December 21, 2024

Newsnap Kannada

The World at your finger tips!

corona

source - google credits -elearning

ಕೊರೋನಾ ಆಕ್ರಮಣದ ಭೀತಿ ಇದ್ದೇ ಇದೆ-ಶಾಲಾ ಪುನರಾರಂಭ ಸಧ್ಯಕ್ಕೆ ಬೇಡ : ಡಿಸಿ ತಮ್ಮಣ್ಣ

Spread the love
unnamed
ಡಿಸಿ ತಮ್ಮಣ್ಣ

ಕೊರೋನಾ ಆಕ್ರಮಣದ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರೋಗ ನಿರೋಧಕ ಲಸಿಕೆ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಇಂತಹ ವೇಳೆಯಲ್ಲಿ ಶಾಲೆಗಳನ್ನು ಪುನರಾರಂಭ ಮಾಡಿದರೆ ಶಾಲಾ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ 2020ರ ಡಿಸೆಂಬರ್ ಅಂತ್ಯದವರೆಗೂ ಕೊರೋನಾ ಹಾವಳಿ ನೋಡಿಕೊಂಡು ಶಾಲೆಗಳನ್ನು ಆರಂಭಿಸಬಹುದು. ಒಂದು ವೇಳೆ ಕೊರೋನಾ ಹೆಚ್ಚಾದಲ್ಲಿ ಶೈಕ್ಷಣಿಕ ವರ್ಷವನ್ನೇ ಮುಂದೂಡಿ, 1 ರಿಂದ 8 ನೇ ತರಗತಿಯವರಿಗಿನ ಎಲ್ಲಾ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡುವುದರಲ್ಲಿ ಯಾವುದೇ ತೊಂದರೆ ಎನಿಸಲಾರದು.

ಇದು ಮದ್ದೂರು ಶಾಸಕ, ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಅವರು ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೇಳಿರುವ ಸಲಹೆಗಳಿಗೆ ನೀಡಿರುವ ಉತ್ತರ.

ನಮ್ಮ ದೇಶದಲ್ಲಿ ವಿದ್ಯಾವಂತ, ಸುಸಂಸ್ಕೃತ, ದೇಶ ಪ್ರೇಮಿ ಯುವಕರೇ ಹೆಚ್ಚಿದ್ದಾರೆ. ಇಂದಿನ ಮಕ್ಕಳೇ ಮುಂದಿನ ದೇಶದ ಯುವ ಶಕ್ತಿ. ಆ ಶಕ್ತಿಗೆ ಕೊರೋನಾ ಆಕ್ರಮಣ ಆರಂಭವಾದರೆ ದೇಶದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ನಾವು ಯುವ ಪೀಳಿಗೆಯನ್ನು ಮೊದಲು ಗಟ್ಟಿಗೊಳಿಸುವ ಅಗತ್ಯವಿದೆ. ಕೊರೋನಾ ಸಧ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಮಕ್ಕಳಿಗೆ ಶಾಲೆ ಶಿಕ್ಷಣ ಎಷ್ಟು ಮುಖ್ಯವೋ ಅದಕ್ಕಿಂತ ಜೀವವೂ ಅಷ್ಟೇ ಮುಖ್ಯ. ಈಗ ಶಾಲೆಗಳು ಇಲ್ಲದೇ ಹೋದರೂ ಆನ್ಲೈನ್ ಶಿಕ್ಷಣ ಸಿಗುತ್ತದೆ. ಸಂಕಷ್ಟ ಪರಿಸ್ಥಿತಿಯಲ್ಲಿ ಇವು ಶಿಕ್ಷಣ ಕಲಿಕೆಗೆ ಪೂರಕವಾಗಿವೆ.

  1. ಮೂಲ ಭೂತವಾಗಿ ಶಿಕ್ಷಣ ಪಡೆಯುವ ಅವಧಿಯಲ್ಲಿ ಪ್ರತಿಭಾವಂತ ಮಕ್ಕಳಿಗೆ ಡಬಲ್ ಪ್ರಮೋಷನ್ ಕೊಡುವ ಅಧಿಕಾರ ಶಾಲೆಯ ಮುಖ್ಯೋಪಾಧ್ಯಾಯರಿಗೆ ಇರುತ್ತದೆ. ಪ್ರಾಥಮಿಕ ಶಿಕ್ಷಣ ಮಕ್ಕಳಿಗೆ ಕಡ್ಡಾಯವಾಗಿದೆ. ಮಕ್ಕಳನ್ನು ಪೇಲ್ ಮಾಡಬಾರದೆಂಬ ಕಾನೂನು ಜಾರಿಯಲ್ಲಿದೆ. ಹೀಗಿರುವಾಗ 2020-21ನೇ ಸಾಲಿನ 01 ರಿಂದ 08ನೇ ತರಗತಿಯವರೆಗಿನ ಮಕ್ಕಳಿಗೆ ಮುಂದಿನ ತರಗತಿಗಳಿಗೆ ಪರೀಕ್ಷೆಯಿಲ್ಲದೆ ತೇರ್ಗಡೆ ಮಾಡಲು ಅನುಮತಿಯನ್ನು ಏಕೆ ನೀಡಬಾರದು? ಎಂಬುದು ನನ್ನ ಮೊದಲ ಪ್ರಶ್ನೆ.
  2. ಎರಡನೇ ಪ್ರಶ್ನೆಗೆ ನನ್ನ ಅನಿಸಿಕೆ ಹೀಗಿದೆ. 09ನೇ ತರಗತಿಯಿಂದ 12ನೇ ತರಗತಿಯ ವರೆಗೆ ಡಿಸೆಂಬರ್ ತಿಂಗಳ ನಂತರ ಶಾಲೆಗಳನ್ನು ತಾವು ಈಗಾಗಲೇ ಸೂಚಿಸಿರುವ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಶಾಲೆಗಳನ್ನು ಪ್ರಾರಂಭಿಸಬಹುದು, ಕಾರಣ ಇವರು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಸಾಮಥ್ರ್ಯ ಪಡೆದಿರುತ್ತಾರೆ.
  3. ಇನ್ನೂ ತಮ್ಮ ಮೂರನೇ ಪ್ರಶ್ನೆ: ಸಮುದಾಯ ಹಾಗೂ ಜನ ಪ್ರತಿನಿಧಿಗಳಿಂದ ಶಿಕ್ಷಣ ಇಲಾಖೆಗೆ ಸಹಕಾರದ ಬಗ್ಗೆ ಹೇಳುವುದಾದರೆ ನಾನು 1999ರಲ್ಲಿ ರಾಜಕೀಯ ಪ್ರವೇಶ ಮಾಡಿದ ವರ್ಷದಿಂದಲೇ ನನ್ನ ಕ್ಷೇತ್ರಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದೇನೆ ಹಾಗೂ ಈಗಲೂ ನೀಡುತ್ತಿದ್ದೇನೆ. ಮಕ್ಕಳಿಗೆ ಶಿಕ್ಷಣಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳಾದ ಕೊಠಡಿಗಳು, ಶೌಚಾಲಯ, ಕುಡಿಯುವ ನೀರು, ಕಾಂಪೌಂಡ್ ವ್ಯವಸ್ಥೆಗಳನ್ನು ಮಾಡಿರುತ್ತೇನೆ.
  4. 1999 ರಿಂದ 2020 ರವರೆಗೆ ಮದ್ದೂರು ತಾಲ್ಲೂಕು, ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಹೋಬಳಿಯಲ್ಲಿ 12 ಪ್ರೌಢಶಾಲೆಗಳು, 06 ಪದವಿ ಪೂರ್ವ ಕಾಲೇಜುಗಳು, 06 ವಸತಿಶಾಲೆಗಳು, 02 ಪದವಿ ಕಾಲೇಜುಗಳು, 01 ಐ.ಟಿ.ಐ. ಕಾಲೇಜು, 01 ಜಿ.ಟಿ.ಟಿ.ಸಿ. ಕಾಲೇಜು, 01 ಪೋಸ್ಟ್ ಗ್ರ್ಯಾಜುಯೇಶನ್ ಸೆಂರ್ಟ (ಸ್ನಾತಕೋತ್ತರ ಕೇಂದ್ರ), ಮಂಜೂರು ಮಾಡಿಸಿರುತ್ತೇನೆ. ಎಲ್ಲಾ ಶಾಲೆ, ಕಾಲೇಜುಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಹಾಗೂ ಖಾಸಗಿಯವರಿಂದ ಕಲ್ಪಿಸಿರುತ್ತೇನೆ.
  5. ಇಲ್ಲಿಯವರೆಗೆ ರೌಂಡ್ ಟೇಬಲ್ ಇಂಡಿಯಾದವರ ಸಹಬಾಗಿತ್ವದಲ್ಲಿ ಸುಮಾರು 30 ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. 2019-20ನೇ ಸಾಲಿನಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮೂಲಕ 12 ಹೊಸ ಕೊಠಡಿಗಳು ಹಾಗೂ 3ರು ಕೋಟಿ ವೆಚ್ಚದಲ್ಲಿ ಕಿರ್ಲೊಸ್ಕರ್ ಟೊಯೋಟಾ ಕಂಪನಿ ಎಲ್ಲಾ ಮೂಲಭೂತ ಸೌಕರ್ಯದಿಂದ ಕೂಡಿದ 12 ಕೊಠಡಿಗಳ ಒಂದು ಪ್ರೌಢಶಾಲೆ ಕಟ್ಟಡ ಕಟ್ಟಿಸಿರುತ್ತೇನೆ.
  6. ಹಿಂದುಳಿದ ವರ್ಗದ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಮಕ್ಕಳಿಗೆ ಸಾಕಷ್ಟು ಹಾಸ್ಟೆಲ್ಗಳನ್ನು ಸರ್ಕಾರದ ಅನುದಾನದಲ್ಲಿ ನಿರ್ಮಾಣ ಮಾಡಿಸಿರುತ್ತೇನೆ.
  7. ಭಾರತೀನಗರದಲ್ಲಿ ಸ್ವಂತ 4 ಎಕರೆ ಜಾಗದಲ್ಲಿ 2002 ರಿಂದ ಕನ್ನಡ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ಮಕ್ಕಳಿಗೆ ನಮ್ಮ ಕುಟುಂಬದ ಗಳಿಕೆಯಿಂದ ಸುಮಾರು 3.00 ರು ಕೋಟಿ ರೂಪಾಯಿ ವೆಚ್ಚದಲ್ಲಿ 40 ಕೊಠಡಿಗಳನ್ನು ಕಟ್ಟಿಸಿ 2000 ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
  8. ವರ್ಷಕ್ಕೆ ಸುಮಾರು 12 ಲಕ್ಷ ರೂಪಾಯಿ ವೆಚ್ಚದಲ್ಲಿ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಶಿಕ್ಷಣ ಮಾರ್ಗದರ್ಶಿ ಪತ್ರಿಕೆಗಳನ್ನು ಪ್ರತಿ ಶಾಲೆಗೆ ದಿನನಿತ್ಯ ಸರಬರಾಜು ಮಾಡಿರುತ್ತೇನೆ. ಈ ವೆಚ್ಚವನ್ನು ನನಗೆ ಬರುವ ಸಂಬಳ, ಟಿ.ಎ., ಡಿ.ಎ., ಹಣದಿಂದ ಭರಿಸುತ್ತಿದ್ದೇನೆ.
  9. ಕಳೆದ 14 ವರ್ಷಗಳಿಂದ ಇಲ್ಲಿಯವರೆವಿಗೆ ಮದ್ದೂರು ತಾಲ್ಲೂಕು ಮಂಡ್ಯ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಉಳಿಸಿಕೊಂಡು ಬಂದಿರುತ್ತದೆ.

ಸರ್ಕಾರಿ ಶಾಲೆಗಳು ಹೇಗಿರಬೇಕು?

doctor fight with coronavirus 2019 ncov cartoon character cute doctor attack covid 19 protection against viruses bacteria healthy lifestyle concept isolated white background 83111 625
  1. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಬೇಕಾದರೆ ಶಾಲೆಗಳಿಗೆ ಸುಸಜ್ಜಿತವಾದ ಕೊಠಡಿಗಳು, ಶೌಚಾಲಯ, ಕುಡಿಯುವ ನೀರಿನ ಸೌಕರ್ಯ, ಗ್ರಂಥಾಲಯ,ಲ್ಯಾಬೋರೇಟರಿಗಳಿಂದ ಕೂಡಿರಬೇಕು.
    ಸರ್ಕಾರ ಆರ್.ಟಿ.ಇ. ಯೋಜನೆಯಡಿ ಖಾಸಗಿಯವರಿಗೆ ವರ್ಷಕ್ಕೆ ಕೊಡುತ್ತಿರುವ ಸುಮಾರು 400 ರಿಂದ 500 ಕೋಟಿ ಹಣವನ್ನು ನಿಲ್ಲಿಸಿ, ಈ ಹಣದಿಂದಲೇ ಸರ್ಕಾರಿ ಶಾಲೆಗಳಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಬೇಕು.
  2. ಹಣವಿದ್ದವರು ಖಾಸಗೀ ಕಾನ್ವೆಂಟ್ಗಳಿಗೆ ಎಷ್ಟಾದರೂ ಡೊನೇಶನ್ ನೀಡಿ ಮಕ್ಕಳಿಗೆ ಶಿಕ್ಷಣ ಕೊಡಿಸಲಿ. ಶಿಕ್ಷಕರಿಗೆ 5 ವರ್ಷಕ್ಕೊಮ್ಮೆ ಕನಿಷ್ಠ 03 ರಿಂದ 06 ತಿಂಗಳವರೆಗೆ ಶಿಕ್ಷಣದಲ್ಲಿ ಪರಿಣಿತಿ ಪಡೆಯಲು ಸರ್ಕಾರಿ ವೆಚ್ಚದಲ್ಲಿ ಟ್ರೈನಿಂಗ್ ಕೋರ್ಸ್ಗಳನ್ನು ಏಕೆ ಪ್ರಾರಂಭ ಮಾಡಬಾರದು?

ಭಾರತೀಯ ಸಂಸ್ಕೃತಿ ಸಾರುವ ಪಠ್ಯ ಬೇಕು

ನಾವು ಪುಣ್ಯಕೋಟಿ ಕಥೆ ಕೇಳಿದ್ದೇವೆ. ಶಾಲೆಗಳಲ್ಲಿ ಪುಣ್ಯಕೋಟಿ ಹಾಡು ಹೇಳಿ, ಕಣ್ಣೀರು ಹಾಕಿದ್ದೂ ಉಂಟು. ಗೋವು ವ್ಯಾಘ್ರನಿಗೆ ತನ್ನನ್ನು ಒಪ್ಪಿಸಿಕೊಳ್ಳಲು ಮಾತು ಕೊಟ್ಟು ಮತ್ತೆ ವಾಪಸ್ಸು ಬಂದು ತನ್ನ ಸಹಪಾಠಿಗಳ ಬಳಿ ತನ್ನ ಕಂದನನ್ನು ತಮ್ಮ ಕಂದನಂತೆ ಕಾಣುವಂತೆ ಬೇಡುವ ಬೇಡಿಕೆ, ತನ್ನ ಕಂದನಿಗೆ ನೀಡುವ ಹಿತವಚನ, ಸಹ ಪಾಠಿಗಳು ಮತ್ತೆ ವ್ಯಾಘ್ರದ ಬಳಿಗೆ ಹೋಗಬಾರದೆಂದು ಹೇಳಿದಾಗ ಸತ್ಯ, ಧರ್ಮದ ಬಗ್ಗೆ ಹೇಳುವ ವಿಚಾರ ಹಾಗೂ ಗೋವು ಮನುಷ್ಯರಿಗೆ ಹಾಕುವ ಸವಾಲುಗಳು ಇವು ನಮ್ಮ ಮಕ್ಕಳಿಗೆ ಸತ್ಯ ಧರ್ಮದರ್ಶನ
ಆಗಬೇಕಿದೆ. ಮನುಷ್ಯ ಸಮಾಜ ಮುಖಿಯಾಗಿರಬೇಕು, ಗೋವು ಹಾಕಿದ ಸವಾಲಿನಂತೆ ಸಮಾಜಕ್ಕೆ ನಮ್ಮ ಕೊಡುಗೆ ಏನು? ಎನ್ನುವ ವಿಚಾರ ಎಳೆ ವಯಸ್ಸಿನ ಮಕ್ಕಳಲ್ಲಿ ಅಚ್ಚೊತ್ತಿದರೆ ಅವರು ನಮ್ಮ ಭಾರತೀಯ ಸಂಸ್ಕೃತಿಯನ್ನು ಉಳಿಸುತ್ತಾರೆ ಮತ್ತು ಬೆಳೆಸುತ್ತಾರೆ. ತಮ್ಮ ಅವದಿಯಲ್ಲಿ ಪಠ್ಯ ಕ್ರಮಗಳಲ್ಲೂ ನಮ್ಮ ಸಂಸ್ಕೃತಿಗೆ ಹೊಂದುವ ಪಠ್ಯಕ್ರಮವನ್ನು ಹೊರ ತರಲು ಚಿಂತಿಸಬೇಕು.
ತಾವು ಏಕ ಪಕ್ಷೀಯ ತೀರ್ಮಾನಗಳನ್ನು ತೆಗೆದುಕೊಳ್ಳದೆ ಸಾರ್ವಜನಿಕರ ಹಾಗೂ ಎಲ್ಲಾ ಶಾಸಕರ ಅಭಿಪ್ರಾಯಗಳನ್ನು ಪಡೆದು ತೀರ್ಮಾನ ತೆಗೆದುಕೊಳ್ಳುವ ವಿಚಾರ ತಮ್ಮಂತಹ ಪ್ರಜ್ಞಾವಂತ ಸಚಿವರಿಂದ ಮಾತ್ರ ಸಾಧ್ಯವೆಂದು ಭಾವಿಸಿದ್ದೇನೆ ಎಂದು ಶಾಸಕ ತಮ್ಮಣ್ಣ ಬಹಿರಂಗ ಪತ್ರದಲ್ಲಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!