ಗ್ಯಾರಂಟಿ ಯೋಜನೆಗಳ ವಿವರ : ಅನುಷ್ಠಾನಗಳ ಮಾರ್ಗ ಸೂಚಿ

Team Newsnap
2 Min Read

ಸರ್ಕಾರ ಘೋಷಿಸಿರುವ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವ ನಿಧಿ ಯೋಜನೆಗಳ ಅನುಷ್ಠಾನ ಕುರಿತು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ವಿವರ ಹೀಗಿದೆ.

ಗೃಹ ಜ್ಯೋತಿ

ಪ್ರಣಾಳಿಕೆಯಲ್ಲಿ ಘೋಷಿಸಿದ 200 ಯುನಿಟ್‌ ವರೆಗೆ ಉಚಿತ ವಿದ್ಯುತ್‌ ಒದಗಿಸಲು ಸಚಿವ ಸಂಪುಟ ತೀರ್ಮಾನಿಸಿತು. ಈ ಯೋಜನೆಯಡಿ ಬಳಕೆದಾರರ ಕಳೆದ 12 ತಿಂಗಳ ವಿದ್ಯುತ್‌ ಬಳಕೆಯ ಸರಾಸರಿಯ ಮೇಲಿನ ಶೇ.10 ರಷ್ಟು ಉಚಿತ ವಿದ್ಯುತ್‌ ಒದಗಿಸಲಾಗುವುದು. ಜುಲೈ 1 ರಿಂದ ಬಳಕೆಯಾಗುವ ವಿದ್ಯುತ್‌ ಗೆ ಈ ಯೋಜನೆ ಅನ್ವಯವಾಗುತ್ತದೆ. ಅಲ್ಲಿಯ ವರೆಗಿನ ವಿದ್ಯುತ್‌ ಬಳಕೆಗೆ ಸಂಬಂಧಿಸಿದ ಬಿಲ್ಲನ್ನು ಬಳಕೆದಾರರು ಪಾವತಿಸಬೇಕು. ಆಗಸ್ಟ್ ತಿಂಗಳಿನಿಂದ ಈ ಯೋಜನೆಯ ಫಲಾನುಭವಿಗಳು ವಿದ್ಯುತ್ ಬಿಲ್ ಕಟ್ಟಬೇಕಿಲ್ಲ ಎಂದು ಸಿದ್ದರಾಮಯ್ಯ ಅವರು ಘೋಷಿಸಿದರು.

ಗೃಹ ಲಕ್ಷ್ಮಿ

ರಾಜ್ಯದಲ್ಲಿರುವ ಬಿಪಿಎಲ್‌ ಹಾಗೂ ಎಪಿಎಲ್‌ ಕುಟುಂಬಗಳ ಯಜಮಾನಿಯ ಖಾತೆಗೆ ಮಾಸಿಕ 2000 ರೂ. ಮೊತ್ತ ವರ್ಗಾವಣೆ ಮಾಡಲಾಗುವುದು. ಈ ಯೋಜನೆಯ ಸೌಲಭ್ಯ ಪಡೆಯಲು ಮಹಿಳೆಯರು ಅರ್ಜಿ ಸಲ್ಲಿಸಬೇಕು. ಇದರಲ್ಲಿ ಮನೆಯ ಯಜಮಾನಿ ಯಾರು ಎಂಬುದನ್ನು ಘೋಷಿಸಬೇಕು, ಬ್ಯಾಂಕ್‌ ಖಾತೆ ಸಂಖ್ಯೆ, ಆಧಾರ್‌ ಸಂಖ್ಯೆ ಮಾಹಿತಿ ಒದಗಿಸಬೇಕು. ಜೂನ್‌ 15 ರಿಂದ ಜುಲೈ 15 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು.

ಜುಲೈ 15 ರಿಂದ ಆಗಸ್ಟ್‌ 15ರ ಅವಧಿಯಲ್ಲಿ ಅರ್ಜಿಗಳನ್ನು ಪರಿಶೀಲಿಸಿ, ಅಗತ್ಯ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿ, ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನಾಚರಣೆಯ ದಿನ ಈ ಯೋಜನೆಗೆ ಚಾಲನೆ ನೀಡಲಾಗುವುದು.

ಅನ್ನ ಭಾಗ್ಯ

ಹಿಂದಿನ ತಮ್ಮ ಸರ್ಕಾರದ ಅವಧಿಯಲ್ಲಿ ನೀಡಲಾಗುತ್ತಿದ್ದ 7 ಕೆಜಿ ಆಹಾರ ಧಾನ್ಯವನ್ನು ಬಿಜೆಪಿ ಸರ್ಕಾರವು 5 ಕೆಜಿಗೆ ಇಳಿಸಿದೆ. ಇದೀಗ ಆಹಾರಧಾನ್ಯದ ಪ್ರಮಾಣವನ್ನು 10 ಕೆಜಿಗೆ ಹೆಚ್ಚಿಸಲಾಗುವುದು. ಜೂನ್‌ ತಿಂಗಳ ಪಡಿತರ ವಿತರಣೆ ಪ್ರಕ್ರಿಯೆ ಪ್ರಾರಂಭವಾಗಿರುವುದರಿಂದ ಹಾಗೂ ಆಹಾರ ಧಾನ್ಯ ಖರೀದಿಸಬೇಕಾಗಿರುವುದರಿಂದ ಜುಲೈ 1 ರಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು. ಅಂತ್ಯೋದಯ ಕಾರ್ಡುದಾರರು ಹಾಗೂ ಬಿಪಿಎಲ್‌ ಕಾರ್ಡುದಾರರಿಗೆ ಈ ಯೋಜನೆ ಸೌಲಭ್ಯ ದೊರೆಯಲಿದೆ.

ಶಕ್ತಿ

ವಿದ್ಯಾರ್ಥಿನಿಯರೂ ಸೇರಿದಂತೆ ಎಲ್ಲ ವರ್ಗಗಳ ಮಹಿಳೆಯರಿಗೆ ಎಸಿ ಹಾಗೂ ಲಕ್ಷುರಿ ಬಸ್‌ಗಳನ್ನು ಹೊರತುಪಡಿಸಿ ಇತರ ಎಲ್ಲ ಬಸ್‌ಗಳಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗುವುದು. ಜೂನ್‌ 11 ರಿಂದ ಈ ಯೋಜನೆಗೆ ಚಾಲನೆ ನೀಡಲಾಗುವುದು. ಈ ಯೋಜನೆಯು ಶೇ. 94 ರಷ್ಟು ಮಹಿಳಾ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ. ಬಸ್‌ಗಳಲ್ಲಿ ಶೇ. 50 ರಷ್ಟು ಸೀಟುಗಳನ್ನು ಪುರುಷರಿಗೆ ಮೀಸಲಿರಿಸಲಾಗುವುದು.

ಶೇ 94 ರಷ್ಟು ಉಚಿತ

ಐಷಾರಾಮಿ ಮತ್ತು ಎಸಿ ಹಾಗೂ ಸ್ಲೀಪಿಂಗ್ ಬಸ್ ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬಸ್ ಗಳಲ್ಲೂ ಮಹಿಳೆಯರು ಉಚಿತವಾಗಿ ಓಡಾಡಲು ಅವಕಾಶ ಕೊಟ್ಟಿರುವುದರಿಂದ ಶೇ 94 ರಷ್ಟು ಬಸ್ ಗಳಲ್ಲಿ ಉಚಿತ ಅನುಕೂಲ ಒದಗಿಸಿದಂತಾಗಿದೆ.

ತೃತೀಯ ಲಿಂಗಿಗಳಿಗೂ ಉಚಿತ:

ಉಚಿತ ಬಸ್ ಪ್ರಯಣದ ಸವಲತ್ತನ್ನು ತೃತೀತ ಲಿಂಗಿಗಳಿಗೂ ಒದಗಿಸಲಾಗಿದೆ.

ಯುವನಿಧಿ

2022-23ನೇ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಕೋರ್ಸುಗಳೂ ಸೇರಿದಂತೆ ಎಲ್ಲ ವಿಧದ ಪದವೀಧರ ಯುವಕ-ಯುವತಿಯರು, ಡಿಪ್ಲೊಮಾ ಹೊಂದಿದವರಿಗೆ ಈ ಯೋಜನೆ ಅನ್ವಯಿಸುತ್ತದೆ. ಪದವಿ ಪಡೆದು 180 ದಿನಗಳಾದರೂ ಉದ್ಯೋಗ ದೊರೆಯದ ಪದವೀಧರರಿಗೆ 24 ತಿಂಗಳ ಅವಧಿಗೆ ಮಾಸಿಕ 3000 ರೂ. ಹಾಗೂ ಡಿಪ್ಲೊಮಾದಾರರಿಗೆ ಮಾಸಿಕ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬೇಕಾಗಿದ್ದು, ಲಿಂಗತ್ವ ಅಲ್ಪಸಂಖ್ಯಾತರಿಗೂ ಈ ಸೌಲಭ್ಯ ಒದಗಿಸಲಾಗುವುದು.

Share This Article
Leave a comment