45 ವರ್ಷ ಮೇಲ್ಪಟ್ಟವರಿಗೂ ಇಂದಿನಿಂದ ಕೋವಿಡ್ ಲಸಿಕೆ ಹಾಕುವ ಅಭಿಯಾನ – ಡಾ. ಪದ್ಮ‌

Team Newsnap
2 Min Read

ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲು ಆರೋಗ್ಯ ಇಲಾಖೆಯಿಂದ ಸಿದ್ದತೆ ಮಾಡಿಕೊಳ್ಳಲಾಗಿದ್ದು, ತಪ್ಪದೇ ಲಸಿಕೆ ಪಡೆದುಕೊಳ್ಳುವಂತೆ ಜಿಲ್ಲಾ ಆರ್.ಸಿ. ಹೆಚ್ ಅಧಿಕಾರಿ ಡಾ; ಪದ್ಮ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದಿಗೆ ಜಿಲ್ಲೆಯಲ್ಲಿ 47 ಸಕ್ರಿಯ ಪ್ರಕರಣಗಳು ಇದೆ.ಕೋವಿಡ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು. ಯಾವುದೇ ವದಂತಿಗಳಿಗೆ ಕಿವಿಕೊಡಬೇಡಿ. ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಕೋವಿಡ್ ಲಸಿಕೆ ಪಡೆದು ಕೋವಿಡ್ ಹೋರಾಟದಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಏಪ್ರಿಲ್ ಮಾಹೆಯಲ್ಲಿ 45 ವರ್ಷ ಮೇಲ್ಪಟ್ಟ 309929 ಜನರಿಗೆ ಲಸಿಕೆ ನೀಡಲಾಗುವುದು . ಈ ಯೋಜನೆಗೆ ಅನುಗುಣವಾಗಿ ಆರೋಗ್ಯ ಇಲಾಖೆಯಲ್ಲಿ ಈಗಾಗಲೇ 88000 ಡೋಸ್ ( ಒಂದು ವಾರ ಕೋವಿಡ್ ಲಸಿಕೆ ನೀಡಲು) ಲಸಿಕೆ ಲಭ್ಯವಿದೆ‌. ಮುಂದಿನ ದಿನಕ್ಕೂ ಬೇಡಿಕೆ ಅನುಗುಣವಾಗಿ ಲಸಿಕೆಯನ್ನು ಕೇಂದ್ರದಿಂದ ಪಡೆದುಕೊಳ್ಳಲಾಗುವುದು ಎಂದರು.

18 ವರ್ಷ ಮೇಲ್ಪಟ್ಟ ಕೆ.ಎಸ್.ಆರ್.ಟಿಸಿ ಹಾಗೂ ಅಂಚೆ ಇಲಾಖೆ ನೌಕರರನ್ನು ಫ್ರಂಟ್ ಲೈನ್ ವರ್ಕರರ್ಸ್ ಎಂದು ಪರಿಗಣಿಸಿ ಏಪ್ರಿಲ್ 2 ರಿಂದ ಲಸಿಕೆ ನೀಡಲಾಗುತ್ತಿದ್ದು, ಇಲಾಖೆಯಿಂದ ನೀಡಲಾಗಿರುವ ಗುರುತಿನ ಚೀಟಿ ಹಾಜರುಪಡಿಸಿ ಲಸಿಕೆ ಪಡೆದುಕೊಳ್ಳಿ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮಾಚ್೯ ಅಂತ್ಯದವರೆಗೂ 76 ಕೋವಿಡ್ ಲಸಿಕಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿತ್ತು, ಏಪ್ರಿಲ್‌ 1 ರಿಂದ ಆರೋಗ್ಯ ಇಲಾಖೆಯ ವ್ಯಾಪ್ತಿಗೆ ಬರುವ 252 ಸಬ್ ಸೆಂಟರ್ ಗಳಲ್ಲಿ ವೈದ್ಯರ ಲಭ್ಯತೆಯ ಮೇಲೆ ವೇಳಪಟ್ಟಿ ಮಾಡಿಕೊಂಡು ಆಯ್ದ ಸಬ್ ಸೆಂಟರ್ ಗಳಲ್ಲೂ ಸಹ ಕೋವಿಡ್ ಲಸಿಕೆ ನೀಡಲಾಗುವುದು. ಏಪ್ರಿಲ್ 1 ರಂದು 102 ಲಸಿಕಾ ಕೇಂದ್ರಗಳು ಕಾರ್ಯನಿರ್ವಹಿಸಿದೆ‌ ಮುಂದಿನ ದಿನಗಳಲ್ಲಿ ಅಗತ್ಯತೆಗೆ ಅನುಗುಣವಾಗಿ ಹೆಚ್ಚಳ ಮಾಡಲಾಗುವುದು ಎಂದರು.

ಲಸಿಕೆ ಪಡೆದುಕೊಳ್ಳಲು ಬರುವವರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಕುಡಿಯುವ ನೀರು ಸೇರಿ ಮೂಲಭೂತ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ ಎಂದರು.

ಜಿಲ್ಲೆಯಲ್ಲಿರುವ ಎಲ್ಲಾ ಪ್ರಾಥಿಮಕ ಆರೋಗ್ಯ ಕೇಂದ್ರದಲ್ಲಿ ಸರಾಸರಿ ಪ್ರತಿ ದಿನ 128 ಜನರು ಲಸಿಕೆ ಪಡೆದುಕೊಂಡರೆ ಏಪ್ರಿಲ್ ಮಾಹೆಯಲ್ಲಿ ನಿಗಧಿಪಡಿಸಿರುವ ಗುರಿಯನ್ನು ಸಾಧಿಸಬಹುದು. 45 ವರ್ಷ ಮೇಲ್ಪಟ್ಟು ವಯಸ್ಸಿಗೆ ಸಂಬಂಧಿಸಿದಂತೆ ಆಧಾರ್ ಕಾಡ್೯ ಹಾಗೂ ಮೊಬೈಲ್ ಸಂಖ್ಯೆ ವಿವರ ಸಲ್ಲಿಸಿ ಕೋವಿಡ್ ಲಸಿಕೆ ಪಡೆದುಕೊಳ್ಳಿ ಎಂದು ತಿಳಿಸಿದ್ದಾರೆ.

Share This Article
Leave a comment