October 15, 2024

Newsnap Kannada

The World at your finger tips!

WhatsApp Image 2023 05 09 at 5.02.01 PM

voting

ಚುನಾವಣಾ ಶಾಯಿ (Election ink)

Spread the love

ಭಾರತದಲ್ಲಿ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗಳು ಯಾವ ಹಬ್ಬಕ್ಕಿಂತಲೂ ಕಡಿಮೆ ಏನಿಲ್ಲ. ದೀಪಾವಳಿ, ಓಕುಳಿಗಳಂತಹ ಹಬ್ಬಗಳು ಬಂದಾಗ ಹೇಗೆ ಸಂಭ್ರಮವೋ ಅದೇ ರೀತಿ ಪ್ರಜಾಪ್ರಭುತ್ವದ ದೊಡ್ಡ ಹಬ್ಬದಲ್ಲೂ ಮೂಡುತ್ತದೆ.

ಮತದಾನದ ಸಂಭ್ರಮ

ಪ್ರತಿ ಮತದಾನದ ಸಂದರ್ಭದಲ್ಲಿ ದೊಡ್ಡ ದೊಡ್ಡ ಜನರು, ಗಣ್ಯರು, ಸೆಲೆಬ್ರಿಟಿಗಳು ಮತದಾನ ಮಾಡಿ ಹೊರಬಂದ ಸಂದರ್ಭದಲ್ಲಿ ತಮ್ಮ ತೋರು ಬೆರಳನ್ನು ಮಾಧ್ಯಮದವರ ಮುಂದೆ ತೋರಿಸುವ ಪ್ರತೀತಿ ಇದೆ.

ಈ ಪ್ರತೀತಿ ಎಂಬುದು ಕೇವಲ ದೊಡ್ಡ ವ್ಯಕ್ತಿಗಳಿಗಷ್ಟೇ ಸೀಮಿತವಾಗಿಲ್ಲ, ಬದಲಾಗಿ ಜನಸಾಮಾನ್ಯರೂ ಸಹ ತಾವೇನು ಕಮ್ಮಿ ಇಲ್ಲ ಎನ್ನುತ್ತ ತಾವು ಮತದಾನ ಮಾಡಿದ ಕುರುಹಾಗಿ ತಮ್ಮ ಬೆರಳನ್ನು ತೋರಿಸುತ್ತ ಫೋಟೊ ಕ್ಲಿಕ್ಕಿಸಿಕೊಂಡು ತಮ್ಮ ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲಿ ಅಪ್ಲೋಡ್ ಮಾಡಿ ಪುಳಕಿತರಾಗುತ್ತಾರೆ.

ಮತದಾನ ಮಾಡಿ ತಮ್ಮ ಕರ್ತವ್ಯ ನಿಭಾಯಿಸಿದೆವು ಎಂಬ ಹೆಮ್ಮೆಯ ಬಿಗುಮಾನವನ್ನು ತೋರ್ಪಡಿಸುವಲ್ಲಿ ಭಾರತೀಯರು ಎತ್ತಿದ ಕೈ ಎನ್ನಬಹುದು.

ಮತದಾನದ ಬಳಿಕ ಬೆರಳಿಗೆ ಶಾಯಿಯ ಗುರುತು

ಸಾಂವಿಧಾನಿಕವಾಗಿ ಬಂದಿರುವ ಮತದಾನದ ಹಕ್ಕನ್ನು ವ್ಯಕ್ತಿಯೊಬ್ಬ ಚಲಾಯಿಸಿದ್ದಾನೆ ಎಂಬುದನ್ನು ಸೂಚಿಸುವ ಹಾಗೂ ಒಂದೇ ಬಾರಿ ಮಾಡಬೇಕಾಗಿರುವ ತನ್ನ ಸರಿಯಾದ ಹಕ್ಕನ್ನು ಚಲಾಯಿಸಿದ್ದಾನೆ ಎಂದು ಖಾತರಿಪಡಿಸುವ ಸಂಕೇತವಾಗಿ ಅವನ/ಅವಳ ಕೈಯ ತೋರು ಬೆರಳಿಗೆ ಸುಲಭವಾಗಿ ಅಳಿಸಲಾಗದಂತಹ ಒಂದು ಶಾಯಿಯ ಗುರುತನ್ನು ಹಾಕಿರುತ್ತಾರೆ.

ಈ ಶಾಯಿಯ ಗುರುತು ಆ ವ್ಯಕ್ತಿ ಈಗಾಗಲೇ ತನ್ನ ಮತದಾನದ ಹಕ್ಕನ್ನು ಚಲಾಯಿಸಿದ್ದಾನೆ ಎಂಬುದನ್ನು ಸೂಚಿಸುತ್ತದೆ.

ಶಾಯಿ ಹಚ್ಚುವ ಪದ್ಧತಿ :

1951-52 ರಲ್ಲಿ ಭಾರತದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಾರ್ವತ್ರಿಕ ಚುನಾವಣೆಗಳು ನಡೆದಾದ ಮೇಲೆ ಭಾರತ ಚುನಾವಣಾ ಆಯೋಗಕ್ಕೆ ನಡೆದಂತಹ ಚುನಾವಣೆಯಲ್ಲಿ ಹಲವು ಮೋಸ ಅಥವಾ ಬಹುಬಾರಿ ಒಬ್ಬ ವ್ಯಕ್ತಿಯಿಂದಲೇ ನಕಲಿ ಮತದಾನಗಳಾಗಿರುವ ಬಗ್ಗೆ ಮಾಹಿತಿ ದೊರೆಯಿತು.

ಮುಂದಿನ ಬಾರಿ ಈ ರೀತಿ ಆಗದಂತೆ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಬಾರಿ ಮತದಾನ ಮಾಡದಂತೆ ಏನಾದರೂ ಮಾಡಬೇಕೆಂದು ಚುನಾವಣಾ ಆಯೋಗವು ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿ ಆಫ್ ಇಂಡಿಯಾವನ್ನು ಸಂಪರ್ಕಿಸಿ ಸುಲಭವಾಗಿ ಕೈಯಿಂದ ಅಳಿಸಲಾಗದಂತಹ ಶಾಯಿಯೊಂದನ್ನು ತಮಗಾಗಿ ಅಭಿವೃದ್ಧಿಪಡಿಸಬೇಕೆಂದು ಮನವಿ ಮಾಡಿತು.

ಶಾಯಿ ಉತ್ಪಾದಿಸುವ ಭಾರತದ ಏಕೈಕ ಕಂಪನಿ

ಎನ್.ಪಿ.ಎಲ್ ಸುಭದ್ರವಾಗಿ ಶಾಯಿಯ ಸೂತ್ರವೊಂದನ್ನು ಅಭಿವೃದ್ಧಿಪಡಿಸಿ ಆ ಪ್ರಕಾರ ಶಾಯಿಯನ್ನು ಉತ್ಪಾದಿಸಲು ಅಂದಿನ ಪ್ರತಿಷ್ಠಿತ ಮೈಸೂರು ಮಹಾರಾಜರ ಒಡೆತನದಲ್ಲಿದ್ದ ಮೈಸೂರು ಪೇಂಟ್ಸ್ ಆಮ್ಡ್ ವಾರ್ನಿಷ್ ಲಿಮಿಟೆಡ್ ಸಂಸ್ಥೆಯನ್ನು ಸಂಪರ್ಕಿಸಿತು. ಅಂದಿನಿಂದ ಉತ್ಪಾದಿಸಲಾದ ಈ ಶಾಯಿಯು ಇಂದಿನವರೆಗೂ ಅದೊಂದೇ ಸಂಸ್ಥೆಯಿಂದಲೇ ಉತ್ಪಾದಿಸಲಾಗುತ್ತಿದ್ದು ಹೆಮ್ಮೆಯ ವಿಷಯವಾಗಿದೆ.

WhatsApp Image 2023 05 09 at 4.53.01 PM

ಭಾರತದಲ್ಲಿ ಮಾತ್ರವಲ್ಲ ಹತ್ತಾರು ರಾಷ್ಟ್ರಗಳಲ್ಲಿ ಎಲ್ಲೇ ಚುನಾವಣೆ ನಡೆದರೂ ಕೈಗೆ ಹಚ್ಚುವ ಶಾಯಿ ಸರಬರಾಜಾಗುವುದೇ ಕರ್ನಾಟಕದಿಂದ. ಅದರಲ್ಲೂ ಅರಮನೆಗಳ ನಗರಿ ಮೈಸೂರಿನಿಂದ. ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ಎಂಬುದು ಮೈಸೂರಿನಲ್ಲಿರುವ ಒಂದು ಕಂಪನಿ. ಚುನಾವಣೆಗಳಲ್ಲಿ ಬಳಸಲಾಗುವ ಅಳಿಸಲಾಗದ ಶಾಯಿಯನ್ನು ಉತ್ಪಾದಿಸುವ ಭಾರತದ ಏಕೈಕ ಕಂಪನಿ ಇದಾಗಿದೆ.

1962ರಲ್ಲಿ ಮೊದಲ ಬಾರಿಗೆ ಬಳಕೆ

1962ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಶಾಯಿಯನ್ನು ಮೊದಲ ಬಾರಿಗೆ ಬಳಸಲಾಯಿತು ಹಾಗೂ ನಿರೀಕ್ಷಿಸಿದಂತೆ ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ನಕಲಿ ಮತಗಳು ಅಂದರೆ ಒಂದಕ್ಕಿಂತ ಹೆಚ್ಚು ಬಾರಿ ಮಾಡಲಾಗುತ್ತಿದ್ದ ಮತ ಚಲಾವಣೆಗಳನ್ನು ನಿಲ್ಲಿಸಲಾಯಿತು.

ಚುನಾವಣಾ ಶಾಯಿ ವಿಶೇಷ

ಈ ಶಾಯಿಯ ಉತ್ಪಾದನೆಯ ಸೂತ್ರ ಸಂಪೂರ್ಣವಾಗಿ ಯಾರಿಗೂ ತಿಳಿದಿಲ್ಲ. ಆದರೂ, ಇದು ಅಲ್ಪ ಪ್ರಮಾಣದಲ್ಲಿ ಸಿಲ್ವರ್ ನೈಟ್ರೇಟ್ ಘಟಕಾಂಶಗಳನ್ನು ಹೊಂದಿದ್ದು ಇದು ಬೆಳಕಿನೊಂದಿಗೆ ರಿಯಾಕ್ಟ್ ಆಗುತ್ತದೆ. ಇದರಿಂದಾಗಿ ಇದು ಬೆರಳಿನ ಮೇಲೆ 3-4 ವಾರಗಳವರೆಗೂ ಅಳಿಯದಂತೆ ಉಳಿದಿರುತ್ತದೆ.

ಇದನ್ನು ನೀರಿನಿಂದ ತೊಳೆಯುವುದರ ಮುಲಕವಾಗಲಿ ಅಥವಾ ರಾಸಾಯನಿಕ ಬಳಸಿ ಅಳಿಸುವುದನ್ನಾಗಲಿ ಮಾಡಲು ಸಾಧ್ಯವಿಲ್ಲ. ಈ ಶಾಯಿಯು ಸೂರ್ಯನ ಕಿರಣಕ್ಕಾಗಲಿ ಅಥವಾ ರಾತ್ರಿಯ ಲೈಟಿನ ಪ್ರಕಾಶಕ್ಕಾಗಲಿ ಒಡ್ಡಿಕೊಂಡಾಗ ಮತ್ತಷ್ಟು ಪ್ರಖರವಾಗುತ್ತದೆ.

ಒಟ್ಟಿನಲ್ಲಿ ಹಲವು ವಿಶೇಷತೆಗಳುಳ್ಳ ಭಾರತದಂತ ದೇಶದಲ್ಲಿ ವೈವಿಧ್ಯಮಯ ವೇಶಭೂಷಣಗಳಿವೆ. ಇವೆಲ್ಲದರಲ್ಲೂ ಪ್ರತಿಯೊಂದು ಧರ್ಮದ, ಜಾತಿಯ ಜನರು ಏಕರೂಪವಾಗಿ ಹೆಮ್ಮೆಯಿಂದ ತೋರಿಸುವ ಸಂಕೇತವೆಂದರೆ ಅದುವೇ ತೋರು ಬೆರಳಿನಲ್ಲಿ ಹಾಕಿಸಿಕೊಂಡ ಚುನಾವಣಾ ಶಾಯಿ ಎನ್ನಬಹುದು.

ವಿಧಾನಸಭಾ ಚುನಾವಣೆಗೆ ಒಟ್ಟು 1 ಲಕ್ಷ 20 ಸಾವಿರಕ್ಕೂ ಅಧಿಕ ಬಾಟಲ್‌ಗಳನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದೆ. ಆಯೋಗದ ಮೂಲಕ ಅದು ಎಲ್ಲ ಜಿಲ್ಲೆಗಳಿಗೆ ತಲುಪಲಿದೆ. ಒಂದು ಬಾಟಲ್‌ನಲ್ಲಿ 10 ML ಶಾಯಿ ಇರಲಿದೆ. ಇದರ ಜತೆಗೆ 19 ಸಾವಿರ ಸೀಲಿಂಗ್‌ ವ್ಯಾಕ್ಸಿನ್‌ ಅನ್ನೂ ಮೈಸೂರಿನ ಈ ಕಂಪನಿ ತಯಾರಿಸಿ ಆಯೋಗಕ್ಕೆ ನೀಡಿದೆ. ಹೀಗೆ ಒಂದು ಬಾಟಲ್‌ನಲ್ಲಿರುವ 10ML ಶಾಯಿಯನ್ನು 800ರಿಂದ 900 ಮಂದಿಯ ಕೈಗೆ ಹಾಕಬಹುದಾಗಿದೆ.

Copyright © All rights reserved Newsnap | Newsever by AF themes.
error: Content is protected !!