November 18, 2024

Newsnap Kannada

The World at your finger tips!

deepa1

ಏಕ್ ಅಮರ್ ಪ್ರೇಮ್ ಕಹಾನಿ: ಒಂದು ಸಾವಿನ ಸುತ್ತ ಪ್ರೀತಿಯ ಹುತ್ತಾ…..

Spread the love

ಏಕ್ ಅಮರ್ ಪ್ರೇಮ್ ಕಹಾನಿ……..ಒಂದು ಸಾವಿನ ಸುತ್ತ ಪ್ರೀತಿಯ ಹುತ್ತಾ……..
ಮಾನವೀಯತೆಯ ಒಂದು ಜೀವಂತ ಸಾಕ್ಷ್ಯ……..

ದಂಪತಿಗಳಿಬ್ಬರು ಹೈಕೋರ್ಟಿನ ವಕೀಲರು, 8 ವರ್ಷದ ಮುದ್ದಾದ ಮಗ. ಒಂದಷ್ಟು ಸಮಾಧಾನಕರ ಸಂಪಾದನೆ…..

ಆ ಸಂಪಾದನೆಯಲ್ಲಿ ಒಂದು ತೋಟದ ಮನೆ ಮಾಡುವ‌ ಆಸೆಯಲ್ಲಿ ಇಬ್ಬರೂ ನಿರ್ಧರಿಸಿ ತುಮಕೂರು ಜಿಲ್ಲೆಯ ಗುಬ್ಬಿ ರಸ್ತೆಯ ಪೆರಮನಹಳ್ಳಿ ಗ್ರಾಮದಲ್ಲಿ ಒಂದಷ್ಟು ಎಕರೆ ಜಮೀನು ಖರೀದಿಸುತ್ತಾರೆ.

ಹೀಗಿರಬೇಕಾದರೆ ಕೊರೊನಾ ಎರಡನೆಯ ಅಲೆ ಹೆಂಡತಿಗೆ ಅಪ್ಪಳಿಸುತ್ತದೆ. ಸಾಧ್ಯವಿರುವ ಎಲ್ಲಾ ಪ್ರಯತ್ನಗಳ ನಂತರವೂ ಆಕೆಯ ‌ಉಸಿರು ನಿಲ್ಲುವುದ‌ನ್ನು ತಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ.

ಈ ಅನಿರೀಕ್ಷಿತ ಸಾವು ಪತಿಗೆ ಸಹಿಸಲಸಾಧ್ಯವಾಗುತ್ತದೆ. ದಿಕ್ಕು ತೋಚದಂತಾಗುತ್ತದೆ. ಆಸೆ ಕನಸಿನ ಜಾಗದಲ್ಲಿ ಹೆಂಡತಿಯ ಶವ ಸಂಸ್ಕಾರ ಮಾಡಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತದೆ.

ಒಂದು ಕ್ಷಣ ಹೆಂಡತಿಯ ಸ್ಮಾರಕ ನಿರ್ಮಿಸಲೇ ಈ ಜಮೀನು ಕೊಂಡಂತೆ ಆಯಿತೆ ಎಂಬ ಚಿಂತೆ ಕಾಡಲಾರಂಭಿಸುತ್ತದೆ. ಅದರಿಂದ ಹೊರ ಬರಲು ತುಂಬಾ ಕಷ್ಟವಾಗುತ್ತದೆ.

ಕೊನೆಗೊಂದು ದಿನ ನಿರ್ಧರಿಸುತ್ತಾರೆ ಈ ಜಾಗ ಒಂದು ಅರ್ಥಪೂರ್ಣ ಮಾನವೀಯ ಮೌಲ್ಯಗಳ ನೆಲೆಯಾಗಲಿ ಅದು ಮನುಷ್ಯ ಸಂಬಂಧಗಳ ಗಾಢತೆಯ ಸಂಕೇತವಾಗಿ ಉಳಿಯಲಿ ಇದು ನನ್ನದಲ್ಲದ ನನ್ನ ನೆನಪಿನ ಹೆಂಡತಿಯೆಂಬ ಪ್ರೇಯಸಿಯ ಸ್ಥಾಯೀ ಭಾವವಾಗಿ ಸಮಾಜಮುಖಿಯಾಗಿ ಬಳಕೆಯಾಗಲಿ ಎಂದು ಅಲ್ಲಿ ಆಕೆಯ ಹೆಸರಿನ ಮಾನಸ ಮಂದಿರ ಎಂಬ ಶಾಲೆ ಮತ್ತು ಮಾನಸ ಮಹಲೆಂಬ ಗ್ರಂಥಾಲಯ ಅದಕ್ಕೆ ಪೂರಕವಾದ ಚಟುವಟಿಕೆಗಳನ್ನು ನಡೆಸಲು ಮೀಸಲಿಡುವೆ ಎಂದು.

ಸಹಜವಾಗಿ ತೋರುವ ಸಂಬಂಧಗಳ ಪ್ರೀತಿ ಎಂಬ ಮಾಯೆ ಇತ್ತೀಚಿನ ದಿನಗಳಲ್ಲಿ ತುಂಬಾ ಕಡಿಮೆಯಾಗುತ್ತಿದೆ. ಅದರ ತೀವ್ರತೆ ನಾನಾ ಕಾರಣಗಳಿಂದ ಮರೆಯಾಗುತ್ತಿದೆ. ಆದ್ದರಿಂದ….

ಇದರಲ್ಲಿ ಯಾವುದೇ ವ್ಯಾಪಾರೀಕರಣದ ಚಟುವಟಿಕೆ ನಡೆಸದೆ ಒಂದು ಪ್ರಶಾಂತ ಹಸಿರು ಗಿಡಗಳ ವಾತಾವರಣದ ನಡುವೆ ಮಾನವೀಯ ಮೌಲ್ಯಗಳನ್ನು ಬೆಳೆಸುವ, ಸಂಬಂಧಗಳನ್ನು ಬೆಸೆಯುವ, ಶುದ್ಧ ಪ್ರಾಮಾಣಿಕ ಪ್ರೀತಿ ಮತ್ತು ಪ್ರಾಮಾಣಿಕತೆ ಉಳಿಸುವ ಸಾರ್ವಜನಿಕ ಸ್ಥಳವಾಗಿ ಮಾಡುವ ಮತ್ತು ಮುಂದಿನ ದಿನಗಳಲ್ಲಿ ಅನೇಕ ಸಭೆ ಸಮಾರಂಭ ವಿಚಾರ ಸಂಕಿರಣ ಮತ್ತು ಉಚಿತವಾದ ಅತ್ಯುಪಯುಕ್ತ ಗ್ರಂಥಾಲಯ ಸ್ಥಾಪಿಸುವ ನಾನಾ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಕನಸು ಹೊಂದಿದ್ದಾರೆ.

ಅದರ ಉದ್ಘಾಟನೆಯ ಸಮಾರಂಭ ನಾಳೆ 23/10/2021 ತುಮಕೂರು ಜಿಲ್ಲೆಯ ಗುಬ್ಬಿ ರಸ್ತೆಯ ಪೆರುಮನಹಳ್ಳಿ ಎಂಬಲ್ಲಿ ಮಾಡಲಾಗುತ್ತಿದೆ. ಖ್ಯಾತ ಚಿತ್ರ ನಿರ್ದೇಶಕ ಟಿ. ಎನ್. ಸೀತಾರಾಮ್ ಅವರು ಇದನ್ನು ಉದ್ಘಾಟಿಸಲಿದ್ದಾರೆ.

ಅವರಿಗೆ ಶುಭಾಶಯಗಳನ್ನು ಕೋರುತ್ತಾ….


ಜಾತಸ್ಯ ಮರಣಂ ಧ್ರುವಂ…….

ಹುಟ್ಟಿದ ಕ್ಷಣದಿಂದ ಮನುಷ್ಯ ಸಾಗುವುದೇ ಮರಣದ ಕಡೆ.

ಕೆಲವು ಅನಿರೀಕ್ಷಿತ ಮತ್ತು ಅಕಾಲಿಕ ಸಾವುಗಳು ನಮ್ಮನ್ನು ಕದಡಿ ಬಿಡುತ್ತವೆ. ಅವರು ಹತ್ತಿರದವರೇ ಆಗಿರಲಿ ಅಥವಾ ದೂರದ ವ್ಯಕ್ತಿಗಳೇ ಆಗಿರಲಿ ಅಥವಾ ಜನಪ್ರಿಯತೆ ಹೊಂದಿದವರೇ ಆಗಿರಲಿ ಏನೋ ಒಂದು ಸಂಕಟ ಮನಸ್ಸಿನಲ್ಲಿ ಉಂಟಾಗುತ್ತದೆ.

ಸಾವು ಅನಿವಾರ್ಯ. ಅದು ಎಲ್ಲರಿಗೂ ತಿಳಿದಿದೆ. ಸಮಯ ಮಾತ್ರ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು. ಆದರೂ ಇನ್ನೆಂದೂ ಬಾರದ ಲೋಕಕ್ಕೆ ಜೀವ ಹೊರಟು ಹೋಗುತ್ತದೆ ಎಂಬ ಭಾವವೇ ನಮ್ಮನ್ನು ಕುಸಿಯುವಂತೆ ಮಾಡಿ ಅಪಾರ ತಲ್ಲಣಗಳನ್ನು ಸೃಷ್ಟಿಸುತ್ತದೆ. ನಮ್ಮ ಪ್ರೀತಿ ಪಾತ್ರರ ಈ ರೀತಿಯ ಸಾವುಗಳನ್ನಂತೂ ಊಹಿಸಿಕೊಳ್ಳುವುದು ಸಹ ತುಂಬಾ ಯಾತನಾಮಯ.

ಸಹಜವಾಗಿ ಸಾವೆಂದರೆ ದೇಹದ ಚಲನೆಯ ನಿಲ್ಲುವಿಕೆ ಅಥವಾ ತಟಸ್ಥವಾಗುವಿಕೆ. ಅದಕ್ಕಿಂತ ಹೆಚ್ಚಿನ ಅರ್ಥ ಹುಡುಕತೊಡಗಿದರೆ ನಮ್ಮ ಒತ್ತಡ ಹೆಚ್ಚುತ್ತದೆ. ಏನೇ ಅರ್ಥಗಳು ಇದ್ದರೂ ನಾವು ಇಲ್ಲಿರುವುದಿಲ್ಲ ಎಂಬುದಷ್ಟೇ ಸತ್ಯ. ಉಳಿದದ್ದೆಲ್ಲ ಅದರ ವ್ಯಾಖ್ಯಾನ ಮಾತ್ರ.

ಸಾವೇ ಅಂತಿಮ ಅಲ್ಲಿಂದ ಮುಂದೆ ಏನೂ ಉಳಿದಿರುವುದಿಲ್ಲ. ಆದರೆ ಸಮಸ್ಯೆ ಇರುವುದು ಅವರ ಅವಲಂಬಿತರು ಮತ್ತು ಪ್ರೀತಿ ಪಾತ್ರರದು. ಸಾವನ್ನು ಸಹಜವಾಗಿ ಸ್ವೀಕರಿಸುವ ಮನೋಭಾವ ಬಹುಶಃ ವಿಶ್ವದ ಯಾರಲ್ಲಿಯೂ ಕಾಣುವುದಿಲ್ಲ. ಕೇವಲ ಕೆಲವು ತೀರಾ ಅಪರೂಪದ ಆಧ್ಯಾತ್ಮಿಕ ಸಾಧಕರು ಆ ಸ್ಥಿತಿ ತಲುಪಿರಬಹುದು. ಅಷ್ಟೊಂದು ಭಾವನಾತ್ಮಕ ನಿಯಂತ್ರಣ ಸಾಮಾನ್ಯ ಜನರಲ್ಲಿ ಇರುವುದಿಲ್ಲ. ಅದು ತಡೆಯಲಾಗದ ಅಳುವಿನ ರೂಪದಲ್ಲಿ ವ್ಯಕ್ತವಾಗುತ್ತದೆ. ನೆನಪುಗಳು ಅಲೆಅಲೆಯಾಗಿ ಅಪ್ಪಳಿಸಿ ದುಃಖ ಉಮ್ಮಳಿಸಿ ಬರುತ್ತದೆ.

ಇನ್ನು‌ ಆ ಜೀವ ನಮ್ಮೊಂದಿಗೆ ಇರುವುದಿಲ್ಲ ಎಂಬುದರ ಜೊತೆಗೆ ಅದರಿಂದ ಮುಂದಿನ ನಮ್ಮ ಮೇಲಾಗುವ ಪರಿಣಾಮಗಳು ಸಹ ದುಃಖದ ಪ್ರಭಾವ ಹೆಚ್ಚಿಸುತ್ತದೆ.
ಮರಣವೇ ಮಹಾ ನವಮಿ ಎಂಬ ಶರಣರ ಮಾತುಗಳನ್ನು ವಾಸ್ತವಕ್ಕೆ ಅಳವಡಿಸಿಕೊಳ್ಳುವಷ್ಟು ನಮ್ಮ ಸಮಾಜದ ವೈಯಕ್ತಿಕ ಅಥವಾ ಸಾಮೂಹಿಕ ಮನೋಭಾವ ಬೆಳೆದು ಬಂದಿಲ್ಲ.

ಸಾವಿನ ನೋವನ್ನು ತಡೆಯಲು ಯಾವುದೇ ಸಿದ್ದ ಸೂತ್ರಗಳು ಇಲ್ಲ. ಆದರೆ ಸಲಹೆಗಳು ಸಿದ್ದವಾಗಿರುತ್ತವೆ. ಸಾವು ಅನಿವಾರ್ಯ ಅದನ್ನು ಒಪ್ಪಿಕೊಳ್ಳಲೇ ಬೇಕು. ಬದುಕಿರುವವರ ಜೀವನ ಮುಂದೆ ಸಾಗಲೇ ಬೇಕು. ಆ ಸಾಗುವ ಪಯಣದಲ್ಲಿ ದಿನನಿತ್ಯದ ಚಟುವಟಿಕೆಗಳು ಜವಾಬ್ದಾರಿಗಳು ಸಮಯ ಸರಿದಂತೆ ಸಾವಿನ ತೀವ್ರತೆ ಕಡಿಮೆ ಮಾಡುತ್ತದೆ. ಅಪಾರ ಜ್ಞಾನದಿಂದ ಮೂಡುವ ಮನಸ್ಸಿನ ನಿಯಂತ್ರಣ ಸಹ ಸಾವಿನ ದುಃಖವನ್ನು ಕಡಿಮೆ ಮಾಡುತ್ತದೆ. ಆದರೆ ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.

ಆಧ್ಯಾತ್ಮಿಕವಾಗಿ ಈ ಸಾವಿನ ನೋವುಗಳನ್ನು ನಿಯಂತ್ರಿಸಲು ಸಾಕಷ್ಟು ಅರ್ಥಗಳನ್ನು ಹುಡುಕಿಕೊಳ್ಳಲಾಗಿದೆ. ಆಚರಣೆಗಳನ್ನು ಪಾಲನೆ ಮಾಡಲಾಗುತ್ತದೆ. ಮನಸ್ಸಿಗೆ ಸಾವನ್ನು ಒಪ್ಪಿಕೊಳ್ಳುವ ರೀತಿಯಲ್ಲಿ ಇವು ಬೆಳೆದು ಬಂದಿದೆ.

ಒಂದು ರೀತಿಯಲ್ಲಿ ಆಧ್ಯಾತ್ಮಿಕದ ಅಸ್ತಿತ್ವವೇ ಬದುಕಿಗಿಂತ ಸಾವಿನ ಭಯದಿಂದಲೇ ಹೆಚ್ಚು ಪ್ರಚಲಿತವಾಗಿದೆ ಎಂದು ಹೇಳಬಹುದು. ಜೀವ ಮರಳಿಸುವ ಶಕ್ತಿ ಯಾರಿಗೂ ಇಲ್ಲದೇ ಇರುವುದರಿಂದ ಸಾವನ್ನು ಸ್ವೀಕರಿಸುವ ವಿಧಾನಗಳತ್ತಲೇ ಎಲ್ಲರ ಚಿತ್ತ. ಜನ್ಮಾಂತರ ಅಥವಾ ಪುನರ್ಜನ್ಮದ ಸೃಷ್ಟಿ ಸಹ ಇದರ ಭಾಗವೇ ಆಗಿದೆ.

ಏನೇ ಹೇಳಿದರು ಸಾವಿನ ನೋವುಗಳು ಸದಾ ನಮ್ಮ ಬದುಕಿನ ಭಾಗವಾಗಿ ನಮ್ಮನ್ನು ಕಾಡುತ್ತಲೇ ಇರುತ್ತದೆ. ನಮ್ಮ ಸಾವು ಬರುವವರೆಗೂ……

ಇದರ ಬಗ್ಗೆ ತುಂಬಾ ಆಳಕ್ಕೆ ಇಳಿದು ಯೋಚಿಸಬಹುದು. ಆದರೆ ಅದೊಂದು ಅಧ್ಯಯನ ಮಾತ್ರವಾಗಿರುತ್ತದೆ. ಸಾಮಾನ್ಯರಿಗೆ ಅದೊಂದು ವ್ಯರ್ಥ ಪ್ರಯತ್ನ ಎನಿಸುತ್ತದೆ. ಅರ್ಥಗಳ ಹುಡುಕಾಟಕ್ಕೆ ಮಾತ್ರ ಸೀಮಿತವಾಗಿರುತ್ತದೆ. ವಾಸ್ತವ ತುಂಬಾ ಭಿನ್ನವಾಗಿರುತ್ತವೆ………

ಸಾವು ಮತ್ತು ಪ್ರೀತಿಯ ಭಾವದಲ್ಲಿ ನಿಮ್ಮೊಂದಿಗೆ ಇಂದು…….

  • ವಿವೇಕಾನಂದ ಹೆಚ್ ಕೆ
Copyright © All rights reserved Newsnap | Newsever by AF themes.
error: Content is protected !!