ಕ್ರಿಕೆಟ್…ಬ್ರಹ್ಮಾ – ಅಲ್ಲಾ ಮ್ಯಾಚ್ ಫಿಕ್ಸಿಂಗ್….ಮುಗುಚಿ ಬಿದ್ದ ಮಾಧ್ಯಮಗಳ ವಿವೇಚನೆ…..
ಪಾಕಿಸ್ತಾನದ ಬಾಲ್,
ಭಾರತದ ಬ್ಯಾಟ್,
ಹಿಂದೂ ಧರ್ಮದ ಪಿಚ್,
ಇಸ್ಲಾಂ ಧರ್ಮದ ಅಂಪೈರ್,
ಮನುಷ್ಯರೆಂಬ ಮೃಗ ಪ್ರೇಕ್ಷಕರು……….
ಕ್ರೀಡೆ ಎಂಬುದು ಮನುಷ್ಯನ ಆಸಕ್ತಿ, ಸಾಮರ್ಥ್ಯ, ದೈಹಿಕ ರಚನೆ, ಅಭ್ಯಾಸ, ತಂತ್ರಜ್ಞಾನ, ಕ್ರೀಡಾ ಸೌಕರ್ಯಗಳು, ಮಾನಸಿಕ ದೃಢತೆ, ಆ ಕ್ಷಣದ ಅನುಕೂಲಗಳ ಬಳಕೆ, ವಾತಾವರಣ ಮತ್ತು ಈ ಎಲ್ಲಾ ಪ್ರಯತ್ನಗಳ ನಂತರ ಸ್ವಲ್ಪಮಟ್ಟಿಗೆ ಸಣ್ಣ ಮಟ್ಟದ ಅದೃಷ್ಟ ಎಲ್ಲವನ್ನೂ ಒಳಗೊಂಡಿರುತ್ತದೆ…..
ಕ್ರೀಡೆಗೆ ಜಾತಿ ಧರ್ಮ ದೇಶ ಭಾಷೆಗಳ ಅರಿವು ಇರುವುದಿಲ್ಲ. ಸಾಮಾನ್ಯವಾಗಿ ಬಲಿಷ್ಠರು ದುರ್ಬಲರ ವಿರುದ್ಧ ಜಯಗಳಿಸುತ್ತಾರೆ…..
ಅದು ಯಾರೇ ಆಗಿರಲಿ ಯಾವ ದೇಶದವರೇ ಆಗಿರಲಿ ಯಾವ ಧರ್ಮದವರೇ ಆಗಿರಲಿ ಯಾವ ಭಾಷೆಯವರೇ ಆಗಿರಲಿ ಅದು ಮುಖ್ಯವಾಗುವುದಿಲ್ಲ. ಕ್ರೀಡಾ ಪರಿಕರಗಳಿಗೆ ಇವುಗಳ ಹಂಗಿಲ್ಲ.
ಯಾರ ವಿರುದ್ಧ ಎಷ್ಟೇ ಕೋಪ ಇರಲಿ ಅಥವಾ ಪ್ರೀತಿಯೇ ಇರಲಿ, ಹುರಿದುಂಬಿಸುವವರ ಸಂಖ್ಯೆ ಎಷ್ಟೇ ಇರಲಿ ಅದು ಫಲಿತಾಂಶಗಳ ಮೇಲೆ ಪರಿಣಾಮ ಬೀರುವುದು ತುಂಬಾ ಕಡಿಮೆ…..
ಕ್ರೀಡೆ ಎಂಬುದು ಒಂದು ಸ್ಪರ್ಧೆ. ಮನುಷ್ಯನ ಮನರಂಜನೆಯ ಮತ್ತು ಸಾಮರ್ಥ್ಯ ಪ್ರದರ್ಶನದ ಒಂದು ಮೂಲವೂ ಹೌದು…..
ಆದರೆ ಈ ಆಧುನಿಕ ಜಗತ್ತಿನ ದ್ವೇಷ ಅಸೂಯೆ ಅಜ್ಞಾನಗಳಿಂದ ತುಂಬಿದ ಮನುಷ್ಯ ಅತ್ಯಂತ ಅನಾಗರಿಕವಾಗಿ ಕ್ರೀಡೆಯನ್ನು ರಾಜಕೀಯವಾಗಿ ಧಾರ್ಮಿಕವಾಗಿ ನೋಡಿ ಅದರ ಈ ಹಿನ್ನಲೆಯಲ್ಲಿ ಫಲಿತಾಂಶ ನಿರೀಕ್ಷಿಸಿ ಸಂಭ್ರಮ ಅಥವಾ ಹತಾಶೆ ವ್ಯಕ್ತಪಡಿಸುತ್ತಿರುವುದು ಅತ್ಯಂತ ನಾಚಿಕೆಗೇಡು ಮತ್ತು ಬೌದ್ದಿಕ ದಿವಾಳಿತನದ ಸಂಕೇತ…….
ಬಾಂಗ್ಲಾದೇಶ ಪಾಕಿಸ್ತಾನ ಕಾಶ್ಮೀರ ಹಿಂದೂಗಳ ಹತ್ಯೆ ತಡೆಯಲಾಗದ ಬ್ರಹ್ಮ ಆಫ್ಘಾನಿಸ್ತಾನ ಇರಾಕ್ ಬರ್ಮಾ ಭಾರತದ ಮುಸ್ಲಿಂಮರ ಹತ್ಯೆ ತಡೆಯಲಾಗದ ಅಲ್ಲಾ, ಕ್ರಿಕೆಟ್ ನಲ್ಲಿ ಆಯಾ ಧರ್ಮದ ದೇಶದ ಪರವಾಗಿ ಗೆಲುವಿನ ಫಲಿತಾಂಶ ನೀಡುತ್ತಾರೆ ಎಂದು ನಿರೀಕ್ಷಿಸುವುದು ಮತ್ತು ಅದನ್ನು ಮಾಧ್ಯಮಗಳು ವಿಜೃಂಭಿಸುವುದು ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು.
ಫಾರ್ಮುಲಾ ಒನ್ ರೇಸ್ ನಲ್ಲಿ ಮೈಕೆಲ್ ಶೂಮೇಕರ್ ಮತ್ತು ಲೂಯಿಸ್ ಹ್ಯಾಮಿಲ್ಟನ್, ಕ್ರಿಕೆಟ್ ನಲ್ಲಿ ಡೊನಾಲ್ಡ್ ಬ್ರಾಡ್ಮನ್ ಮತ್ತು ಸಚಿನ್ ತೆಂಡೂಲ್ಕರ್, ಪುಟ್ಬಾಲ್ ನಲ್ಲಿ ಪೀಲೆ ಮತ್ತು ಮರಡೋನ, ಹಾಕಿಯಲ್ಲಿ ಧ್ಯಾನ್ ಚಂದ್, ಟೆನಿಸ್ ನಲ್ಲಿ ಫೆಡರರ್, ನಡಾಲ್, ಜೋಕೋವಿಕ್, ಚೆಸ್ ನಲ್ಲಿ ಕಾರ್ಪೋವ್ ಕ್ಯಾಸ್ಪರೊವ್ ವಿಶ್ವನಾಥ್ ಆನಂದ್ ಕಾರ್ಲ್ ಸನ್, ಕಡಿಮೆ ಅಂತರದ ಓಟದಲ್ಲಿ ಜೆಸ್ಸಿ ಒವೆನ್ಸ್, ಕಾರ್ಲ್ ಲೂಯಿಸ್, ಉಸೇನ್ ಬೋಲ್ಟ್, ಜಿಮ್ನಾಸ್ಟಿಕ್ಸ್ ನಲ್ಲಿ ನಾಡಿಯಾ ಕೊಮೇನಿ, ಬ್ಯಾಸ್ಕೆಟ್ ಬಾಲ್ ನಲ್ಲಿ ಮೈಕೆಲ್ ಜೋರ್ಡಾನ್, ಬಾಕ್ಸಿಂಗ್ ನಲ್ಲಿ ಮಹಮ್ಮದ್ ಅಲಿ, ಗಾಲ್ಫ್ ನಲ್ಲಿ ಟೈಗರ್ ವುಡ್ಸ್ ಹೀಗೆ ಅನೇಕ ಕ್ರೀಡೆಗಳಲ್ಲಿ ಗರಿಷ್ಠ ಪ್ರಮಾಣದ ಸಾಮರ್ಥ್ಯ ತೋರಿರುವ ಆಟಗಾರರು ಬೇರೆ ಬೇರೆ ದೇಶದ ಬೇರೆ ಬೇರೆ ಧರ್ಮದ ಆಟಗಾರರಿದ್ದಾರೆ.
ಆದರೆ ಈ ಮೂರ್ಖ ಮಾಧ್ಯಮಗಳು ಕೇವಲ ಸುದ್ದಿ ಮಾಡಬೇಕು ಮತ್ತು ಜನರಲ್ಲಿ ಕುತೂಹಲ ಕೆರಳಿಸಬೇಕು ಎಂಬ ಕಾರಣದಿಂದ ಯಾರೋ ಕೆಲವು ಅತಿರೇಕದ ಪುಂಡರು ಭಾರತ ಅಥವಾ ಪಾಕಿಸ್ತಾನದ ಪರವಾಗಿ ಜೈಕಾರ ಹಾಕುವುದನ್ನೇ ಒಂದು ಯುದ್ಧ ಎಂಬಂತೆ ಚಿತ್ರಿಸಿ ಆ ರೀತಿಯ ಜನರ ಅಜ್ಞಾನದ ಕುಂಡಕ್ಕೆ ತುಪ್ಪ ಸುರಿದು ಬೆಂಕಿ ಹಚ್ಚುತ್ತಾರೆ. ಅದು ಧಗಧಗನೆ ಉರಿಯುವಾಗ ಇವರು ಅದರಲ್ಲಿ ಲಾಭ ಮಾಡಿಕೊಳ್ಳುತ್ತಾರೆ….
ಜನರನ್ನು ವೈಚಾರಿಕ ತಳಹದಿಯ ಮೇಲೆ, ವಿಶಾಲ ಮನೋಭಾವದ ನಾಗರಿಕರಾಗಿ ರೂಪಿಸುವ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಿಸಬೇಕಾದ ಟಿವಿ ಸುದ್ದಿ ವಾಹಿನಿಗಳು ಇಷ್ಟೊಂದು ಕೆಳ ಹಂತಕ್ಕೆ ಇಳಿದಿರುವುದು ತುಂಬಾ ಕಳವಳಕಾರಿ ಬೆಳವಣಿಗೆ.
ಕ್ರೀಡೆಯಲ್ಲಿ ಇರುವುದು ಸಾಮಾನ್ಯವಾಗಿ ಡ್ರಾ ಹೊರತುಪಡಿಸಿ ಎರಡೇ ಫಲಿತಾಂಶ. ಸೋಲು ಅಥವಾ ಗೆಲುವು. ಇದು ಸಹ ಶಾಶ್ವತವಲ್ಲ. ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ.
ಭಾರತವೆಂಬ ದೇಶ ಅನೇಕ ಕಾರಣಗಳಿಂದ ಧರ್ಮದ ಆಧಾರದ ಮೇಲೆ ಭಾರತ ಮತ್ತು ಪಾಕಿಸ್ತಾನ ಎಂದು ವಿಭಜನೆಯಾಯಿತು ಮತ್ತು ಅದೇ ಕಾರಣಕ್ಕಾಗಿ ಈಗಲೂ ಒಬ್ಬರಿಗೊಬ್ಬರು ಶತೃಗಳಾಗಿ ದ್ವೇಷ ಕಾರುತ್ತಿದ್ದಾರೆ. ರಾಜಕೀಯ ಲಾಭಗಳ ಲೆಕ್ಕಾಚಾರದಲ್ಲಿ ಎಲ್ಲವೂ ನಿರ್ಧರಿಸಲ್ಪಡುತ್ತದೆ. ಅದರ ಮುಂದುವರಿದ ಭಾಗವೇ ಈ ಕ್ರಿಕೆಟ್ ನ ಅತಿರೇಕದ ವರ್ತನೆ.
ದಯವಿಟ್ಟು ಇನ್ನು ಮುಂದಾದರು ಕ್ರೀಡೆಯನ್ನು ಕ್ರೀಡೆಯಾಗಿ ಆ ಕ್ಷಣದ ಒಂದು ಪ್ರತಿಕ್ರಿಯೆಯಾಗಿ ಅನುಭವಿಸೋಣ.
ಕ್ರೀಡೆಯಲ್ಲಿ
” ಗೆದ್ದವರ ಸಂಭ್ರಮ ಸೋತವರ ಅಪ್ಪಗೆಯಲ್ಲಿ ಕೊನೆಯಾಗಲಿ “
ನಾಗರಿಕ ಸಮಾಜದ ನಿರೀಕ್ಷೆಯಲ್ಲಿ……..
ವಿವೇಕಾನಂದ ಹೆಚ್ ಕೆ
- ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
- ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
More Stories
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!
ಹೆಂಗರುಳೇ ಕಲ್ಲಾದರೆ ನುಡಿವುದೇನು(ಬ್ಯಾಂಕರ್ಸ್ ಡೈರಿ)