ಮಂಡ್ಯ
ಜಿಲ್ಲೆಯ ರಚನೆ ಹಾಗೂ ಅಭಿವೃದ್ಧಿಗೆ ಆನೇಕ ಕೊಡುಗೆ ನೀಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ನಿರ್ಮಾಣ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ನಾಲ್ವಡಿ ಅವರ ಪ್ರತಿಮೆ ನಿರ್ಮಾಣ ಸಂಬಂಧ ಸಭೆ ನಡೆಸಿ ಮಾತನಾಡಿದರು.
ನಾಲ್ವಡಿ ಅವರ ಪ್ರತಿಮೆ ನಿರ್ಮಾಣ ಬಹಳ ವರ್ಷದಿಂದ ನಡೆಯುತ್ತಿರುವ ಪ್ರಯತ್ನವಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿಕೊಡುವಂತೆ ತಿಳಿಸಿದರು.
ಕೆ.ಆರ್.ಎಸ್. ಅಚ್ಚುಕಟ್ಟು ಪ್ರದೇಶದಲ್ಲಿ ಹಸಿರು ಕಾಣುತ್ತಿರುವುದು ಹಾಗೂ ಜಿಲ್ಲೆಯಲ್ಲಿ ರೈತ ಚಟುವಟಿಕೆ ನಡೆಯುತ್ತಿರುವವರೆಗೂ ನಾಲ್ವಡಿ ಅವರ ನೆನಪು ಸದಾ ಜನತೆಯಲ್ಲಿ ಇರುತ್ತದೆ. ಈ ಹಿನ್ನಲೆಯಲ್ಲಿ ನಾಲ್ವಡಿ ಅವರ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದ ಅನುದಾನ, ಶಾಸಕರ ಅನುದಾನ ಹಾಗೂ ಸಾರ್ವಜನಿಕರಿಂದ ದೇಣಿಗೆ ಸಹ ಸಂಗ್ರಹಿಸುವುದು ಸೂಕ್ತ ಎಂದರು.
ಜಿಲ್ಲಾಧಿಕಾರಿ ಡಾ: ಕುಮಾರ ಅವರು ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯನ್ನು ಕೃಷ್ಣ ಶಿಲೆಯಲ್ಲಿ ಮಾಡಲು 35 ಲಕ್ಷ ರೂ, ಪಂಚಲೋಹದಲ್ಲಿ ನಿರ್ಮಾಣ ಮಾಡಿದರೆ 50 ಲಕ್ಷ ರೂ ವೆಚ್ಚವಾಗಲಿದೆ. ಇದಕ್ಕೆ ಯೋಜನೆ ಸಿದ್ಧ ಪಡಿಸಿದ್ದು, ಸ್ಥಳವನ್ನು ನಿಗದಿಪಡಿಸಬೇಕಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಕನ್ನಂಬಾಡಿ ನಿರ್ಮಾಣ ಮಾಡಿ ಮಂಡ್ಯ ಜಿಲ್ಲೆಯ ಜನತೆಗೆ ಅನ್ನದಾತ ರಾಗಿರುವ ನಾಲ್ವಡಿ ಅವರ ಪ್ರತಿಮೆಯನ್ನು ಸಿಲ್ವರ್ ಜ್ಯೂಬಲಿ ಪಾರ್ಕ್ ನಲ್ಲಿ ನಿರ್ಮಾಣ ಮಾಡುವುದು ಸೂಕ್ತ ಎಂದು ಶಾಸಕ ರವಿ ಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಲವು ಸಂಘಟನೆಯ ಮುಖ್ಯಸ್ಥರು ನಾಲ್ವಡಿ ಅವರ ಪ್ರತಿಮೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಿದರು. ಹಾಗೂ ಪ್ರತಿಮೆಯೊಂದಿಗೆ ಅವರ ಜೀವನ ಚರಿತ್ರೆ ಹಾಗೂ ಆಟ್೯ ಗ್ಯಾಲರಿ ಸಹ ನಿರ್ಮಾಣ ಮಾಡಿದರೆ. ಜನರು ಅವರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳುತ್ತಾರೆ ಎಂದರು.