1608 ರಿಂದ 1681 ರವರೆಗೆ ಜೀವಿಸಿದ್ದ ಸಮರ್ಥ ರಾಮದಾಸರು ನಮ್ಮ ದೇಶದಲ್ಲಿ ಜನಿಸಿದ ಮಹರ್ಷಿಗಳಲ್ಲಿ ಒಬ್ಬರು.
ದಾಸರ ಬೋಧನೆಗಳು ಅತಿ ಸರಳ ರೀತಿಯಲ್ಲಿದ್ದು ಅನುಸರಿಸಲು ಯೋಗ್ಯವಾಗಿದ್ದುದರಿಂದ ಅನೇಕರು ಅವರ ಅನುಯಾಯಿಗಳಾದರು. ಅವರ ಶಿಷ್ಯತ್ವವನ್ನು ಪಡೆದ ಮುಖ್ಯರಲ್ಲಿ ಶಿವಾಜಿ ಮಹಾರಾಜರೂ ಒಬ್ಬರು.
ಒಮ್ಮೆ ರಾಮದಾಸರು ತಮ್ಮ ಶಿಷ್ಯರೊಡನೆ ದೇಶ ಪರ್ಯಟನೆಗೆ ಹೊರಟಿದ್ದರು. ಸುದೀರ್ಘ ಪಾದಯಾತ್ರೆಯಲ್ಲಿ ಅವರ ಕಟ್ಟಾ ಇಪ್ಪತ್ತು ಶಿಷ್ಯರು ಇದ್ದರು. ಒಂದು ಮಧ್ಯಾಹ್ನ ಹಾಗೇ ನಡೆದು ಹೋಗುತ್ತಿರುವಾಗ ಎಲ್ಲರಿಗೂ ಹಸಿವು ನೀರಡಿಕೆಗಳುಂಟಾಗಿ ಕಂಗಾಲಾದರು.
ಪಯಣಿಸುತ್ತಿದ್ದ ರಸ್ತೆಯ ಮಗ್ಗುಲಲ್ಲಿ ಹುಲುಸಾಗಿ ಬೆಳೆದ ಕಬ್ಬಿನ ಗದ್ದೆ ಇತ್ತು. ಕಬ್ಬನ್ನು ನೋಡಿದ ಶಿಷ್ಯರಿಗೆ ಅದನ್ನು ತಿನ್ನುವಾಸೆ ಮೂಡಿತು. ಕೇಳಿ ತಿನ್ನೋಣವೆಂದರೆ ಅಲ್ಲಿ ಯಾರೂ ಕಾಣಲಿಲ್ಲ. ಹಾಗಾಗಿ ಎಲ್ಲರೂ ಕಬ್ಬಿನ ಗದ್ದೆಗೆ ನುಗ್ಗಿ ಕಬ್ಬನ್ನು ತಿನ್ನತೊಡಗಿದರು.
ಅಷ್ಟರಲ್ಲಿ ಗದ್ದೆಯ ಮಾಲೀಕ ಅಲ್ಲಿಗೆ ಬಂದ. ಅವನಿಗೆ ತುಂಬಾ ಸಿಟ್ಟುಬಂತು. ಕಷ್ಟಪಟ್ಟು ಬೆಳೆಸಿದ ಕಬ್ಬನ್ನು ಹೀಗೆ ಹಾಳುಮಾಡುವುದೆ ಎಂದು. ಅವನು ಹಿಂದೆ ಮುಂದೆ ನೋಡದೆ ಒಂದು ಕೋಲು ತೆಗೆದುಕೊಂಡು ಎಲ್ಲರನ್ನೂ ಹಿಗ್ಗಾ ಮುಗ್ಗ ಬಾರಿಸಿದ. ರಾಮದಾಸರು ರೈತನನ್ನು ತಡೆಯಲು ಹೋಗಲಿಲ್ಲ. ಅವರಿಗೂ ಸಹ ಏಟುಗಳು ಬಿದ್ದವು. ಒಂದೊಂದು ಏಟು ಬಿದ್ದಾಗಲೂ ಅವರ ಮುಖದಲ್ಲಿ ಮುಗುಳ್ನಗೆ ಹೊರಹೊಮ್ಮುತ್ತಿತ್ತು.
ಅಲ್ಲಿಂದ ಮುಂದೆ ಅವರು ನೇರವಾಗಿ ಶಿವಾಜಿಯ ಆಸ್ಥಾನಕ್ಕೆ ಹೋದರು. ಶಿವಾಜಿಯು ತಮ್ಮ ಗುರುಗಳನ್ನೂ, ಶಿಷ್ಯರನ್ನೂ ಆದರದಿಂದ ಬರಮಾಡಿಕೊಂಡು ಅವರ ಪರಿಸ್ಥಿತಿಯನ್ನು ನೋಡಿ ಮರುಗಿದ. ಅವರ ಮೈಮೇಲೆ ಬಾಸುಂಡೆಗಳಿದ್ದುದನ್ನು ಗಮನಿಸಿ ಕಾರಣವನ್ನು ವಿಚಾರಿಸಿದ. ರಾಮದಾಸರು ಏನೂ ಹೇಳದಿದ್ದರೂ ಶಿಷ್ಯರೆಲ್ಲ ಸೇರಿ ತಾವೆಲ್ಲ ರೈತನಿಂದ ಒದೆ ತಿಂದುದನ್ನು ತಿಳಿಸಿದರು.
ಆಗ ಶಿವಾಜಿಯು ಆ ರೈತನನ್ನು ಬಂಧಿಸಿ ತರುವಂತೆ ತನ್ನ ಸೇವಕರಿಗೆ ಆಜ್ಞೆ ಮಾಡಿದ. ಕೆಲ ಸಮಯದಲ್ಲಿ ಆ ರೈತನನ್ನು ಆಸ್ಥಾನಕ್ಕೆ ಕರೆತರಲಾಯಿತು.
ಅಲ್ಲಿ ರಾಜನಿಂದ ಗೌರವಿಸಲ್ಪಟ್ಟ ರಾಮದಾಸರನ್ನು ನೋಡಿ ಆತನಿಗೆ ದಿಗ್ಭ್ರಮೆಯಾಯಿತು. ತನ್ನ ಮೇಲೆ ದೂರು ನೀಡಿದ್ದರಿಂದ ಖಂಡಿತಾ ತನಗೆ ಉಗ್ರವಾದ ಶಿಕ್ಷೆ ಕಾದಿದೆ ಎಂದು ಮನವರಿಕೆಯಾಯಿತು.
ಆಗ ಆ ರೈತ ರಾಮದಾಸರ ಬಳಿ ಹೋಗಿ ಅವರ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ. ಶಿವಾಜಿಯು ರೈತನನ್ನು ಕೆಂಗಣ್ಣಿನಿಂದ ನೋಡುತ್ತಾ ಅವನಿಗೆ ಯಾವ ಶಿಕ್ಷೆ ನೀಡಬೇಕೆಂದು ತಾವೇ ನಿರ್ಧರಿಸುವಂತೆ ರಾಮದಾಸರಲ್ಲಿ ಕೇಳಿಕೊಂಡ.
ಅದಕ್ಕೆ ಮುಗುಳ್ನಗುತ್ತಾ ರಾಮದಾಸರು ಹೇಳಿದರು, ‘ತಮ್ಮ ಶಿಷ್ಯರಿಂದಾಗಿ ಆ ರೈತನಿಗೆ ಆದ ನಷ್ಟ ಭರಿಸಲು ಅವನಿಗೆ ಗ್ರಾಮವೊಂದನ್ನು ಉಂಬಳಿಯಾಗಿ ನೀಡಬೇಕು’ ಎಂದು ಆದೇಶಿಸಿದರು.
ರಾಮದಾಸರ ದಯಾಗುಣವನ್ನು ಕಂಡು ರೈತ ಆವಾಕ್ಕಾದ. ದಯಾಗುಣ ಎಲ್ಲರಲ್ಲೂ ಬರುವುದು ಅಪರೂಪ.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
More Stories
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ