November 21, 2024

Newsnap Kannada

The World at your finger tips!

literature , books , knowledge

Development of higher levels of thinking by reading poetry Literature - Rangakarmi Mahamane Abhimat ಕಾವ್ಯದ ಓದಿನಿಂದ ಉನ್ನತ ಆಲೋಚನಾ ಸ್ತರಗಳ ವೃದ್ಧಿ ಸಾಹಿತಿ - ರಂಗಕರ್ಮಿ ಮಹಾಮನೆ ಅಭಿಮತ

ಕಾವ್ಯದ ಓದಿನಿಂದ ಉನ್ನತ ಆಲೋಚನಾ ಸ್ತರಗಳ ವೃದ್ಧಿ ಸಾಹಿತಿ – ರಂಗಕರ್ಮಿ ಮಹಾಮನೆ ಅಭಿಮತ

Spread the love

ಹೊಸ ಹೊಸ ಉನ್ನತ ಆಲೋಚನಾ ಸ್ತರಗಳಿಗೆ ಕರೆದೊಯ್ಯುವ ಕಾವ್ಯದ ಓದು ನಮಗೆ ಜೀವನ ಪ್ರೀತಿ ಮತ್ತು ರೀತಿಯನ್ನು ಕಲಿಸುತ್ತದೆ. ಜೊತೆಗೆ, ಹೊಸ ತಲೆಮಾರಿನ ಜನಾಂಗದ ಎದೆಯಲ್ಲಿ ಮೌಲ್ಯಗಳನ್ನು ಬೆಳೆಸುತ್ತದೆ ಎಂದು ಖ್ಯಾತ ಸಾಹಿತಿ ಹಾಗೂ ರಂಗಕರ್ಮಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಯುವ ಬರಹಗಾರರ ಬಳಗ, ಪರಿಚಯ ಪ್ರಕಾಶನ ಹಾಗೂ ಭೂಮಿಬೆಳಗು ಸಾಂಸ್ಕೃತಿಕ ಸಂಘದ ಸಂಯುಕ್ತ ಆಶ್ರಯದಲ್ಲಿ ಮಂಡ್ಯ ನಗರದ ಕನ್ನಿಕಶಿಲ್ಪ ನವೋದಯ ತರಬೇತಿ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ‘ಮಹಿಳಾ ಕವಿಗೋಷ್ಠಿ’ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬದುಕಬೇಕಾದ ರೀತಿಯನ್ನು ಕಲಿಸುವ ಕವಿತೆಗಳ ಓದಿನಿಂದ ಜಗತ್ತೇ ನಾವಾಗುತ್ತವೆ ಎಂದರು.

ಕವಿತೆ ‘ವಾಚ್ಯತೆ’ಯಿಂದ ಕೂಡಿರಬಾರದು. ಅದು ಯಾವಾಗಲೂ ‘ಧ್ವನಿ’ಸುವ ಗುಣ ಹೊಂದಿರಬೇಕು. ಕವಿ ತನ್ನೊಳಗೆ ಧ್ವನಿಸುವ ನವಿರುತನ, ಪಿಸುನುಡಿ, ಬೆಂಕಿ, ಜ್ವಾಲೆ, ಪ್ರಶ್ನೆ, ಒಳತೋಟಿ, ಛಿದ್ರಗೊಂಡ ಮನಸ್ಥಿತಿಯನ್ನು ಸಶಕ್ತವಾಗಿ ಕಾವ್ಯ ಲಹರಿಯ ಮೂಲಕ ಅಭಿವ್ಯಕ್ತಪಡಿಸಬೇಕು. ಬದುಕಿನ ಹೊಸ ಹೊಸ ನೆಲೆಗಳನ್ನು ಕಾವ್ಯದ ಮುಖೇನ ಹುಡುಕಾಟ ನಡೆಸಿ, ದಕ್ಕಿದ ಅನುಭವಗಳನ್ನು ಕಾವ್ಯಕ್ಕಿಳಿಸಿದರೆ ಸಾಲದು, ಪದ ಪದದಲ್ಲೂ ಹೊಸ ಹೊಸ ಅರ್ಥವನ್ನು ಧ್ವನಿಸಬೇಕು ಎಂದು ವಿಶ್ಲೇಷಿಸಿದರು.

ಲಿಂಗ ಭೇದವನ್ನು ತೊರೆದು ಸರಿಸಮಾನವಾಗಿ ಹೆಣ್ಣು ಗಂಡು ಬದುಕವ ಲಯವನ್ನು, ಮಾಧುರ್ಯತೆಯನ್ನು ರೂಡಿಸಿಕೊಳ್ಳಬೇಕು. ಇಬ್ಬರೂ ಆಪ್ತ ಒಡನಾಡಿಗಳಾಗಿದ್ದಾಗ ಬದುಕು ಹಸನಾಗುತ್ತದೆ ಎಂದರು.

ಮಂಡ್ಯ ನೆಲದ ಮಣ್ಣಿನಲ್ಲಿ ಹೋರಾಟದ ಮನೋಭಾವ ಮತ್ತು ದಿಟ್ಟತನದ ಗುಣವಿದೆ. ಇಂತಹ ನೆಲದಲ್ಲಿ ಯುವ ಬರಹಗಾರರ ಬಳಗ ಕ್ರಿಯಾಶೀಲವಾಗಿ ಸಾಹಿತ್ಯದ ನೆಲೆಗಳನ್ನು ವಿಸ್ತರಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕವಿಗೋಷ್ಠಿಯನ್ನು ಉದ್ಘಾಟಿಸಿದ ಕವಯತ್ರಿ ಸುಚಿತ್ರಾ ಹೆಗಡೆ ಮಾತನಾಡಿ, ಕವಿಗಳು ಯಾವುದೇ ಪೂರ್ವಗ್ರಹಗಳಿಗೆ ಪೀಡಿತರಾಗದೆ ಪ್ರಚಲಿತ ಸಮಾಜದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿ ಬರೆಯಬೇಕು. ವ್ಯವಸ್ಥೆಯ ಓರೆಕೋರೆಗಳನ್ನು ತಿದ್ದಿತೀಡಿ ಸಮಾಜವನ್ನು ಸದಾ ಎಚ್ಚರದಲ್ಲಿಡಬೇಕು. ಜೊತೆಗೆ, ನಿರ್ವಿಕಲ್ಪ ಭಾವನೆಯಿಂದ ಧ್ಯಾನಸ್ಥರಾಗಿ ಬರೆಯಬೇಕು. ಆದರೆ, ಕವಿಗಳು ಪಂಥಗಳ ಅತಿಯಾದ ಮೋಹಕ್ಕೆ ಬಿದ್ದಿರುವುದರಿಂದ, ಪ್ರಸ್ತುತ ಕಾವ್ಯ ಎಡ ಮತ್ತು ಬಲ ಎಂಬ ಪಂಥಗಳಲ್ಲಿ ಸಿಲುಕಿ ನಲುಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾವ್ಯವು ಭಾಷೆಯ ಜೊತೆ ಹುಡುಕಾಟದ ಅನುಸಂಧಾನವಾಗಿದೆ. ಇದರಲ್ಲಿ ಶಕ್ತ ಭಾವ ಮತ್ತು ಧ್ವನಿ‌ ತುಂಬಿರಬೇಕು. ಆದ್ದರಿಂದಲೇ, ಭಾವನೆಗಳನ್ನು ಬರೀ ಮಾತುಗಳಲ್ಲಿ ಹಿಡಿದಿಡಲಾಗದು. ಹಾಗೆ, ಕೇವಲ ಸುಂದರ ಪದ ಮತ್ತು ಪ್ರಾಸ ಪೋಣಿಸಿದರೆ ಕಾವ್ಯವಾಗದು. ಇದರೊಂದಿಗೆ ಲಯ, ಅರ್ಥ, ಧ್ವನಿ, ರೂಪಕ, ಪ್ರತಿಮೆ, ಒಳನೋಟಗಳನ್ನು ಪ್ರತಿಬಿಂಬಿಸಬೇಕು ಎಂದು ವಿವರಿಸಿದರು.‌

ಕಾವ್ಯ ನಮ್ಮನ್ನು ನಿರಂತರವಾಗಿ ಹರಿತಗೊಳಿಸುವ ಪ್ರಕ್ರಿಯೆ. ನಮ್ಮ ಆಲೋಚನೆ ಮತ್ತು ಭಾವಧಾರೆಗಳನ್ನು ಹದಗೊಳಿಸುತ್ತದೆ. ಆದ್ದರಿಂದ ಕಾವ್ಯಕ್ಕೆ ಸ್ವತಃ ನಾವೇ ಒಡ್ಡಿಕೊಳ್ಳಬೇಕು. ಕಾವ್ಯದ ಅಧ್ಯಯನಶೀಲತೆಯಿಂದ ನಮ್ಮ ವ್ಯಕ್ತಿತ್ವ, ಅರಿವು ವಿಕಾಸ ಹೊಂದುತ್ತದೆ. ಭಾವನೆಗಳು ಪ್ರಖರಗೊಳ್ಳುತ್ತವೆ. ಆ ಮೂಲಕ ಕವಿ ಪ್ರತಿಭೆಯನ್ನು ವಿಸ್ತರಿಸಿಕೊಂಡು ಕವಿತೆಯಿಂದ ಕವಿತೆಗೆ ಬೆಳೆಯುತ್ತಾ ಹೋಗಬೇಕು ಎಂದ ಸಲಹೆ ನೀಡಿದರು.

ಜಿಲ್ಲಾ ಯುವ ಬರಹಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡಿದರು. ಸಿಐಟಿಯು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ. ಕುಮಾರಿ, ಪರಿಚಯ ಪ್ರಕಾಶನದ ಸಂಸ್ಥಾಪಕ ಎಂ.ಎನ್. ಶಿವಕುಮಾರ್ ಆರಾಧ್ಯ, ಕನ್ನಿಕಶಿಲ್ಪ ನವೋದಯ ತರಬೇತಿ ಕಂದ್ರದ ಪ್ರಾಂಶುಪಾಲೆ ಹೆಚ್.ಆರ್. ಕನ್ನಿಕ, ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತೆ ಕೆ.ಪಿ. ಅರುಣಕುಮಾರಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬೇಬಿ ಬೆಟ್ಟದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕಿ ಕೆ.ಎಂ. ಪವಿತ್ರ ಅವರನ್ನು‌ ಸನ್ಮಾನಿಸಲಾಯಿತು. ಕವಿಗೋಷ್ಠಿಯಲ್ಲಿ ಡಾ. ಶುಭಶ್ರೀ ಪ್ರಸಾದ್, ಡಾ.ಪಿ. ಸುಮಾರಾಣಿ, ಡಾ. ಡಿ.ಕೆ. ಉಷಾ, ಡಾ.ಪಿ.ಎನ್. ಗೀತಾಮಣಿ, ಭವಾನಿ ಲೋಕೇಶ್, ಕೆ.ಪಿ. ಪದ್ಮ, ಎ. ಶರ್ಮಿಳಾ, ಹೆಚ್.ಸಿ. ಸುಬ್ಬಲಕ್ಷ್ಮಿ, ಆರ್.ಎಂ. ಸಹನ, ಎಂ. ಶ್ವೇತ ದಂಬದಹಳ್ಳಿ, ಕೆ.ಎಸ್. ಮಾಲತಿ, ಅನಿತಾ ಚೇತನ ಸೇರಿದಂತೆ ಜಿಲ್ಲೆಯ ೩೦ ಪ್ರತಿಭಾವಂತ ಕವಯತ್ರಿಯರು ತಮ್ಮ ಸ್ವರಚಿತ ಕವನ ವಾಚಿಸಿದರು.ಇದನ್ನು ಓದಿ –ಗೆಜ್ಜಲಗೆರೆ ಬಳಿ ಭೀಕರ ಬೈಕ್ ಅಪಘಾತ : ಯುವತಿ ಸಾವು – ಯುವಕನ ಸ್ಥಿತಿ ಗಂಭೀರ

Copyright © All rights reserved Newsnap | Newsever by AF themes.
error: Content is protected !!