ತಮಿಳುನಾಡಿನ ಕಾವೇರಿ ಯೋಜನೆಗಳ ವಿರುದ್ದ ಹೋರಾಟಕ್ಕೆ ಧುಮುಕುವಂತೆ ಮಾಜಿ ಪ್ರಧಾನಿ ದೇವೇಗೌಡರಲ್ಲಿ ಮನವಿ

Team Newsnap
2 Min Read

ತಮಿಳುನಾಡು ರಾಜ್ಯ ಕೈಗೊಂಡಿರುವ ನೀರಾವರಿ ಯೋಜನೆಗಳಿಂದ ಕರ್ನಾಟಕ ರಾಜ್ಯಕ್ಕೆ ಮಾರಕವಾಗಿದೆ. ಕಾವೇರಿ ನದಿ ವಿಷಯದಲ್ಲಿ ತಮಿಳುನಾಡು ರಾಜ್ಯದ ಧೋರಣೆ, ಕಿರುಕುಳಗಳು ಶತಮಾನದಿಂದ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ. ಕಾವೇರಿ ನದಿ ವಿಷಯದಲ್ಲಿ ಆಳವಾದ ಜ್ಞಾನ ಹೊಂದಿರುವ ತಾವು ಕರ್ನಾಟಕ ರಾಜ್ಯಕ್ಕೆ ನ್ಯಾಯ ದೊರಕಿಸಿ ಕೊಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ರೈತಸಂಘದ ನಾಯಕಿ ಸುನಂದ ಜಯರಾಮ್ ನೇತೃತ್ವದಲ್ಲಿ ರೈತಸಂಘದ ಮುಖಂಡರು ಮನವಿ ಸಲ್ಲಿಸಿದರು.

26 PND P2

ರೈತಸಂಘದ ಸುನಂದಾ ಜಯರಾಮ್ ನೇತೃತ್ವದಲ್ಲಿ ರೈತಸಂಘದ ಮುಖಂಡರು ಸಮಾರಂಭದ ವೇದಿಕೆಯಲ್ಲಿ ಆಸೀನ ರಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಮನವಿ ಸಲ್ಲಿಸಿ, ಕಾವೇರಿ ನದಿ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ತುಂಬಾ ಅನ್ಯಾಯ ಆಗುತ್ತಿದೆ. ತಮಿಳುನಾಡು ರಾಜ್ಯ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡುವುದು ಚರಿತ್ರೆ ಆಗಿಬಿಟ್ಟಿದೆ. ೧೯೯೦ರಲ್ಲಿ ನ್ಯಾಯ ಮಂಡಳಿ ರಚಿತವಾಗಿ ೨೦೦೭ರಲ್ಲಿ ನ್ಯಾಯ ಮಂಡಳಿ ಅಂತಿಮ ತೀರ್ಪು ನೀಡಿದೆ. ೨೦೧೮ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯ ಮಂಡಳಿಯ ತೀರ್ಪನ್ನು ಮಾರ್ಪಡಿಸಿ ತೀರ್ಪು ನೀಡಿದೆ. ತೀರ್ಪಿನಂತೆ ಕರ್ನಾಟಕ ರಾಜ್ಯ ಸರ್ಕಾರ ತನ್ನ ಪಾಲಿನ ನೀರಿನಿಂದ ನೀರಾವರಿ, ಕುಡಿಯುವ ನೀರಿನ ಯೋಜನೆಗಳಿಗೆ ಮೇಕೆದಾಟು ಮತ್ತು ಮಾರ್ಕಂಡೇಯ ಯೋಜನೆಗಳನ್ನು ಪ್ರಾರಂಭ ಮಾಡಲು ಯೋಜನೆ ರೂಪಿಸಿತ್ತು. ಇದಕ್ಕೆ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಆಕ್ಷೇಪಣೆ ಸಲ್ಲಿಸಿದೆ. ಆದರೆ ತಮಿಳುನಾಡು ರಾಜ್ಯ ಇದೀಗ ತನ್ನ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ೧೪ ಸಾವಿರ ಕೋಟಿ ರೂ ವೆಚ್ಚದ ನದಿ ಜೋಡಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುತ್ತಿರುವುದು ಕರ್ನಾಟಕ ಯೋಜನೆಗಳಿಗೆ ನೀರು ಒದಗಿಸದಂತೆ ತಡೆ ಮಾಡುವ ಹುನ್ನಾರ ಆಗಿರುತ್ತದೆ‌ ಎಂದು ಹೇಳಿದ್ದಾರೆ.

ಕಾವೇರಿ ನದಿ ಹಾಗೂ ಕಾವೇರಿ ನೀರಿನ ಬಗ್ಗೆ ಆಳವಾಗಿ ಜ್ಞಾನವುಳ್ಳವರಾಗಿರುವ ತಾವು, ಕರ್ನಾಟಕ ರಾಜ್ಯಕ್ಕೆ ನ್ಯಾಯ ಸಿಗುವಂತೆ ಸಂಸತ್‌ನಲ್ಲಿ ಹೋರಾಟ ನಡೆಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ಕಾವೇರಿ ವಿಚಾರದಲ್ಲಿ ಕರ್ನಾಟಕ ರಾಜ್ಯದ ಪರ ಹೋರಾಟ ಮಾಡೇ ಮಾಡ್ತೀನಿ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು, ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸೇರಿದಂತೆ ಅನೇಕ ಗಣ್ಯರಿದ್ದರು.

Share This Article
Leave a comment