December 22, 2024

Newsnap Kannada

The World at your finger tips!

bihir cm

ಸಿಎಂ ಮೇಲಿನ ಅಭಿಮಾನಕ್ಕೆ ನಾಲ್ಕನೇ ಬೆರಳು ಕಟ್ ಮಾಡಿಕೊಂಡ !

Spread the love

ಬಿಹಾರ ಸಿಎಂ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಅನಿಲ್ ಶರ್ಮಾ, ಸೋಮವಾರ ತನ್ನ ಎಡಗೈಯ ನಾಲ್ಕನೇಯ ಬೆರಳನ್ನು ಕತ್ತರಿಸಿಕೊಂಡಿದ್ದಾನೆ.

ನಿತೀಶ್ ಕುಮಾರ್ ಅವರು ಸಿಎಂ ಆಗಿ ಮತ್ತೆ ಅಧಿಕಾರದ ಗದ್ದುಗೆ ಏರುವ ಹಿನ್ನೆಲೆಯಲ್ಲಿ ತನ್ನ 4ನೇ ಬೆರಳನ್ನು ಕಟ್ ಮಾಡಿಕೊಂಡಿದ್ದಾನೆ. ಅಲ್ಲದೆ ಅದನ್ನು ದೇವರಿಗೆ ಅರ್ಪಿಸಿದ್ದಾನೆ.

ಅನಿಲ್ ಶರ್ಮಾ ಬಿಹಾರದ ಜೆಹಾನಾಬಾದ್ ಜಿಲ್ಲೆಯ ಘೋಸಿ ಪೊಲೀಸ್ ಠಾಣಾ ವ್ಯಾಪ್ತಿಯ ವೈನಾ ಗ್ರಾಮದ ನಿವಾಸಿ. ಅನಿಲ್ ಸುಮಾರು 15 ವರ್ಷಗಳಿಂದ ಈ ವಿಲಕ್ಷಣ ಆಚರಣೆಯನ್ನು ನಡೆಸುತ್ತಿದ್ದಾನೆ.

ಪ್ರತಿ ಬಾರಿ ನಿತೀಶ್ ಕುಮಾರ್ ಸಿಎಂ ಆಗುವಾಗಲೂ ಅನಿಲ್ ತಮ್ಮ ಎಡಗೈಯ ಒಂದು ಬೆರಳನ್ನು ಕತ್ತರಿಸಿ ದೇವರಿಗೆ ಅರ್ಪಿಸುತ್ತಾ ಬಂದಿದ್ದಾನೆ. ಇದೀಗ ಮತ್ತೆ ನಿತೀಶ್ ಸಿಎಂ ಆಗಿದ್ದರಿಂದ 4 ನೇ ಬೆರಳನ್ನು ಕಟ್ ಮಾಡಿ ದೇವರಿಗೆ ಒಪ್ಪಿಸಿದ್ದಾನೆ.

ನಿತೀಶ್ ಕುಮಾರ್ ಅವರು 2005ರಲ್ಲಿಯೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗಿನಿಂದ ಅನಿಲ್ ಈ ಆಚರಣೆಯನ್ನು ಪ್ರಾರಂಭಿಸಿದ್ದಾನೆ. 2010 ಹಾಗೂ 2015ರಲ್ಲಿ ಸಿಎಂ ಆಗಿ ಆಯ್ಕೆಯಾದಾಗಲೂ ಒಂದೊಂದು ಬೆರಳನ್ನು ಕತ್ತರಿಸಿಕೊಂಡಿದ್ದನು. ಇದೀಗ ಇತ್ತೀಚೆಗಷ್ಟೇ ಮತ್ತೆ ನಿತೀಶ್ ಸಿಎಂ ಅಧಿಕಾರದ ಗದ್ದುಗೆ ಏರುವಾಗಲೂ ಈತ ಅನಿಲ್ ತನ್ನ ಆಚರಣೆ ಮುಂದುವರಿಸಿ ಸುದ್ದಿಯಾಗಿದ್ದಾನೆ.

ಈ ಸಂಬಂಧ ಮಧ್ಯಮದವರು ಅನಿಲ್ ನನ್ನು ಪ್ರಶ್ನಿಸಿದರೆ, ನಿತೀಶ್ ಕುಮಾರ್ ಅವರ ವಿಜಯವನ್ನು ಆಚರಿಸಲು ತನ್ನದೇ ಆದ ಮಾರ್ಗವಿದೆ. ನಾನು ಅವರ ಬಹುದೊಡ್ಡ ಅಭಿಮಾನಿಯಾಗಿದ್ದು, ಸಿಎಂ ನನ್ನನ್ನು ಭೇಟಿಯಾಗಲು ಬರುವುದಿಲ್ಲ ಎಂದು ನನಗೆ ತಿಳಿದಿತ್ತು. ಆದರೂ ಅವರ ಮೇಲೆ ಇರುವ ಗೌರವ ಕಿಂಚಿತ್ತೂ ಕಡಿಮೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಘೋಸಿ ಪೊಲೀಸ್ ಠಾಣೆಯ ಎಸ್‍ಎಚ್‍ಒ ಸತ್ಯೇಂದ್ರ ಕುಮಾರ್ ಪ್ರತಿಕ್ರಿಯಿಸಿ, ನಾವು ಈ ಘಟನೆಯ ಬಗ್ಗೆ ಮೊದಲ ಬಾರಿಗೆ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇವೆ ಮತ್ತು ತಕ್ಷಣ ತಂಡವನ್ನು ತನಿಖೆಗೆ ಗ್ರಾಮಕ್ಕೆ ಕಳುಹಿಸಿದ್ದೇವೆ. ನಾವು ಅವರ ಹೇಳಿಕೆಯನ್ನು ದಾಖಲಿಸುತ್ತೇವೆ ಮತ್ತು ಮುಂದಿನ ಕ್ರಮಕ್ಕಾಗಿ ನಮ್ಮ ಹಿರಿಯರನ್ನು ಸಂಪರ್ಕಿಸುತ್ತೇವೆ ಎಂದು ತಿಳಿಸಿದ್ದಾರೆ.

ಕೈ ಬೆರಳು ಕಟ್ ಮಾಡಿಕೊಂಡ ಕುರಿತು ಮಾಧ್ಯಮಗಳು ವರದಿ ಮಾಡುತ್ತಿದ್ದಂತೆಯೇ ಅನಿಲ್ ಮನೆ ಮುಂದೆ ಸ್ಥಳೀಯರು ಜಮಾಯಿಸಿದ್ದಾರೆ. ಅಲ್ಲದೆ ಅನಿಲ್ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!