December 22, 2024

Newsnap Kannada

The World at your finger tips!

dasara

ಕೊರೋನಾ ಭಯದ ನೆರಳಲ್ಲಿ ಮೈಸೂರು ದಸರಾ…?

Spread the love

ವಿಶ್ವವಿಖ್ಯಾತ ನಾಡಹಬ್ಬ ಮೈಸೂರಿನ ಹೆಮ್ಮೆಯ ದಸರಾ ಮಹೋತ್ಸವದ ದಿನಗಳು ಹತ್ತಿರದಲ್ಲೆ ಇದ್ದರೂ, ಸರಕಾರ ಯಾವುದೇ ರೀತಿಯ ನಿರ್ಣಯವನ್ನು ತೆಗೆದುಕೊಳ್ಳದೇ, ಯಾವುದೇ ಆದೇಶ ಹೊರಡಿಸದೇ ಸುಮ್ಮನಾಗಿರುವುದು ಮೈಸೂರಿಗರನ್ನು ಕತ್ತಲಿನಲ್ಲಿಟ್ಟಿದೆ. ಈ ಮುಂಚೆ ನಡೆಯುತ್ತಿದ್ದ ದಸರಾ ವೈಭೋಗ ಈ ವರ್ಷದಲ್ಲಿ ಸಾಧ್ಯವಿಲ್ಲ ಎಂದು ಸರಕಾರಕ್ಕೂ ಹಾಗೂ ಮೈಸೂರು ಭಾಗದ ಜನರಿಗೆ ಚೆನ್ನಾಗಿ ತಿಳಿದಿದ್ದರೂ ಹಲವಾರು ಶತಮಾನಗಳಿಂದ ನಡೆಸಿಕೊಂಡು ಬಂದಂತಹ ಕನ್ನಡ ನಾಡಿನ ಹೆಮ್ಮೆಯೆಂದೇ ಗುರುತಿಸಲ್ಪಡುವ ದಸರಾ ಮಹೋತ್ಸವದ ಬಗ್ಗೆ ಸರಕಾರ ಏನಾದರೊಂದು ನಿರ್ಣಯ ತೆಗೆದುಕೊಂಡು ಮೈಸೂರಿನ ಜನತೆಯ ಮೇಲೆ ಹರಡಿರುವ ಕರಿ ಮೋಡವನ್ನು ಸರಿಸುವ ಕೆಲಸ ಮಾಡುವ ಅಗತ್ಯತೆ ಇದೆ. ಜನರ ಭಾವನೆಗಳಿಗೆ ಸ್ಪಂದಿಸಿ ಗಣೇಶ ಮೂರ್ತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲು ಆದೇಶ ನೀಡಿದ ಸರಕಾರ ಮೈಸೂರು ಹಾಗೂ ಮೈಸೂರು ಜಿಲ್ಲೆಯ ಆರ್ಥಿಕ ಪುನಶ್ಚೇತನಕ್ಕೆ ನಿಯಮಗಳನ್ನು ಜಾರಿ ಮಾಡಿ ದಸರಾ ಉತ್ಸವವನ್ನು ಆಚರಿಸಲು ಅವಕಾಶ ಮಾಡಿಕೊಡಬಹುದಾಗಿದೆ.
ಕೊರೋನಾ ವೈರಾಣುವಿನ ದೆಸೆಯಿಂದ ಮೈಸೂರು ಭಾಗದ ಜನರು ಆರ್ಥಿಕ ಸಂಕಷ್ಟದಿಂದ ತತ್ತರಿಸಿದ್ದು, ದಸರಾ ಉತ್ಸವವನ್ನು ನೆಪವಾಗಿಟ್ಟುಕೊಂಡು ಮೈಸೂರು ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಹೋಟೆಲ್ ಉದ್ಯಮ, ಪ್ರವಾಸೋದ್ಯಮ, ಟ್ರಾವೆಲ್ಸ್ ಉದ್ಯಮಗಳ ಪುನಶ್ಚೇತನಕ್ಕೆ ಇಂಬು ಕೊಟ್ಟು ಅಲ್ಲಿನ ಸಣ್ಣ ವ್ಯಾಪಾರಿಗಳು, ದೊಡ್ಡ ವ್ಯಾಪಾರಿಗಳು ಎಲ್ಲರನ್ನು ಮೇಲೆತ್ತಬಹುದಾಗಿದೆ. ಮೈಸೂರಿನ ಜನರಿಗಷ್ಟೇ ಅಲ್ಲದೇ ಕನ್ನಡ ನಾಡಿನ ಮೂಲೆ ಮೂಲೆಯಿಂದಲೂ ಪರರಾಜ್ಯಗಳಿಂದಲೂ ವಿದೇಶಗಳಿಂದಲೂ ಪ್ರವಾಸಿಗರು ಬಂದು ಮೈಸೂರಿನ ದಸರಾ ಉತ್ಸವವನ್ನು ಮೈಸೂರಿನ ವೈಭೋಗವನ್ನು ಕಣ್ಣುತುಂಬಿಕೊಳ್ಳುವ ಈ ಉತ್ಸವದಲ್ಲಿ ಕಲಾವಿದರು ಹಾಡುಗಾರರು, ತಂತ್ರಜ್ಞರು ಬದುಕು ಕಂಡುಕೊಳ್ಳುವ ಸಾಧ್ಯತೆ ಇದೆ. ಮೃಗಾಲಯದ ಪ್ರಾಣಿಗಳಿಗೆ ಮನುಷ್ಯ ಪ್ರಾಣಿಯನ್ನು ನೋಡುವ ಸೌಭಾಗ್ಯ ದೊರಕಲಿದೆ. ಆರ್ಥಿಕ ಅವಸಾನ, ಯುವ ಜನತೆಯ ನಿರುದ್ಯೋಗ ಸಮಸ್ಯೆಗಳಿಗೆ ಚೈತನ್ಯ ದೊರೆಯಲಿದೆ. ದಸರಾ ಮಹೋತ್ಸವಕ್ಕೆ ಸಿದ್ಧತೆ ಮಾಡುವ ನೂರಾರು ಕಾರ್ಮಿಕರು ಸ್ವಲ್ಪದಿನ ಉಸಿರಾಡುತ್ತಾರೆ.
ದಸರಾ ಹಬ್ಬ ಮೈಸೂರಿಗರ ಪಾಲಿಗೆ ಕೇವಲ ಒಂದು ಹಬ್ಬವಾಗಿ ಉಳಿದಿಲ್ಲ ಅವರ ದೇಹದ ನರನಾಡಿಗಳಲ್ಲಿ ಪ್ರಹರಿಸುತ್ತಿದೆ. ಮೈಸೂರಿಗಾಗಿ ಮೈಸೂರಿನ ಜನರಿಗಾಗಿ ಯದುವಂಶದವರ ಇತಿಹಾಸಕ್ಕಾಗಿ ಸಿ.ಎಂ ಯಡಿಯೂರಪ್ಪನವರು ಮನಸ್ಸು ಮಾಡಬೇಕಷ್ಟೆ. ಅದರ ಸಿದ್ಧತೆಯಲ್ಲಿ ಕೈ ಜೋಡಿಸಲು ನೂರಾರು ಜನ ಹುಮ್ಮಸ್ಸಿನಿಂದ ನಿಂತಿದ್ದಾರೆ ಸರಕಾರದ ಗ್ರೀನ್ ಸಿಗ್ನಲ್‍ಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ನೋಡೋಣ ಏನೇನಾಗುತ್ತೋ ಯಾರಿಗ್ಗೊತ್ತು…?

Copyright © All rights reserved Newsnap | Newsever by AF themes.
error: Content is protected !!