“ಮನವರಿಕೆ” ( ಮಿನಿ ಕಥೆ)

Team Newsnap
5 Min Read
arvind joshi
ಅರವಿಂದ.ಜಿ.ಜೋಷಿ.
ಮೈಸೂರು.

“ಅಮ್ಮಾ… ನನಗೆ ಮನೆ ಸಂಭಾಳಿಸಿ -ಸಂಭಾಳಿಸಿ ಸಾಕಾಗಿದೆ, ನಾನು ತುಂಬಾ ದಣಿದಿದ್ದೇನೆ…. ಇಲ್ಲಿ ನನ್ನ ದಣಿವು ಯಾರ ಕಣ್ಣಿಗೂ ಬೀಳ್ತಿಲ್ಲ.ಕೆಲವು ದಿನಾ ವಿಶ್ರಾಂತಿ ಪಡೆಯ ಬೇಕೆನಿಸಿದೆ ಜೀವಕ್ಕೆ,.. ಅದಕ್ಕೆ ಒಂದೆರಡು ವಾರದ ಮಟ್ಟಿಗೆ ಅಲ್ಲಿಗೆ ಬರೋಣಾ ಅಂತ ಅನ್ಕೊಂಡಿದ್ದೆನೆ, ಬರುವಾಗ ನನ್ನ ಮಕ್ಕಳನ್ನು ಕರ್ಕೊಂಡು ಬರ್ಲಾ? ಅವು ಅಲ್ಲಿಂದಲೇ ಶಾಲೆಗೆ ಹೋಗಿ ಬಂದು ಮಾಡ್ತೇವೆ. ಒಂದೇ ಊರಿನಲ್ಲಿ ತವರು ಮನೆ ಅತ್ತೆ ಮನೆ ಇರೋದ್ರಿಂದ ಇದೊಂದು ಅನಕೂಲ ಅಲ್ವಮ್ಮಾ.. ಹಾಗಂತ ಯೋಚನೆ ಮಾಡ್ತಾಇದ್ದೇನೆ”ಎಂದು ಪಾವನಾ ಫೋನ್ ಮೂಲಕ ತನ್ನ ತಾಯಿಗೆ ಹೇಳಿದಳು.ಅದಕ್ಕೆ ಅವಳ ತಾಯಿ ಪದ್ಮಾವತಮ್ಮ ನವರು
ಆ ಬದಿಯಿಂದ -“ಆಗಲಿ ಮಗಳೇ..ಬಾ. ಅದನ್ನೂ ನನ್ನ ಕೇಳಬೇಕಾ? ಇದು ನಿನ್ನದೇ ಮನೆ ತಾನೆ? ಇಷ್ಟಾ ಬಂದಾಗ ಬಂದು ಹೋಗ್ತಿರು “ಎಂದರು. ಈ ಮಾತನ್ನು ಕೇಳಿಸಿಕೊಂಡ ಪಾವನಾ”ಆಯ್ತಮ್ಮಾ ನಾನು ನಾಳೆನೇ ಬರ್ತೀನಿ” ಎಂದು ಖುಷಿಯಿಂದ ಹೇಳಿದಳು ಪಾವನಾ.ಅದಕ್ಕೆ ಅವಳ ತಾಯಿ ” ಹಾಂ.. ನಾಳೆನೇ ಬಂದು ಬಿಡು ಪುಟ್ಟಾ,ನಾ ನಿನ್ನ ದಾರಿ ಕಾಯ್ತಾ ಇರ್ತೇನೆ,ಈಗ ನಾನು ದೇವಸ್ಥಾನ ಕ್ಕೆ ಹೋಗ್ತಾ ಇದ್ದೇನೆ ” ಎನ್ನುತ್ತ ಪದ್ಮಾವತಮ್ಮ ನವರು ಕಾಲ್ ಕಟ್ ಮಾಡಿದವರು ನೇರವಾಗಿ ಅಡುಗೆ ಮನೆ ಗೆ ಬಂದರು. ಅಲ್ಲಿ ಅಡುಗೆಯ ಸಿದ್ಧತೆಯಲ್ಲಿದ್ದ ಅವರ ಸೊಸೆಗೆ -“ಲಲಿತಾ.. ಇಲ್ಕೇಳು.., ನಾಳೆ ನಿನ್ನ ನಾದಿನಿ ಬರ್ತಿದ್ದಾಳೆ,ನಿನ್ನ ಅಡುಗೆ ಕೆಲಸ ಮುಗ್ದ ಮೇಲೆ ಮಾರ್ಕೇಟ್ ಕಡೆ ಹೋಗಿ ಒಂದಿಷ್ಟು ಹೂವು, ಹಣ್ಣು, ಸ್ವೀಟ್ ತಕ್ಕೊಂಡು ಬಾ ಪಾಪ. ನಮ್ಮ ಪಾವನಾ ಅತ್ತೆ ಮನೇಲಿ ಕತ್ತೆ ಹಾಗೆ ದುಡದ್ರೂ ಯಾರೂ ಆಕೆಯತ್ತ ಧ್ಯಾನನೇ ಕೊಡ್ತಿಲ್ಲವಂತೆ… ಇಲ್ಲಿ ಬಂದ್ರೆ ಆಕೆ ಮನಸ್ಸು ಆರೋಗ್ಯ ಎರಡೂ ಸುಧಾರಿಸತ್ತೆ..”ಎಂದರು.
ತನ್ನ ಅತ್ತೆಯ ಬಾಯಿಯಿಂದ ಇಂತಹ ಮಾತು ಕೇಳುತ್ತಿದ್ದಂತೆಯೇ ಲಲಿತಾಳ ಮುಖ ಕೊಂಚ ಕಳೆಗುಂದಿಂದತಾಯಿತು. ಆಗ ಆಕೆ ಮನದಲ್ಲೇ”ನಿಮಗೆ ನಾನು ದಣಿವಿಲ್ಲದೇ ಕೆಲಸ ಮಾಡುತ್ತಿರುವುದು ಕಣ್ಣಿಗೆ ಕಾಣಲ್ಲ, ನನ್ನ ಪರಿವಾರದವರಿಗೆ ತೊಂದರೆ ಆಗದಿರಲೆಂದು ಹಗಲು ರಾತ್ರಿ ಎನ್ನದೇ ಒಂದೇ ಸಮ ದುಡಿಯುತ್ತಿದ್ದೇನೆ
ನೀವು ನನ್ನ ಬಗ್ಗೆ ಧ್ಯಾನ ಕೊಟ್ಟಿದ್ದೀರಾ? ಕೊಟ್ಟಿದ್ದರೆ ಎಷ್ಟೊ ಚೆನ್ನಾಗಿರುತ್ತಿತ್ತು. ನಿಮ್ಮ ಮಗಳೇನೋ ಮನಸ್ಸಿಗೆ ಬಂದಾಗ ಇಲ್ಲಿ ಬರ್ತಾ ಇರ್ತಾಳೆ… ಆದ್ರೆ ನಾನು ವರ್ಷಕ್ಕೆ ಒಂದು ಸಾರಿ ಅದೂ ಮೂರು ನಾಲ್ಕು ದಿನ ತವರು ಮನೆಗೆ ಹೋಗ್ತೀನಿ


ಎಂದರೆ ಸಾಕು.. ನಿಮಗೆ ಎಲ್ಲಿಲ್ಲದ ಸಮಸ್ಯೆ ಶುರು ಆಗಿ ಬಿಡುತ್ತೆ..,ನಾನು ಒಬ್ಳು ಮನುಷ್ಯಳಲ್ಲವಾ? ನನಗೂ ನನ್ನ ತವರುಮನೆ ಗೆ ಹೋಗಿ ನಾಲ್ಕೈದು ದಿನ ಅವರೊಂದಿಗೆ ಇದ್ದು ಕಷ್ಟ ಸುಖ ಮಾತಾಡಿ ಮನಸ್ಸು ಹಗುರ ನೋಡಿಕೊಳ್ಳಲು
ಅನಿಸಲ್ವಾ?.. ಹೇ ಭಗವಂತಾ ಹೇಗಾದರೂ ಮಾಡಿ ನನ್ನ ಅತ್ತೆಯ ಕಣ್ಣು ತೆರೆಸಿ ಅವರಿಗೆ ನನ್ನ ದಣಿವು ,ಕಷ್ಟ ಅರ್ಥ ವಾಗುವಂತೆ ಮಾಡು “ಎಂದು ನೊಂದ ಮನದಿಂದ ಹೇಳಿಕೊಂಡಳು.
ಅದೇನು ಕಾಕತಾಳಿ ಎನ್ನುವಂತೆ, ಅದೇ ದಿನ ಸಾಯಂಕಾಲ ಪಾವನಾ , ಲಲಿತಾಳಿಗೆ
ಫೋನ್ ಮಾಡಿ , ತನ್ನ ಅತ್ತೆ ತನಗೆ ತವರು ಮನೆಗೆ ಹೋಗುವುದು ಬೇಡಾ ಅಂತ ಅಂತಿದ್ದಾರೆ ಅದನ್ನು ಅಮ್ಮನಿಗೆ ತಿಳಿಸಿ -ಎಂದು ಹೇಳಿದಳು.ಆಗ ಲಲಿತಾ ಈ ವಿಷಯ ತನ್ನ ಅತ್ತೆಗೆ ತಿಳಿಸಿದಾಕ್ಷಣ ಅವರು ಪಾವನಾಳಿಗೆ ಫೋನಾಯಿಸಿ -“ಯಾಕಮ್ಮಾ… ನಿನಗೆ ಇಲ್ಲಿ ಬರೋದಕ್ಕೆ ಬೇಡಾ ಅಂತಾ ಯಾರಂದ್ರು? ಮೊದಲೆಲ್ಲಾ ಈ ರೀತಿ ಮಾಡ್ತಾನೇ ಇರ್ಲಿಲ್ಲ ಆದರೆ ಈ ಬಾರಿ ಏನಂತೆ?..ಎಲ್ಲಿ ನಿನ್ನ ಅತ್ತೆ.. ಅವರಿಗೆ ಫೋನ್ ಕೊಡು, ನಾನು ಮಾತಾಡ್ತೇನೆ “ಎಂದಾಗ ಪಾವನಾ ತನ್ನ ಕೈಯಲ್ಲಿ ಇದ್ದ ಫೋನ್ ನ್ನು ಅತ್ತೆ ಗೆ ಕೊಡುತ್ತ “ಅತ್ತೇ.. ಅಮ್ಮಾ.. ನಿಮ್ಮೊಂದಿಗೆ ಮಾತಾಡ್ತಾರಂತೆ “ಎಂದು ಅವರಿಗೆ ಕೊಟ್ಟಳು.ಫೋನ್ ಪಡೆದ ಪದ್ಮಾವತಮ್ಮ
ನವರು ತಮ್ಮ ಬೀಗಿತ್ತಿಯೊಂದಿಗೆ-“ಹಲೋ ನಮಸ್ಕಾರ ಕಮಲಮ್ಮ.. ನಿಮ್ಮೊಂದಿಗೆ ಸ್ವಲ್ಪ ಮಾತಾಡಬೇಕಿತ್ತು “ಎಂದಾಗ ಆ ಬದಿಯಿಂದ ಕಮಲಮ್ಮ”ನಮಸ್ಕಾರ.. ಪದ್ಮಮ್ಮಾ.. ಚೆನ್ನಾಗಿದ್ದೀರಾ.., ಅದೇನೋ ಮಾತಾಡಬೇಕು ಅಂದ್ರಲ್ಲ ಮಾತಾಡಿ “
ಎಂದು ಹೇಳಿದಾಗ ಈ ಬದಿಯಿಂದ ಪದ್ಮಾವತಮ್ಮ ನವರು -“ನೋಡಿ ಕಮಲಮ್ಮಾ
ನಾಳೆ ನಮ್ಮ ಮನೇಲಿ ಹಬ್ಬ ಇದೆ ಅವಳನ್ನು ಕಳುಹಿಸಿದ್ದರೆ ಚೆನ್ನಾಗಿ ಇರ್ತಿತ್ತು “
ಎಂದಾಗ ಇತ್ತಿಂದ ಪಾವನಳ ಅತ್ತೆ ಕಮಲಮ್ಮ -ನಿಮ್ಮ ಮಗಳು ನಿಮ್ಮ ಮನೆಗೆ ಬಂದು ಹೋಗೊದಕ್ಕೆ ನಮ್ಮ ಅಭ್ಯಂತರ ಏನಿಲ್ಲಾ,.. ಕೆಲವು ದಿನಗಳ ಹಿಂದೆ ನಾನು ನಮ್ಮ ಸಂಬಂಧಿಕರ ಮದುವೆ ಮನೆಗೆ ಹೋದಾಗ ಅಲ್ಲಿ ನಿಮ್ಮ ಸೊಸೆ ಲಲಿತಾಳ ತಾಯಿಯ ಭೇಟಿ ಮಾಡುವ ಸಂದರ್ಭ ಒದಗಿ ಬಂದಿತ್ತು,ಆಗ ಅವರು ತುಂಬಾ ಬೇಸರಪಟ್ಟಕೊಂಡು ತಮ್ಮ ಮಗಳನ್ನು ವರ್ಷಕ್ಕೆ ಒಂದು ಬಾರಿ ಅವರ ಮನೆಗೆ ಅದೂ ಕೆಲವೇ ದಿನಗಳ ಮಟ್ಟಿಗೆ ಕಳುಹಿಸಿಕೊಡಲು ತುಂಬಾ ಹಿಂದೆ ಮುಂದೆ ನೋಡುತ್ತೀರಿ ಎಂಬ ವಿಚಾರ ತಿಳಿದು ಬಂದಿತು. ನೋಡಿ ಪದ್ಮಮ್ಮ ನವರೆ
ಮೊದಲು ನಿಮ್ಮ ಸೊಸೆ ನ್ನ ನಗುನಗುತ್ತಾ ಅವಳ ತಾಯಿ ಮನೆಗೆ ಕಳುಹಿಸಿ ಕೊಡಿ
ನಂತರ ನಾನು ನನ್ನ ಸೊಸೆ ಯನ್ನ ನಿಮ್ಮ ಮನೆಗೆ ಎಂದಿನಂತೆ ಕಳುಹಿಸುವೆ.
ನನಗೇನೋ ನಿಮ್ಮ ಸೊಸೆಗೆ ಮಗಳಿಗಿಂತ ಹೆಚ್ಚಿನ ಪ್ರೀತಿ ತೋರಿಸಿ ಆಕೆಯನ್ನೂ ಆಗಾಗ ತವರು ಮನೆಗೆ ಕಳುಹಿಸುವುದು ಉತ್ತಮ ಅಂತ ನನಗನಿಸತ್ತೆ. ಹೆಣ್ಣು ಮಕ್ಕಳಿಗೆ ತಾನು ಆಗಾಗ ತನ್ನ ತವರಿಗೆ ಹೋಗಬೇಕೆಂದು ಅನಿಸುವುದು ಸಹಜ ಅಲ್ವಾ?ಆಕೆ ಅಲ್ಲಿ ಹೋಗಿ ಬಂದರೆ ಮನಸ್ಸು ಹಗುರ ವಾಗುತ್ತದೆ,ಅಲ್ಲದೇ ನಿಮ್ಮ ಮೇಲಿನ ಗೌರವವೂ ಹೆಚ್ಚಾಗುತ್ತದೆ.ಅದು ಬಿಟ್ಟು ಬೇಡದ ನೆಪ ಒಡ್ಡಿ, ಆಕೆಯನ್ನು ಕೈದಿ ತರಹ ಕೂಡಿ ಹಾಕಿದರೆ ಅವಳು ಒಳ ಒಳಗೇ ನೊಂದು ನಾಳೆ ದಿನ ನಿಮ್ಮ ಬಗ್ಗೆ ನಿಮ್ಮ ಕುಟುಂಬದ ಬಗ್ಗೆ ನಕಾರಾತ್ಮಕ ಸುದ್ದಿ ಹರಡಲು ಶುರು ಮಾಡಿದರೆ ಏನು ಚೆಂದ ಯೋಚಿಸಿ ನೋಡಿ, ನೀವು ನಿಮ್ಮ ಮಗಳು ನಿಮ್ಮ ಮನೆಗೆ ಬರುವಂತೆ ಹೇಗೆ ಇಚ್ಛಿಸುವಿರೋ ಹಾಗೇ ಅವರ ತಾಯಿ ಯು ಇಚ್ಛಿಸುತ್ತಾಳಲ್ಲವೆ? ಕಷ್ಟವೂ ಸುಖವೂ ಒಂದೈದಾರು ದಿನ ಅಡ್ಜಸ್ಟ್ ಮಾಡಿಕೊಂಡು ಅವಳನ್ನು ಅವಳ ತವರಿಗೆ ಕಳುಹಿಸಿ ಆ ನಂತರ ನೋಡಿ.. ಏನೋಪಾ ನನಗೆ ತಿಳಿದಿದ್ದನ್ನು ತಮ್ಮ ಗಮನಕ್ಕೆ ತಂದಿದ್ದೇನೆ”
ಎಂದು ಕನಿಷ್ಠ ಅರ್ಧ ಗಂಟೆ ಕಾಲ ಒಂದು ಹೆಣ್ಣಿನ ಮನಸ್ಸಿನ ಬಗ್ಗೆ ಬಿಡಿ ಬಿಡಿ ಯಾಗಿ ಹೇಳಿ ಮುಗಿಸಿದರು.
ಸಾವಧಾನದಿಂದ ತಮ್ಮ ಬೀಗಿತ್ತಿ ಹೇಳಿದ ಮಾತು ಆಲಿಸಿದ ಪದ್ಮಾವತಮ್ಮ ನವರಿಗೆ ತಮ್ಮ ಮಗಳ ಮೇಲೆ ಅಪರಿಮಿತ ಪ್ರೀತಿ ಸೊಸೆಗೆ ತೋರಿಸಿಲ್ಲವಲ್ಲ ಎಂಬ ಕಟು ಸತ್ಯ ಅರಿವಾಯಿತು. ಅದಾದ ಎರಡು ದಿನ ಬಿಟ್ಟು ನಗುನಗುತ್ತ ತಮ್ಮ ಸೊಸೆಗೆ
ತವರಿಗೆ ಹೋಗಿ ಎಂಟು ದಿನ ಇದ್ದು ಬಾ ಎಂದು ತಿಳಿಸಿದಾಗ, ಲಲಿತಾಳಿಗೆ ತನ್ನ ಅತ್ತೆ ಗೆ ಒಂದು ಹೆಣ್ಣಿನ ಮನಸ್ಸು ಅರ್ಥವಾಗುವ ರೀತಿ ಪರಿಣಾಮಕಾರಿ ಆಗಿ ಮನವರಿಕೆ ಮಾಡಿ ಕೊಟ್ಟ ಪಾವನಾಳ ಅತ್ತೆಗೆ ಮನದಲ್ಲೇ ವಂದನೆ ಸಲ್ಲಿಸಿ, “ಆಗ್ಲಿ”ಎಂದು ಉತ್ತರಿಸಿದಳು.

Share This Article
Leave a comment