ನಾಗಮಂಗಲ ಬಳಿ: ಸ್ವಿಫ್ಟ್ – ಇನೋವಾ ಕಾರ್ ನಡುವೆ ಡಿಕ್ಕಿ – ಐವರು ಸಾವು

Team Newsnap
1 Min Read

ಸ್ವಿಫ್ಟ್ – ಇನೋವಾ ಕಾರ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಐವರು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಎ ನಾಗತಿಹಳ್ಳಿ ಗ್ರಾಮದ ಬಳಿ ಭಾನುವಾರ ರಾತ್ರಿ ಜರುಗಿದೆ. 

ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ, ಹಲವರು ಗಾಯಗೊಂಡಿದ್ದಾರೆ.

ಮದುವೆ ಮುಗಿಸಿ ಹೊರಟವರು – ಮಸಣ ಸೇರಿದರು:

ಬೆಂಗಳೂರಿನಿಂದ ಮದುವೆ ಸಮಾರಂಭ ಮುಗಿಸಿಕೊಂಡು ಹಾಸನ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು ಎ. ನಾಗತಿಹಳ್ಳಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ವಿಭಜಕಕ್ಕೆ ಅಪ್ಪಳಿಸಿ ಹಾಸನದಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಕಾರುಗಳಲ್ಲಿದ್ದ ಒಟ್ಟು ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.

ಘಟನೆಯಲ್ಲಿ ಹಾಸನ ಮತ್ತು ತಮಿಳುನಾಡು ಮೂಲದವರು ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ. ಹೆಸರು ವಿಳಾಸ ಲಭ್ಯವಾಗಿಲ್ಲ. ಓರ್ವ ಮಹಿಳೆ ಸೇರಿದಂತೆ ಐವರ ಮೃತದೇಹಗಳನ್ನು ಇದೇ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಎಸ್.ಪಿ. ಎನ್. ಯತೀಶ್, ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ಸಿಪಿಐ ಸುಧಾಕರ್ ಭೇಟಿ ನೀಡಿ ಪರಿಶೀಲಿಸಿದರು.

ಭೀಕರ ರಸ್ತೆ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರಕ್ಕೆ ಕೆಲ ಕಾಲ ಅಡ್ಡಿ ಉಂಟಾಗಿತ್ತು. ಸಂಪೂರ್ಣ ಜಖಂಗೊಂಡಿದ್ದ ಎರಡು ವಾಹನಗಳನ್ನು ತೆರವುಗೊಳಿಸಿದ ಪೊಲೀಸರು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಿಂಡಗನವಿಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment