ಒಮ್ಮೊಮ್ಮೆ ನಮ್ ಥಿಂಕಿಂಗು ಹೀಗೂ ಉಂಟಲ್ಲವೇ…
ಅವ್ರನ್ನು ನೋಡಿ…ದಿನಾಲೂ ಯೋಗ, ಜಿಮ್ಮು, ವಾಕು, ಏರೋಬಿಕ್ಸು ಎಕ್ಸರ್ ಸೈಸು…. ಎಲ್ಲವನ್ನೂ ಮಾಡ್ತಾರೆ, ಕೇವಲ ಸಿರಿಧಾನ್ಯವನ್ನೇ ತಿಂತಾರೆ, ಮನೆಯಲ್ಲಿ ಕಾಯಿಸಿ ಆರಿಸಿದ ನೀರು ಅಥವಾ ಬಿಸಿಲೇರಿ ಬಿಟ್ರೆ ಹೊರಗಡೆ ಎಲ್ಲೂ ನೀರನ್ನೇ ಕುಡಿಯೋಲ್ಲ, ಕಾಫ಼ೀ, ಟೀ, ಸಿಗರೇಟು , ಎಣ್ಣೆ ಗಳ ಚಟ ಇಲ್ಲ, ಗ್ರೀನ್ ಟೀ ಮಾತ್ರಾ ಕುಡೀತಾರೆ, ಎಲೆ ಅಡಿಕೆ ಪಾನ್ ಬೀಡಾ ಹಾಕೋಲ್ಲ, ಮಾಂಸ ತಿನ್ನೋಲ್ಲ, ಯಾರೊಂದಿಗೂ ಏರುದನಿಯಲ್ಲಿ ಮಾತಾಡೋಲ್ಲ, ಸಂಜೆ ಎಂಟರೊಳಗೆ ಊಟ ಮುಗಿಸಿ ಬೆಳಿಗ್ಗೆ ನಾಲ್ಕುವರೆಗೆಲ್ಲಾ ಏಳುತ್ತಾರೆ, ಹದಿಮೂರು ಬಾರಿ ಸೂರ್ಯ ನಮಸ್ಕಾರ ಮಾಡ್ತಾರೆ, ಪ್ರಾಣಾಯಾಮ ಮಾಡ್ತಾರೆ, ದೇವ್ರೂ ದಿಂಡ್ರೂ ಅಂತಾನೇ ಒಳ್ಳೆಯ ಶಿಸ್ತು ಇಟ್ಕೊಂಡಿದ್ದಾರೆ……
ಇಷ್ಟಿದ್ರೂ..
ಅವರಿಗೆ ಬಿಪಿ, ಶುಗರ್ರು, ಕೊಲೆಸ್ಟ್ರಾಲ್ ಎಲ್ಲವೂ ಇದೆ. ಇದು ಹೇಗೆ ಸಾಧ್ಯ..?
ಬರೋಬ್ಬರಿ ಇವೆಲ್ಲದಕ್ಕೆ ವಿರುದ್ಧವಾದ ಜೀವನಪದ್ದತಿ ಇರುವ ಸುಮಾರು ಜನರಿಗೆ ಯಾವ ಅದಾವ ಬಾಧೆಗಳೂ ಇಲ್ಲ…..ಹಾಗಾದ್ರೆ ಲೈಫ಼ಲ್ಲಿ ತುಂಬಾ ಶಿಸ್ತಿಂದ, ಯೋಜನಾಬದ್ಧವಾಗಿ, ಸಾತ್ವಿಕ ಆಹಾರ ಪದ್ದತಿಯಿಂದ ಇರೋದೇ ವೇಸ್ಟಾ..?
ಇದೇ ಕೊರಗಿಗೆ ಸಂಬಂಧಿಸಿದವರ ಚಿಂತನೆಯಲ್ಲಿ ಮುಂದುವರೆದು ಹೇಳೋದಾದರೆ…..
ನಮ್ಮಲ್ಲಿ ಬಹಳಷ್ಟು ಜನ ಶ್ರಮಜೀವಿಗಳು, ಕೂಲಿಕಾರರು, ದೇಹ ದಂಡಿಸಿ ಜೀವಿಸುವವರು ವರ್ಷಗಟ್ಟಲೆ ತಲೆಗೆ ಎಣ್ಣೆ ,ಶಾಂಪೂ , ಸೀರಮ್ಮು ಅದೂ ಇದೂ ಅಂತಾ ಏನೂ ಹಚ್ಚದಿದ್ರೂ ಅವರ ತಲೆ ಕೂದಲು ಸೊಂಪಾಗಿಯೇ ಬೆಳೆದುಕೊಂಡಿರುತ್ತೆ . ! ಅದೇ ಹಲವಾರು ಮಂದಿ ತಮಗೆ ಸಾಧ್ಯವಿರುವ ಏನೆಲ್ಲಾ ಪ್ರಯೋಗಗಳನ್ನು ಮಾಡಿ, ವಿಟಮಿನ್ ಭರಿತ ಆಹಾರ, ಸೊಪ್ಪು, ಹಣ್ಣು , ತರಕಾರಿಗಳನ್ನೇ ಸೇವಿಸಿ, ತಜ್ಞ ವೈದ್ಯರನ್ನೂ ಭೇಟಿಯಾಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿಕೊಂಡು ಸಿಕ್ಕಾಪಟ್ಟೆ ಕೇರ್ ತಗೊಂಡ್ರೂ, ತಲೆ ಮೇಲೆ ಹಾಗೆ ಸುಮ್ಮನೆ ಕೈಯಾಡಿಸಿದರೂ ಸಾಕು, ಕೂದಲು ಸರಾಗವಾಗಿ ಉದುರುತ್ತಲೇ ಇರುತ್ತೆ !
ಇದು ಒಂಥರಾ ವಿಸ್ಮಯವೇ…
ಹಾಗೇ ಗ್ಲಾನ್ಸ್ ಮಾಡೊದಾದರೆ….ಕೆಲವರು ಭೂಮಿ ಮೇಲೆ ಸಿಗುವ ಏನೆಲ್ಲಾ ಗಡದ್ದಾಗಿ ತಿಂದ್ರೂ ಸ್ಲಿಮ್ಮಾಗಿ ಸಣ್ಣಗೇ ಇರ್ತಾರೆ, ಮತ್ತೇ ಕೆಲವರು ಒಂದಷ್ಟು ಆಹಾರದ ವಾಸನೆ ಮಾತ್ರದಿಂದಲೇ ಊದಿಕೊಳ್ತಾರೆ. ಒಂದಷ್ಟು ಜನ ಜೀವನಪೂರ್ತಿ ಕೂತಿದ್ದೇ ತಿಂದಿದ್ದನ್ನು ಅರಗಿಸಿಕೊಂಡರೆ, ಮತ್ತೇ ಹಲವರು ತಮ್ಮೊಳಗಿನ ಕ್ಯಾಲರಿಗಳನ್ನು ಬರ್ನ್ ಮಾಡಲಿಕ್ಕೆ ಜೀವನವಿಡೀ ಸರ್ಕಸ್ ಮಾಡ್ತಾನೇ ಇರ್ತಾರೆ !
ಕೆಲವರಿಗೆ ಮನೆ ಅಡಿಗೆ ಬಿಟ್ಟು ಹೊರಗಡೆ ಏನಾದ್ರೂ ಸ್ವಲ್ಪವೇ ತಿಂದ್ರೂ ಗ್ಯಾಸು, ಹೊಟ್ಟೆ ಉರಿ, ಅಸಿಡಿಟಿ….ಅಂತೆಲ್ಲಾ ಸಡನ್ನಾಗಿ ಶುರುವಾದ್ರೆ, ಮತ್ತೇ ಕೆಲವರು ಜೀವನಪೂರ್ತಿ ಹೊರಗಡೆ ಹೋಟೆಲ್ ಗಳಲ್ಲಿ, ಬೀದಿಬದಿಯಲ್ಲಿ ಸಿಕ್ಕಿದ್ದನ್ನೇ ಅಡಸಾ ಬಡಸಾ ತಿಂದು ಆರೋಗ್ಯವಾಗಿಯೇ ಬದುಕುತ್ತಾರೆ.
ಇನ್ನೂ ವಿಚಿತ್ರ ಅಂದ್ರೆ… ಒಂದಷ್ಟು ಜನ ಸಣ್ಣ ಪುಟ್ಟ ವಿಚಾರಗಳಿಗೂ ಸದಾ ಏರಿದ ಧ್ವನಿಯಲ್ಲಿ ಕೂಗಾಡುತ್ತಲೇ ಇರ್ತಾರೆ , ನೋಡಿದರೆ ಭಯಂಕರ ಟೆನ್ಷನ್ ನಲ್ಲೇ ಇರ್ತಾರೆ, ಆದ್ರೆ ಅವರಿಗೆ ಬಿ.ಪಿ ಇರೋಲ್ಲ. ಆದ್ರೆ ಸದಾ ಸಾಫ಼್ಟಾಗಿ ಸೈಲೆಂಟಾಗಿರುವ ಕೆಲವರಲ್ಲಿ ಅಧಿಕ ರಕ್ತದೊತ್ತಡ ವಕ್ಕರಿಸಿರುತ್ತೆ.
ಕೆಲವು ಕುಟುಂಬಗಳಲ್ಲಿ ಆರೇಳು ಜನ ಮಕ್ಕಳಿದ್ರೂ, ಅಷ್ಟೊಂದು ಅನುಕೂಲವಿಲ್ಲದೇ ಹೋದರೂ ಅವರೆಲ್ಲರ ಮದುವೆ ಒಂದೊಂದಾಗಿ ಸಲೀಸಾಗಿ ಸೆಟ್ ಆಗಿರುತ್ತೆ. ಮತ್ತೇ ಕೆಲವೆಡೆ ಅವರಿಗೆ ಎಲ್ಲಾ ಅನುಕೂಲವಿದ್ದೂ, ಒಬ್ಬಳೇ ಮಗ/ ಮಗಳಿದ್ದರೂ ಮದುವೆ ಬೇಗನೇ ಸೆಟ್ ಆಗೋಲ್ಲ.
ಕೆಲವರಿಗೆ ಸಂತೆಯಲ್ಲಿ ಬಿಟ್ತೂ ಗೊರಕೆ ಹೊಡೆಯುವಂತೆ ನಿದ್ದೆ ಮಾಡ್ತಾರೆ ಮತ್ತೇ ಸಾಕಷ್ಟು ಜನರಿಗೆ ಮೆತ್ತನೆಯ ಕುಷನ್ ಇರುವ ಬೆಡ್ಡು, ಏರ್ ಕಂಡೀಷನ್ ರೂಮು, ನಿಶ್ಯಬ್ಧದ ವಾತಾವರಣ…..ಏನೆಲ್ಲಾ ಸವಲತ್ತುಗಳಿದ್ರೂ ನಿದ್ದೇನೇ ಬರೋಲ್ಲ..! ಕೆಲವರು ಹಂಡೆಗಟ್ಟಲೆ ಎಣ್ಣೆ ಹೊಡೆದರೂ ಬ್ಯಾಲೆನ್ಸ್ ತಪ್ಪೋಲ್ಲ ಆದರೆ ಮತ್ತೇ ಹಲವರು ಎರಡು ಪೆಗ್ಗಿಗೇ ಔಟ್ ಆಗಿ ಷಟ್ ಆಗಿಬಿಡುತ್ತಾರೆ.!
ಹೀಗೆ….ಹೇಳುತ್ತಾ ಹೋದಂತೆಲ್ಲಾ ಈ ವೈರುಧ್ಯಗಳು ಮುಗಿಯೋದೇ ಇಲ್ಲಾ ಅಲ್ವಾ.? ಈ ಎಲ್ಲ ಕೊರಗು, ಬೆರಗು ಅಥವಾ ವೈರುಧ್ಯಗಳ ಹಿಂದಿರಬಹುದಾದ ಒಂದು ವಿಶೇಷ ಅಂಶ ಅಂದ್ರೆ ಅದುವೇ….ಮತ್ತೊಬ್ಬರೊಂದಿಗೆ
” ಹೋಲಿಕೆ ಅಥವಾ Comparison !!
ಹೌದು…ಯಾಕೆ ಹೀಗೆಲ್ಲಾ..?
ಈ ಪ್ರಪಂಚದಲ್ಲಿ ವಿಜ್ಞಾನ, ತಂತ್ರಜ್ಞಾನ, ಸಂವಹನ ಏನೆಲ್ಲಾ ಮುಂದುವರೆದಿದ್ದರೂ ಜನರಲ್ಲಿರಬಹುದಾದ ಕೆಲವು ಮೂಲಭೂತ ಗುಣಸ್ವಭಾವಗಳು ಮಾತ್ರ ಅವರು ಯಾವುದೇ ಊರು -ಕೇರಿ, ಜಾತಿ-ಧರ್ಮಕ್ಕೆ ಸೇರಿದವರಾಗಿದ್ದರೂ ಬಹುತೇಕ ಸಾಮ್ಯತೆ ಇದ್ದೇ ಇರುತ್ತವೆ. ಅಂತಹವುಗಳಲ್ಲಿ ತಮ್ಮನ್ನು ತಮ್ಮ ಸ್ಥಿತಿಯನ್ನು ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುವುದೂ ಒಂದು .!
ಅದು ಕುಟುಂಬ, ವಿದ್ಯೆ, ಮದುವೆ, ಉದ್ಯೋಗ, ಸಂಪಾದನೆ, ಆಸ್ತಿ-,ಅಂತಸ್ತು, ಆರೋಗ್ಯ, ಅಧಿಕಾರ, ದೇಹ ಪ್ರಕೃತಿ, ಬಣ್ಣ, ಮಕ್ಕಳ ಸ್ಥಾನಮಾನ…. ಯಾವುದೇ ಆಗಿರಬಹುದು. ಈ ವಿಷಯಗಳಲ್ಲಿ ತಮ್ಮ ಸುತ್ತಲೂ ಇರುವ ಸ್ನೇಹಿತರು ಬಂಧುಗಳು, ಸಹೋದ್ಯೋಗಿ ಗಳೊಂದಿಗೆ ಹೋಲಿಸಿಕೊಂಡು ಅವರು ಹಾಗೆ, ನಾವ್ಯಾಕೆ ಹೀಗೆ…..ಎಂಬ ಕೆಲಸಕ್ಕೆ ಬಾರದ ಕೊರಗನ್ನು ಆಹ್ವಾನಿಸಿಕೊಳ್ಳುವುದರ ಒಟ್ಟು ಪರಿಣಾಮವೇ ಈ ಎಲ್ಲಾ ವೈರುಧ್ಯಗಳ ಮೂಲ.
ಅಸಲಿಗೆ ಭಗವಂತ ಈ ಪ್ರಪಂಚದಲ್ಲಿ ಹುಟ್ಟಿರುವ ಪ್ರತಿಯೊಂದು ಜೀವಿಗೂ ಅದರದ್ದೇ ಆದ ಸ್ವರೂಪ, ಸ್ವಭಾವ, ಸಂವೇದನೆ, ದೇಹ ರಚನೆ, ಗುಣಾವಗುಣಗಳ ಸಂಗಮ, ಶಕ್ತಿ…ಇತ್ಯಾದಿ Ingredients ಗಳನ್ನು ತುಂಬಿ ಉರುಳಿಬಿಟ್ಟಿರುತ್ತಾನೆ. ಒಬ್ಬರಲ್ಲಿರಬಹುದಾದ ಈ ವಿಶೇಷತೆಗಳು ಮತ್ತೊಬ್ಬರಲ್ಲಿ ಸಂಪೂರ್ಣ ಭಿನ್ನವಾಗಿರುತ್ತವೆ. ಹೀಗಾಗಿಯೇ ಎತ್ತರ , ಕುಳ್ಳು, ದಪ್ಪ ಸಣ್ಣ, ಕಪ್ಪು, ಬಿಳುಪು , ಆರೋಗ್ಯ, ತಾಕತ್ತು, …. ಈ ರಚನೆಗಳಲ್ಲದೇ, ಅವರ ಗುಣ ಸ್ವಭಾವ ಹಾಗೂ ಇಂಟರ್ನಲ್ ಕಾಂಪೊನೆಂಟುಗಳನ್ನು ಅದಕ್ಕೆ ತಕ್ಕಂತೆ ರೆಡಿ ಮಾಡಿ ಕಳಿಸಿದ್ದಿರಬಹುದು. ಇವುಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತಲೇ ಹೋಗುತ್ತವೆ. ಹೀಗಾಗಿಯೇ ಈ ಎಲ್ಲಾ ವೈರುಧ್ಯಗಳೂ ಆಗಾಗ್ಗೆ ನಮ್ಮನ್ನು ಒಬ್ಬರೊಂದಿಗೆ ಹೋಲಿಸಿಕೊಂಡಾಗ ಕೊರಗುವಂತೆ ಮಾಡಬಹುದು.
ನಮ್ಮನ್ನು ನಾವಿದ್ದಂತೆಯೇ ತೆಗೆದುಕೊಂಡು ನಮ್ಮ ದೇಹ ಅಥವಾ ಮನಸ್ಸು ಇವುಗಳಲ್ಲಿ ಏನಾದರೂ ನ್ಯೂನತೆ ಅಥವಾ ಕೊರತೆ ಇದೆಯೆಂದಾದಲ್ಲಿ ಅದಕ್ಕೆ ನಮ್ಮ…..ಕೇವಲ ನಮ್ಮ ದೇಹರಚನೆಗೆ ಅಗತ್ಯವಾದ ಪರಿಹಾರ, ಚಿಕಿತ್ಸೆ ಮುಂತಾದ್ದನ್ನು ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕೇ ಹೊರತು ಈ ಮೇಲೆ ತಿಳಿಸಿದಂತೆ ಮತ್ತೊಬ್ಬರ ದೈಹಿಕ- ಮಾನಸಿಕ ಆರೋಗ್ಯ ಅಥವಾ ಸ್ಥಿತಿ ಗತಿಗಳೊಂದಿಗೆ ಕಂಪೇರ್ ಮಾಡಿಕೊಳ್ಳುತ್ತಾ ಹೋದಂತೆಲ್ಲಾ ನಿರಾಶೆ, ಖಿನ್ನತೆ, ಕೊರಗು ಹೆಚ್ಚಾಗುತ್ತಲೇ ಹೋಗಬಹುದು.
ನಾವು ನಾವಾಗಿಯೇ ಇರೋಣ….ನಮ್ಮಂತೆಯೇ ಬದುಕೋಣ……ಆಗ ಮಾತ್ರ ಅದರಲ್ಲೇ ಸುಖ, ತೃಪ್ತಿ,, ನೆಮ್ಮದಿ ಎಲ್ಲವೂ….
ಮರೆಯುವ ಮುನ್ನ
ಈ ಭೂಮಿ ಮೇಲೆ ಜನಿಸಿರುವ ಪ್ರತೀ ಜೀವಿಗೂ ಯಾವುದೋ ಒಂದು ಪಾಸಿಟಿವ್ ಹಾಗೂ ನೆಗೆಟೀವ್ ಎನರ್ಜಿ ಅನ್ನೋದು ಇದ್ದೇ ಇರುತ್ತೆ. ಋಣಾತ್ಮಕ ಅಂಶಗಳು ಬಹುಬೇಗ ಅನಾವರಣವಾದರೆ ನಮ್ಮೊಳಗಿನ ಧನಾತ್ಮಕ ಶಕ್ತಿ ಹೊರಗೆ ಬರಬೇಕಾದರೆ ನಾವು ಅದನ್ನು ಮೊದಲು ಕಂಡುಕೊಳ್ಳಬೇಕು, ಉತ್ತೇಜಿಸಬೇಕು ಹಾಗೂ ಅದನ್ನು ನಮ್ಮ ಸಾಧನೆಗೆ ಬಳಸಿಕೊಳ್ಳಬೇಕು. ಅಂದರೆ ನಮ್ಮೊಳಗಿನ ಮಿತಿ, ದೌರ್ಬಲ್ಯ ಹಾಗೂ ಚೈತನ್ಯ ಇವೇ ಮುಂತಾದ ವಿಚಾರಗಳಲ್ಲಿ ನಮ್ಮನ್ನು ನಾವೇ ವಿಮರ್ಶೆಗೆ ಒಳಪಡಿಸಿಕೊಂಡು ನಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕಿಕೊಳ್ಳಬೇಕು ಅಷ್ಟೇ .
ಅದನ್ನು ಬಿಟ್ಟು ನಮ್ಮಲ್ಲಿರದುದರ ಬಗ್ಗೆ ನಮ್ಮನ್ನು ಮತ್ತೊಬ್ಬರೊಂದಿಗೆ ಎಲ್ಲಾ ವಿಷಯಗಳಲ್ಲೂ ಹೋಲಿಸಿಕೊಳ್ಳುತ್ತಾ ಹೋದಲ್ಲಿ ಅದು ಮತ್ತಷ್ಟು ಮಾನಸಿಕ ಸಮಸ್ಯೆಗಳಿಗೆ ದಾರಿಯಾಗಬಲ್ಲದು.
ಹಾಗಾಗದಿರಲಿ.
ಲಾಸ್ಟ್ ಪಂಚ್
“ನಿಮ್ಮನ್ನು ನೀವು ನಿಜವಾಗಿ ಪ್ರೀತಿಸುವುದನ್ನು ಕಲಿತಾಗ ಮಾತ್ರ ನೀವು ಇತರರನ್ನು ಪ್ರಾಮಾಣಿಕವಾಗಿ ಪ್ರೀತಿಸಬಲ್ಲಿರಿ”
ಪ್ರೀತಿಯಿಂದ…..

ಹಿರಿಯೂರು ಪ್ರಕಾಶ್.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು