ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹುದ್ದೆ ಬಿಜೆಪಿ ಪಾಲು: ಜೆಡಿಎಸ್ ಗೆ ಉಪಾಧ್ಯಕ್ಷ ಸ್ಥಾನ – ಸಿ ಅಶ್ವತ್ಥ ಅಫೆಕ್ಸ್ ಬ್ಯಾಂಕ್ ಗೆ ?

Team Newsnap
4 Min Read
  1. ಬೆಂಗಳೂರಿನಲ್ಲಿ ಉದ್ಯಮಿ, ಮಂಡ್ಯ ಮೂಲದ ಗೂಳುರು ದೊಡ್ಡಿ ಸಿ. ಪಿ‌‌. ಉಮೇಶ್‌ ಗೆ ಸರ್ಕಾರಿ ನಾಮಿನಿಯಾಗಿ ಸಿಎಂ ನೇಮಕ
  2. ಇದುವರೆಗೂ ಡಿಸಿಸಿ ಬ್ಯಾಂಕ್ ನಾಮಿನಿಯಾಗಿದ್ದ ಸಾಸಲು ನಾಗೇಶ್ ನೇಮಕ ರದ್ದು
  3. ಡಿಸಿಸಿ ಬ್ಯಾಂಕ್ ಅಧ್ಯಕ್ಷ ‌ಸ್ಥಾನ ಉಮೇಶ್ ಆಯ್ಕೆ ಸಾಧ್ಯತೆ.
  4. ಜೆಡಿಎಸ್ ಗೆ ಉಪಾಧ್ಯಕ್ಷ ಸ್ಥಾನ
  5. ಒಪ್ಪಂದದಂತೆ ಅಮರಾವತಿ ಸಿ. ಅಶ್ವತ್ಥ ಅಫೆಕ್ಸ್ ಬ್ಯಾಂಕ್ ನಿರ್ದೇಶಕ ಹುದ್ದೆ
  6. ಬಿಜೆಪಿ – ಜೆಡಿಎಸ್ ಮೈತ್ರಿ ಮಂಡ್ಯ ದಿಂದಲೇ ಆರಂಭ. ಯಡಿಯೂರಪ್ಪ, ‌ಕುಮಾರಸ್ವಾಮಿ ಈಗ ಕುಚ್- ಕುಚ್
Karnataka

ಮಂಡ್ಯ ಜಿಲ್ಲೆಯ ರಾಜಕೀಯ ಅಂದರೆ ಅದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆ. ಈ ಜಿಲ್ಲೆಯ ಪಾಲಿಟಿಕ್ಸ್ ಅಷ್ಟರ ಮಟ್ಟಿಗೆ ಪ್ರಸಿದ್ದಿಯಾಗಿದೆ. ಇದೀಗ  ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದೆ. ಅಧಿಕಾರಕ್ಕಾಗಿ ಮತ್ತೆ ಪಾಲಿಟಿಕ್ಸ್ ಶುರುವಾಗಿದೆ. 

ಎಂಡಿಸಿಸಿ ಬ್ಯಾಂಕ್ ನಲ್ಲಿ ಅಧಿಕಾರ ಹಿಡಿಯುಲು 12 ರಲ್ಲಿ 8 ಸ್ಥಾನ ಗೆದ್ದ ಕಾಂಗ್ರೆಸ್ ಶತಾಗತ ಪ್ರಯತ್ನ ಮಾಡುತ್ತಿದ್ದರೆ, ಜೆಡಿಎಸ್ ಪಕ್ಷ ಕಾಂಗ್ರೆಸ್ ಗೆ ಅಧಿಕಾರ ತಪ್ಪಿಸಲು ಬಿಜೆಪಿ ಜೊತೆ ಸೇರಿ ಗದ್ದುಗೆ ಏರಲು ರಣತಂತ್ರ ರೂಪಿಸಿದೆ.

ಹೌದು, ಮಂಡ್ಯದಲ್ಲಿ ಡಿಸಿಸಿ ಬ್ಯಾಂಕ್ ನ ಅಧಿಕಾರ ಗದ್ದುಗೆಗಾಗಿ ಮೂರು ಪಕ್ಷಗಳ ಹೋರಾಟ ಶುರುವಾಗಿದೆ‌. ಇದೇ ತಿಂಗಳ ನ. 6ರಂದು ಮಂಡ್ಯದ ಡಿಸಿಸಿ ಬ್ಯಾಂಕ್  ನ 12 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 8 ಸದಸ್ಯರು ಆಯ್ಕೆಯಾದರೆ 4 ರಲ್ಲಿ ಜೆಡಿಎಸ್ ಬೆಂಬಲಿತರು ಆಯ್ಕೆಯಾಗಿದ್ದರು.

ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಗೆ 12 ನಿರ್ದೇಶಕ ಮತಗಳ ಜೊತೆ 1 ನಾಮಿನಿ ನಿರ್ದೇಶಕನ ಮತ, 1 ಜಿಲ್ಲಾ ರಿಜಿಸ್ಟ್ರಾರ್ _ಮತ ಹಾಗೂ 1 ಅಪೆಕ್ಸ್ ಪ್ರತಿನಿಧಿ ಮತಗಳು ಸೇರಿ 15 ಮತಗಳ ಮತದಾನದ ಹಕ್ಕು ಹೊಂದಿವೆ . ಅಧಿಕಾರ ಹಿಡಿಯಲು 8 ಮತಗಳ ಅವಶ್ಯಕತೆ ಇದೆ .
ಮೇಲ್ನೋಟಕ್ಕೆ 8 ನಿರ್ದೇಶಕರನ್ನು ಗೆದ್ದಿರುವ ಕಾಂಗ್ರೆಸ್ ಪಕ್ಷ ಸ್ಪಷ್ಟ ಮೇಲುಗೈ ಸಾಧಿಸಿದೆ. ಆದರೆ ಕಾಂಗ್ರೆಸ್ ಬೆಂಬಲಿತ ಓರ್ವ ಸದಸ್ಯ ಸಿ. ಅಶ್ವಥ್ ಜೆಡಿಎಸ್ ನ ಕುಮಾರಸ್ವಾಮಿ ಸಂಪರ್ಕಕ್ಕೆ ಬಂದು. ಜೆಡಿಎಸ್ ಸದಸ್ಯರ ಜೊತೆ ಟೂರ್ ಮುಗಿಸಿಕೊಂಡು ನಾಳೆ ಬೆಳಿಗ್ಗೆ ಮಂಡ್ಯಕ್ಕೆ ಬರಲಿದ್ದಾರೆ. ಅಶ್ವತ್ಥ ನಡೆ ನಿರ್ಧಾರ ಗಳು ಕಾಂಗ್ರೆಸ್ ಪಕ್ಷದ ತಲೆನೋವಿಗೆ ಕಾರಣವಾಗಿದೆ.

dcc bank

ನರೇಂದ್ರ ಸ್ವಾಮಿ ಕನಸು – ನಿರೀಕ್ಷೆ:

ಕಾಂಗ್ರೆಸ್ ಮಾಜಿ ಸಚಿವ ಪಿ.ನರೇಂದ್ರಸ್ವಾಮಿ ನೇತೃತ್ವದಲ್ಲಿ ಡಿಸಿಸಿ  ಬ್ಯಾಂಕ್ ನ ಅಧಿಕಾರ ಹಿಡಿಯಲು ಸ್ವತಃ ಚುನಾವಣೆಗೆ ನಿಂತು ಗೆದ್ದು ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದ್ದರು. ನರೇಂದ್ರ ಸ್ವಾಮಿ ತಮ್ಮ ಪಕ್ಷದ ಬೆಂಬಲಿತರನ್ನು ಹಿಡಿದಿಟ್ಟುಕೊಂಡು  ಶತ ಪ್ರಯತ್ನ‌ ಮಾಡ್ತಿದ್ದಾರೆ. ಅಲ್ಲದೆ ಅಫೆಕ್ಸ್ ಬ್ಯಾಂಕ್ ನಿರ್ದೇಶಕ ರಾಗುವ ಬಯಕೆ ಹೊಂದಿದ್ದರು. ಅವರ ನಿರೀಕ್ಷೆ, ಕನಸುಗಳು ಏನಾಗುತ್ತವೆ ಎನ್ನುವುದನ್ನು ಕಾದು ನೋಡಬೇಕು.

ಜೆಡಿಎಸ್‌ ರಣ‌ತಂತ್ರ- ಬಿಜೆಪಿ ಸಾಥ್:

ಇತ್ತ 4 ಸ್ಥಾನ ಗೆದ್ದ ಜೆಡಿಎಸ್  ಕಾಂಗ್ರೆಸ್ ಪಕ್ಷ ದ ಓರ್ವ ಸದಸ್ಯನನ್ನು ಸೆಳೆದು ತಾನೂ ಕೂಡ ಅಧಿಕಾರ  ಹಿಡಿಯಲು ಭಾರೀ ತಂತ್ರಗಾರಿಕೆಯನ್ನೇ ರೂಪಿಸಿದೆ. ಬಿಜೆಪಿ ಪಕ್ಷದೊಂದಿಗೆ ಕೈ ಜೋಡಿಸಿ  ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗ ಮಾಡಲು ನಿರ್ಧರಿಸಿದೆ.

ಜೆಡಿಎಸ್ ಪಕ್ಷದ ಮಾಜಿ ಸಚಿವ ಪುಟ್ಟರಾಜು ಮೂಲಕ ಮಾಜಿ ಸಿ.ಎಂ ಕುಮಾರಸ್ವಾಮಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಸಂಪರ್ಕಮಾಡಿ ಆ ಭಾರೀ ತಂತ್ರಗಾರಿಕೆಯನ್ನು ವರ್ಕೌಟ್ ಮಾಡಲು ಪ್ಲ್ಯಾನ್ ಸಿದ್ದಪಡಿಸಿದ್ದಾರೆ. ತಮ್ಮ 4 ಸದಸ್ಯರ ಜೊತೆ  ಪಕ್ಷದ ಮುಖಂಡರ ಜೊತೆ ಸಂಪರ್ಕದಲ್ಲಿರುವ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಸಿ.ಅಶ್ವಥ್ ಅವರನ್ನು ಸೇರಿಸಿಕೊಂಡು ಸರ್ಕಾರದ ನಾಮಿನಿ ನಿರ್ದೇಶಕನ ಮತ, 1ಜಿಲ್ಲಾ ರಿಜಿಸ್ಟ್ರಾರ್ ಮತ ಹಾಗೂ 1 ಅಪೆಕ್ಸ್ ಪ್ರತಿನಿಧಿ ಮತಗಳ ಮೂಲಕ ಅಧಿಕಾರದ ಗದ್ದುಗೆ ಏರುವ ಪ್ರಯತ್ನಕ್ಕೆ ಕೈ ಹಾಕಿದೆ.

ಇದಕ್ಕಾಗಿ ಈಗಾಗಲೇ ಮಾಜಿ ಸಿಎಂ ಎಚ್​ಡಿಕೆ ಅವರು ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದಾರೆ. ಸಿಎಂ ಕೂಡ ಒಪ್ಪಿಗೆ ಸೂಚಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ 8 ಸ್ಥಾನ ಗೆದ್ದರು ತಮ್ಮ ಪಕ್ಷದ ನಿರ್ದೇಶಕ ಸಿ.ಅಶ್ವಥ್ ನಡೆಯಿಂದಾಗಿ ಇದೀಗ ಆತಂಕಕ್ಕೆ ಒಳಗಾಗಿದೆ.

ಪ್ರತಿಷ್ಠೆಯ ಪ್ರಶ್ನೆ

ಇದೀಗ ಡಿಸಿಸಿ ಬ್ಯಾಂಕ್ ನ ಅಧಿಕಾರ ಗದ್ದುಗೆ ಹಿಡಿಯಲು ಎರಡು ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರೆ, ಇವೆರಡರ ಮಧ್ಯೆ ಬಿಜೆಪಿ ಕೂಡ ಇದರ ಲಾಭ ತೆಗೆದುಕೊಳ್ಳಲು‌ ಮುಂದಾಗಿ‌ದೆ. ಬಿಜೆಪಿ ಪಕ್ಷಕ್ಕೆ ತಳಮಟ್ಟದ ಪಕ್ಷ ಸಂಘಟನೆಗೆ ಅವಕಾಶ ಸಿಗುವ ಕಾರಣದಿಂದ ಜೆಡಿಎಸ್ ಪಕ್ಷದ ಜೊತೆ ಕೈ ಜೋಡಿಸಲು ಮುಂದಾಗಿದೆ ಎಂದು ಹೇಳಲಾಗ್ತಿದೆ. ಅದಕ್ಕಾಗಿ ಹಾಲಿ ಇದ್ದ ಜಿಲ್ಲಾ ರಿಜಿಸ್ಟಾರ್ ಅವರನ್ನು ಎತ್ತಂಗಡಿ ಮಾಡಿ ತಮಗೆ ಬೇಕಾಗಿರುವ ವ್ಯಕ್ತಿಯನ್ನು ಪ್ರಭಾರಿಯಾಗಿ ನೇಮಿಸಿಕೊಂಡಿದ್ದು, ಉದ್ಯಮಿ ಸಿ ಪಿ ಉಮೇಶ್ ಅವರನ್ನು ಸರ್ಕಾರ ನಾಮ ನಿರ್ದೇಶನ ಮಾಡಿದೆ.

ಸಂಸದೆ ಮೂಲಕ ಸಂಧಾನಕ್ಕೆ

ಆದರೆ ಜೆಡಿಎಸ್ ಈ ತಂತ್ರಗಾರಿಕೆ ಅರಿತ ಜಿಲ್ಲೆಯ ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಇದೀಗ ಸಂಸದೆ ಸುಮಲತಾ ಮೂಲಕ ತಮ್ಮ ದಾಳ ಉರುಳಿಸಿದ್ದು, ಸಿ.ಎಂ. ಜೊತೆ ಮಾತುಕತೆ ಮೂಲಕ ಸಂಧಾನ ಮಾಡಿಸ್ತಿದ್ದಾರೆ‌ ಅನ್ನೋ ಮಾತುಗಳ ಕೂಡ ಕೇಳಿ ಬರುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಆಯಾ ಪಕ್ಷದ ನಿರ್ದೇಶಕರನ್ನು ಮುಖಂಡರು ಅಜ್ಞಾತ ಸ್ಥಳದಲ್ಲಿರಿಸಿ ಹಿಡಿದಿಟ್ಟುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಗುಳೂರ್ ದೊಡ್ಡಿ ಪಿ.ಸಿ ಉಮೇಶ್ ರವರನ್ನು ನೇಮಕ ಮಾಡಿರುವುದು ಜಿಲ್ಲಾ ಬಿಜೆಪಿಗೆ ಅಚ್ಛರಿಯ ಹೆಸರಾಗಿದೆ.

ಸಿ.ಅಶ್ವತ್ಥ್ ರವರನ್ನು ಅಫೆಕ್ಸ್ ಬ್ಯಾಂಕ್ ನ ನಿರ್ದೇಶಕರಾಗಿ ನೇಮಕ ಮಾಡಿ, ಜೆಡಿಎಸ್ ಪಕ್ಷದ ನಾಲ್ಕು ಸದಸ್ಯರಲ್ಲಿ ಒಬ್ಬರನ್ನು ಉಪಾಧ್ಯಕ್ಷರಾಗಿ ನೇಮಕ ಮಾಡುವ ಒಡಂಬಡಿಕೆ ಒಪ್ಪಂದ ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ಆಗಿದೆ ಎಂದು ಹೇಳಲಾಗುತ್ತಿದೆ.

ನಾಳೆಯ ಚುನಾವಣೆಯ ವೇಳಾಪಟ್ಟಿ:

ನಾಳೆ ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿರುತ್ತದೆ. 12 ಗಂಟೆಗೆ ಸಭೆ ಆರಂಭವಾಗುತ್ತದೆ. 1 ಗಂಟೆಗೆ ಚುನಾವಣೆ ನಡೆಯಲಿದೆ.
ಒಟ್ಟಾರೆ ನಾಳೆ ನಡೆಯಲಿರುವ ಮಂಡ್ಯ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಭಾರೀ ಕುತೂಹಲ ಮೂಡಿಸಿದ್ದು, ಮಂಡ್ಯ ಡಿಸಿಸಿ ಬ್ಯಾಂಕ್ ನ  ಅಧ್ಯಕ್ಷ ಯಾರಾಗಲಿದ್ದಾರೆ? ಅಧಿಕಾರ ಗದ್ದುಗೆ ಯಾರ ಪಾಲಾಗಲಿದೆ ಅನ್ನೋದು ನಾಳೆ  ನಿರ್ಧಾರವಾಗಲಿದೆ.

Share This Article
Leave a comment