February 22, 2026

Newsnap Kannada

The World at your finger tips!

krishna god

ಎದ್ದು ಬಾ ಮುರುಳಿಲೋಲ ಕುಸುಮ ಷಟ್ಪದಿ

Spread the love

ಮೃದುಪಾದ ಸವಿಮೋದ
ಮಧುರವೀ ನಗುಮನದ
ಹದುಳುತನ ಸಂಪಿಗೆಯು ಜೀಕುತಿರಲು
ನಿದಿರೆಯಲಿ ಸೊಗಸಾಗಿ
ಪದರೇಣು ಕಣದೊಳಗೆ
ಪದರಂಗ ತುಂಬುವುದ ಕಾಯುತಿರಲು…

ಬುವಿಯೆಲ್ಲ ಕಾದಿರಲು
ಭವರೋಗ ತೊಲಗಿಸಲು
ಕವಿದಿರುವ ಮನಗಳಿಗೆ ಜೀವಾಮೃತ
ಅವನಿಯಲಿ ಕೃತಕೃತ್ಯ
ಪವಣಿಸುತ ನೋಡುವನು
ಪವಡಿಸುವ ಯದುನಂದ ಕೃಷ್ಣಾಮೃತ..

ಮಥುರೆಯಾ ಮಣ್ಣಿನಲಿ
ಪತಿತಪಾವನನ ಸಿರಿ
ಮತಭೇದವಿಲ್ಲದೇ ಶೋಭಿಸುತಿದೆ
ಮೆತುವಾದ ನುಡಿಗಳಲಿ
ಲತೆಯಂತೆ ಮೋಹಕವು
ವಿತತದೊಳು ಹೊಮ್ಮುತಿಹ ನಾದದಂತೆ||

ಯದುಕುಲದ ಮಾಣಿಕ್ಯ
ವದನದಲಿ ನಗೆಬೀರಿ
ವಧಿಸಿದಾ ಕಂಸನನು ಬಾಲಕೃಷ್ಣ
ವಿದಳಿಸುತ ಜನಜನಿತ
ವಿದಿತನಿವ ಮಾಧವನು
ಮುದಿತದೊಳು ಮುನ್ನುಗ್ಗಿ ಮೆರೆದಾಡಿದ||

ಎದ್ದು ಬಾ ಗೆದ್ದು ಬಾ
ಸದ್ದು ಮಾಡುತ ನೀನು
ಬಿದ್ದಿರದೆ ಸಿದ್ಧತೆಯ ಮಾಡುತಿರು ನೀ
ಮುದ್ದಿನಲಿ ನಗಿಸುತಿಹ
ಬದ್ಧತೆಯ ತೋರುತಲಿ
ಮೆದ್ದು ಬಾ ಬೆಣ್ಣೆಯನು ಮುರುಳಿಲೋಲ

abigna mp
ಶ್ರೀಮತಿ ಅಭಿಜ್ಞಾ ಪಿ ಎಂ ಗೌಡ ಮಂಡ್ಯ
error: Content is protected !!