ಮತ್ತೆ ವೈರಸ್ ಭೀತಿಯಲ್ಲಿ,
ಮತ್ತೆ ಲಾಕ್ ಡೌನ್ ಭಯದಲ್ಲಿ,
ಮತ್ತೆ ಸಾವಿನ ಹೆದರಿಕೆಯಲ್ಲಿ,
ಮತ್ತೆ ಬದುಕಿನ ಆತಂಕದಲ್ಲಿ,
ಮತ್ತೆ ನಿರಾಸೆಯ ಸನಿಹದಲ್ಲಿ,……
ಆದರೂ….
ಭ್ರಷ್ಟಾಚಾರ ಕಡಿಮೆಯಾಗಿಲ್ಲ,
ಜಾತಿಯ ಅಸಮಾನತೆ ಹೋಗಿಲ್ಲ,
ಪರಿಸರ ನಾಶ ಆಗುತ್ತಲೇ ಇದೆ,
ಆಹಾರ ಕಲಬೆರಕೆ ನಡೆಯುತ್ತಲೇ ಇದೆ,
ಅಧಿಕಾರದ ದಾಹ ಇಳಿಯುತ್ತಲೇ ಇಲ್ಲ,………
ಒಂದು ಕಡೆ ಪ್ರಾಕೃತಿಕ ಸವಾಲುಗಳು,
ಮತ್ತೊಂದು ಕಡೆ ಆಡಳಿತಾತ್ಮಕ ವೈಫಲ್ಯಗಳು,
ಸಾಮಾಜಿಕ ಆರ್ಥಿಕ ಅಸಮಾನತೆಗಳು,
ದೈಹಿಕ ಮಾನಸಿಕ ತಾಕಲಾಟಗಳು, ……..
ಎಲ್ಲವನ್ನೂ ಏಕಕಾಲದಲ್ಲಿ ಎದುರಿಸಬೇಕಾದ ಅಗ್ನಿಪರೀಕ್ಷೆ ಬಂದೊದಗಿದೆ.
21 ನೆಯ ಶತಮಾನದಲ್ಲಿ ಮನುಷ್ಯ,
ಆಧುನಿಕತೆಯ ಅಹಂನಲ್ಲಿ,
ತಂತ್ರಜ್ಞಾನದ ನೆರಳಿನಲ್ಲಿ,
ಹಣ ಅಧಿಕಾರದ ಮೋಹದಲ್ಲಿ,
ಸಂಪರ್ಕ ಕ್ರಾಂತಿಯ ಜಾಲದಲ್ಲಿ…..
ತಾನು ಅತ್ಯಂತ ಸುಖಿ ಮತ್ತು ಇಡೀ ಪ್ರಕೃತಿಯ ಮೇಲೆ ನಿಯಂತ್ರಣ ಹೊಂದಿ ಎಲ್ಲವನ್ನೂ ತನ್ನ ಅಡಿಯಾಳಾಗಿ ಮಾಡಿಕೊಂಡಿದ್ದೇನೆ ಎಂಬ ಭ್ರಮೆ ಮತ್ತು ದುರಹಂಕಾರದಲ್ಲಿ ಮುಳುಗಿದ್ದ. ಗಾಳಿ ನೀರು ಆಹಾರವಷ್ಟೇ ಅಲ್ಲದೇ ಸಮಯವನ್ನು ಹಣದಲ್ಲಿಯೇ ಲೆಕ್ಕ ಹಾಕುವ ಧಾರ್ಷ್ಟ್ಯ ಬೆಳೆಸಿಕೊಂಡ……
ಹಾಲಿಗೆ ಯೂರಿಯಾ,
ನೀರಿಗೆ ರಾಸಾಯನಿಕ,
ಗಾಳಿಗೆ ಹೊಗೆ,
ಆಹಾರದ ಕಲಬೆರಕೆ,
ಶಿಕ್ಷಣ ಆರೋಗ್ಯ ಸಾಹಿತ್ಯ ಸಮಾಜ ಸೇವೆ ದೇವರ ಪೂಜೆಯನ್ನು ದಂಧೆಯಾಗಿ ಮಾಡಿಕೊಂಡ…….
ಆದರೆ ಈಗ ನಿಧಾನವಾಗಿ ಆ ಭ್ರಮೆಯಿಂದ ಹೊರಬರತೊಡಗಿದ್ದಾನೆ.
ತನ್ನ ಮಿತಿಯ ಅರಿವಾಗತೊಡಗಿದೆ.
ಜೊತೆಗೆ ತಾನು ಅಸಹಾಯಕ ಮತ್ತು ಬಲಿಪಶು ಎಂದೂ ಅರ್ಥವಾಗುತ್ತಿದೆ.
ವೈದ್ಯಕೀಯ ವಿಜ್ಞಾನ ಮುಂದುವರಿದಷ್ಟೂ ಅನಾರೋಗ್ಯಗಳು ಹೆಚ್ಚಾಗುತ್ತಾ,
ಶಿಕ್ಷಣ ಕ್ಷೇತ್ರ ಆಧುನಿಕವಾದಷ್ಟೂ ಸಂಕುಚಿತ ಮನೋಭಾವ ಬೆಳೆಯುತ್ತಾ,
ರಸ್ತೆ ವಾಹನಗಳು ಉತ್ತಮವಾದಷ್ಟೂ ಅಪಘಾತಗಳು ಜಾಸ್ತಿಯಾಗುತ್ತಾ,
ಹಣದ ಹರಿವು ಬೆಳೆದಂತೆ ಮೋಸ ವಂಚನೆಗಳು ಹೆಚ್ಚಾಗುತ್ತಾ,
ಮಾಧ್ಯಮಗಳು ಅಭಿವೃದ್ಧಿಯಾದಂತೆ ನಂಬಲನರ್ಹವಾದ ಸುಳ್ಳು ಸುದ್ದಿಗಳು ಹೆಚ್ಚಾಗುತ್ತಾ ಸಾಗುತ್ತಿದೆ.
ಈಗ
ಬದುಕಿನ ಮಾರ್ಗವನ್ನು,
ಬದುಕಿನ ರೀತಿಯನ್ನು,
ಬದುಕಿನ ಗುರಿಯನ್ನು,
ಬದುಕಿನ ಸಾರ್ಥಕತೆಯನ್ನು,….
ಮತ್ತೊಮ್ಮೆ ಪುನರ್ ವಿಮರ್ಶೆಗೆ ಒಳಪಡಿಸಬೇಕಾಗಿದೆ.
ತಾಂತ್ರಿಕ ಪ್ರಗತಿಯೇ ಅಭಿವೃದ್ಧಿ ಎನ್ನಬೇಕೆ ?
ನೆಮ್ಮದಿಯ ಗುಣಮಟ್ಟವನ್ನು ಅಭಿವೃದ್ಧಿ ಎನ್ನಬೇಕೆ ?
ಆರೋಗ್ಯವಂತ ಆಯಸ್ಸಿನ ಅವಧಿಯನ್ನೇ ಅಭಿವೃದ್ಧಿ ಎನ್ನಬೇಕೆ ?
ಹಣ ಅಧಿಕಾರ ಪ್ರಚಾರ ಜನಪ್ರಿಯತೆ ಪಡೆಯುವುದನ್ನೇ ಯಶಸ್ಸು ಎನ್ನಬೇಕೆ ?
ಮಾನವೀಯ ಮೌಲ್ಯಗಳ ಗುಣಮಟ್ಟದ ಆಧಾರವೇ ಅಭಿವೃದ್ಧಿ ಎನ್ನಬೇಕೆ ?…….
ವಿಧಿಯಾಟ –
ದೈವಲೀಲೆ –
ಹಣೆ ಬರಹ –
ಸೃಷ್ಟಿಕರ್ತನ ಮಹಿಮೆ –
ಕರ್ಮಫಲ –
ಮುಂತಾದ ವಾದಗಳ ಅರ್ಥವನ್ನು ಮತ್ತೊಮ್ಮೆ ಆತ್ಮಸಾಕ್ಷಿಗೆ ಒಳಪಡಿಸಬೇಕಿದೆ……
ಒಂದು ವೇಳೆ ಈ ವಿಷಯಗಳನ್ನು ವೈಚಾರಿಕ ಮನೋಭಾವದ ಆಧುನಿಕ ಹಿನ್ನಲೆಯಲ್ಲಿ, ನಮ್ಮ ಸಾಂಸ್ಕೃತಿಕ ವ್ಯಕ್ತಿತ್ವದೊಂದಿಗೆ ಸಮೀಕರಿಸಿ ಉತ್ತರ ಹುಡುಕಿಕೊಳ್ಳುವ ಪ್ರಯತ್ನ ಮಾಡಿದರೆ…..
ಬಹುಶಃ ಸಾವು ಸೋಲು ನೋವು ಭಯ ಆತಂಕ ಒಂದಷ್ಟು ಕಡಿಮೆಯಾಗಿ,
ವೈರಸ್ ದಾಳಿಗಳು,
ಆರ್ಥಿಕ ಸಂಕಷ್ಟಗಳು,
ಹತ್ತಿರದವರ ಸಾವುಗಳು,
ಮಾನಸಿಕ ದೈಹಿಕ ನೋವುಗಳು,
ಬ್ರೇಕಿಂಗ್ ನ್ಯೂಸ್ ಗಳ ಪರಿಣಾಮಗಳು….
ಈ ಎಲ್ಲದರ ನಡುವೆಯೂ
ಮನಸ್ಸಿನಲ್ಲಿ ಒಂದಷ್ಟು ಕಿರುನಗೆ ಮೂಡಬಹುದು.
ಬದುಕು ನಮ್ಮ ನಿರೀಕ್ಷೆಯಂತೆ ಮಾತ್ರ ಇರುವುದಿಲ್ಲ.
ಬದುಕಿನ ನಿರೀಕ್ಷೆಗೆ ನಾವು ಸಹ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ಸರಳ ಸತ್ಯ ಅರ್ಥಮಾಡಿಕೊಂಡರೆ…………
ವಿವೇಕಾನಂದ ಹೆಚ್.ಕೆ.
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
- ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
- ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
- ಶಾಲಾ ಕೊಠಡಿಯಲ್ಲಿ ಯುವತಿಯ ಅತ್ಯಾಚಾರ: ಆರೋಪಿ ಬಂಧನ
- ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು 8.41 ಕೋಟಿ ಚಿನ್ನಾಭರಣ ವಂಚನೆ: ಎಫ್ಐಆರ್ ದಾಖಲು
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ