2023 ರ ಚುನಾವಣೆ : ಮಿಷನ್ 123 – ಫಾರಂ ಹೌಸ್ ನಿಂದಲೇ ದಳಪತಿಗಳ ಗುರಿ, ದಾರಿ

Team Newsnap
1 Min Read

ರಾಜ್ಯದಲ್ಲಿ 2023ಕ್ಕೆ ಮಿಷನ್ 123 ಗುರಿ ಇಟ್ಟುಕೊಂಡ ದಳಪತಿಗಳು, ಬಿಡದಿ ಕೇತಗಾನಹಳ್ಳಿ ಫಾರಂ ಹೌಸ್ ನಿಂದಲೇ ಗುರಿ, ದಾರಿ ರೂಪಿಸಿಕೊಂಡರು.‌

ಅಧಿಕಾರಕ್ಕೆ ಬರಲೇಬೇಕೆಂದು ಜೆಡಿಎಸ್ ಪಕ್ಷ ಹೈಟೆಕ್ ಮಾದರಿಯಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಮತ್ತು ಶಕ್ತಿ‌ ಪ್ರದರ್ಶನಕ್ಕೆ ಬಿಡದಿಯ ಕುಮಾರಸ್ವಾಮಿ ತೋಟದ ಮನೆ ಸಾಕ್ಷಿಯಾಯಿತು.

ಕೇತಗಾನಹಳ್ಳಿಯಲ್ಲಿರುವ ಕುಮಾರಸ್ವಾಮಿ ತೋಟದ ಮನೆಯಲ್ಲಿ 4 ದಿನಗಳ ಕಾಲ ಜೆಡಿಎಸ್ ಕಾರ್ಯಾಗಾರ ನಡೆಯಲಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಜೆಡಿಎಸ್ ಧ್ವಜವನ್ನು ಹಾರಿಸುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಕಾರ್ಯಾಗಾರದಲ್ಲಿ ಜೆಡಿಎಸ್‌ನ ಹಾಲಿ – ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು ಪಾಲ್ಗೊಂಡಿದ್ದಾರೆ.

ಕಾರ್ಯಾಗಾರದ ಬಗ್ಗೆ ಮಾಹಿತಿ ನೀಡಿದ ಕುಮಾರಸ್ವಾಮಿ ಮಾತನಾಡಿ,  ನಾನು ಕಳೆದ 6 ತಿಂಗಳಿಂದ ತೋಟದ ಮನೆಯಲ್ಲಿದ್ದೆ. ಆದರೆ, ಈ ಕಾರ್ಯಕ್ರಮದ ಸಂಪೂರ್ಣ ತಯಾರಿ ನಡೆದಿತ್ತು. ಇನ್ನು 4 ಕಡೆ ಈ ಕಾರ್ಯಾಗಾರ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದರು.‌

ಮಹಿಳೆಯರಿಗೆ ಹೆಚ್ಚಿನ‌ ಸ್ಥಾನಗಳನ್ನು ಕೊಡಲಾಗುತ್ತೆ. ಈವರೆಗೆ ನಮ್ಮ‌ ಪಕ್ಷದಲ್ಲಿ ಆ ಕೆಲಸ ಆಗಿಲ್ಲ. ಬಿಡದಿ ತೋಟದ ಮನೆ ನನಗೆ ಲಕ್ಕಿ ಭೂಮಿ, 1994 ರಲ್ಲಿ ಜೆಡಿಎಸ್ ಸರ್ಕಾರ ಬಂದಿದ್ದೇ ಈ ಭೂಮಿಯಿಂದ.. ಇಲ್ಲಿಂದಲೇ ಸಂಘಟನೆ ಪ್ರಾರಂಭ ಮಾಡಿದ್ದು.‌ ಈಗ ಮಿಷನ್- 123 ಸಹ ಇಲ್ಲಿಂದಲೇ ಪ್ರಾರಂಭವಾಗಲಿದೆ ಎಂದರು.

ಡಿಕೆಶಿ ವಿರುದ್ದ ದೇವೇಗೌಡರ ವಾಗ್ದಾಳಿ ;

ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಡಿ.ಕೆ.ಶಿವಕುಮಾರ್ ರವರು ಸಿದ್ದರಾಮಯ್ಯರನ್ನು ಕರೆತಂದರು. ಅವರನ್ನ ಕರೆತಂದರೆ ಜೆಡಿಎಸ್ ಮುಗಿಸಬಹುದು ಎಂಬ ಆಲೋಚನೆ ಇತ್ತು. ಹುಣಸೂರುನಿಂದ ವಿಶ್ವನಾಥ್, ಮಾಗಡಿಯಿಂದ ರೇವಣ್ಣ ಸಹ  ಹೋಗಿದ್ದರು. ಮಧ್ಯರಾತ್ರಿ 2 ಗಂಟೆಯಲ್ಲಿ ತೀರ್ಮಾನವಾಗಿತ್ತು. ನಾನು ಯಾವುದೇ ಉತ್ಪ್ರೇಕ್ಷೆಯಿಂದ ಮಾತನಾಡ್ತಿಲ್ಲ, ಅಂದಿನಿಂದ ಪಕ್ಷವನ್ನು ಕಟ್ಟಲು ಪ್ರಾರಂಭ ಮಾಡಿದ್ದೇವೆಂದು ಕಾರ್ಯಾಗಾರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದರು.

Share This Article
Leave a comment