- ದಿಶಾ ಸಭೆಗಳನ್ನು ನಡೆಸಿದ ಮೊದಲ ಸ್ಥಾನ – ಮಂಡ್ಯಕ್ಕೆ ನಂ.೧: ಸಂಸದೆ ಸುಮಲತಾ
ಮಂಡ್ಯ: ಹದಿನೇಳನೇ ಲೋಕಸಭೆ ಅಸ್ತಿತ್ವಕ್ಕೆ ಬಂದ ನಂತರ ಕಳೆದ ಐದು ವರ್ಷಗಳಲ್ಲಿ ದಿಶಾ ಸಭೆಗಳನ್ನು ನಡೆಸಿರುವ ವಿಷಯದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಮೊದಲ ಸ್ಥಾನದಲ್ಲಿದೆ ಎಂದು ಸಂಸದೆ ಸುಮಲತಾ ಅಂಬರೀಷ್ ತಿಳಿಸಿದರು.
ಮಂಡ್ಯ ಜಿಲ್ಲಾ ಪಂಚಾಯತ್‌ನ ಕಾವೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ( ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಅವಧಿಯ ಕೊನೆಯ ದಿಶಾ ಸಭೆ ಇದು ಎಂದು ಮಾತು ಆರಂಭಿಸಿದ ಸಂಸದೆ ಸುಮಲತಾ ಅಂಬರೀಷ್ ಕಳೆದ ಐದು ವರ್ಷಗಳ ಕಾಲದ ತಮ್ಮ ಕೆಲಸ ಕಾರ್ಯಗಳನ್ನು ಸಭೆಯ ಮುಂದಿಟ್ಟಿದ್ದಲ್ಲದೇ ಎಲ್ಲರಿಗೆ ಕೃತಜ್ಞತೆ, ಧನ್ಯವಾದ ಸಲ್ಲಿಸಿದ ವಿದಾಯ ಸಭೆಯಾಗಿ ಮಾರ್ಪಟ್ಟಂತ್ತಿತ್ತು.
ಸಂಸದರ ಅನುದಾನ ಖರ್ಚು ಮಾಡಿರುವ ವಿಷಯದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಇದು ಸಹಾ ಹೆಮ್ಮೆಯ ವಿಷಯವಾಗಿದೆ. ತಮ್ಮ ಅವಧಿಯಲ್ಲಿ ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ, ಬಸ್ ತಂಗುದಾಣ ಗಳ ನಿರ್ಮಾಣ ಮುಂತಾದವುಗಳಿಗೆ ಸಾಕಷ್ಟು ಅನುದಾನ ಒದಗಿಸಲಾಗಿದೆ ಎಂದರು.
ಅಕ್ರಮ ಗಣಿಗಾರಿಕೆ ವಿಷಯದಲ್ಲಿ ತಮ್ಮ ಹೋರಾಟದ ಪ್ರಯತ್ನದ ಫಲವಾಗಿ ರಾಜ್ಯ ಉಚ್ಚ ನ್ಯಾಯಾಲಯ ಕೆಆರ್‌ಎಸ್‌ನ ೨೦ ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿಷೇಧ ಹೇರಿರುವುದು ತಮ್ಮ ಪ್ರಾಮಾಣಿಕ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ರೈಲ್ವೆ ಇಲಾಖೆ ಪ್ರಗತಿ :
ನಗರದ ಮಹಾವೀರ ವೃತ್ತದಲ್ಲಿ ಕೆಳ ಸೇತುವೆ ನಿರ್ಮಾಣ, ರೈಲ್ವೆ ನಿಲ್ದಾಣದಲ್ಲಿ ೩.೬೦ ಕೋಟಿ ವೆಚ್ಚದಲ್ಲಿ ಎಸ್ಕಲೇಟರ್ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ತಮ್ಮ ಪ್ರಯತ್ನದ ಫಲವಾಗಿ ಬೆಂಗಳೂರು ಮೈಸೂರು ರೈಲುಗಳಲ್ಲಿ ಮಹಿಳಾ ಬೋಗಿಗಳನ್ನು ಅಳವಡಿಸಲಾಯಿತು. ಇದಕ್ಕೆ ಕಾರಣಕರ್ತರಾದ ಸಚಿವರಾದ ಪಿಯೂಷ್ ಗೋಯಲ್, ಸುರೇಶ್ ಅಂಗಡಿಯವರಿಗೆ ಧನ್ಯವಾದ ಸಲ್ಲಿಸಿದರು.
ಬಿ.ಹೊಸೂರು ಕಾಲೋನಿಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ೨೩ ಕೋಟಿ ರೂ. ವೆಚ್ಚದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಮುಕ್ತಾಯ ಹಂತದಲ್ಲಿದೆ. ಅದೇ ರೀತಿ ೨೮ ಕೋಟಿ ರೂ. ವೆಚ್ಚದಲ್ಲಿ ಕೇಂದ್ರೀಯ ವಿದ್ಯಾಲಯದ ಕಟ್ಟಡವು ಸಹ ಸಿದ್ಧವಾಗಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಿದೆ ಎಂದರು.
ತಮ್ಮ ಪ್ರಯತ್ನದ ಫಲವಾಗಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ೫೦ ಕೋಟಿ ಅನುದಾನ ಬಿಡುಗಡೆಯಾಗಿ ಸಕ್ಕರೆ ಕಾರ್ಖಾನೆ ಪ್ರಾರಂಭವಾಗುವುದಕ್ಕೆ ಕಾರಣವಾಯಿತು ಎಂದು ಸ್ಮರಿಸಿದರು.
ಕೋವಿಡ್ ಸಂದರ್ಭದಲ್ಲೂ ನಡೆದ ಕೆಲಸ :
ಕೋವಿಡ್ ಸಂದರ್ಭದ ಎರಡು ವರ್ಷಗಳಲ್ಲಿ ಸಂಸದರ ನಿಧಿ ಇಲ್ಲದಿದ್ದ ಸಂದರ್ಭದಲ್ಲೂ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕೋವಿಡ್ ಸಂತ್ರಸ್ತರಿಗೆ ಅನುಕೂಲವಾಗುವಂತೆ ೫ ವೆಂಟಿಲೇಟರ್‌ಗಳು, ಆಮ್ಲಜನಕ ಕಾನ್ಸಂಟ್ರೇಷನ್ ಹಾಗೂ ಎರಡು ಐಸಿಯು ಅಂಬ್ಯುಲೆನ್ಸ್ ಗಳನ್ನು ಒದಗಿಸಲಾಯಿತು ಎಂದು ವಿವರಿಸಿದರು.
ಕೋವಿಡ್ ಸಂದರ್ಭದಲ್ಲಿ ವಾರಿಯರ್ ಗಳಾಗಿ ಕಾರ್ಯನಿರ್ವಹಿಸಿದ ಆಶಾ ಕಾರ್ಯಕರ್ತೆಯರಿಗೆ ಅಭಿನಂದನೆ ಸಲ್ಲಿಸಿದರು.ಗಣಿಗಾರಿಕೆಯಲ್ಲಿ ಬಾಕಿ ಇದ್ದ ರಾಜಧನ ಸಂಗ್ರಹದಲ್ಲಿ ಪ್ರಗತಿ ಸಾಧಿಸಿದ್ದರಿಂದ ೬೦ ಲಕ್ಷದಷ್ಟು ಹಣ ಸರ್ಕಾರದ ಖಜಾನೆಗೆ ದೊರಕಿತು.ಇದು ತಮ್ಮ ಹೋರಾಟದ ಪ್ರತಿಫಲ ಎಂದು ಹೇಳಿದರು.
ಕೇಂದ್ರ ಪುರಸ್ಕೃತ ಯೋಜನೆ ಕಾರ್ಯಕ್ರಮಗಳಿಗಾಗಿ ೧೦೪೮ ಕೋಟಿ ಹಣ,೨೧೮ ಕಿಮೀ ರಸ್ತೆ ಅಭಿವೃದ್ಧಿ, ಅಮೃತ ಯೋಜನೆಗಾಗಿ ೨೨೦ ಕೋಟಿ ದೊರಕಿದೆ ಎಂದರು.
ನನೆಗುದಿಗೆ ಬಿದ್ದಿದ್ದ ಹಾಲಹಳ್ಳಿ ಸ್ಲಂ ಬೋರ್ಡ್ ನಿವಾಸಿಗಳಿಗೆ ೬೩೨ ಮನೆ ಹಸ್ತಾಂತರ, ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ನಾಲ್ಕು ಗ್ರಾಮಗಳನ್ನು ದತ್ತು ಪಡೆದು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಯಿತು ಎಂದರು.
ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆದಿದ್ದು ಆತಂಕಕಾರಿ ವಿಷಯವಾಗಿತ್ತು. ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ದೇಶನ ನೀಡಿದರೂ ಗಂಭೀರ ಕ್ರಮ ಜರುಗಲಿಲ್ಲ ಎಂದು ವಿಷಾದಿಸಿದರು. ಲೋಕಸಭೆಯಲ್ಲಿ ಜಿಲ್ಲೆಯ ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದೇನೆ. ಇದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದರು.
ನರೇಗಾ ಕಾಮಗಾರಿಗಳಲ್ಲಿ ಕೊನೆಯ ಸ್ಥಾನದಲ್ಲಿದ್ದ ಮಂಡ್ಯ ಜಿಲ್ಲೆ ತಮ್ಮ ಪ್ರಯತ್ನಗಳ ನಂತರ ಮೊದಲ ಐದು ಸ್ಥಾನಗಳಿಗೆ ತಲುಪಿರುವುದು ಹರ್ಷ ತಂದಿದೆ ಎಂದರು.
ತಮ್ಮ ಈ ಎಲ್ಲಾ ಕೆಲಸ ಕಾರ್ಯಗಳಿಗೆ ಬೆಂಬಲವಾಗಿ ನಿಂತ ಕೇಂದ್ರ ಸರ್ಕಾರ, ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತಕ್ಕೆ ಧನ್ಯವಾದ ಸಲ್ಲಿಸಿದರಲ್ಲದೇ, ಸುದ್ದಿ ಮಾಧ್ಯಮಗಳ ಪ್ರತಿನಿಧಿಗಳಿಗೆ ತಮ್ಮ ವಿಶೇಷ ಧನ್ಯವಾದಗಳನ್ನು ತಿಳಿಸಿದರು.
ನಂತರ ನಾಮನಿರ್ದೇಶಿತ ಸದಸ್ಯರಾದ ಅಂಕರಾಜು, ಅರುಣ ಕುಮಾರಿ ಹಾಗೂ ಬೇಲೂರು ಸೋಮಶೇಖರ್ ಸಂಸದರ ಕೆಲಸಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದ ಸಲ್ಲಿಸಿದರು.
ಸಂಸದರಿಗೆ ಅಭಿನಂದನೆ :
ಇದು ಕೊನೆಯ ದಿಶಾ ಸಭೆಯಾದ ಕಾರಣ ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಜಿಲ್ಲಾಡಳಿತದ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.
ನಂತರ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕೃಷಿ ಇಲಾಖೆ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸೇರಿದಂತೆ ವಿವಿಧ ಇಲಾಖೆಗಳ ಅನುಪಾಲನಾ ವರದಿಗಳ ಬಗ್ಗೆ ಪರಾಮರ್ಶಿಸಲಾಯಿತು.ಫೆ. 29 ರಂದು ಹೊಸಕೋಟೆಯಲ್ಲಿ ಲೋಕಯುಕ್ತ ಜನ ಸಂಪರ್ಕ ಸಭೆ
ಈ ಸಭೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
More Stories
ನಂಬುಗೆಯೇ ಇಂಬು
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.