ಸೆಪ್ಟೆಂಬರ್ 15 ಎಂಜಿನಿಯರುಗಳ ದಿನ ಅರ್ಥಾತ್ ಕರ್ನಾಟಕದ ನೆಲದಲ್ಲಿ ಉದಯಿಸಿದ ಮಹಾಪುರುಷನೊಬ್ಬನ ಜನ್ಮದಿನ.ಹಸಿರ ಸಿರಿ ಬಿತ್ತಿದ ಮಹಾಚೇತನ, ಪ್ರಾತಃಸ್ಮರಣೀಯ, ದಿವ್ಯ ಚೇತನ ಭಾರತರತ್ನ ಡಾ.ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನ. ವಿಶ್ವೇಶ್ವರಯ್ಯನವರ ಜೀವನ ಸಂದೇಶವೇ ದುಡಿಮೆ.ದುಡಿಮೆಯೇ ಬದುಕು,ದುಡಿದು ಕೆಟ್ಟವರಿಲ್ಲ, ದುಡಿದು ಮಡಿದವರಿಲ್ಲ, ಮಡಿಯುವುದು ಚಿಂತೆಯಿಂದ ಮಾತ್ರ ಎಂದು ಅವರು ಪ್ರತಿಪಾದಿಸಿದರು.’ದುಡಿಮೆಯೇ ಬಾಳ್ವೆ’ ಎಂದು ನಿರೂಪಿಸಿದವರು.ಪ್ರತಿಯೊಬ್ಬ ದೊಡ್ಡ ಮನುಷ್ಯನೂ ದುಡಿದೇ ದೊಡ್ಡವನಾಗಿದ್ದಾನೆ ಎಂದು ನಂಬಿದವರು.ಎಲ್ಲರೂ ಒಂದಲ್ಲ ಒಂದು ಉದ್ಯೋಗದಲ್ಲಿ ತೊಡಗಿಸಿಕೊಂಡು ದುಡಿಯುವಂತಾಗಬೇಕು ಎಂದು ಆಶಿಸಿದರು.ಈ ನಿಟ್ಟಿನಲ್ಲಿ ಯೋಚಿಸಿ ನಿರ್ಮಾಣವಾಗು ಇಲ್ಲವೇ ನಿರ್ನಾಮವಾಗು ಎಂಬ ಘೋಷಣಾ ವಾಕ್ಯ ಮಂಡಿಸಿದರು.ಕಠಿಣ ಪರಿಶ್ರಮವೊಂದೇ ಯಶಸ್ಸಿನ ಅಳತೆಗೋಲು. ಕೆಲಸ ಮಾಡಲು ಅನನ್ಯ ಸ್ಪೂರ್ತಿ ತಕ್ಕ ಫಲಿತಾಂಶ ಬೇಕೆಂಬ ಬಯಕೆ,ಕ್ಲುಪ್ತ ಕಾಲದಲ್ಲಿ ಸಾಧಿಸುವ ಛಲ ಯಶಸ್ಸಿಗೆ ಅವಶ್ಯಕ ಎಂದು ನಂಬಿದ್ದರು.
ಕಾಲ, ನಿಯಮ ಪರಿಪಾಲನೆ ಎಲ್ಲ ಯಶಸ್ಸಿಗೂ ಮೂಲವೆಂಬುದು ಇವರ ಧ್ಯೇಯ.ಕೆಲಸದೊಂದಿಗೆ ಕಾಲ ಮೇಳೈಸಬೇಕು.ನಿಗದಿತ ಸಮಯದಲ್ಲಿ ನಿಗದಿತ ಕೆಲಸ ಮಾಡಿ ನಿಗದಿತ ಗುರಿ ಸಾಧಿಸಬೇಕು.ಕಾಲ ಹಣಕ್ಕಿಂತ ಬೆಲೆಯುಳ್ಳ ವಸ್ತು.ಹಣದಿಂದ ಕಾಲವನ್ನು ಕೊಳ್ಳಲಾಗದು.ಸಮಯಕ್ಕೆ ಸರಿಯಾಗಿ ಬರಬೇಕು ಹೋಗಬೇಕು.ಇವರ ಆಡಳಿತದ ಸಮಯದಲ್ಲಿ ಯಾರನ್ನಾದರೂ ಸಂದರ್ಶಿಸಬೇಕಾದರೆ ಕಾಲಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದರು.ಕಾಲ ಮೀರಿ ಬಂದವರು ಎಷ್ಟೇ ದೊಡ್ಡವರಾಗಿರಲಿ ನಿರ್ದಾಕ್ಷಿಣ್ಯವಾಗಿ ಅವರನ್ನು ಭೇಟಿ ಮಾಡದೇ ಸಾಗಹಾಕುತ್ತಿದ್ದರು.ಶಿಸ್ತಿಗೆ ಅನ್ವರ್ಥ ವಿಶ್ವೇಶ್ವರಯ್ಯನವರು.
ಅವರ ಉಡುಗೆ-ತೊಡುಗೆ,ಆಚಾರ-ವಿಚಾರ,ನಡೆ-ನುಡಿ,ಎಲ್ಲವೂ ಶಿಸ್ತಿನ ಚೌಕಟ್ಟಿನಲ್ಲೇ ರೂಪುಗೊಳ್ಳುತ್ತಿದ್ದವು.ಅವರು ಸಿದ್ಧಪಡಿಸಿಕೊಳ್ಳುತ್ತಿದ್ದ ಭಾಷಣವನ್ನು ಒಂದೆರಡು ಬಾರಿ ಬರೆದು ಹತ್ತಾರು ಸಲ ಓದಿ ಅದನ್ನು ಒಪ್ಪ ಓರಣಗೊಳಿಸುತ್ತಿದ್ದರು.ತಾವು ಬರೆದ ಭಾಷಣವನ್ನು ಅಷ್ಟೇ ಒಪ್ಪವಾಗಿ ಮಂಡಿಸುತ್ತಿದ್ದರು.ವ್ಯಕ್ತಿ ತನ್ನ ಬಗ್ಗೆ ತಾನು ನಿಗಾ ವಹಿಸದೇ ಹೋದರೆ ಉತ್ತಮ ಪೋಷಾಕು ಧರಿಸದಿದ್ದರೆ ಅಂಥಹವರಿಂದ ಅತ್ಯಂತ ಸಮರ್ಥ ಕೆಲಸ ನಿರೀಕ್ಷಿಸುವುದು ಕೂಡ ಸಾಧ್ಯವಿಲ್ಲ ಎಂದು ನಂಬಿದ್ದರು.ವಿಶ್ವೇಶ್ವರಯ್ಯನವರಿಗೆ ಹಳತು-ಹೊಸತು ಸಂಗಮಗಳ ಬಗ್ಗೆ ತುಂಬಾ ಪ್ರೀತಿ.ಇದನ್ನು ಅವರ ಉಡುಗೆಯಲ್ಲಿ ಕಾಣಬಹುದು.ಅಪ್ಪಟ ಸ್ವದೇಶಿ ಮೈಸೂರು ಪೇಟ ತಲೆಯಲ್ಲಿ.ಆದರೆ ದೇಹದಲ್ಲಿ ವಿದೇಶಿ ಸೂಟು ಬೂಟು.ಉದ್ಯೋಗ,ವ್ಯವಹಾರ,ಕೈಗಾರಿಕೆಯಲ್ಲಿ ಪಾಶ್ಚಿಮಾತ್ಯದ ಒಲವು.ಗೃಹಕೃತ್ಯದಲ್ಲಿ ದೇಶೀಯ ಆಚರಣೆಗಳು.ಭಾರತದ ಅವಿಭಕ್ತ ಕುಟುಂಬದಲ್ಲಿನ ಒಗ್ಗಟ್ಟು,ಪ್ರೀತಿ,ವಾತ್ಸಲ್ಯ,ನಿಷ್ಠೆ ಇವರಿಗೆ ಪ್ರಿಯ.
ಸರ್ಕಾರಿ ಸೇವೆಯ ಅವಧಿಯಲ್ಲಿ ಸರ್ಕಾರಿ ಕಾರು,ಬಂಗಲೆ,ಸರ್ಕಾರದ ವಸ್ತುಗಳು.ಸ್ವಂತ ಕೆಲಸಕ್ಕೆ ಹೋದಾಗ ಎಲ್ಲವೂ ಸ್ವಂತದ್ದು.ಬರೆಯುವ ಕಾಗದ,ಮೇಣದಬತ್ತಿ ಸ್ವಂತದ್ದೇ ಆಗಬೇಕು.ಹಲವು ವಿದೇಶಿ ಪ್ರವಾಸಗಳನ್ನು ಸ್ವಂತ ಖರ್ಚಿನಲ್ಲೇ ನಿಭಾಯಿಸಿದ್ದಾರೆ.ಹಿಂದುಳಿದವರ,ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಆದ್ಯತೆ ನೀಡಿದ್ದಾರೆ.ವಿದ್ಯಾಪ್ರಸಾರಕ್ಕಾಗಿ ರಾಜರಿಗೆ ಪ್ರೇರಣೆಯಾಗಿ ಹೆಚ್ಚೆಚ್ಚು ವಿದ್ಯಾಸಂಸ್ಥೆಗಳನ್ನು ತೆರೆದಿದ್ದಾರೆ.ವಿಶ್ವೇಶ್ವರಯ್ಯನವರು ದುಂದು ವೆಚ್ಚಗಳನ್ನು ಒಪ್ಪುತ್ತಿರಲಿಲ್ಲ.ಹಬ್ಬ-ಹರಿದಿನ,ಜನನ-ಮರಣ,ಮದುವೆ-ಮುಂಜಿ ಮುಂತಾದ ಕಾರ್ಯಗಳಿಗೆ ಹೆಚ್ಚು ಹಣ ಖರ್ಚು ಮಾಡುತ್ತಿರಲಿಲ್ಲ.ಹಾಗೆ ಮಾಡುವ ಜನರಿಗೆ ಬುದ್ಧಿವಾದ ಹೇಳುತ್ತಿದ್ದರು.’ಹಾಸಿಗೆ ಇದ್ದಷ್ಟು ಕಾಲು ಚಾಚು’ಎಂಬ ತತ್ವದ ಅರಿವು ಇವರಿಗಿತ್ತು
ದೇಶದ ಪ್ರಗತಿಯ ಚಿಂತೆ ಸದಾ ಇವರನ್ನು ಕಾಡುತ್ತಿತ್ತು.ಜನಸಂಖ್ಯೆ ನಿಯಂತ್ರಣಕ್ಕೆ ತರದ ಹೊರತು ದೇಶಕ್ಕೆ ಭವಿಷ್ಯವಿಲ್ಲ.ಆಧುನಿಕ ವ್ಯವಸಾಯ ಪದ್ಧತಿಗಳ ಮೂಲಕ ಹಸಿರು ಕ್ರಾಂತಿ ಸಾಧ್ಯವಾಗಿಸಬೇಕು ಎಂದು ಬಯಸಿದ್ದರು.ಭಾರತೀಯರಿಗೆ ರಾಷ್ಟ್ರೀಯ ಚಾರಿತ್ರ್ಯ ಅವಶ್ಯಕ.ಒಳ್ಳೆಯ ವ್ಯಕ್ತಿಗಳಿಂದ ಸಧೃಡ ರಾಷ್ಟ್ರ ನಿರ್ಮಾಣಗೊಳ್ಳುತ್ತದೆ ಎಂಬುದು ಇವರ ನಂಬಿಕೆ.ವಿಶ್ವೇಶ್ವರಯ್ಯನವರಿಗೆ ಆತ್ಮಗೌರವವೆಂಬುದು ಹೆಚ್ಚು ಮೌಲ್ಯಯತವಾಗಿತ್ತು.ಆತ್ಮಗೌರವಕ್ಕೆ ಕುಂದುಂಟಾದ ಸಂದರ್ಭಗಳು ಬಂದರೆ ಯಾವುದೇ ತ್ಯಾಗಕ್ಕೂ ಸಿದ್ಧರಾಗುತ್ತಿದ್ದರು.ಅರ್ಹತೆ ಮತ್ತು ದಕ್ಷತೆಗಳಿಗೆ ಮನ್ನಣೆ ನೀಡಬೇಕೆಂಬ ವಾದಕ್ಕೆ ಅಂಟಿಕೊಂಡೇ ತಮ್ಮ ದಿವಾನ ಹುದ್ದೆಯನ್ನು ಯಾವುದೇ ಮುಲಾಜಿಲ್ಲದೇ ತ್ಯಜಿಸಿದರು.ಸ್ವಜನ ಪಕ್ಷಪಾತಕ್ಕೆ ಗಾವುದ ದೂರ ಇವರು.ತಮ್ಮ ಅವಧಿಯಲ್ಲಿ ತಮ್ಮವರಾರಿಗೂ ಉದ್ಯೋಗ ನೀಡದೇ ಕರ್ತವ್ಯ ನಿಷ್ಠೆ ಮೆರೆದರು.ಎಲ್ಲರನ್ನು ಸಮಭಾವದಿಂದ ಕಾಣುವ ಮನೋಭಾವ ವಿಶ್ವೇಶ್ವರಯ್ಯನವರದು.ಇವರು ದಿವಾನರಾದ ನಂತರ ಆಡಳಿತದಲ್ಲಿ ಹಲವು ಬದಲಾವಣೆಗಳನ್ನು ತಂದರು.
ತಮ್ಮ ಕೆಲಸಕ್ಕೆ ಅವರು ಬೇರೊಬ್ಬರನ್ನು ಅವಲಂಬಿಸುತ್ತಿರಲಿಲ್ಲ.ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದರಲ್ಲಿ ಅವರಿಗೆ ಸಂತೃಪ್ತಿ ಇದ್ದು,ಸ್ವಾವಲಂಬನೆಯ ಮನೋಧರ್ಮ ಹೊಂದಿದ್ದರು.ಹೀಗೆ ವಿಶ್ವೇಶ್ವರಯ್ಯನವರ ಬದುಕು ಪ್ರತಿಯೊಂದರಲ್ಲೂ ಉನ್ನತ ಆದರ್ಶವನ್ನು ಒಳಗೊಂಡಿದ್ದು ಅನುಕರಣೀಯವಾಗಿತ್ತು.
ಕಾರ್ಯತತ್ಪರತೆ,ಬುದ್ಧಿಬಲ,ದುಡಿಮೆ,ಸಮಯನಿಷ್ಠೆ,ಶಿಸ್ತುಗಳಿಗೆ ಹೆಸರಾದ ವಿಶ್ವೇಶ್ವರಯ್ಯನವರ ಯಶೋಗಾಥೆ ಎಲ್ಲರಿಗೆ ಮಾರ್ಗದರ್ಶನವಾಗಲಿ.
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!