ರಾಜ್ಯದಲ್ಲಿ ಮೊಳಗಿದ ಕನ್ನಡದ ಕಂಪು: 1 ಲಕ್ಷ ಕಂಠಸಿರಿಯಲ್ಲಿ ಕನ್ನಡ ಡಿಂಡಿಮ, ಕಲರವ

Team Newsnap
1 Min Read

ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ‘ಕನ್ನಡಕ್ಕಾಗಿ ನಾವು ಅಭಿಯಾನ’ ಎಂಬ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ಸಿಕ್ಕಿತು .ಬೆಳಗ್ಗೆ 11.06 ನಿಮಿಷಕ್ಕೆ ರಾಜ್ಯಾದ್ಯಂತ ಸಾಮೂಹಿಕ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಿತು.

ಒಂದು ಲಕ್ಷ ಕಂಠಗಳಲ್ಲಿ ಕನ್ನಡದ ಮೂರು ಗೀತೆಗಳಾದ ರಾಷ್ಟ್ರಕವಿ ಕುವೆಂಪು ರಚಿತ ‘ಬಾರಿಸು ಕನ್ನಡ ಡಿಂಡಿಮವ’, ಕೆ.ಎಸ್. ನಿಸಾರ್ ಅಹಮದ್ ರಚಿತ ‘ಜೋಗದ ಸಿರಿ ಬೆಳಕಿನಲ್ಲಿ..’ ಹಂಸಲೇಖ ರಚನೆಯ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡುಗಳನ್ನು ಹಾಡಲಾಯಿತು.

ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಗಡಿನಾಡು, ಹೊರನಾಡುಗಳಲ್ಲಿ ಏಕಕಾಲದಲ್ಲಿ ಈ ಮೂರು ಹಾಡುಗಳನ್ನ ಹಾಡಲಾಯಿತು.

ಬೆಂಗಳೂರಲ್ಲಿ ವಿಧಾನಸೌಧದ ಮೆಟ್ಟಿಲ ಮೇಲೆ ನಿಂತು ವಿಧಾನಸೌಧ ಸಿಬ್ಬಂದಿಯಿಂದ ಹಾಗೂ ಗಾಂಧಿ ಪ್ರತಿಮೆ ಬಳಿ ಅಧಿಕಾರಿಗಳು ಗಾಯನ ಮಾಡಿದರು.

ಕನ್ನಡ ಉಳಿವಿಗಾಗಿ ಸಂಕಲ್ಪ ಇದಾದ ಬಳಿಕ ಸಂಕಲ್ಪ ಸ್ವೀಕಾರ ಮಾಡಲಾಯಿತು. ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂಬ ಪಣವನ್ನ ತೊಟ್ಟರು.

ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ಧನಾಗಿರುತ್ತೇನೆ ಎಂದು ಸಂಕಲ್ಪ ಮಾಡಿದರು.

Share This Article
Leave a comment