ಅರ್ಚಕರಿಗೆ ಆರೋಗ್ಯ ವಿಮೆಗಾಗಿ ಅಗತ್ಯ ಕ್ರಮ: ಶಶಿಕಲಾ ಜೊಲ್ಲೆ

Team Newsnap
1 Min Read

ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ಅರ್ಚಕರು ಹಾಗೂ ದೇಗುಲದ ನೌಕರರಿಗೆ ಆರೋಗ್ಯ ವಿಮೆ ಜಾರಿಗೆ ತರುವ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಜರಾಯಿ, ಹಜ್ ಮತ್ತುವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.


ಬೆಂಗಳೂರಿನಲ್ಲಿ ಗುರುವಾರ ನಡೆದ ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಮಾತನಾಡಿದರು. ಅರ್ಚಕರು ಹಾಗೂ ನೌಕರರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಇಲಾಖೆಯ ಚಟುವಟಿಕೆಗಳ ವೇಗ ಹೆಚ್ಚಿಸಿ ತ್ವರಿತಗತಿಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.


ಪ್ರತಿವರ್ಷ ದೇವಸ್ಥಾನಗಳ ನಿರ್ವಹಣೆಗೆ ಬಿಡುಗಡೆ ಮಾಡುವ ತಸ್ತಿಕ್ ಅನುದಾನದಲ್ಲಿ ವಿಳಂಬವಾಗಿದೆ. ಯೋಜನೆಯಡಿ 2021-22 ನೇ ಸಾಲಿಗೆ 134.62 ಕೋಟಿ.ರೂ. ಒದಗಿಸಲಾಗಿದೆ. ಇದರಲ್ಲಿ ಮೊದಲ ಎರಡು ತ್ರೈಮಾಸಿಕದಲ್ಲಿ 67.31ಕೋಟಿರೂ. ಬಿಡುಗಡೆಯಾಗಿದೆ.


ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಆಯಕ್ತರಿಗೆ ನಿರ್ದೇಶನ ನೀಡಿದರು. ಇಲಾಖೆ ವ್ಯಾಪ್ತಿಗೆ ಬರುವ ರಾಜ್ಯದ ಎಲ್ಲ ದೇಗುಲಗಳ ಆಸ್ತಿ, ಮಾರ್ಗನಕ್ಷೆ, ಅಲ್ಲಿನ ಸೇವೆಗಳ ಪೂರ್ಣ ಮಾಹಿತಿಯನ್ನು ಆನ್‌ಲೈನ್ ಮುಖಾಂತರ ತಿಳಿಯಲು ಇಂಟಿಗ್ರೆಟೆಡ್ ಟೆಂಪಲ್ ಮ್ಯಾನೇಜ್‌ಮೆಂಟ ಸಿಸ್ಟಮ್ (ಐಟಿಎಂಎಸ್) ಜಾರಿಗೆಗೊಳಿಸಬೇಕು.


ಮುಜರಾಯಿ ಇಲಾಖೆಯಲ್ಲಿ ಜಾರಿಗೊಳಿಸಬೇಕೆಂದಿರುವ ಸುಧಾರಣಾ ಕ್ರಮಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯೊಂದಿಗೆ ಚರ್ಚಿಸಿದಾಗ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಸಚಿವರು ನುಡಿದರು. ಸಭೆಯಲ್ಲಿ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Share This Article
Leave a comment