November 22, 2024

Newsnap Kannada

The World at your finger tips!

WhatsApp Image 2023 11 03 at 3.12.02 PM

ಅಗಲಿದ ಹಿರಿಯ ಚೇತನಗಳಿಗೆ ಕೆಯುಡಬ್ಲ್ಯೂಜೆ ನುಡಿ ನಮನ

Spread the love

ಬೆಂಗಳೂರು:

ಸುದ್ದಿ ಮನೆಯಲ್ಲಿ ಸುದೀರ್ಘ ಅವಧಿಗೆ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಅಗಲಿದ ಸಿ.ಆರ್.ಕೃಷ್ಣರಾವ್, ಕೆ.ಎಸ್.ಸಚ್ಚಿದಾನಂದ ಮೂರ್ತಿ, ಜಿ.ಎನ್.ರಂಗನಾಥ ರಾವ್, ಪಿ.ಎಂ.ಮಣ್ಣೂರ, ಕೆ.ಪ್ರಹ್ಲಾದರಾವ್ , ಗುಡಿಬಂಡೆ ನರಸಿಂಹಮೂರ್ತಿ, ಟಿ.ಎಸ್.ರಾಜಾರಾವ್ ಅವರುಗಳಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ನುಡಿ ನಮನ ಸಲ್ಲಿಸಿ, ಅವರೆಲ್ಲರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಹಿರಿಯ ಚೇತನಗಳ ಸ್ಮರಣಾರ್ಥ ಎರಡು ನಿಮಿಷ ಮೌನ ಪ್ರಾರ್ಥನೆ ನಡೆಸಲಾಯಿತು.

ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ನುಡಿನಮನ ಕಾರ್ಯಕ್ರಮಕ್ಕೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಅಗಲಿದ ಹಿರಿಯ ಪತ್ರಕರ್ತರರುಗಳು ಕೆಯುಡಬ್ಲ್ಯೂಜೆ ಜೊತೆಗೆ ಹೊಂದಿದ್ದ ಒಡನಾಟ ಮೆಲುಕು ಹಾಕಿದರು.

ಜಿನ್ನಾರ್ ಪತ್ರಿಕೋದ್ಯಮದಲ್ಲಿ ಶಿಸ್ತಿನ ಸಿಪಾಯಿ: ಬಿ.ಕೆ ರವಿ

ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥ್ ರಾವ್ ಅವರ ಬಗ್ಗೆ ಮಾತಾಡಿದ ಕೊಪ್ಪಳ ವಿ.ವಿ ಕುಲಪತಿ ಪ್ರೊ.ಬಿ.ಕೆ.ರವಿ, ಕನ್ನಡ ಭಾಷಾ ಬೆಳವಣಿಗೆಯಲ್ಲಿ ಜಿ.ಎನ್.ರಂಗನಾಥ್ ರಾವ್ ಅವರ ಕೊಡುಗೆ ಅನನ್ಯ. ಪ್ರಜಾವಾಣಿ ಪತ್ರಿಕೆಯಲ್ಲಿ ಸಾಹಿತ್ಯ ಸಾಪ್ತಾಹಿಕವನ್ನು ಅವರು ವಿಭಿನ್ನವಾಗಿ ರೂಪಿಸಿದರಲ್ಲದೆ, ಪತ್ರಿಕೋದ್ಯಮದಲ್ಲಿ ಅವರು ಶಿಸ್ತಿನ ಸಿಪಾಯಿಯಾಗಿಯೂ ಜನಪ್ರಿಯರಾದರು ಎಂದು ತಮಗೆ ಮಾರ್ಗದರ್ಶನ ನೀಡಿದ ನೆನಪನ್ನು ಮೆಲುಕು ಹಾಕಿದರು. ಅಗಲಿದ ಹಿರಿಯರ ನೆನಪಿನಲ್ಲಿ ಕೆಯುಡಬ್ಲ್ಯೂಜೆ ಕಾರ್ಯಕ್ರಮ ರೂಪಿಸಿ ಮಾದರಿ ಹೆಜ್ಜೆ ಇಟ್ಟಿದೆ ಎಂದು ಶ್ಲಾಘಿಸಿದರು. ಸಚ್ಚಿದಾನಂದಮೂರ್ತಿ ಅವರು ದೆಹಲಿಯಲ್ಲಿ ಮೂರು ದಶಕಗಳ ಕಾಲ ಪತ್ರಕರ್ತನಾಗಿ ಉತ್ತಮ ಸೇವೆ ಸಲ್ಲಿಸಿದರು ಎಂದರು.

ಸಚ್ಚಿ ಅವರ ಪ್ರತಿಭೆ ಅನನ್ಯ: ಎಚ್. ಬಿ. ದಿನೇಶ್:

ದೆಹಲಿ ಪತ್ರಿಕೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಿದ್ದ ಸಚ್ಚಿದಾನಂದ ಮೂರ್ತಿ ಸದಾ ಸ್ನೇಹಪರರಾಗಿದ್ದರು. ರಾಜ್ಯದ ಅಭಿವೃದ್ಧಿ ಯೋಜನೆಗೆ ದೆಹಲಿಯಲ್ಲಿ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದರು ಎಂದು ವಾರ್ತಾ ಇಲಾಖೆಯ ನಿವೃತ್ತ ಹಿರಿಯ ಜಂಟಿ ನಿರ್ದೇಶಕ ಎಚ್.ಬಿ. ದಿನೇಶ್ ಹೇಳಿದರು.

ಸಿ.ಆರ್.ಕೆ. ಚಳುವಳಿಗಳ ನೇತಾರ: ಸಿದ್ಧನಗೌಡ ಪಾಟೀಲ್

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕಾರ್ಯದರ್ಶಿ ಹುದ್ದೆ ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಸಿ.ಆರ್.ಕೃಷ್ಣರಾವ್ ಅವರು ಚಳುವಳಿಗಳ ನೇತಾರ ಆಗಿದ್ದರು ಎಂದು ನವಕರ್ನಾಟಕ ಪಬ್ಲಿಕೇಶನ್ಸ್ ನ “ಹೊಸತು” ಮಾಸಿಕದ ಸಂಪಾದಕ ಸಿದ್ಧನಗೌಡ ಪಾಟೀಲ್ ಅಭಿಪ್ರಾಯಪಟ್ಟರು. ಸಿ.ಆರ್.ಕೆ. ರಾವ್ ಅವರು ಪತ್ರಕರ್ತರ ಮತ್ತು ಪತ್ರಿಕಾ ಸಂಸ್ಥೆಗಳ‌ ಕೊಂಡಿಯಾಗಿ ಪ್ರಧಾನ ಪಾತ್ರ ವಹಿಸಿಕೊಂಡಿದ್ದರು ಎಂದೂ ಗುಣಗಾನ ಮಾಡಿದರು.

ಮಣೂರ ಅವರ ಪತ್ರಿಕಾ ರಂಗದ ಸೇವೆ ಅನನ್ಯ: ಬಿ.ವಿ.ಮಲ್ಲಿಕಾರ್ಜುನಯ್ಯ

ಹಿರಿಯ ಪತ್ರಕರ್ತರಾಗಿದ್ದ ಪಿ.ಎಂ.ಮಣೂರ ಅವರು ಬಹಳಷ್ಟು ಪತ್ರಕರ್ತರನ್ನು ಬೆಳೆಸುವ ಮೂಲಕ, ಪತ್ರಿಕೋದ್ಯಮದಲ್ಲಿ ಅಜಾತಶತ್ರುವಾಗಿದ್ದರು ಎಂದು ಐ.ಎಫ್.ಡಬ್ಲ್ಯೂ.ಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಹೇಳಿದರು.
ವಿವಿಧ ವಿಷಯಗಳಲ್ಲಿ ಪ್ರಭುತ್ವ ಹೊಂದಿದ್ದ ಮಣೂರರವರ ಪತ್ರಿಕಾ ಸೇವೆ ನಿಜಕ್ಕೂ ಸ್ಮರಣೀಯ ಎಂದರು.

ಕೆ.ಪ್ರಹ್ಲಾದರಾವ್ ಉತ್ತಮ ಸಂಘಟಕರಾಗಿದ್ದರು: ಪಿ.ಶೇಷಚಂದ್ರಿಕಾ
ಕೋಲಾರವು ಹಿರಿಯ ಪತ್ರಕರ್ತರಾಗಿದ್ದ ಕೆ.ಪ್ರಹ್ಲಾದರಾವ್ ಅವರ ಕರ್ಮಭೂಮಿ ಆಗಿದ್ದರೂ, ಜಿಲ್ಲಾ ಮಟ್ಟದ ಪತ್ರಕರ್ತರ ಕಷ್ಟಗಳನ್ನು ಪರಿಹರಿಸುವಲ್ಲಿ ಅವರು ಸರ್ಕಾರ ಅಧಿಕಾರಿಗಳ ಬಳಿಗೆ ಹೋಗುವ ಮೂಲಕ ಉತ್ತಮ ಸಂಘಟಕರೂ ಆಗಿದ್ದರು ಎಂದು ಹಿರಿಯ ಪತ್ರಕರ್ತ ಪಿ.ಶೇಷಚಂದ್ರಿಕಾ ನುಡಿದರು.

ಹಿರಿಯ ಪತ್ರಕರ್ತರಾದ ಈಶ್ವರ ದೈ ತೋಟ ಅವರು ಮಾತನಾಡಿ, ತಾವು ಬೆಂಗಳೂರುಬಂದ ಸಂದರ್ಭದಲ್ಲಿ ಇವರೆಲ್ಲರ ಜೊತೆಗೆ ಹೊಂದಿದ್ದ ಒಡನಾಟ ಮೆಲುಕು ಹಾಕಿದರು.
ಹಿರಿಯ ಪತ್ರಕರ್ತರಾದ ಕಂ.ಕ.ಮೂರ್ತಿ, ಧಾರವಾಡ ಕರ್ನಾಟಕ ವಿವಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರೊ.ಜೆ.ಎಂ.ಚಂದುನವರ, ಸಾಗ್ಗರೆ ರಾಮಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಗಲಿದ ಚೇತನಗಳ ಗುಣಗಾನ ಮಾಡಿದರು.

ವಿತರಕರಿಬ್ಬರ ಸಾವಿಗೆ ಸಂತಾಪ:
ಾಪಘಾತದಲ್ಲಿ ಮೃತಪಟ್ಟ ಪತ್ರಿಕಾ ವಿತರಕರಾದ ಕುಮಾರ್ ಮತ್ತು ಮನೋಜ್ ಅವರಿಗೆ ಸಭೆಯಲ್ಲಿ ಸಂತಾಪ ವ್ಯಕ್ತಪಡಿಸಲಾಯಿತು. ಅವರುಗಳ ಬಗ್ಗೆ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೆ.ಯೂ.ಡಬ್ಲ್ಯೂ.ಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸೋಮಶೇಖರ ಗಾಂಧಿ, ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಉಪಾಧ್ಯಕ್ಷ ಕೆ.ಎಂ.ಜಿಕ್ರಿಯಾ, ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ್ ಸೇರಿದಂತೆ ಸಂಘದ ಹಲವಾರು ಸದಸ್ಯರು ನುಡಿನಮನ ಕಾರ್ಯಕ್ರಮದಲ್ಲಿ ಹಾಜರಿದ್ದರು .

ಕಾರ್ಯಕ್ರಮದ ಕೊನೆಯಲ್ಲಿ ರಾಜ್ಯ ಸಂಘದ ಖಜಾಂಚಿ ವಾಸುದೇವ ಹೊಳ್ಳ ಅವರು ವಂದನಾರ್ಪಣೆ ಮಾಡಿದರು.

Copyright © All rights reserved Newsnap | Newsever by AF themes.
error: Content is protected !!