ಬಿಡುವಿನಬಾಂದಳ

Team Newsnap
3 Min Read
WhatsApp Image 2023 07 16 at 2.09.04 PM
ಲಿಂಗೇಶ್ ಎಚ್ ಬಿದರಕುಂದಿ
ದಾವಣಗೆರೆ

ದುಡಿಮೆ ದುಡಿಮೆ ಅನ್ನುವ ಹುಚ್ಚು ಆಲೋಚನೆಯ ಹಿಂದೆ ಓಡಿ ಓಡಿ ಬದುಕಿನ ಅರ್ಧದಷ್ಟು ಪಯಣವನ್ನೇ ಮುಗಿಸಿ ಒಂದು ಹಂತಕ್ಕೇನೋ ತಲುಪಿದೆ. ಮನೆಯಲ್ಲೂ ಒಂದು ಗೌರವ ಸಮ್ಮಾನ ಇದ್ದರೂ ಏನೋ ಒಂದು ಸಣ್ಣ ಅಶಾಂತಿ ಆಗಾಗ ಇಣುಕಿ ಹೋಗುವುದು. ನಾನು ಚಿಕ್ಕವನಾಗಿದ್ದಾಗಿನಿಂದ ಕಂಡ ಕಷ್ಟ ಕೋಟಲೆಗಳು ನನಗೇ ಗೊತ್ತು. ಅಂತಹ ಕಷ್ಟ ಕೋಟಲೆಗಳು ನನ್ನ ನಂಬಿ ಬಂದ ಮಡದಿಗಾಗಲಿ, ನನ್ನ ಕರುಳ ಬಳ್ಳಿಗಳಿಗಾಲಿ ತಾಗಬಾರದೆಂಬುದೆ ನನ್ನ ಹುಚ್ಚುತನವಾಗಿತ್ತು.

ಖಾಸಗಿ ಕಂಪೆನಿಯ ಉದ್ಯೋಗಿ ಆಗಿದ್ದ ನನಗೆ ಕೆಲಸದ ಮೇಲೆ ಎಲ್ಲಿಲ್ಲದ ಪ್ರೀತಿ, ನಿಷ್ಠೆ ಹಾಗೂ ವಿದೇಯತೆ. ಯಾವುದೇ ಕಾರಣಕ್ಕೂ ಒಂದು ದಿನವೂ ರಜೆ ಹಾಕದೆ ದುಡಿಯುವ ದಣಿವಿನಲ್ಲೇ ಸುಖ, ಶಾಂತಿ ಕಂಡುಕೊಂಡಿದ್ದೆ. ಆದರೆ ಮಡದಿ ಮಕ್ಕಳ ಜೊತೆಗೆ ಸರಿಯಾದ ಸಮಯಕ್ಕೆ ಸ್ಪಂದಿಸದೆ ದುಡಿಮೆಯಿಂದ ಎಲ್ಲಾ ದೊರಕಿಸಬಹುದು ಎನ್ನುವ ಭ್ರಮೆ ಮನದಲ್ಲಿ ಮನೆ ಮಾಡಿತ್ತು. ಹಗಲು ರಾತ್ರಿ ಎನ್ನದೆ ಕತ್ತೆಯಂತೆ ನಿತ್ಯ ಪ್ರಮಾಣಿಕವಾಗಿ ದುಡಿದು ಹೈರಾಣಗಿ ಮನೆಗೆ ಬಂದರೆ, ಮಕ್ಕಳಿಗೆ ಮಡದಿಗೆ ಅವಶ್ಯಕ ವಸ್ತುಗಳ ಪೂರೈಕೆಯಿಂದ ಸಂತೋಷ ಪಡಿಸುತ್ತಿದ್ದೆ. ಆಗಾಗ ಸಣ್ಣ ಪ್ರವಾಸಕ್ಕೆ ಕರೆದರೂ ತುಂಬಾ ಕೆಲಸ ನಾನಿರದೆ ನಡೆಯದೆನ್ನುವ ಮೊಂಡುವಾದ ನಿರಂತರವಾಗಿತ್ತು.

ಬದುಕು ತನ್ನ ಬಣ್ಣ ತೋರಲು ಬಹಳ ಸಮಯ ಬೇಕಾಗಿಲ್ಲ ಅಲ್ವಾ?, ಯಾರೋ ಹಿರಿಯರು ಹೇಳಿದ್ದಾರೆ “ಕೆಲಸವನ್ನು ಪ್ರೀತಿಸು ಆದರೆ ಸಂಸ್ಥೆಯನ್ನಲ್ಲ” ಎನ್ನುವ ಮಾತು ಎಷ್ಟು ಸತ್ಯ. ಹಠಾತ್ತಾಗಿ ಆರೋಗ್ಯದಲ್ಲಾದ ಏರುಪೇರು, ಸಂಸ್ಥೆಯ ಬಣ್ಣವನ್ನು ಬದಲು ಮಾಡಿತು. ರಜೆಗಳು ಸಾಕಷ್ಟು ಇದ್ದರೂ ಸಂಸ್ಥೆಯ ಏಳಿಗೆಗೆ ಹೆಚ್ಚುವರಿ ಆದಾಯದ ಅವಶ್ಯಕತೆಯ ನೆಪವನ್ನು ನನಗೆನಾನು ಹೇರಿಕೊಂಡು ದುಡಿದೆನು. ಆದರೆ ಆ ಸಮಯದಲ್ಲಿ ಒಂದು ಸಣ್ಣ ಕನಿಕರಕ್ಕಾದರೂ ಕಂಪೆನಿಯ ಮೇಲಧಿಕಾರಿಗಳು ಯಾರಿಂದಲೂ ಕ್ಷೇಮ ಸಮಾಚಾರ ವಿಚಾರಿಸದ ನಡುವಳಿಕೆ ತುಂಬಾ ನೋವುಂಟು ಮಾಡಿತು. ಆ ಸಮಯದಲ್ಲಿ ಬೆನ್ನಿಗೆ ನಿಂತು ಕ್ಷಣಕ್ಷಣಕ್ಕೂ ಕಣ್ಣಾಗಿ ಕಾದ ಮಡದಿ ಮಕ್ಕಳು ಬರೀ ಆದಾಯದ ಆಧಾರಕ್ಕಾಗಿ ಉಪಚರಿಸುತ್ತಿಲ್ಲ, ಆರೈಕೆ ಮಾಡುತ್ತಿಲ್ಲ ಎನ್ನುವ ಮನವರಿಕೆ ಅಂದು ನನಗಾಯಿತು.

ಅಂದು ಆ ಕ್ಷಣ ನನಗರಿವಾಯಿತು ಬರೀ ಸಂಪಾದನೆ ಒಂದರಿಂದಲೇ ಸುಖ, ಶಾಂತಿ, ನೆಮ್ಮದಿ ಹಾಗೂ ಸಂತೋಷವನ್ನು ಪಡೆಯಲಾಗದು ಎಂದು. ಕುಟುಂಬದವರಿಗೂ ಸರಿಯಾಗಿ ಸಮಯ ನೀಡಬೇಕು, ನೀಡದಿರುವುದರ ಅರಿವು ಮತ್ತು ನಷ್ಟ ತಿಳಿಯಿತು. ಅದಾದ ಸ್ವಲ್ಪ ದಿನದ ಬಳಿಕ ಪ್ರತಿ ತಿಂಗಳು ಇಲ್ಲವೆ ಎರಡು ತಿಂಗಳಿಗೆ ಹೊರ ಸಂಚಾರ ಇಲ್ಲವೆ ಪ್ರವಾಸ ಕುಟುಂಬದೊಂದಿಗೆ ಆರಂಭಿಸಿದೆ. ಅದೊಂದು ಸಂತೋಷವನ್ನು ಮಕ್ಕಳ ಜೊತೆಗಿನ ಬಾಂಧವ್ಯ ಎಲ್ಲವನ್ನು ಎಷ್ಟು ಕಳೆದುಕೊಂಡಿದ್ದೆ ಎನ್ನುವುದು ಮನದಟ್ಟಾಯಿತು. ನನಗೂ ಒಂದು ರೀತಿಯ ಹೊಸತನದ ಅನುಭವ ಕೆಲಸದ ಪ್ರತಿ ಮತ್ತೆ ಮೊದಲಿನಿಂದ ಶುರುವೆನ್ನುವ ಭಿನ್ನ ಭಾವಗಳು ಬೆರೆಯ ತೊಡಗಿದವು. ಬದುಕು ಇರುವುದು ಬರೀ ದುಡಿಯಲು ಅಲ್ಲ, ಅನುಭವದ ಸೆಲೆಯ ಜೊತೆಜೊತೆಗೆ ಹೊಸತಿನ ಅನುರಾಗದ ಅನುಬಂಧವನ್ನೂ ರೀಚಾರ್ಜ್ ಮಾಡಬೇಕು ಎನ್ನುವುದು ತಿಳಿಯಿತು.

ಬಿಡುವಿನ ಬಾಂದಳದಲ್ಲಿ ಕೆಲಸದ ಒತ್ತಡ ಬವಣೆಗಳ ಬಿಕ್ಕಟ್ಟು ಇರದು ಮತ್ತು ತಿರುಗಿ ಕೆಲಸಕ್ಕೆ ಬಂದಾಗ ಕೆಲಸದ ಬಗ್ಗೆ ಇನ್ನಷ್ಟು ಮತ್ತಷ್ಟು ಕಾರ್ಯ ಕ್ಷಮತೆಯೂ ಹೆಚ್ಚಾಗುವುದು. ಬಿಡುವಿನ ಸಮಯದಲ್ಲಿ ಕುಟುಂಬದೊಂದಿಗೆ ಬೆರೆಯದೆ ಹಾಳು ಮಾಡಿಕೊಂಡ ಸಣ್ಣಪುಟ್ಟ ಸಂತೋಷವನ್ನು ತಿಳಿದುಕೊಂಡಿರುವೆ, ಈಗ ನೆಮ್ಮದಿ ಕಂಡುಕೊಂಡಿರುವೆ. ಎನ್ನುವ ನಿಟ್ಟುಸಿರಿಟ್ಟು ಹೊಸತಾಗಿ ಕೆಲಸಕ್ಕೆ ಸೇರಿಕೊಂಡ ಉದ್ಯೋಗಿಗಳಿಗೆ ಉದ್ದೇಶಿಸಿ ಮಾತನಾಡಿ, ನೀವೂ ಕೂಡ ಕೆಲಸದ ಜೊತೆ ಸಂಸಾರದ ಹೊಂದಾಣಿಕೆಯನ್ನು ಸರಿದೊಗಿಸಿಕೊಂಡಿರೆ ಸಂಸ್ಥೆ ಮತ್ತು ಸಂಸಾರ ಎರಡೂ ಚನ್ನಾಗಿರುವುದು.

ಎರಡರಲ್ಲಿ ಯಾವುದೇ ಒಂದು ಹದಗೆಟ್ಟರೂ ಎರಡೂ ಕಡೆಯ ಕ್ಷಮತೆ ಹಾದಿ ತಪ್ಪುವುದು .

Share This Article
Leave a comment