ಮಂಡ್ಯದಲ್ಲಿ ಬಟ್ಟೆ ಅಂಗಡಿಗಳ ಮಾಲೀಕರಿಗೆ ಟೋಪಿ ಹಾಕಿ ಲಕ್ಷಾಂತರ ರು ಲಪಟಾಯಿಸಿದವನ ಬಂಧನ

Team Newsnap
1 Min Read

ನೆಟ್ ವರ್ಕ್ ಸಮಸ್ಯೆ ನೆಪದಲ್ಲಿಇಬ್ಬರು ಬಟ್ಟೆ ಅಂಗಡಿ ಮಾಲೀಕರಿಂದ ಸಿಮ್‌ ಪಡೆದ ಚಾಲಾಕಿ ಕಳ್ಳನೊಬ್ಬ ಬ್ಯಾಂಕ್‌ ಖಾತೆಯಲ್ಲಿನ ಹಣವನ್ನು ಎಗರಿಸಿರುವ ಪ್ರಕರಣವನ್ನು ಭೇದಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.ಚಾಲಾಕಿ ಕಳ್ಳನನ್ನು ಬಂಧಿಸಿ, ಆತನಿಂದ 51 ಸಾವಿರ ರೂ. ನಗದ ವಶಪಡಿಸಿಕೊಂಡಿದ್ದಾರೆ.

ಕಳೆದ ವರ್ಷ ಡಿಸೆಂಬರ್ 22 ರಂದು ಮಂಡ್ಯದ ನಗರದ ಚಾಮುಂಡಿ ಪ್ಯಾಷನ್‌ ಅಂಗಡಿಗೆ ಬಂದಿದ್ದ ಆರೋಪಿ ಲೋಕೇಶ್‌, ಒಂದಷ್ಟು ಬಟ್ಟೆಗಳನ್ನು ಖರೀದಿಸಿದ್ದ. ಅವುಗಳ ಮೊತ್ತವನ್ನು ಅಂಗಡಿಯ ಪೇಟಿಎಂ ಖಾತೆಗೆ ಕಳುಹಿಸುವುದಾಗಿ ತಿಳಿಸಿದ.

ಆದರೆ, ಕೆಲವೊತ್ತಿನ ಬಳಿಕ ನನ್ನ ಮೊಬೈಲ್‌ ನೆಟ್‌ವರ್ಕ್ ಸಮಸ್ಯೆ ಇದೆ, ನಿಮ್ಮ ಸಿಮ್‌ ನೀಡಿದರೆ ಅದರ ನೆಟ್‌ವರ್ಕ್ ನೆರವಿನಿಂದ ನಿಮ್ಮ ಪೇಟಿಎಂ ಖಾತೆಗೆ ಹಣ ಕಳುಹಿಸುತ್ತೇನೆಂದು ಆರೋಪಿ ತಿಳಿಸಿದ್ದಾನೆ.

ಈ ಮಾತನನ್ನು ನಂಬಿದ ಅಂಗಡಿ ಮಾಲೀಕ ಕಿಮ್ಸಿಂಗ್‌ ಅವರು ಮೊಬೈಲ್‌ ಸಿಮ್‌ ಅನ್ನು ಆರೋಪಿಗೆ ನೀಡಿದ್ದಾರೆ. ಆಗ ತನ್ನ ಮೊಬೈಲ್‌ಗೆ ಹಾಕಿ ಏನೇನೋ ವರ್ಕ್ ಮಾಡಿ, ವರ್ಕ್ ಆಗುತ್ತಿಲ್ಲವೆಂದು ಸಿಮ್‌ ವಾಪಸು ನೀಡಿ ಅಲ್ಲಿಂದ ಹೊರಟು ಹೋಗಿದ್ದಾನೆ. ನಂತರ ಕಿಮ್ಸಿಂಗ್‌ ಬ್ಯಾಂಕ್‌ ಖಾತೆಯಿಂದ ಕ್ರಮವಾಗಿ 50 ಸಾವಿರ ರೂ.ನಂತೆ ತಲಾ 3 ಬಾರಿ ಒಟ್ಟು 1.50 ಲಕ್ಷ ರೂ. ಕಡಿತಗೊಂಡಿದೆ.

ಈ ಬಗ್ಗೆ ಅಂಗಡಿ ಮಾಲೀಕ ಕಿಮ್ಸಿಂಗ್‌ ಮಂಡ್ಯದ ಸೈಬರ್ ಕ್ರೈಂ ಅಪರಾಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಇದೇ ವ್ಯಕ್ತಿ ಮತ್ತೆ ಮಾ. 23ರಂದು ಬೆಳ್ಳೂರು ಪಟ್ಟಣದ ರಾಜಲಕ್ಷ್ಮಿ ಟೆಕ್ಸ್‌ಟೈಲ್ಸ್‌ ಅಂಗಡಿಗೆ ತೆರಳಿ ಬಟ್ಟೆ ಖರೀದಿ ಮಾಡಿದ್ದಾನೆ.

ಹಣವನ್ನು ಗೂಗಲ್‌ ಪೇ ಮಾಡುವುದಾಗಿ ತಿಳಿಸಿ ನಂತರ ಅಲ್ಲಿಯೂ ಮೊಬೈಲ್‌ ನೆಟ್‌ವರ್ಕ್ ಸಮಸ್ಯೆ ನೆಪ ಹೇಳಿ, ಮಾಲೀಕ ಓಂಪ್ರಕಾಶ್‌ ಅವರ ಸಿಮ್‌ ಪಡೆದುಕೊಂಡು ಅದರಲ್ಲೂ ಹಣ ವರ್ಗಾವಣೆ ಆಗುತ್ತಿಲ್ಲವೆಂದು ತಿಳಿಸಿ ವಾಪಸು ನೀಡಿ ಹೊರಟು ಹೋಗಿದ್ದಾನೆ. ಸ್ವಲ್ಪ ಹೊತ್ತಿನಲ್ಲಿ ಓಂಪ್ರಕಾಶ್‌ ಅವರ ಖಾತೆಯಿಂದಲೂ 80,000 ರು ಹಣ ಬ್ಯಾಂಕ್‌ ಖಾತೆಯಿಂದ ಕಡಿತಗೊಂಡಿದ್ದು, ಈ ಬಗ್ಗೆ ಬೆಳ್ಳೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ಈಗ ಕಳ್ಳ ಲೋಕೇಶ್ ನನ್ನು ಬಂಧಿಸಿ ಎರಡು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a comment