ಮೈಸೂರು: ಸಮಾನವಾಗಲಿ ನಿಮ್ಮ ಪ್ರಾರ್ಥನೆ
ಸಮಾನವಾಗಲಿ ನಿಮ್ಮ ಧ್ಯೇಯ
ಸಮಾನವಾಗಲಿ ನಿಮ್ಮ ಉದ್ದೇಶ
ಸಮಾನವಾಗಲಿ ಕೆಲಸ ಕಾರ್ಯ
ಸಮಾನವಾಗಲಿ ನಿಮ್ಮ ಆಶೋತ್ತರಗಳು
ಒಂದೇ ಆಗಲಿ ನಿಮ್ಮ ಹೃದಯ
ಒಂದೇ ಆಗಲಿ ನಿಮ್ಮ ಗುರಿ ಗತಿ
ಮತ್ತೆ ಪೂರ್ಣವಾಗಲಿ ನಿಮ್ಮ ಶುಭದೈಕ್ಯ
ಹೀಗೆ ಕುವೆಂಪು ಅವರ ಮಂತ್ರಮಾಂಗಲ್ಯದ ಮೂಲಕ ಸರಳವಾದ ಪ್ರೇಮವಿವಾಹವೊಂದು
ನಗರದ ಗೋಕುಲಂ 3ನೇ ಹಂತದ ಕಾಂಟೂರ್ ರಸ್ತೆಯಲ್ಲಿರುವ ಶಾಗಲೆ ಹೌಸಿನಲ್ಲಿ ಶುಕ್ರವಾರ ನೆರವೇರಿತು.
ಜಾತ್ಯತೀತ ಒಲವಿನ ವಿವಾಹ ವೇದಿಕೆಯಾದ ಮಾನವ ಮಂಟಪದ ಮೂಲಕ ಕಾನ್ ಸ್ಟೇಬಲ್ ಗಳಾದ ಮಹೇಶಕುಮಾರ್ ಆರ್. ಹಾಗೂ ಮಹಾಲಕ್ಷ್ಮಿ ಟಿ.ಜೆ. ಮದುವೆಯಾದರು.
ಮಾನವ ಮಂಟಪದ ಡಾ.ಕೆ. ಕಾಳಚನ್ನೇಗೌಡರು ಮದುವೆಯ ಪ್ರತಿಜ್ಞಾ ವಿಧಿ ಬೋಧಿಸಿದರು.
ಕುವೆಂಪು ಅವರ ಮಂತ್ರಮಾಂಗಲ್ಯದ ಮಹತ್ವ ಕುರಿತು ಮಾನವ ಮಂಟಪದ ಸಂಚಾಲಕ ಧನಂಜಯ್ ಎಲಿಯೂರು ಮಾತನಾಡಿ, ಕುವೆಂಪು ಅವರು ತಮ್ಮ ಪುತ್ರ ಪೂರ್ಣಚಂದ್ರ ತೇಜಸ್ವಿ ಹಾಗೂ ರಾಜೇಶ್ವರಿ ಅವರ ಮದುವೆಯನ್ನು ಮಂತ್ರಮಾಂಗಲ್ಯದ ಮೂಲಕ ಕೈಗೊಂಡರು. ಮದುವೆಗೆ 50ಕ್ಕೂ ಹೆಚ್ಚು ಜನ ಸೇರಬಾರದೆಂಬುದು ಅವರ ಅಪೇಕ್ಷೆಯಾಗಿತ್ತು. ಇದಕ್ಕಾಗಿ ಮದುವೆಯ ದಿನ ತಮ್ಮ ಗೆಳೆಯರಿಗೆ ಯಾವತ್ತಾದರೂ ಬಂದು ಆಶೀರ್ವಾದಿಸಿ ಎಂದು ಪತ್ರ ಬರೆದಿದ್ದರು. ಇಂಥ ಮಂತ್ರಮಾಂಗಲ್ಯದ ಮದುವೆಗಾಗಿ ಮಾನವ ಮಂಟಪ ಶುರು ಮಾಡಿದವರು ಕೆ.ರಾಮದಾಸ್, ಎಚ್.ಗೋವಿಂದಯ್ಯ, ಶಿವರಾಮ ಕಾಡನಕುಪ್ಪೆ ಮೊದಲಾದವರು. ಈ ಮಾನವ ಮಂಟಪದ ಮೂಲಕ ಸಾವಿರಾರು ಮದುವೆಗಳು ನಡೆದಿವೆ ಎಂದರು.
ಪರಸ್ಪರ ಪ್ರೀತಿಸಿದವರಿಗೆ ಅನ್ಯಜಾತಿ ಕಾರಣಕ್ಕೆ ಪ್ರಾಪ್ತ ವಯಸ್ಸಾಗಿದ್ದರೂ ಅಡ್ಡಿಗಳು ಎದುರಾದಾಗ ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ. ಪ್ರಾಪ್ತ ವಯಸ್ಸಿನವರಾಗಿದ್ದರೆ ಮದುವೆಗೆ ಅಡ್ಡಿಯಿಲ್ಲವೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಮಂತ್ರಮಾಂಗಲ್ಯ ಮದುವೆಯಾದ ಮೇಲೆ ಶಾಸ್ತ್ರ, ಸಂಪ್ರದಾಯವೆಂದು ಮತ್ತೆ ಮದುವೆಯಾಗಬೇಡಿ ಎಂದು ಹೇಳಿದರು.ಡಾ.ಕೆ.ಕಾಳಚನ್ನೇಗೌಡರು ಮಾತನಾಡಿ, ಮಂತ್ರಮಾಂಗಲ್ಯದ ಮೂಲಕ ಮದುವೆಯಾಗಲು ಮುಂದೆ ಬಂದವರು ನಿಜವಾಗಲೂ ಪ್ರೀತಿಸುವವರಾ ಎಂದು ಪರಿಶೀಲಿಸುತ್ತೇವೆ ಎಂದರು.
ನಗರಗಳ ಬೆಳವಣಿಗೆಯಾದರೂ ಅಂತರ್ಜಾತಿ ಮದುವೆಗಳನ್ನು ಒಪ್ಪಿಕೊಳ್ಳದವರಿದ್ದಾರೆ. ಇದರಿಂದ ಮರ್ಯಾದಾಹತ್ಯೆಗಳು ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಲ. ಜಗನ್ನಾಥ್ ಮಾತನಾಡಿ ಭಾರ್ಗವಿ ಅವರಿಗೆ ತಾಳಿ ಕಟ್ಟದೆ ಮದುವೆಯಾದೆ. ಇಂಥ ಮದುವೆಗಳು ಹೆಚ್ಚಲಿ. ಈ ಮೂಲಕ ಜಾತಿ ನಿರ್ಮೂಲನೆಯಾಗಲಿ ಎಂದು ಹಾರೈಸಿದರು.
ಪರಿಸರ ಬಳಗದ ಪರಶುರಾಮೇಗೌಡ ಮಾತನಾಡಿ, ರೈತ ಮುಖಂಡರಾಗಿದ್ದ ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ಪ್ರಭಾವದಿಂದಾಗಿ ಸರಳವಾಗಿ ಮದುವೆಯಾದೆ ಎಂದರು.
ರಂಗಕರ್ಮಿ ಮೈಮ್ ರಮೇಶ್ ಮಾತನಾಡಿ, ಅವಿವಾಹಿತನಾಗಿರಬೇಕೆಂದುಕೊಂಡಿದ್ದೆ. ಆದರೆ ರಂಗಾಯಣ ಗೆಳೆಯರು, ಸಾಹಿತಿಗಳ ಒತ್ತಾಯದಿಂದ ಮದುವೆಯಾದೆ. ಅದು ಕೂಡಾ ಪ್ರೀತಿಸಿ. ಪ್ರೀತಿಯಿಂದ ಬಾಳಿದರೆ ಜಾತಿ, ಧರ್ಮ ನಗಣ್ಯ ಎಂದರು.ಹಾಸನ ಸಂಸದ ಪ್ರಜ್ವಲ್ ರೇವಣ್ಣ ಆಯ್ಕೆ ಅಸಿಂಧು : ಹೈ ತೀರ್ಪು – ದೊಡ್ಡಗೌಡರ ಕುಟುಂಬಕ್ಕೆ ಬಿಗ್ ಶಾಕ್
ಮಾನವ ಮಂಟಪದ ಡಾ.ವೆಂ.ವನಜಾ ಮಾತನಾಡಿ, ಶೃಂಗೇರಿಯಿಂದ ಮೈಸೂರಿಗೆ ಓದಲು ಬಂದ ನನಗೆ, ನನ್ನ ತಾಯಿಯೇ ಯಾರನ್ನಾದರೂ ಮದುವೆಯಾಗಬಹುದು ಎಂದ ಭರವಸೆ ನೀಡಿದಳು. ನಮ್ಮ ತಂದೆ ಕೂಡಾ ನಮ್ಮ ಮಗಳು ಜಾತಿ ಬಿಟ್ಟು ಮದುವೆಯಾಗುತ್ತಿದ್ದಾಳೆ ಎಂದು ಊರಿಗೆಲ್ಲ ಹೇಳಿದ್ದರು. ಹಾಗೆಯೇ
ಕೆ.ಕಾಳಚನ್ನೇಗೌಡರನ್ನು ನಮ್ಮ ಶೃಂಗೇರಿಗೇ ಪರಿಚಯಿಸಿದರು ಎಂದು ವಿವರಿಸಿದರು.
ಪ್ರೊ.ಕುಮಾರ ಸ್ವಾಮಿ, ಮಹಿಳಾ ಮತ್ತು ಕಲ್ಯಾಣ ಇಲಾಖೆಯಲ್ಲಿ ನಿವೃತ್ತ ಅಧಿಕಾರಿ
ರಾಜು, ಜಿಪಿಐಇಆರ್ ತಂಡದ ಸಂಚಾಲಕ ಎಂ.ಪಿ. ಹರಿದತ್ತ, ಕಲಾವಿದರಾದ ಸುಮನ್, ಚಂದನ್ ಹಾಜರಿದ್ದರು.