ಟಾಂಪ್ ಶುಲ್ಕವನ್ನು ಕಡಿಮೆ ಮಾಡಿ ಹೆಚ್ಚಿನ ವರಮಾನ ಪಡೆಯಲು ಪ್ರಯತ್ನಿಸುತ್ತಿದೆ. ಅದೇ ದಾರಿಯನ್ನು ಬೇರೆ ರಾಜ್ಯಗಳೂ ಅನುಸರಿಸಬಹುದು.

ತೆರಿಗೆ ಸಂಗ್ರಹ ರಾಜ್ಯ ಸರ್ಕಾರಗಳಿಗೆ ಲಭಿಸಿದ್ದ ಸಂವಿಧಾನಬದ್ಧ ಹಕ್ಕು. ಅದನ್ನು ಜಿಎಸ್‌ಟಿಗಾಗಿ ತ್ಯಾಗಮಾಡಬೇಕಾಗಿಬಂದಿತು. ಅದಕ್ಕಾಗಿ ಪರಿಹಾರ ನೀಡಲು ಕೇಂದ್ರ ಕಾನೂನುಬದ್ಧವಾಗಿ ಒಪ್ಪಿಕೊಂಡಿದೆ. ಅದರಂತೆ ಪರಿಹಾರ ಕೊಡಲೇಬೇಕು. ಆದರೆ ಕೊರೊನಾ ಸೋಂಕು ದೇವರ ಕೊಡುಗೆ. ಅದನ್ನು ಎದುರಿಸಲೇಬೇಕು ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ. ಇದೇ ಮಾತು ರಾಜ್ಯಗಳಿಗೂ ಅನ್ವಯಿಸಬೇಕಾಗುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ವ್ಯಕ್ತಿಗಳು ಸಾಲ ಮಾಡಲು ಹೆದರುವ ಹಾಗೆ ಸರ್ಕಾರಗಳೂ ಹಿಂದೇಟು ಹಾಕುವುದು ಸಹಜ. ೨೦೨೨ ರ ನಂತರ ಆರ್ಥಿಕ ಪರಿಸ್ಥಿತಿ ಹೇಗಿರುತ್ತದೆ ಎಂಬದನ್ನು ಈಗಲೇ ಊಹಿಸುವುದು ಕಷ್ಟ. ಒಂದು ವೇಳೆ ಉತ್ತಮಗೊಳ್ಳಲಿಲ್ಲ ಎಂದರೆ ಸರ್ಕಾರಗಳು ಸಾಲದ ಸುಳಿಯಲ್ಲಿ ಸಿಲುಕುತ್ತವೆ. ಈಗಲೇ ಬ್ಯಾಂಕ್‌ಗಳು ಸಾಲ ನೀಡಲು ಹಿಂಜರಿಯುತ್ತಿವೆ. ಆರ್‌ಬಿಐ ಅಭಯಹಸ್ತ ನೀಡಿದರೂ ಬ್ಯಾಂಕ್‌ಗಳು ಮುಂದೆ ಬರುತ್ತಿಲ್ಲ. ಇಂಥ ಸಂದರ್ಭದಲ್ಲಿ ಕೇಂದ್ರವೇ ಸಾಲ ತೆಗೆದು ರಾಜ್ಯಗಳಿಗೆ ನೀಡಬೇಕು. ಆಗ ರಾಜ್ಯಗಳು ತಮ್ಮ ಸಂಪನ್ಮೂಲ ರೂಢಿಸಿಕೊಳ್ಳಲು ನಿರಾತಂಕವಾಗಿ ಕ್ರಮ ಕೈಗೊಳ್ಳಬಹುದು. ಕೇಂದ್ರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಬಾರದು ಎಂಬುದು ತಜ್ಞರ ಅಭಿಮತ. ಇದರ ಬಗ್ಗೆ ಒಂದು ವಾರ ಚಿಂತಿಸುವುದಕ್ಕೆ ಅವಕಾಶ ಇರುವುದರಿಂದ ರಾಜ್ಯಗಳು ಒಮ್ಮತದ ಅಭಿಪ್ರಾಯಕ್ಕೆ ಬರಬೇಕಿದೆ.

Share This Article
1 Comment