ಆಮಿಷಗಳಿಗೆ ಒಳಗಾಗದೇ ಮತದಾನ ಮಾಡಿ – ಡಿಸಿ ಡಾ. ಕೆ ವಿ ರಾಜೇಂದ್ರ

Team Newsnap
4 Min Read

ಮೈಸೂರು : ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬ. ಪ್ರತಿಯೊಬ್ಬ ಮತದಾರನೂ ಯಾವುದೇ ಜಾತಿ, ಮತ, ಧರ್ಮವನ್ನು ನೋಡದೆ ಸೂಕ್ತವಾದ ವ್ಯಕ್ತಿಗೆ ಕಡ್ಡಾಯವಾಗಿ ಮತಹಾಕುವ ಮೂಲಕ ಪ್ರಜಾತಂತ್ರ ಹಬ್ಬವನ್ನು ಯಶಸ್ವಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ ಕೆ.ವಿ.ರಾಜೇಂದ್ರ ಅವರು ಕರೆ ನೀಡಿದರು.

ಇಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗಬಾರದು. ವಿದ್ಯಾವಂತರು ಮತದಾನದ ಪ್ರಾಮುಖ್ಯತೆಯನ್ನು ತಿಳಿದುಕೊಂಡು ತಮ್ಮ ಕುಟುಂಬ ಹಾಗೂ ಸುತ್ತಮುತ್ತಲಿನ ಜನರಿಗೂ ಇದರ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪ್ರತಿಯೊಬ್ಬರೂ ನೈತಿಕ ಮತದಾನ ಮಾಡುವಂತೆ ಮಾಡಬೇಕು ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಶೇಕಡಾ 70 ರಷ್ಟು ಮತದಾನವಾಗಿದ್ದು, 2021 ರ ವಿಧಾನ ಸಭಾ ಚುನಾವಣೆಯಲ್ಲಿ 75% ರಷ್ಟು ಮತದಾನವಾಗಿತ್ತು ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಹಲವಾರು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಮತದಾರರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಮಾಹಿತಿ ನೀಡಿದರು.

ಚುನಾವಣೆಯು ಹತ್ತಿರವಾಗುತ್ತಿದ್ದು, ಪ್ರತಿಯೊಬ್ಬರೂ ವೋಟರ್ ಹೆಲ್ಪ್ ಲೈನ್ ಆಪ್ ಮೂಲಕ ತಮ್ಮ ಹೆಸರು ಹಾಗೂ ತಮ್ಮ ಕುಟುಂಬದವರ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಂತರದಲ್ಲಿ ತಮ್ಮ ಮತಗಟ್ಟೆ ಯಾವುದು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ಚುನಾವಣೆ ಸಂಬಂಧ ಯಾವುದೇ ಅಕ್ರಮಗಳು ಕಂಡು ಬಂದರೂ ಸಿ ವಿಜಿಲ್ ಆಪ್ ನಲ್ಲಿ ವಿಡಿಯೋ, ಆಡಿಯೋ, ಫೋಟೋ ಹಾಗೂ ಜಿ ಪಿ ಎಸ್ ಮೂಲಕ ಮಾಹಿತಿಯನ್ನು ಸಲ್ಲಿಸಿ ದೂರನ್ನು ನೀಡಬಹುದಾಗಿದ್ದು, ಅಕ್ರಮಗಳ ವಿರುದ್ಧ 100 ನಿಮಿಷದೊಳಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವರು. ಈ ರೀತಿ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದಾಗ ಅವರ ಹೆಸರು ಹಾಗೂ ವಿಳಾಸ ಯಾವುದನ್ನು ಸಹ ಬಹಿರಂಗ ಪಡಿಸುವುದಿಲ್ಲ ಎಂದು ತಿಳಿಸಿದರು.

ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿರುವ ಮತದಾರರ ಕಾರ್ಡ್ ಅನ್ನು ಈಗಾಗಲೇ ಪರೀಕ್ಷಿಸಿ ಅವರಿಗೆ ಅಂಚೆಯ ಮೂಲಕ ಮತದಾರರ ಗುರುತಿನ ಚೀಟಿಯನ್ನು ಮನೆಗೆ ತಲುಪಿಸುವ ಪ್ರಯತ್ನ ಆಗುತ್ತಿದ್ದು, ಒಂದು ವೇಳೆ ನಿಮ್ಮ ಅರ್ಜಿ ನೋಂದಣಿಯಾಗಿ ಗುರುತಿನ ಚೀಟಿ ಬರದಿದ್ದರೆ ಅಂತಹ ಮತದಾರರು ಚುನಾವಣಾ ಆಯೋಗ ನಿಗದಿಪಡಿಸಿರುವ 12 ದಾಖಲಾತಿಗಳಲ್ಲಿ ತಮ್ಮಲ್ಲಿರುವ ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್ ಇತ್ಯಾದಿ ಭಾವಚಿತ್ರವಿರುವ ಗುರುತಿನ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ಮತದಾನ ಮಾಡಬಹುದಾಗಿದೆ.

85 ವರ್ಷ ಮೇಲ್ಪಟ್ಟ ಹಾಗೂ ಶೇಕಡಾ 40 ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವಿದ್ದು ಅದನ್ನು ಸದುಪಯೋಗಪಡಿಸಿಕೊಂಡು ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದರು.

ಬೇರೆ ಬೇರೆ ಸ್ಥಳಗಳಿಂದ ಬಂದಿರುವ ಕಾರ್ಮಿಕರು ಮತದಾನ ಮಾಡುವಲ್ಲಿ ಹಿಂಜರಿಯುತ್ತಿದ್ದು, ಅಂತಹವರಿಗೆ ಮತದಾನದ ಬಗ್ಗೆ ಅರಿವನ್ನು ಮೂಡಿಸಿ ಮತದಾನ ಮಾಡುವಂತೆ ಮಾಡಬೇಕು ಎಂದು ಹೇಳಿದರು.

ಈ ಬಾರಿಯ ಚುನಾವಣೆಯು ವಾರಂತ್ಯದಲ್ಲಿ ಇರುವುದರಿಂದ ಜನರು ಮತದಾನವನ್ನು ನಿರ್ಲಕ್ಷಿಸಿ ಪ್ರವಾಸಕ್ಕೆ ಹೋಗಲು ಸಿದ್ದರಿರುತ್ತಾರೆ. ಆದರೇ ಮತದಾನ ಎಂಬುದು ಪ್ರತಿಯೊಬ್ಬನ ಹಕ್ಕು ಮೊದಲು ಮತದಾನಕ್ಕೆ ಪ್ರಾಮುಖ್ಯತೆಯನ್ನು ನೀಡಬೇಕು. ಮತದಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ಯೂ ಮ್ಯಾನೇಜ್ ಮೆಂಟ್ ಆಪ್ ಅನ್ನು ಹೋರತರಲಾಗಿದ್ದು, ಇದರಿಂದ ಮತದಾರರು ತಮ್ಮ ಮತಟ್ಟೆಯಲ್ಲಿ ಎಷ್ಟು ಕ್ಯೂ ಇದೆ ಎಂಬುದನ್ನು ತಿಳಿದುಕೊಂಡು ಮತದಾನ ಮಾಡಬಹುದು ಎಂದರು.

ಮೈಸೂರು ಜಿಲ್ಲೆಯಲ್ಲಿ ಮತದಾನದ ಬಗ್ಗೆ ಅರಿವು ಹೆಚ್ಚಿಸಲು ಜಿಲ್ಲಾ ಚುನಾವಣಾ ರಾಯಭಾರಿಗಳು ತಮ್ಮ ಕೆಲಸದ ಸಮಯದಲ್ಲೂ ಬಿಡುವು ಮಾಡಿಕೊಂಡು ಜಾಗೃತಿ ಮೂಡಿಸುತ್ತಿದ್ದಾರೆ. ಹಾಗಾಗಿ ಭಾರತದ ಪ್ರಜೆಗಳಾದ ನಾವು ಕಡ್ಡಾಯವಾಗಿ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಜಿಲ್ಲಾ ಸ್ವೀಪ್ ಸಮಿತಿಯು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯು ಮೈಸೂರು ಚುನಾವಣಾ ರಾಯಬಾರಿಗಳ ಸಂದೇಶಗಳನ್ನು ಒಳಗೊಂಡ ವೀಡಿಯೋಗಳು, ಆಕಾಶವಾಣಿಯಿಂದ ರಚಿತಗೊಂಡಿರುವ ಚುನಾವಣಾ ಜಾಗೃತಿ ಗೀತೆಗಳ ವೀಡಿಯೋ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ರಚಿಸಿರುವ ಚುನಾವಣಾ ಜಾಗೃತಿ ವೀಡಿಯೋಗಳನ್ನು ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ಚುನಾವಣಾ ರಾಯಭಾರಿಗಳಾದ ತನಿಷ್ಕಾ ಮೂರ್ತಿ ರವರು ಮೊದಲ ಬಾರಿ ಮತದಾನ ಮಾಡುತ್ತಿರುವ ಯುವ ಮತದಾರರನ್ನು ಮತದಾನ ಮಾಡುವಂತೆ ಸಾಂಕೇತಿಕವಾಗಿ ವೇದಿಕೆಯ ಮೇಲೆ ಆಹ್ವಾನಿಸಿದ್ದು, ಚುನಾವಣಾ ರಾಯಬಾರಿ‌ ಸೇನಾನಿ ಅವರು ತಮ್ಮ ಅನುಭವದ ಮೂಲಕ ಮತದಾನ ಮಾಡುವಂತೆ ಪ್ರೇರೇಪಿಸಿದ್ದು, ಸಹಿ ಸಂಗ್ರಹಣಾ ಅಭಿಯಾನ, ಚಿತ್ರಕಲಾ ಸ್ಪರ್ಧೆ, ಕಲಾ ತಂಡದಿಂದ ಮತದಾನ ಜಾಗೃತಿ ಗೀತೆಗಳ ವಾಚನ ಹಾಗೂ ಕಿರುನಾಟಕ ಕಾರ್ಯಕ್ರಮಗಳು ಮನಸೆಳೆದವು.ಶೋಭಾ ಕರಂದ್ಲಾಜೆ ಚುನಾವಣೆ ರ್‍ಯಾಲಿ ವೇಳೆ ಓರ್ವ ವ್ಯಕ್ತಿ ಸಾವು

1000 ಹೆಚ್ಚು ಜನರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತರಾದ ರಮೇಶ್ ಬನೋತ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್, ಸಿಎಫ್ ಟಿ ಆರ್ ಐ ನಿರ್ದೇಶಕರಾದ ಶ್ರೀದೇವಿ ಅನ್ನಪೂರ್ಣ ಸಿಂಗ್, ಆಯಿಷ್ ಸಂಸ್ಥೆ ನಿರ್ದೇಶಕರಾದ ಡಾ.ಪುಷ್ಪಾವತಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಕೆ.ಎಂ.ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಸೀಮಾ ಲಾಟ್ಕರ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಪ್ರಚಾರಾಧಿಕಾರಿ ಶೃತಿ, ಜಿಲ್ಲಾ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಎನ್ ಎನ್ ಮಧು, ಮೈಸೂರು ಆಕಾಶವಾಣಿ ನಿಲಯದ ನಿರ್ದೇಶಕರಾದ ಉಮೇಶ್, ಚುನಾವಣಾ ಐಕಾನ್ ಗಳಾದ ಕೃಪಾಕರ ಮತ್ತು ಸೇನಾನಿ, ಮಹೇಂದ್ರ, ತನಿಷ್ಕಾ ಮೂರ್ತಿ, ಶ್ರೀನಿವಾಸ್, ಆನಂದ್ ರಾಜ್ ರೂನ್ ವಾಲ, ಮಧುಸೂದನ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a comment