December 22, 2024

Newsnap Kannada

The World at your finger tips!

banner Kannada 1

ಡಿಜಿಟಲ್ ಮಿಡಿಯಾ ಕ್ಷೇತ್ರ ಕ್ಕೆ ಪಾದಾರ್ಪಣೆ ಹೊಸ ಅಧ್ಯಾಯ ಆರಂಭ

Spread the love

ಗೆಳೆಯರೆ
ನನ್ನ ಕಳೆದ 30 ವರ್ಷಗಳ ಸುದೀರ್ಘ ಕಾಲದ ಪತ್ರಿಕೋದ್ಯಮದ ಪಯಣ ಒಂದು ಮಜಲಿಗೆ ಬಂದು ತಲುಪಿ ಈಗ ಹೊಸ ತಿರುವು ಪಡೆದುಕೊಂಡಿದೆ. ಕ್ಷೇತ್ರ ಯಾವುದೇ ಆದರೂ ಸಹ ನಿಂತ ನೀರಾಗಬಾರದು. ಚಲನಶೀಲತೆ ಇದ್ದಾಗಲೇ ಬದುಕಿನ ಘಟ್ಟಗಳು ಬದಲಾಗುತ್ತವೆ. ನನ್ನ ಬದುಕಿನಲ್ಲಿ ಹಲವಾರು ತಿರುವು ಗಳು ಬಂದಿವೆ. ಬದುಕನ್ನು ಗಟ್ಟಿ ಮಾಡಿವೆ. ಆ ಬಗ್ಗೆ ನಂಗೆ ಖುಷಿ ಹೆಮ್ಮೆಯೂ ಇದೆ.
ಈಗ ನಿಮ್ಮೆಲ್ಲರಿಗೂ ಒಂದು ಸಂಗತಿ ತಿಳಿಸಲು ಉತ್ಸುಕನಾಗಿದ್ದೇನೆ.
ಪತ್ರಿಕೋದ್ಯಮ ಕ್ಷೇತ್ರದ ಲ್ಲಿ ನಾನು ಹೊಸ ದಾರಿಯಲ್ಲಿ ಹೆಜ್ಜೆ ಹಾಕುವ
ಒಂದು ಹೊಸ ನಿರ್ಧಾರ ಬಗ್ಗೆ ತಿಳಿಸಲು ಹರ್ಷ ಎನಿಸಿದೆ.
ಆಂದೋಲನ. ಮೈಸೂರು ಮಿತ್ರ ಹಾಗೂ
ಕನ್ನಡ ಪ್ರಭ ಪತ್ರಿಕೆಗಳೂ ಸೇರಿದಂತೆ ಇನ್ನೂ ಕೆಲವು ಪತ್ರಿಕೆಗಳು ಅನ್ನ ಹಾಗೂ ವ್ಯಕ್ತಿತ್ವ ರೂಪಿಸಿ ಕೊಟ್ಟಿವೆ. ಆ ಎಲ್ಲಾ ಪತ್ರಿಕೆ ಗಳಿಗೆ ನಾನು ಚಿರ ಋಣಿ.
ಕನ್ನಡ ಪ್ರಭ ಪತ್ರಿಕೆಗೆ ನಾನು ರಾಜಿನಾಮೆ ನೀಡಿದ ನಂತರ ಮುಂದಿನ ದಾರಿ ಏನು ಎಂಬ ಪ್ರಶ್ನೆಯನ್ನು ಅನೇಕ ಗೆಳೆಯರು ಕೇಳಿದರು. ಆಗ ದೇವರಲ್ಲಿ ಪ್ರಾರ್ಥನೆ ಮಾಡಿದ್ದು ಒಂದೇ ….. ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು…. ಎಂಬ ಕವಿ ಕೆ ಎಸ್ ನ ಕವನದ ತುಣುಕಿನಂತೆ ಕೇಳಿಕೊಂಡೆ.
ಬದುಕಿನ ಬಂಡಿಯನ್ನು ನೀವು (ಅಪ್ಪ-ಅಮ್ಮ) ೩೦ ವರ್ಷಗಳ ಕಾಲ ಎಳೆದಿದ್ದೀರಾ . ಈಗ ನಮ್ಮ‌ಹೆಗಲಿಗೆ ನಿಮ್ಮಭಾರ ಹೊರಿಸಿ ನೆಮ್ಮದಿಯಾಗಿ ಇರಿ ಎಂದು ಧೈರ್ಯ ತುಂಬಿದ ಮಗಳು ಅನನ್ಯ , ಮಗ ಮಿಹಿರ್ ಆಕಾಶ್ ನನಗೆ ದೊಡ್ಡ ಶಕ್ತಿ ಯಾದರು. ಈ ಹಿಂದೆ ೯೦ ರ ದಶಕಗಳಲ್ಲಿ ಕೆಲವು ಪತ್ರಿಕೆ ಬಿಟ್ಟಾಗ ಮತ್ತೊಂದು ಪತ್ರಿಕೆಗಳಲ್ಲಿ ಕೆಲಸ ಸಿಗುವ ತನಕವೂ ತಿಂಗಳ ದಿನಸಿಗೂ ಕಷ್ಟ ಎನ್ನುವ ಸ್ಥಿತಿಯನ್ನು
ನಾನು, ನನ್ನ ಪತ್ನಿ ಸುಮ ಅನುಭವಿಸಿದ್ದೇವೆ. ಯಾವುದನ್ನೂ ಮರೆತಿಲ್ಲ. ನಂಗೆ ಈಗಿನ ಸುಖದ ದಿನಗಳಿಂತ ಹೆಚ್ಚಾಗಿ ಅಂದಿನ ಕಷ್ಟದ ದಿನಗಳನ್ನು ನಾನು ಮರೆಯಲು ಸಾಧ್ಯವಾಗಿಲ್ಲ. ಏಕೆಂದರೆ ನಾನು ಪಟ್ಟ ಕಷ್ಟ ಮತ್ತೊಬ್ಬರಿಗೆ ಬರಬಾರದು ಎನ್ನುವ ಮನೋಭಾವದ ತುಡಿತ ಅಷ್ಟೇ ಆಗಿತ್ತು. ಅದರಲ್ಲೂ ನಿಷ್ಠೂರ ಪತ್ರಕರ್ತರಿಗೆ ಕಷ್ಟ ಬಂದರಂತೂ ಆತ್ಮ ಹತ್ಯೆಯ ಆಲೋಚನೆ ಮಿಸ್ ಆಗುವುದೇ ಇಲ್ಲ.
ಇಂತಹ ಅನೇಕ ಅನುಭವಗಳನ್ನು ಹೇಳಿಕೊಂಡರೆ ಮತ್ತೊಬ್ಬರಿಗೆ ಧೈರ್ಯ ತುಂಬ ಕೆಲಸ ಮಾಡಿದಂತಾಗುತ್ತದೆ. ಕಷ್ಟ ಮತ್ತು ಕಠಿಣವಾದ ಹಾದಿಗಳು ಮನುಷ್ಯನನ್ನು ಪರಿಪಕ್ವ
ಮಾಡುತ್ತವೆ ಮಾತ್ರವಲ್ಲ ಉತ್ತಮ ಪ್ರತಿಫಲ ನೀಡುತ್ತವೆ ಎನ್ನುವುದರಲ್ಲಿ ಅಚಲ ನಂಬಿಕೆ ಇರಬೇಕು.
ಬದಲಾವಣೆಯ ಪರ್ವ ಆರಂಭ
ಪತ್ರಿಕೋದ್ಯಮದಲ್ಲಿ ಹೊಸ ಅವಿಷ್ಕಾರಗಳು ನಡೆಯದೇ ಹೋಗಿದ್ದರೆ ಜಗತ್ತಿನ ಸಂಗತಿಗಳು ಕ್ಷಣಾರ್ಧದಲ್ಲಿ ಬೆರಳ ತುದಿಯಲ್ಲಿ ಸಿಗುವುದು ತುಂಬಾ ಕಷ್ಟವಾಗುತ್ತಿತ್ತು. ತಂತ್ರಜ್ಞಾನವನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಡಿಜಿಟಲ್ ಮಿಡಿಯಾ ಯಶಸ್ವಿಯ ದಾಪುಗಾಲು ಹಾಕುತ್ತಿದೆ. ಮುಂದಿನ ದಿನಗಳಲ್ಲಿ ಡಿಜಿಟಲ್ ಮಿಡಿಯಾದ್ದೇ ಕಾರುಬಾರು. ಎಲ್ಲಾ ಕಾಲ ಘಟ್ಟಕ್ಕೂ ಎಲ್ಲವೂ ಸಲ್ಲುವುದಿಲ್ಲ. ಬದಲಾವಣೆ ಅನಿವಾರ್ಯ ಎನ್ನುವುದು ಪತ್ರಿಕೋದ್ಯಮವನ್ನೂ ಕೂಡ ಬಿಟ್ಟಿಲ್ಲ. ಕಳೆದ 30 ವರ್ಷಗಳ ಕಾಲ ಪತ್ರಿಕೋದ್ಯಮದ ಎಲ್ಲಾ ಸ್ಥರಗಳೂ ಬದಲಾವಣೆ ಕಂಡಿವೆ. ಹೊಸ ಆವಿಷ್ಕಾರಗಳು ಬಂದಂತೆಲ್ಲಾ ಹಳೆಯದು ಕ್ಷಿಣಿಸುತ್ತಾ ಹೋಗುತ್ತದೆ. ಮನುಷ್ಯನ ಬದುಕು ನಿಧರ್ಾರಗಳೂ ಕೂಡ ಹೀಗೆ ಬದಲಾವಣೆಯಾಗುತ್ತವೆ.
ನಾವು ಅನಿವಾರ್ಯ ಒಪ್ಪಿಕೊಳ್ಳಬೇಕು ಮತ್ತು ಒಗ್ಗಿಕೊಳ್ಳಬೇಕಾಗಿದೆ.
ನಾವು ಒಂದು ಕಾಲದಲ್ಲಿ ಕೈ ಬರಹ ಬರೆದ ನಂತರ ಸಂಜೆ ವೇಳೆ ಸುದ್ದಿ ಮತ್ತು ಛಾಯಾ ಚಿತ್ರಗಳ ಬಂಡಲ್ ಅನ್ನು ಬಸ್ ಹಾಕಿ ಮೈಸೂರಿಗೆ ಕಳುಹಿಸುತ್ತಿದ್ದೆವು. ಬಸ್ ಸರಿಯಾದ ಸಮಯಕ್ಕೆ ಹೋದರೆ ಸರಿ, ಇಲ್ಲವಾದರೆ, ಬರೆದು ಕಳಿಸಿದ ಸುದ್ದಿಯ ಬಂಡಲ್ ಮಂಗಮಾಯವಾಗುತ್ತಿತ್ತು. ಮರುದಿನ ನಮ್ಮ ಸುದ್ದಿಗಳೇ ಇಲ್ಲ ಪತ್ರಿಕೆ ಹೊರ ಬರುತ್ತಿತ್ತು. ನಮಗೆ ಆ ದಿನ ಆಗುತ್ತಿದ್ದ ನಿರಾಸೆ, ಹತಾಶಯಕ್ಕೆ ಕೊನೆಯೇ ಇರಲಿಲ್ಲ.
ಮುಂದಿನ ವರ್ಷಗಳಲ್ಲಿ ಸುದ್ದಿಗಳನ್ನು ಬರೆದು ಫ್ಯಾಕ್ಸ್ ಮೂಲಕ ರವಾನೆ ಮಾಡುವ ಕಾಲ ಬಂದಿತು. ನಂತರ ಕಂಪ್ಯೂಟರ್ ಬಳಕೆ ಮಾಡಿಕೊಂಡು ಅಂತರ್ ಜಾಲದ ಮೂಲಕ ಸುದ್ದಿ ಕಳಿಸುವ ವ್ಯವಸ್ಥೆಗೆ ನಾವು ಹೊಂದಿಕೊಳ್ಳುವ ಹೊತ್ತಿಗೆ ಸಾಕು ಬೇಕಾಗಿ ಹೋಯಿತು. ಈಗ ಇನ್ನೂ ಕಾಲ ಬದಲಾಗಿದೆ. ಡಿಜಿಟಲ್ ಮಿಡಿಯಾದಲ್ಲಿ ನಾವು ನಮ್ಮ ಕೌಶಲ್ಯವನ್ನು ತೋರಿಸುವ ಅನಿವಾರ್ಯತೆ ಬಂದಿದೆ. ಒಂದು ವೇಳೆ ನಾವು ವಿಫಲವಾದರೆ ಈಗಿನ ಯುವ ಪೀಳಿಗೆ ನಮ್ಮನ್ನು ಮೂಲೆ ಗುಂಪು ಮಾಡುತ್ತದೆ ಎನ್ನುವ ಭಯದಿಂದಲೋ ಅಥವಾ ಕಾಲಕ್ಕೆ ತಕ್ಕಂತೆ ನಾವು ಅಪ್ಡೇಟ್ ಆಗಲೇಬೇಕು ಎನ್ನುವ ಕಾರಣಕ್ಕೋ ಬದಲಾವಣೆಯ ಹಾದಿಯಲ್ಲಿ ಸಾಗಿದ್ದೇವೆ. ಯಾಕೆ ಇದನ್ನೆಲ್ಲವನ್ನೂ ಹೇಳುವ ಅಗತ್ಯತೆ ಬಂತು ಎಂದರೆ
ಪತ್ರಿಕೋದ್ಯದಲ್ಲಿ ನಾವು ನಡೆದ ದಾರಿಯನ್ನು ಮೆಲುಕು ಹಾಕಿದಾಗ ಇವೆಲ್ಲ ಸಂಗತಿಗಳು ನೆನಪಿನಂಗಳಕ್ಕೆ ಜಾರಿ ಬಂದವು.
ಈಗ ನಾವು ನ್ಯೂಸ್ ಸ್ನ್ಯಾಪ್ ಎಂಬ ವೆಬ್ ಸೈಟ್ ಮೂಲಕ ವೆಬ್ ದುನಿಯಾಕ್ಕೆ ಕಾಲಿಟ್ಟಿದ್ದೇವೆ. ಡಿಜಿಟಲ್ ಮಿಡಿಯಾ ಅಗಾದವಾಗಿ ಬೆಳೆದಿದೆ. ಬೆಳೆಯುತ್ತಿದೆ. ಮುಂದಿನ 10 ವರ್ಷಗಳಲ್ಲಿ ಯಾರೂ ಪತ್ರಿಕೆಗಳನ್ನು ಖರೀದಿ ಮಾಡಿ ಓದುವುದಿಲ್ಲ. ಮನೆಗಳಲ್ಲಿ ಕುಳಿತು ಟಿವಿ ನೋಡಲು ಹೋಗುವುದಿಲ್ಲ. ಎಲ್ಲವನ್ನೂ ತಮ್ಮ ಕೈಯಲ್ಲಿರುವ ಮೊಬೈಲ್ ನಲ್ಲಿ ಎಲ್ಲವನ್ನೂ ನೋಡಿಕೊಂಡು ದಿನ ಕಳೆಯುತ್ತಾರೆ ಎನ್ನುವ ಪರಿಸ್ಥಿತಿ ಈಗಲೇ ಎದ್ದು ಕಾಣುತ್ತದೆ. ಹೀಗಾಗಿ ನಾವು ಕೂಡ ಬದಲಾವಣೆಯ ಹಾದಿ ತುಳಿದಿದ್ದೇವೆ. ಡಿಜಿಟಲ್ ಕ್ಷೇತ್ರ ಒಂದು ಸಣ್ಣ ಅನುಭವ ಇಟ್ಟುಕೊಂಡು ದಾಪುಗಾಲು ಹಾಕುತ್ತಿದ್ದೇವೆ. ನಮ್ಮನ್ನು ಮುನ್ನೆಡೆಸುವ ಶಕ್ತಿ ಓದುಗರಿಗೆ ಮಾತ್ರ ಇದೆ. ನಮ್ಮ ವೆಬ್ ಸೈಟ್ ಅನ್ನು ನೋಡಿ ಪ್ರೋತ್ಸಾಹ ನೀಡುವಂತೆ ಕೋರುತ್ತೇನೆ.
ನಿಮ್ಮ
ಕೆ ಎನ್ ರವಿ
ಸಂಪಾದಕ

Copyright © All rights reserved Newsnap | Newsever by AF themes.
error: Content is protected !!