ವಿದ್ಯುತ್ ದರ ಹೆಚ್ಚಳ ಪ್ರತಿಭಟನೆ : ಮಂಡ್ಯದಲ್ಲಿ ವಾಣಿಜ್ಯೋದ್ಯಮಿಗಳ ಪ್ರತಿಭಟನೆ

Team Newsnap
2 Min Read
Electricity rate hike protest: Entrepreneurs' protest in Mandya ವಿದ್ಯುತ್ ದರ ಹೆಚ್ಚಳ ಪ್ರತಿಭಟನೆ : ಮಂಡ್ಯದಲ್ಲಿ ವಾಣಿಜ್ಯೋದ್ಯಮಿಗಳ ಪ್ರತಿಭಟನೆ #NEWS

ಮಂಡ್ಯ: ವಿದ್ಯುತ್ ದರ ಹೆಚ್ಚಳ ಹಿನ್ನೆಲೆ ರಾಜ್ಯ ಸರ್ಕಾರ ಮತ್ತು ವಿದ್ಯುತ್ ನಿಗಮದ ವಿರುದ್ಧ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಮಂಡ್ಯ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಪದಾಧಿಕಾರಿಗಳು, ಸದಸ್ಯರು, ವಾಣಿಜ್ಯೋದ್ಯಮಿಗಳು, ಸಂಘ ಸಂಸ್ಥೆಗಳ ಕಾರ್ಯಕರ್ತರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮೌನ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಮಂಡ್ಯದ ಮಹಾವೀರ ಭವನದಿಂದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಾ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಸಹಾಯಕರಿಗೆ ಈ ಕುರಿತು ಮನವಿ ಸಲ್ಲಿಸಿದರು.

ಕರ್ನಾಟಕ ವಿದ್ಯುತ್ ನಿಗಮಗಳು ಕೆಲ ದಿನಗಳ ಹಿಂದೆ ವಾಣಿಜ್ಯ, ಕೈಗಾರಿಕೆಗಳ ಹಾಗೂ ಗೃಹ ವಿದ್ಯುತ್ ದರಗಳನ್ನು ಏಕಾಏಕಿ ಶೇಕಡಾ 30 ರಿಂದ 70ರಷ್ಟು ಹೆಚ್ಚಳ ಮಾಡಿದೆ. ಹೀಗೆ ಹೆಚ್ಚುವರಿ ಮಾಡಿರುವ ವಿದ್ಯುತ್ ದರ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.

ದರ ಹೆಚ್ಚಳದಿಂದಾಗಿ ಅದರಲ್ಲೂ ಬಹುಮುಖ್ಯವಾಗಿ ಕೈಗಾರಿಕಾ ವಲಯ ಹಾಗೂ ವಾಣಿಜ್ಯ ಉದ್ಯಮ ಮತ್ತು ವ್ಯಾಪಾರ ವಹಿವಾಟುಗಳಿಗೆ ಹೆಚ್ಚಿನ ಹೊರೆಯಾಗಲಿದೆ. ಮುಂದಿನ ದಿನಗಳಲ್ಲಿ ಕೈಗಾರಿಕೆ ಹಾಗೂ ವ್ಯಾಪಾರಗಳನ್ನು ನಡೆಸಲು ಆಗದೆ ಮುಚ್ಚುವ ಪರಿಸ್ಥಿತಿ ಎದುರಾಗಲಿದೆ. ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರವೇ ಸಂಪೂರ್ಣ ಹೊಣೆ ಹೋರಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾಣಿಜ್ಯ ಉದ್ದೇಶ ಮತ್ತು ಗೃಹ ಬಳಕೆಗೆ ಹೆಚ್ಚಿಸಿರುವ ಅವೈಜ್ಞಾನಿಕ ವಿದ್ಯುತ್ ದರವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

ಮಂಡ್ಯದ ಬಹುತೇಕ ಅಂಗಡಿ ಮುಂಗಟ್ಟುಗಳು, ಕೈಗಾರಿಕೆಗಳು, ಸಂಘ ಸಂಸ್ಥೆಗಳ ಕಚೇರಿಗಳನ್ನು ಬಂದ್ ಮಾಡಲಾಗಿತ್ತು. ಇದಕ್ಕೂ ಮುನ್ನ ನಗರದ ವಿವಿಧ ರಸ್ತೆಗಳಲ್ಲಿ ತೆರಳಿ ಅಂಗಡಿ ಮುಂಗಟ್ಟುಗಳ ಮಾಲೀಕರುಗಳಿಗೆ ವಿದ್ಯುತ್ ದರ ಹೆಚ್ಚಳ ಕುರಿತಂತೆ ಜಾಗೃತಿ ಮೂಡಿಸಿ, ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು.ಮಹಿಳೆಯರ ‘ಶಕ್ತಿ’ ಪ್ರದರ್ಶನ – 126 ಕೋಟಿ ರೂ. ದಾಟಿತು ಟಿಕೆಟ್ ಮೌಲ್ಯ

ಜಿಲ್ಲಾ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಪ್ರಭಾಕರ್, ಉಪಾಧ್ಯಕ್ಷ ಎಂ.ಡಿ. ಹರಿಪ್ರಸಾದ್, ಕಾರ್ಯದರ್ಶಿ ಎಸ್. ಸತೀಶ್‌ ಬಾಬು, ಪದಾಧಿಕಾರಿಗಳಾದ ಕೆ.ಎಂ. ಶಿವಕುಮಾರ್, ಭರತ್‌ ಕುಮಾರ್, ಭೀಮಾರಾಮ್, ಎಂ.ಎಸ್. ಶಿವಪ್ರಕಾಶ್, ಪುಟರ್‌ಮಲ್, ಸೋಮಶೇಖರ್, ವೆಂಕಟೇಶ್‌ ಬಾಬು, ರಾಜೇಂದ್ರಪ್ರಸಾದ್, ಶಾಂತಿಪ್ರಸಾದ್, ಶಿವರಾಮೇಗೌಡ, ಎಚ್.ಆರ್. ಅರವಿಂದ್ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Share This Article
Leave a comment