ಬೆಂಗಳೂರು.
ಕೊರೊನಾ ನಿರ್ವಹಣೆ ಎಂದರೆ ಸರ್ಕಾರದ ಕರ್ತವ್ಯ. ಸರ್ಕಾರ ಎಂದರೆ ಅಧಿಕಾರಿಗಳು. ಅದರಲ್ಲೂ ಐಎಎಸ್ ಅಧಿಕಾರಿಗಳು ಎಲ್ಲ ಕೆಲಸವನ್ನು ನೋಡಿಕೊಳ್ಳುತ್ತಾರೆ. ಶಿಕ್ಷಣವಿರಲಿ, ಆರೋಗ್ಯ ಇರಲಿ ಎಲ್ಲದ್ದಕ್ಕೂ ಐಎಎಸ್ ಅಧಿಕಾರಿಗಳದೇ ಅಂತಿಮ ಮಾತು. ಇದು ನಮಗೆ ಬ್ರಿಟಿಷರಿಂದ ಬಂದ ಬಳುವಳಿ.
ಆಗಿನ ಕಾಲದಲ್ಲಿ ಕಂದಾಯ ಮತ್ತು ಪೊಲೀಸ್ ಪ್ರಮುಖ ಖಾತೆಯಾಗಿತ್ತು. ಅದಕ್ಕಾಗಿ ಐಸಿಎಸ್ ಅಧಿಕಾರಿಗಳ ಪಡೆಯನ್ನು ಕಟ್ಟಲಾಯಿತು. ಅದೇ ಪೀಳಿಗೆಗಳು ಈಗಿನ ಐಎಎಸ್ ಮತ್ತು ಐಪಿಎಸ್.
ಅವರಿಗೆ ತರಬೇತಿ ಕೊಡುವುದು ಕಂದಾಯ ಮತ್ತು ಪೊಲೀಸ್ ಇಲಾಖೆಯಲ್ಲೇ. ಅವರಿಗೆ ಇತರ ಇಲಾಖೆಗಳ ಪರಿಚಯ ಇರುವುದಿಲ್ಲ. ಅದರಲ್ಲೂ ಇತಿಹಾಸ, ರಾಜಕೀಯ ಶಾಸ್ತ್ರ, ತತ್ವಶಾಸ್ತ್ರ ಓದಿ ಐಎಎಸ್ ಓದಿದ ಅಧಿಕಾರಿ ಆರೋಗ್ಯ ಇಲಾಖೆ ಮುಖ್ಯಸ್ಥರಾಗಿ ಹಿರಿಯ ವೈದ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ಎಂಬಿಬಿಎಸ್ ಮಾಡಿ ಐಎಎಸ್ ಪಾಸಾದವರೂ ಇರುತ್ತಾರೆ. ಅವರಿಗೆ ಪ್ರಾಥಮಿಕ ಜ್ಞಾನ ಇರುತ್ತದೆ. ಅವರನ್ನು ಹೊರತುಪಡಿಸಿದರೆ ಉಳಿದವರಿಗೆ ಯಾವ ಜ್ಞಾನವೂ ಇರುವುದಿಲ್ಲ.
ಈ ಐ ಎ ಎಸ್ ಹೇಳುವುದನ್ನು ವೈದ್ಯರು ಕೇಳಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ರೋಗ ಗೊತ್ತಿಲ್ಲದವರು ಚಿಕಿತ್ಸೆ ಹೀಗೆ ಕೊಡಿ ಎಂದು ಹೇಳಿದಂತೆ. ಅಧಿಕಾರ ಅವರ ಕೈಯಲ್ಲಿ ಇರುವುದರಿಂದ ವೈದ್ಯರು ಗೊತ್ತಿದ್ದರೂ ಮೌನವಹಿಸುತ್ತಾರೆ. ಈಗಿನ ಕಾಲದಲ್ಲಿ ಎಂಬಿಎ ಮಾಡಿದವರು ಸರ್ಕಾರಕ್ಕೆ ಸಲಹೆಗಾರರಾಗುತ್ತಿದ್ದಾರೆ. ವೈದ್ಯರಿಗೆ ಆಡಳಿತ ತರಬೇತಿ ನೀಡಿದರೆ ಅವರೇ ವೈದ್ಯಕೀಯ ಇಲಾಖೆ ನೋಡಿಕೊಳ್ಳುತ್ತಾರೆ. ಐಎಎಸ್ ಅಧಿಕಾರಿ ಬೇಕಿಲ್ಲ.
ಇಂದಿನ ದಿನಗಳಲ್ಲಿ ವೈದ್ಯ ರಂಗ ಬಹಳ ಸಂಕೀರ್ಣವಾಗುತ್ತಿದೆ. ವೈದ್ಯರಿಗೇ ಅರ್ಥವಾಗುವುದು ಕಷ್ಟವಾಗಿರುವಾಗ ಐಎಎಸ್ ಅಧಿಕಾರಿ ಒಂದೇ ದಿನದಲ್ಲಿ ಎಲ್ಲವನ್ನೂ ಓದಿ ತಿಳಿದುಕೊಳ್ಳಲು ಸಾಧ್ಯ ಎಂದು ಸರ್ಕಾರ ಭಾವಿಸಿದ್ದರೆ ಅದು ಕೇವಲ ಭ್ರಮೆ. ಉಳಿದ ದೇಶಗಳಲ್ಲಿ ವೈದ್ಯರ ಮಾತನ್ನು ತಳ್ಳಿ ಹಾಕುವುದಿಲ್ಲ.
ಗಾಜಿನ ಅರಮನೆಗಳಿಂದ ಸರ್ಕಾರದ ರಾಯಭಾರಿಗಳಾಗಿ ಅಧಿಕಾರಿಗಳು ಕೊರೊನಾ ರೋಗಿಗಳನ್ನು ಶುಶ್ರೂಷೆ ಮಾಡುತ್ತಿರುವ ವೈದ್ಯರು ಹಾಗೂ ಸಿಬ್ಬಂದಿ ವರ್ಗದ ಮೇಲೆ ಒತ್ತಡವನ್ನು ಹೇರುವ ಅಸಹ್ಯವಾದ ಪದ್ಧತಿ ಈಗ ಎಲ್ಲಕಡೆ ಕಾಣಬರುತ್ತಿದೆ. ಕೊರೊನಾ ರೋಗಕ್ಕೆ ಲಕ್ಷಣಗಳು ಪರೀಕ್ಷೆ ಹಾಗೂ ಚಿಕಿತ್ಸೆಯ ಸಾಧಕ ಭಾದಕಗಳು ದಿನಕ್ಕೊಮ್ಮೆ ವಾರಕ್ಕೊಮ್ಮೆ ಬದಲಾಗುತ್ತಿರುವ ಸಮಯದಲ್ಲಿ ತಮ್ಮ ಮನೆಯವರನ್ನು ಮಕ್ಕಳನ್ನು ಈ ಮಹಾಮಾರಿಯ ಅಂಚಿನಿಂದ ದೂರವಿಡಲು ಪ್ರಯತ್ನಿಸುತ್ತಿರುವ ವೈದ್ಯರು ಮೊದಲೇ ಒತ್ತಡದಲ್ಲಿರುತ್ತಾರೆ.
` ಕೊರೊನಾ ಎಂದರೆ ಭಯ’ ಎಂದು ಹೇಳುವ ರೋಗಿಯನ್ನು ಅಭಯ ಹಸ್ತದಿಂದ ತಮ್ಮ ಜ್ಞಾನದ ಆಧಾರದ ಮೇಲೆ ಪ್ರಾಣದ ಹಂಗು ತೊರೆದು ಚಿಕಿತ್ಸೆ ನೀಡುವ ವೈದ್ಯನಿಗೆ ಹಿಂದೆಂದೂ ಆಸ್ಪತ್ರೆ ಮುಖವನ್ನೂ ಸಹಾ ನೋಡದ ಅಧಿಕಾರಿ ಹೀಗೆ ಮಾಡಿ ಹಾಗೆ ಮಾಡಿ ಎಂದು ನಿರ್ದೇಶನ ನೀಡುವುದು ಎಷ್ಟು ಉಚಿತ ಹಾಗೂ ಸೂಕ್ತ. ಕೊರೊನಾ ಡ್ಯೂಟಿ ಮಾಡಬಾರದೆಂದು ಕೊರೊನಾ ಪಾಸಿಟಿವ್ ಆಗಿ ಮನೆಯಲ್ಲೇ ಉಳಿದುಕೊಂಡರೆ ಸಾಕು ಎಂದು ಕಳ್ಳಾಟ ಆಡುವ ವೈದ್ಯರೂ ಇದ್ದಾರೆ. ಆದರ ಜೀವದ ಹಂಗು ತೊರೆದು ಕೆಲಸ ಮಾಡುವ ವೈದ್ಯರ ಮೇಲೆ ದೌರ್ಜನ್ಯ ಮಾಡುವ ಅಧಿಕಾರಿಗಳ ತಪ್ಪಿನ ಮುಂದೆ ವೈದ್ಯರ ತಪ್ಪು ದೊಡ್ಡದೇನಲ್ಲ. ಇಂದು ವೈದ್ಯರ ಬೆಲೆ ಏನು ಎಂಬುದನ್ನು ಅರಿತುಕೊಳ್ಳುವ ಸದವಕಾಶ ಲಭಿಸಿದೆ. ಕೊರೊನಾ ಕರ್ತವ್ಯವನ್ನು ಮಾಡಿ ಪಾಸಿಟಿವ್ ಆಗಿ ತಮ್ಮ ಜೀವವಲ್ಲದೆ ತಮ್ಮ ಕುಟುಂಬದ ಸದಸ್ಯರ ಜೀವನನ್ನೂ ಸಹ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ನಮ್ಮ ವೈದ್ಯರು ಯಾವ ಯೋಧರಿಗಿಂತ ಕಡಿಮೆ ಅಲ್ಲ. ಯೋಧನ ಸಾವಿಗೆ ಕಣ್ಣೀರು ಇಡುವ ಆತನ ಪ್ರತಿಮೆ ನಿರ್ಮಿಸುವವವರು. ಆದರೆ ವೈದ್ಯನ ಜೀವಕ್ಕೆ ಇಂದು ಆ ಗೌರವ ಇಲ್ಲ. ಹೀಗಿರಬೇಕಾದರೆ ವೈದ್ಯರು ಮಾತ್ರ ತಮ್ಮ ಧರ್ಮವನ್ನಾದರೂ ಪಾಲಿಸುವ ಅಗತ್ಯವೇನಿದೆ? ಪ್ಯಾಂಡಮಿಕ್ ಆಕ್ಟ್, ಎಪಿಡಮಿಕ್ ಆಕ್ಟ್, ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್ ಎಂಬ ಕಾನೂನುಗಳ ಬಲದ ಮೇಲೆ ಹೊಗಳುವ ನಿರ್ದೇಶನಗಳನ್ನು ಪಾಲಿಸಲೇಬೇಕಾದ ಕರ್ಮ ವೈದ್ಯನದಾಗಿದೆ. ಕೊರೊನಾ ವಾರಿಯರ್ಸ್ ಪ್ರೊಟೆಕ್ಷನ್ ಆಕ್ಟ್ ಎಂಬ ಕಾನೂನನ್ನು ತಂದು ಕೊರೊನಾ ವಿರುದ್ಧ ಹೋರಾಡುತ್ತಿರುವ ಎಲ್ಲರನ್ನೂ ರಕ್ಷಿಸಬೇಕಾದ ಜವಾಬ್ದಾರಿ ಈ ಸಮಾಜದ್ದು ಮತ್ತು ಸರ್ಕಾರದ್ದು. ನಿಮಗೆ ನಿಮ್ಮ ವೈದ್ಯರನ್ನು ಗೌರವದಿಂದ ನೋಡಲು ಆಗದಿದ್ದರೆ ಅವರನ್ನು ಕರೆಮಾಡಿ ಅವರ ಸಲಹೆ ಪಡೆಯುವ ನೈತಿಕ ಹಕ್ಕು ನಿಮಗಿರುವುದಿಲ್ಲ.
ಸಂಕಟ ಬಂದಾಗ ವೆಂಕಟ ರಮಣ ಎಂಬಂತೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ವೈದ್ಯರನ್ನು ಬಳಸಿಕೊಳ್ಳುವ ಕುತಂತ್ರ, ಒಳಿತಲ್ಲ.
ದಿಕ್ಸೂಚಿ ಮಾರ್ಗದರ್ಶಿ ಸೂತ್ರಗಳನ್ನು ನೀಡುತ್ತಿರುವ ಸಂಸ್ಥೆಗಳು ಅದರ ಪಾಲನೆಯ ಜವಾಬ್ದಾರಿಯನ್ನು ನೀಡಿರುವುದು ವೈದ್ಯರಿಗೆ. ಇದನ್ನು ಪಾಲಿಸುವುದು ವೈದ್ಯರ ಕರ್ತವ್ಯ. ಚಿಕಿತ್ಸೆ ನೀಡುವುದು ವೈದ್ಯರ ಧರ್ಮ. ಅವರ ಕೆಲಸದ ವಿಧಾನದಲ್ಲಿ ಅಡ್ಡಿ ಆತಂಕ ಬಾರದಂತೆ ಎಚ್ಚರವಹಿಸುವುದು ಸರ್ಕಾರದ ಕರ್ತವ್ಯ. ಆಸ್ಪತ್ರೆಯಲ್ಲಿ ಬೆಡ್ ಇಲ್ಲ, ಆಮ್ಲಜನಕ ಇಲ್ಲ, ಎಕ್ಸ್ ರೇ ಕ್ಸ್‍ರೇ ಯಂತ್ರ ಇಲ್ಲ ಎಂದು ವೈದ್ಯರನ್ನು ದೂಷಿಸುವುದು ಸರಿಯಲ್ಲ. ಅಧಿಕಾರವನ್ನು ಬಳಸಿಕೊಂಡು ಆಸ್ಪತ್ರೆಯನ್ನು ಸುಸಜ್ಜಿತಗೊಳಿಸುವುದು ಸರ್ಕಾರದ ಕರ್ತವ್ಯ.
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ