December 25, 2024

Newsnap Kannada

The World at your finger tips!

deepa1

ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತದೆಯೇ?

Spread the love

ಓದು ನಮ್ಮ ಜ್ಞಾನವನ್ನು ವೃದ್ದಿಸುತ್ತದೆ. ನಿಜ, ಹಾಗೆಯೇ ಅದೇ ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತದೆಯೇ ?

ಈ ರೀತಿಯ ಅನುಮಾನ ಬಲವಾಗುತ್ತಿದೆ.
ಮೂಲ ಆಶಯದಲ್ಲಿ ಓದು ನಮ್ಮ ಅರಿವನ್ನು ಹೆಚ್ಚಿಸಿ ನಮ್ಮಲ್ಲಿ ವಿನಯವನ್ನು ಬೆಳೆಸುತ್ತದೆ.
ತುಂಬಿದ ಕೊಡ ತುಳುಕಲು ಸಾಧ್ಯವಿಲ್ಲ ಮತ್ತು ಅವಕಾಶವೂ ಇಲ್ಲ. ಅದು ನಮ್ಮಲ್ಲಿ ಜೀವಪರ ನಿಲುವನ್ನೂ, ವಿನಯವನ್ನು, ಪ್ರಬುದ್ದತೆಯನ್ನು, ತಾಳ್ಮೆಯನ್ನು ಮತ್ತು ಒಟ್ಟಾರೆ ಸಮಷ್ಟಿ ಪ್ರಜ್ಞೆಯನ್ನು ಬೆಳೆಸುತ್ತದೆ.

ಆದರೆ,
ಅದೇ ಓದು ಬಹಳಷ್ಟು ಜನರಲ್ಲಿ ಅಹಂಕಾರವನ್ನು,
ಸಣ್ಣ ಮನಸ್ಸನ್ನು, ಅಸೂಯಾಪರ ಗುಣವನ್ನು, ಕ್ಷುಲ್ಲುಕ ವ್ಯಕ್ತಿತ್ವವನ್ನು ರೂಪಿಸುವ ಸಾಧ್ಯತೆ ಇದೆ.

ನಾನು ಎಲ್ಲರಿಗಿಂತ ಹೆಚ್ಚು ಓದಿದ್ದೇನೆ‌‌. ಎಲ್ಲಾ ಶ್ಲೋಕಗಳು, ಅಧ್ಯಾಯಗಳು, ಮಂತ್ರಗಳು, ಕಾಲಂಗಳು ನನಗೆ ನೆನಪಿದೆ, ನಾನು ಅದನ್ನು ಅತ್ಯಂತ ಸಮರ್ಥವಾಗಿ ನೆನಪಿಟ್ಟು ವಾದಿಸಬಲ್ಲೆ, ನನ್ನ ಸಹವರ್ತಿಗಳಿಗೆ ಆ ಮಟ್ಟದ ನೆನಪು ಮತ್ತು ಜ್ಞಾನ ಇಲ್ಲ , ಅವರ ವಾದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ ಎಂದು ಸಹಜ ಸಾಮಾನ್ಯ ಜನರನ್ನು ಕೀಳಾಗಿ ಕಾಣುವ ಮನೋಭಾವ ಕಂಡುಬರುತ್ತಿದೆ.

ಪ್ರಾರಂಭದ ದಿನಗಳಲ್ಲಿ ಅಕ್ಷರ ಬರದವರನ್ನು, ಅನಂತರ ‌ಸಂಸ್ಕೃತ ಕಲಿಯದವರನ್ನು, ನಂತರ ಇಂಗ್ಲೀಷ್ ಮಾತನಾಡದವರನ್ನು ಬಹಳ ಲಘುವಾಗಿ ಕಾಣಲಾಗುತ್ತಿತ್ತು.

ಈಗ ಹೃದಯದ ಭಾಷೆಗಿಂತ ಮೆದುಳಿನ ಭಾಷೆಗೆ ಹೆಚ್ಚಿನ ಮಹತ್ವ ಕೊಡುತ್ತಿರುವುದು ಕಂಡುಬರುತ್ತಿದೆ.

ಭಗವದ್ಗೀತೆಯ ಶ್ಲೋಕಗಳನ್ನು,
ಖುರಾನಿನ ಅಧ್ಯಾಯಗಳನ್ನು,
ಬೈಬಲ್‌ನ ಸಂದೇಶಗಳನ್ನು,
ಸಾಹಿತ್ಯದ ಪ್ರಕಾರಗಳನ್ನು,
ಭಾಷೆಯ ವ್ಯಾಕರಣವನ್ನು,
ಆರ್ಥಿಕತೆಯ ಸೂಕ್ಷ್ಮತೆಯನ್ನು,
ಧಾರ್ಮಿಕ ಆಚರಣೆಗಳನ್ನು,
ಕಲೆಯ ಹೊಳಹುಗಳೂ ಸೇರಿ ಯಾವುದೇ ಕ್ಷೇತ್ರದ ಜ್ಞಾನದ ಮೇಲೆ ಒಬ್ಬರಿಗೆ ಹೆಚ್ಚಿನ ನಿಯಂತ್ರಣ ಸಾಧ್ಯವಾಗಿದ್ದರೆ ಅದು ಆ ವ್ಯಕ್ತಿಯ ಸರಳ ನಡವಳಿಕೆಗೆ ಕಾರಣವಾಗಿ ಸಾಮಾನ್ಯ ಜನರಿಗೆ ಅದನ್ನು ಅತ್ಯಂತ ವಿನಯದಿಂದ ತಲುಪಿಸುವ ಮತ್ತು
ಜ್ಞಾನ ಕೂಡ ಹರಿಯುವ ನೀರಿನಂತೆ,
ಸದಾ ಕಾಲ ಚಲಿಸುತ್ತಲೇ ಇರುತ್ತದೆ, ಅದು ಶಾಶ್ವತ ಅಲ್ಲ, ಬದಲಾವಣೆ ಆಗುತ್ತಲೇ ಇರುತ್ತದೆ. ಇಂದಿನ ನನ್ನ ಜ್ಞಾನ ಮುಂದೆ ಅಪ್ರಸ್ತುತ ವಾಗಬಹುದು ಎಂಬ ಅರಿವು ಓದಿರುವವರಿಗೆ ಇರಬೇಕಾಗುತ್ತದೆ.
ಅವರ ವರ್ತನೆ ಸಹಜವಾಗಿರಬೇಕೆ ಹೊರತು ವಿಚಿತ್ರವಾಗಿರಬಾರದು.

ಮತ್ತು ಎಲ್ಲಕ್ಕಿಂತ ಹೆಚ್ಚಾಗಿ,
ವಿಶಾಲ ಮನೋಭಾವದ, ಪ್ರೀತಿ ವಿಶ್ವಾಸ ತುಂಬಿದ, ಮಾನವೀಯ ಆಧಾರದ,
ಸೌಜನ್ಯದ ನಡವಳಿಕೆಯೇ ಅತ್ಯುನ್ನತ ಜ್ಞಾನವೇ ಹೊರತು, ಅಕ್ಷರಗಳ ಅಧ್ಯಾಯಗಳ, ಪುಟಗಳ , ಶ್ಲೋಕಗಳ, ದಾಖಲೆಗಳ ಜ್ಞಾನ ಕೇವಲ ವಾದ ಪ್ರತಿವಾದಗಳಿಗೆ ಹೊರತು ಸಮಾಜದ ಶಾಂತಿಯ, ನೆಮ್ಮದಿಯ, ಜನರ ಜೀವನಮಟ್ಟ ಸುಧಾರಣೆಯ ದಿಕ್ಕಿನಲ್ಲಿ ಅವುಗಳ ಪಾತ್ರ ಕಡಿಮೆ .
ಅದು ಈಗಾಗಲೇ ದೃಢಪಟ್ಟಿದೆ.

ಹೆಚ್ಚಿಗೆ ಓದಿರುವವರನ್ನು ತಲೆ ಪ್ರತಿಷ್ಠೆಯವರನ್ನು ನೋಡಿದರೆ ನಾವು ನಿರಪರಾಧಿಗಳಾಗಿದ್ದರೂ ಪೋಲೀಸರನ್ನು ಕಂಡರೆ ಭಯವಾಗುವಂತೆ ಭಾಸವಾಗುತ್ತದೆ.

ನಮ್ಮ ದೇಶದಲ್ಲಿ ಸಾಕ್ಷರತೆಯ ಸಂಖ್ಯೆ ಹೆಚ್ಚಾಗುತ್ತಿದ್ದರೂ ನಿಜವಾದ ಅರಿವಿರುವವರ ಸಂಖ್ಯೆ ತುಂಬಾ ಕಡಿಮೆಯಿದೆ. ಮುಗ್ಧತೆ ಮತ್ತು ಮೌಡ್ಯತೆಯೇ ಬಹಳಷ್ಟು ತುಂಬಿ ತುಳುಕುತ್ತಿದೆ.

ನಮಗೆ ಸಾಹಿತ್ಯ ಸಂಗೀತ ಕಲೆ ಧಾರ್ಮಿಕತೆ ವಿಜ್ಞಾನ ಮುಂತಾದ ‌ವಿಷಯಗಳಲ್ಲಿ ಪಾಂಡಿತ್ಯವಿದೆ ಎಂದ ಮಾತ್ರಕ್ಕೆ ಸಾಮಾನ್ಯರಿಗಿಂತ ಭಿನ್ನ ಎಂದು ಭಾವಿಸಿ ಆ ಕಲೆಗಳಲ್ಲಿಯೇ ಸಾಮಾನ್ಯರಿಗೆ ಅರ್ಥವಾಗದ ಅಭಿಪ್ರಾಯ ವ್ಯಕ್ತಪಡಿಸಿದರೆ ನಿಮಗೆ ಪ್ರಶಸ್ತಿಯೂ ಬಹುಮಾನವೋ ಅಧಿಕಾರವೂ ಡಾಕ್ಟರೇಟೋ ಬರಬಹುದು.
ಆದರೆ ವಿನಯ ಮಾನವೀಯತೆ ಇಲ್ಲದಿದ್ದರೆ ವಿಶಾಲ ಮನೋಭಾವ ಇಲ್ಲದಿದ್ದರೆ ಎಲ್ಲವೂ ವ್ಯರ್ಥ.

ಪ್ರೀತಿಯ ಗುಣ ಮಾತ್ರ ಈ ಸಮಾಜದ ಒಳ್ಳೆಯ ಬದಲಾವಣೆಗೆ ಕಾರಣವಾಗಬಹುದೆ ಹೊರತು ನಿಮ್ಮ ಅಕ್ಷರ ಜ್ಞಾನ ಅಹಂಕಾರ ಸಣ್ಣ ಮನಸ್ಸು ದ್ವೇಷ ಮನೋಭಾವ ಸಮಾಜಕ್ಕೆ ಮಾರಕ.

ಬದುಕಿನ ಅನುಭವದ ಸಾಗರದಲ್ಲಿ ಓದು ಒಂದು ಪೂರಕ ಪ್ರಕ್ರಿಯೆಯೇ ಹೊರತು ಓದಿನಿಂದಲೇ ಅನುಭವ ಪಡೆದರೆ ಅದು ಅಜ್ಞಾನದ ಒಣ ರೂಪ ಅಷ್ಟೆ.

ಸರ್ಕಾರದ – ನ್ಯಾಯಾಲಯಗಳ ರೀತಿಯಲ್ಲಿ ದಾಖಲೆ – ಆಧಾರಗಳು ನಮ್ಮ ಅಭಿಪ್ರಾಯ ರೂಪಿಸದೆ, ನಮ್ಮನ್ನು ನಿಯಂತ್ರಿಸದೆ ಕ್ರಿಯಾತ್ಮಕ ಮನಸ್ಥಿತಿ ನಮ್ಮನ್ನು ಕಾಡಬೇಕು.
( ಕೆಲವು ಅನಿವಾರ್ಯ ಮತ್ತು ಅಧಿಕೃತ ವಿಷಯಗಳನ್ನು ಹೊರತುಪಡಿಸಿ )

ಈ ಎಲ್ಲಾ ಅಭಿಪ್ರಾಯಗಳು
ನನಗೂ ಅನ್ವಯಿಸುತ್ತದೆ.
ಧನ್ಯವಾದಗಳು.

ವಿವೇಕಾನಂದ. ಹೆಚ್. ಕೆ.

Copyright © All rights reserved Newsnap | Newsever by AF themes.
error: Content is protected !!