ಭದ್ರಾವತಿ (VISL) ಕಬ್ಬಿಣ ಕಾರ್ಖಾನೆಗೆ ಸುವರ್ಣ ಯುಗ ಆರಂಭ

Team Newsnap
2 Min Read

ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (VISL) ಮತ್ತೆ ಆರಂಭವಾಗಲಿದೆ.ಹಲವು ವರ್ಷಗಳ ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ. ಆಗಸ್ಟ್‌ 10 ರಿಂದಲೇ ವಿಐಎಸ್‌ಎಲ್‌ ಮತ್ತೆ ಕಾರ್ಯಾರಂಭ ಮಾಡಲಿದೆ. VISL ಕಾರ್ಖಾನೆಯ ಮರು ಕಾರ್ಯಾರಂಭಕ್ಕೆ ಭಾರತೀಯ ಉಕ್ಕು ಪ್ರಾಧಿಕಾರ (SAIL) ಅನುಮತಿ ನೀಡಿದೆ. 

ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಮಂಗಳವಾರ ಫೇಸ್‌ಬುಕ್ ಪೋಸ್ಟ್‌ ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ.

ಮತ್ತೆ ಶುರುವಾಗುತ್ತಿದೆ ಭದ್ರಾವತಿಯ ಸುವರ್ಣಯುಗ! ಮತ್ತೆ ಫಳಫಳಿಸಲಿದೆ ಕಪ್ಪು ಚಿನ್ನ! ವಿಐಎಸ್‌ಎಲ್ ಮೈಕೊಡವಿ ಮೇಲೇಳುತ್ತಿದೆ! ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (VISL) ಮುಚ್ಚಬಾರದು ಪುನಃ ಉತ್ಪಾದನೆ ಆರಂಭಿಸಬೇಕು ಎಂದು ಬಹುದೊಡ್ಡ ಹೋರಾಟ ನಡೆದಿತ್ತು. ಕೆಲವು ತಿಂಗಳ ಹಿಂದೆ ಭದ್ರಾವತಿ ಬಂದ್ ಸಹ ನಡೆಸಿ, ಉದ್ಯೋಗಿಗಳನ್ನು ಉಳಿಸಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು.

ಸರ್.‌ ಎಂ. ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ VISL ಕಾರ್ಖಾನೆ ಭದ್ರಾವತಿಯ ಜನರ ಜೀವನ ನಿರ್ವಹಣೆಗೆ ಆಧಾರವಾಗಿತ್ತು. ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಕೈಗಾರಿಕೆಯಾಗಿತ್ತು. ಕರ್ನಾಟಕ ಸರ್ಕಾರದ ಅಧೀನದಲ್ಲಿದ್ದ VISL ಅನ್ನು ಆಧುನೀಕರಣದ ಉದ್ದೇಶದಿಂದ 1989ರಲ್ಲಿ ಭಾರತ ಸರ್ಕಾರಕ್ಕೆ ಒಪ್ಪಿಸಲಾಯಿತು.

ಬಳಿಕ ಭಾರತೀಯ ಉಕ್ಕಿನ ಪ್ರಾಧಿಕಾರ (ಸೈಲ್‌) ಇದರ ಉಸ್ತುವಾರಿ ನೋಡಿಕೊಳ್ಳುತ್ತಿತ್ತು. ಕೆಮ್ಮಣ್ಣುಗುಂಡಿ ಭದ್ರಾ ಅಭಯಾರಣ್ಯ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಅದಿರು ಗಣಿಗಾರಿಕೆ ನಿಷೇಧಿಸಲಾಯಿತು. ಅಂದಿನಿಂದ VISL ಕಾರ್ಖಾನೆಗೆ ಅದಿರು ಪೂರೈಕೆ ಸ್ಥಗಿತಗೊಂಡಿದೆ. ಬಳಿಕ ಕಾರ್ಖಾನೆ ಉಳಿಸಲು ಹೋರಾಟ ನಡೆಯುತ್ತಲೇ ಇದೆ.

VISL ಕಾರ್ಖಾನೆ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಭಾರತೀಯ ಉಕ್ಕು ನಿಗಮದ ನಿರ್ದೇಶಕರ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. 1923ರಲ್ಲಿ ಈ ಕಾರ್ಖಾನೆಯು ಕಬ್ಬಿಣ ಮತ್ತು ಉಕ್ಕು ಉತ್ಪಾದನೆ ಆರಂಭಿಸಿತ್ತು. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಲಕ್ಷಾಂತರ ಕುಟುಂಬಕ್ಕೆ ಬೆಳಕಾಗಿತ್ತು. ಬಳಿಕ ನಷ್ಟದಲ್ಲಿ ಸಾಗುತ್ತಿತ್ತು.

2016ರಲ್ಲಿ ಕೇಂದ್ರ ಸಚಿವ ಸಂಪುಟ ವಿಐಎಸ್‌ಎಲ್ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಒಪ್ಪಿಗೆ ನೀಡಿತ್ತು. ಡಿಐಪಿಎಎಂ ಮೂಲಕ ಬಿಡ್ ಸಹ ಆಹ್ವಾನಿಸಿತ್ತು. ಆದರೆ ಬಿಡ್‌ದಾರರು ಆಸಕ್ತಿ ತೋರದ ಕಾರಣ ಕೇಂದ್ರ ಸರ್ಕಾರ ಖಾಸಗೀಕರಣ ಪ್ರಕ್ರಿಯೆ ವಾಪಸ್ ಪಡೆದಿತ್ತು. ಖಾಸಗೀಕರಣಕ್ಕೆ ಉದ್ಯೋಗಿಗಳು ಸಹ ವಿರೋಧ ವ್ಯಕ್ತಪಡಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ತಿಂಗಳು ವಿಐಎಸ್‌ಎಲ್‌ ಮುಚ್ಚುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪುನರ್‌ ಪರಿಶೀಲಿಸಬೇಕು ಎಂದು ಕೇಂದ್ರ ಉಕ್ಕು ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಬರೆದ ಪತ್ರದಲ್ಲಿ ಮನವಿಯನ್ನು ಮಾಡಿದ್ದರು. ಕಾರ್ಖಾನೆ ಪುನಾರಂಭದ ಕುರಿತು ಕೇಂದ್ರ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದ್ದರು.

ಮತ್ತೆ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಆರಂಭಕ್ಕೆ ಕಾರಣರಾದ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ, ಕೇಂದ್ರ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ಜಿ, ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಜಿ, ಮತ್ತು ಕೇಂದ್ರ ಉಕ್ಕು ಸಚಿವ ಸನ್ಮಾನ್ಯ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾಜಿ ಅವರಿಗೆ ಸಂಸದ ರಾಘವೇಂದ್ರ, ಕೃತಜ್ಞತೆಗಳು ಅಭಿನಂದನೆಗಳು. ಭದ್ರಾವತಿಯ ಸಮಸ್ತ ಜನರ ಪ್ರಾರ್ಥನೆ ಫಲ ಕೊಟ್ಟಿದೆ’ ಎಂದು ತಿಳಿಸಿದ್ದಾರೆ.

Share This Article
Leave a comment