• ಮಂಡ್ಯ ವಿಧಾನ ಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ
• ಮದ್ದೂರಿನ ರೈತ ಕುಟುಂಬದಿಂದ ವಿಧಾನ ಪರಿಷತ್ ಸ್ಪರ್ಧೆವರೆಗೆ
• ಕಾಂಗ್ರೆಸ್‌ನಲ್ಲಿ 18 ವರ್ಷ ಸಲ್ಲಿಸಿದ ಸೇವೆಗೆ ಸಿಕ್ಕ ಗೌರವ
• ಎಸ್.ಎಂ. ಕೃಷ್ಣ ಸೇರಿ ಪ್ರಮುಖ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿದ ಅನುಭವ
• ಧಾರ್ಮಿಕ – ಸಾಮಾಜಿಕ ಕ್ಷೇತ್ರದಲ್ಲಿ ಕೊಡುಗೆ ನೀಡಿರುವ ದಿನೇಶ್
ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದ, ರೈತ ಕುಟುಂಬದ ಹಿನ್ನೆಲೆಯಿಂದ ಬಂದಿರುವ, ಸಾಕಷ್ಟು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ದಿನೇಶ್ ಗೂಳಿಗೌಡ ಅವರಿಗೆ ಮಂಡ್ಯದಿಂದ ವಿಧಾನ ಪರಿಷತ್‌ಗೆ ಕಾಂಗ್ರೆಸ್ ಟಿಕೆಟ್ ಬಹುತೇಕ ಖಚಿತವಾಗಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮರಸಿಂಗನಹಳ್ಳಿಯ ದಿನೇಶ್ ಗೂಳಿಗೌಡ ಅವರದ್ದು, ರೈತ ಕುಟುಂಬ. ಕಾಲೇಜು ದಿನಗಳಲ್ಲೇ ಕಾಂಗ್ರೆಸ್ ತತ್ವ, ಸಿದ್ಧಾಂತಗಳ ಬಗ್ಗೆ ಒಲವು ಹೊಂದಿದ್ದ ದಿನೇಶ್ , ವಿದ್ಯಾರ್ಥಿ ದೆಸೆಯಲ್ಲಿಯೇ ಕಾಂಗ್ರೆಸ್ ಪರ ಒಲವು ಹೊಂದಿದ್ದರು.
ಇದನ್ನು ಗುರುತಿಸಿದ ಆಗಿನ ಪ್ರಭಾವಿ ಕಾಂಗ್ರೆಸ್ ನಾಯಕ, ಹಾಲಿ ಬಿಜೆಪಿಯಲ್ಲಿರುವ ಎಸ್.ಎಂ.ಕೃಷ್ಣ ಅವರು ತಮ್ಮ ಆಪ್ತ ಬಳಗಕ್ಕೆ ಸೇರಿಸಿಕೊಂಡರು. ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಅಲ್ಲಿಂದ ನಂತರ ಕಾಂಗ್ರೆಸ್ ಪಕ್ಷಕ್ಕಾಗಿ ದಿನೇಶ್ ಅವರು ಸಾಕಷ್ಟು ದುಡಿದಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ, ಚಿಂತನೆಗಳ ಸಹಿತ ಅನೇಕ ಯೋಜನೆಗಳನ್ನು ಮಾಧ್ಯಮಗಳ ಮೂಲಕ ಜನರಿಗೆ ತಿಳಿಸುವ ಕಾರ್ಯವನ್ನು ದಿನೇಶ್ ಅವರು ಮಾಡಿದ್ದಾರೆ.
ಹಂತಹಂತವಾಗಿ ಬೆಳೆದ ದಿನೇಶ್ ಅವರನ್ನು ರಾಜ್ಯ ಮಟ್ಟದ ಕಾಂಗ್ರೆಸ್ ನಾಯಕರು ಗುರುತಿಸಿದ್ದಲ್ಲದೆ, ಪಕ್ಷದಲ್ಲಿ ಇನ್ನಿತರ ಜವಾಬ್ದಾರಿಯನ್ನು ನೀಡಿದರು. ಇದನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯೂ ಆಗಿದ್ದರು. 18 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ಹಲವು ಜವಾಬ್ದಾರಿಗಳನ್ನು ದಿನೇಶ್ ನಿಭಾಯಿಸಿದ್ದಾರೆ.
ರೈತರ ಕಷ್ಟಗಳ ಅರಿವುಳ್ಳ ಗ್ರಾಮೀಣ ಪ್ರತಿಭೆ :
ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿರುವ ದಿನೇಶ್ ಅವರಿಗೆ ರೈತರು ಎದುರಿಸುತ್ತಿರುವ ಸಮಸ್ಯೆಗಳ ಸ್ಪಷ್ಟ ಅರಿವಿದೆ. ಇದರ ಜೊತೆಗೆ ಒಬ್ಬ ಗ್ರಾಮೀಣ ಪ್ರತಿಭೆಯಾಗಿ ಬೆಳೆದಿದ್ದಾರೆ. ಇಂಥವರನ್ನು ಕಾಂಗ್ರೆಸ್‌ನಿಂದ ಆಯ್ಕೆ ಮಾಡಿದರೆ ಪಕ್ಷದ ದೃಷ್ಟಿಯಿಂದಲೂ ಉತ್ತಮ ಎಂಬ ನಿರ್ಧಾರಕ್ಕೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜಕೀಯ ಅನುಭವಕ್ಕೆ ಮಣೆ :
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ಹಾಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸೇರಿದಂತೆ ಅನೇಕ ರಾಜಕೀಯ ಧುರೀಣರ ನಿಕಟ ಒಡನಾಟ ಹೊಂದಿರುವ ದಿನೇಶ್ ಗೂಳಿಗೌಡ ಅವರು ರಾಜಕೀಯ ಒಳಸುಳಿಗಳನ್ನು ಬಲ್ಲವರಾಗಿದ್ದಾರೆ. ಜೊತೆಗೆ ಸಾರ್ವಜನಿಕ ಸಂಪರ್ಕವನ್ನೂ ಹೊಂದಿದ್ದಾರೆ. ಈ ಅನುಭವ ಅವರ ಮುಂದಿನ ರಾಜಕೀಯ ಭವಿಷ್ಯದಲ್ಲಿ ಹೆಚ್ಚು ಪ್ರಯೋಜನಕ್ಕೆ ಬರಲಿದೆ. ಅಲ್ಲದೆ, ದಿನೇಶ್ ಅವರ ಆಯ್ಕೆ ಬಗ್ಗೆ ಮದ್ದೂರು ಬ್ಲಾಕ್ ಮಟ್ಟ, ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದ ಮುಖಂಡರು ಒಲವು ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್ ರಾಜ್ಯ ನಾಯಕರ ಒಲವು :
ಮೊದಲಿನಿಂದಲೂ ದಿನೇಶ್ ಅವರ ಕಾರ್ಯವೈಖರಿ, ಪಕ್ಷನಿಷ್ಠೆ, ಚುರುಕುತನ ಮತ್ತು ಬದ್ಧತೆಯನ್ನು ಗಮನಿಸುತ್ತಾ ಬಂದಿದ್ದ ಹಾಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು, ಮಾಜಿ ಸಚಿವರಾದ ಚಲುವರಾಯಸ್ವಾಮಿ ಅವರೂ ಸೇರಿದಂತೆ ಮಂಡ್ಯ ಜಿಲ್ಲೆಯ ಅನೇಕ ನಾಯಕರು ಪ್ರಸಕ್ತ ಸಾಲಿನ ವಿಧಾನ ಪರಿಷತ್‌ಗೆ ಸಂಬಂಧಿಸಿದಂತೆ ಮಂಡ್ಯ ಭಾಗದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ದಿನೇಶ್ ಗೂಳಿಗೌಡ ಅವರೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆನ್ನಲಾಗಿದೆ.
ಸರ್ಕಾರದಲ್ಲಿಯೂ ಸಹ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ದಿನೇಶ್ ಅವರು, ಸರ್ಕಾರದಲ್ಲಿ ವಿವಿಧ ಸಚಿವರ ಜೊತೆಗೆ 5 ವರ್ಷಗಳ ಕಾಲ ಕಾರ್ಯನಿರ್ವಹಣೆ ಮಾಡಿದ ಅನುಭವವನ್ನು ಹೊಂದಿದ್ದಾರೆ. ಈ ಮೂಲಕ ಸರ್ಕಾರಿ ಮಟ್ಟದಲ್ಲಿನ ಜವಾಬ್ದಾರಿಗಳ ಅನುಭವವನ್ನು ಪಡೆದುಕೊಂಡಿದ್ದಾರೆ.
ವಿಧಾನ ಪರಿಷತ್ ಅನ್ನು ಚಿಂತಕರ ಚಾವಡಿ ಎಂದು ಕರೆಯುತ್ತೇವೆ. ಇಲ್ಲಿ ಆಯ್ಕೆಯಾಗುವವರಿಗೆ ಅಕ್ಷರ ಜ್ಞಾನದ ಜೊತೆಗೆ ಚಿಂತನೆಯೂ ಇರಬೇಕಾಗುತ್ತದೆ. ದಿನೇಶ್ ಗೂಳಿಗೌಡ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಒಬ್ಬ ಸುಶಿಕ್ಷಿತ ವ್ಯಕ್ತಿಯನ್ನು ಕಾಂಗ್ರೆಸ್ ಗುರುತಿಸಿ ಆಯ್ಕೆ ಮಾಡಿದಂತಾಗಿದೆ.
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
- ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ
- ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು
More Stories
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
ಮಂಡ್ಯ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ