ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ ಐದು ದಿನಗಳ ತಿಂಗಳ ಪೂಜೆಗಳು ನಡೆಯಲಿದೆ. ಕೋವಿಡ್ ನಡುವೆಯೂ ಈ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ಅನುಮತಿ ನೀಡಲಾಗಿದೆ ಎಂದು ತ್ರವಂಕೋರ್ ದೇವಸ್ವಂ ಬೋರ್ಡ್ (ಟಿಡಿಬಿ) ತಿಳಿಸಿದೆ.
ಈಗಾಗಲೇ ವರ್ಚುವಲ್ ಕ್ಯೂ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಿಕೊಂಡ ಭಕ್ತರಿಗೆ ಮಾತ್ರ ಪಂಬ ಬೇಸ್ ಕ್ಯಾಂಪ್ನಿಂದ ಶಬರಿಮಲೆ ಬೆಟ್ಟವನ್ನು ಏರಿ, ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಲಾಗುವುದು. ಒಂದು ದಿನಕ್ಕೆ 250 ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
ಈ ಬಾರಿ ಭಕ್ತರು ಪಂಬ ನದಿಯಲ್ಲಿ ಸ್ನಾನ ಮಾಡುವಂತಿಲ್ಲ. ಅದರ ಬದಲಾಗಿ ಪಂಬ ಮತ್ತು ಏರುಮಲೈನಲ್ಲಿ ಶವರ್ ಏರ್ಪಾಡು ಮಾಡಲಾಗುತ್ತದೆ. ಅದರ ಕೆಳಗೆ ನಿಂತು ಸ್ನಾನ ಮಾಡಿದ ಬಳಿಕ ಭಕ್ತರು ಬೆಟ್ಟ ಹತ್ತಬಹುದು.
ಪೂಜಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಸೇರಿದಂತೆ ಅಗತ್ಯ ಇರುವ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆ. ಇಂದಿನಿಂದ ಅಕ್ಟೋಬರ್ 21ರವರೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ.
ಇಂದು ಕೇರಳ ಸಶಸ್ತ್ರ ಪೊಲೀಸ್ ಪಡೆ (ಕೆಎಪಿ)ಯ ಐದನೇ ಬೆಟಾಲಿಯನ್ ಕಮಾಂಡೆಂಟ್ ಕೆ. ರಾಧಾಕೃಷ್ಣನ್ ದೇಗುಲಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದ್ದಾರೆ.
ಇಂದು ಕೊರೋನಾ ನೆಗೆಟಿವ್ ಸರ್ಟಿಫಿಕೆಟ್ ಕಡ್ಡಾಯವಾಗಿದೆ. ನವೆಂಬರ್ 16ರಿಂದ ಶಬರಿಮಲೆಯಲ್ಲಿ ವಾರ್ಷಿಕ ಯಾತ್ರೆ ಆರಂಭವಾಗಲಿದೆ.
ಕೊರೋನಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಬಾರಿ 10 ವರ್ಷದೊಳಗಿನ ಮತ್ತು 60 ವರ್ಷ ಮೇಲ್ಪಟ್ಟವರಿಗೆ ದೇಗುಲದಲ್ಲಿ ನಡೆಯುವ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ.
ಪ್ರತಿವರ್ಷ ನವೆಂಬರ್ ತಿಂಗಳಿನಿಂದ 2 ತಿಂಗಳು ಶಬರಿಮಲೆಯಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಮಾಲೆ ಹಾಕಿದ ಭಕ್ತರು ಶಬರಿಮಲೆಗೆ ಯಾತ್ರೆ ಕೈಗೊಂಡು, ದರ್ಶನ ಪಡೆಯುತ್ತಾರೆ. ಇರುಮುಡಿ ಹೊತ್ತು ಈ ದೇವಸ್ಥಾನಕ್ಕೆ ತೆರಳುವುದು ಅಷ್ಟು ಸುಲಭವಲ್ಲ. ಮುಂದಿನ ತಿಂಗಳ ವಾರ್ಷಿಕ ಯಾತ್ರೆಯ ಮಾರ್ಗಸೂಚಿಗಳ ಬಗ್ಗೆ ಇನ್ನೂ ಚರ್ಚೆಗಳಾಗುತ್ತಿವೆ. ಇಂದಿನಿಂದ 5 ದಿನ ಶಬರಿಮಲೆಯಲ್ಲಿ ದರ್ಶನ ಪಡೆಯುವ ಭಕ್ತರು ನೀಲಕ್ಕಲ್ ಕ್ಯಾಂಪ್ನಲ್ಲಿ ರ್ಯಾಪಿಡ್ ಕೊರೋನಾ ತಪಾಸಣೆ ಮಾಡಿಸಿಕೊಳ್ಳಬೇಕು. ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್ ಬಂದರೆ ಅವರಿಗೆ ದರ್ಶನಕ್ಕೆ ಅವಕಾಶವಿಲ್ಲ.
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ