November 15, 2024

Newsnap Kannada

The World at your finger tips!

kuvempu

Commemoration of poet Kuvempu's birthday ರೂಪ ರೂಪಗಳನ್ನು ದಾಟಿ ನಾಮ ಕೋಟಿ ಎಲ್ಲೆ ಮೀಟಿ

ರೂಪ ರೂಪಗಳನ್ನು ದಾಟಿ ನಾಮ ಕೋಟಿ ಎಲ್ಲೆ ಮೀಟಿ

Spread the love
  • ಕವಿ ಕುವೆಂಪು ಜನ್ಮ ದಿನದ ಸ್ಮರಣಾರ್ಥ

-ಆಮಿರ್ ಬನ್ನೂರು

ಮಾವನ ಕುಲವನ್ನು ಸಮಾನ ದೃಷ್ಠಿಯಿಂದ ನೋಡಬೇಕು ಎಂದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ 1904 ಡಿಸೆಂಬರ್ 29 ರಂದು ರಮ್ಯ ರಮಣೀಯ ಮಲೆನಾಡಿನ ಹೃದಯವಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹೀರೆಕೊಡಿಗೆಯಲ್ಲಿ ಪುಟ್ಟಪ್ಪ ಮತ್ತು ತಾಯಿ ಸೀತಮ್ಮ ದಂಪತಿ ಪುತ್ರನಾಗಿ ಜನಿಸಿದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ತಮ್ಮ ಹುಟ್ಟುರಿನಲ್ಲೇ ಮುಗಿಸಿದ ಕುವೆಂಪು, ಉನ್ನತ ವ್ಯಾಸಂಗಕ್ಕೆ 1918 ರಲ್ಲಿ ಮೈಸೂರಿನತ್ತ ಬಂದರು.
ಇಲ್ಲಿನ ಮೈಸೂರು ಮಹಾರಾಜ ಕಾಲೇಜ್ ನಲ್ಲಿ ಬಿ.ಎ ಮತ್ತು ಎಂ.ಎ ಪದವಿಯನ್ನು ಪಡೆದುಕೊಂಡರು.


ಅಲ್ಲಿಯೇ ಅಧ್ಯಾಪಕರಾಗಿ ವೃತ್ತಿಯನ್ನು ಪ್ರಾರಂಭಿಸಿದ ಕುವೆಂಪುರವರು ನಂತರದ ದಿನಮಾನಗಳಲ್ಲಿ ತಮ್ಮ ಕಠಿಣ ಪರಿಶ್ರಮದಿಂದ ಅದೇ ಕಾಲೇಜಿನ ಪ್ರಾಂಶುಪಾಲರಾಗಿ, ಕುಲಪತಿಗಳಾಗಿ ಸೇವೆ ಸಲ್ಲಿಸಿರುವುದು ಕುವೆಂಪು ಅವರ ಬದುಕಿನ ವಿಶೇಷತೆಗಲ್ಲಿ ಒಂದಾಗಿತು.

ರಮ್ಯ ಕವಿಗಳ ಪ್ರಭಾವಕ್ಕೊಳಗಾಗಿ,ಆಂಗ್ಲ ಸಾಹಿತ್ಯದಲ್ಲಿ ಬರಹ ಬದುಕನ್ನು ಕಟ್ಟಿದ ಕುವೆಂಪು ‘ಬಿಗಿನರ್ಸ್ ಮ್ಯೂಸ್’ ಎಂಬ ಕವನ ಸಂಕಲನವನ್ನು ಹತ್ತನೇ ತರಗತಿಯಲ್ಲಿ ಓದುತ್ತಿರುವಾಗ ರಚಿಸಿದರು.
ಇಂಗ್ಲೀಷ್ನಲ್ಲೇ ಕಾವ್ಯ ಕೃಷಿಯನ್ನು ಪ್ರಾರಂಭಿಸಿದ ಕುವೆಂಪು ಕನ್ನಡದ ಅನರ್ಘ್ಯ ಕವಿಯಾಗಿ ಸಂಕೀರ್ಣವಾಗಲು ಕಾರಣ, ಐರಿಷ್ ಕವಿ ಜೆ.ಹೆಚ್ ಕಸಿನ್ಸ್ ಎಂಬವರು ಶ್ರೀರಂಗಪಟ್ಟಣಕ್ಕೆ ಬಂದಿದ್ದರು. ಅವರನ್ನು ಭೇಟಿ ಮಾಡಲು ಹೋದ ಕುವೆಂಪು ತಮ್ಮ ಇಂಗ್ಲೀಷ್ ಕವನಗಳನ್ನು ಅವರಿಗೆ ತೋರಿಸಿದರು. ಕವನಗಳ ಮೇಲೆ ಕಣ್ಣಾಡಿಸಿದ ಕಸಿನ್ಸ್ ಕನ್ನಡ ಭಾಷೆಯಲ್ಲಿ ಬರೆಯುವ ಬಗ್ಗೆ ಸಲಹೆ ನೀಡಿದರು. ಆಗ ಪ್ರತಿಕ್ರಿಯಿಸಿದ ಕುವೆಂಪು ಇಂಗ್ಲಿಷಿನಲ್ಲಿ ಭಾವನೆಗಳು ಮೂಡಿದ ಹಾಗೆ ಕನ್ನಡದಲ್ಲಿ ಮೂಡಿಸಲು ಸಾಧ್ಯವೆ? ಎಂಬ ಆ ಸಾಮರ್ಥ್ಯ ಕನ್ನಡಕ್ಕಿದೆಯೆ ಎಂದು ಸಂದೇಹ ವ್ಯಕ್ತಪಡಿಸಿದರು.


ಉತ್ತರಿಸಿದ ಕಸಿನ್ಸ್ ”ಹಾಗೆ ಭಾವಿಸಬೇಕಿಲ್ಲ. ಒಂದು ಭಾಷೆ ಮತ್ತೊಂದು ಭಾಷೆಗಿಂತ ಕೀಳೇನಲ್ಲ. ಭಾಷೆಯನ್ನು ಬಳಸಿಕೊಳ್ಳುವ ಪ್ರತಿಭೆ ಉಳ್ಳವರಿಗೆ ಯಾವ ಭಾಷೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ” ಈ ಮಾತಿನ ಪ್ರೇರಣೆಯಿಂದ ಕನ್ನಡದಲ್ಲಿ ಬರೆಯುವ ನಿರ್ಧಾರ ತೆಗೆದುಕೊಂಡರು. ಮತ್ತೆ ಹಿಂತಿರುಗದ ಕುವೆಂಪು ಕನ್ನಡ ಭಾಷೆಯಲ್ಲಿಯೇ ಕಥೆ,ಕವನ, ಕಾದಂಬರಿ, ವಿಮರ್ಶೆ, ಅನುವಾದ, ನಾಟಕ ಹೀಗೆ ಹಲವಾರು ಬಗೆಯ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ವಿಶೇಷವಾದ ಛಾಪು ಮೂಡಿಸಿದ್ದಾರೆ. ಸುಮಾರು 80 ಕ್ಕೂ ಅದಿಕ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ದಾರೆ. ಸುಮಾರು ಒಂಬತ್ತು ವರ್ಷಗಳ ನಿರಂತರ ಪ್ರಯತ್ನದದಿಂದ ಪ್ರಕಟವಾದ ಕುವೆಂಪುರವರ ‘ರಾಮಾಯಣ ದರ್ಶನಂ’ ೧೯೬೮ ರಲ್ಲಿ ಮಹಾ ಕಾವ್ಯಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.
ಇದನ್ನು ತಮ್ಮದೇ ಆದ ವಿಶಿಷ್ಟ ಛಂಧಸ್ಸಿನಲ್ಲಿ ರೂಪುಗೊಳಿಸಿದ್ದಾರೆ. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು ಎಂಬ ಹೆಗ್ಗಲಿಕೆ ಕುವೆಂಪು ಅವರಿಗಿದೆ.

ಕರ್ನಾಟಕಕ್ಕೆ,ಕನ್ನಡ ಭಾಷೆಗೆ ಭಂಗ ಉಂಟಾದರೆ, ಅದಕ್ಕಾಗಿ ಹೋರಾಡಬೇಕು ಎಂಬ ಕನ್ನಡದ ಕಿಚ್ಚನ್ನು ಹೊಂದಿದ್ದರು.ಕನ್ನಡಕ್ಕೆ ವಿಶ್ವ ಮನ್ನಣೆ ಸಿಗಬೇಕಾದರೆ, ಅದು ಮೊದಲು ಕನ್ನಡಿಗರಿಂದ, ಕರ್ನಾಟಕದಿಂದಲೇ ಆಗಬೇಕು ಎಂಬುದು ಕುವೆಂಪು ಅವರ ನಿಲುವು.


ಮಹಾಕವಿಯಾಗಿ, ದಾರ್ಶನಿಕನಾಗಿ, ಶಿಕ್ಷಣವೇತ್ತರಾಗಿ ಎಲ್ಲದಕ್ಕಿಂತಲೂ ಓರ್ವ ಮಾನವತಾವಾದಿಯಾಗಿ ಈ ನಾಡಿಗೆ ಸಲ್ಲಿಸಿರುವ ಅಮೂಲ್ಯ ಸೇವೆ ಎಲ್ಲರನ್ನು ಹುರಿದುಂಬಿಸುವಂತದ್ದಾಗಿದೆ. ರಾಜ್ಯ ಮತ್ತು ರಾಷ್ಟ್ರವನ್ನು ಸಮಾನವಾಗಿ ನೋಡುತ್ತಿದ್ದ ಕುವೆಂಪು ಅವರು ಪಾಕಿಸ್ತಾನ ಭಾರತದ ಮೇಲೆ 1965 ರಲ್ಲಿ ಯುದ್ಧ ಮಾಡಿದುದ್ದನ್ನು ಸಹಿಸಲು ಸಾಧ್ಯವಿಲ್ಲ. ”ಓ ಪಾಕಿಸ್ತಾನ ಸಾಕಾಯಿತೆ ರಕ್ತಸ್ನಾನ” ಎಂದು ಖಂಡಿಸಿ ಬರೆದರು.

”ಆ ಮತದ ಈ ಮತದ
ಸಹವಾಸ ಸಾಕಿನ್ನು,
ಸೇರಿರೈ ಮನುಜಮತಕೆ
ಓ ಬನ್ನಿ ಸೋದರರೆ ವಿಶ್ವ ಪಥಕೆ”

ಜಾತಿ,ಮತದ ಸಹವಾಸ ಬಿಟ್ಟು,ಮನುಜ ಮತಕ್ಕೆ ಎಲ್ಲರೂ ಸೇರಿ ವಿಶ್ವ ಪಥದಲ್ಲಿ ಸಾಗೋಣ ಸಹೋದರರೆ ಎಂದು ಕರೆ ನೀಡಿದರು.


ಜಾತಿ ಪದ್ಧತಿಗಳನ್ನು ವಿರೋಧಿಸಿ, ಮಾನವೀಯ ಮೌಲ್ಯಗಳಿಗ ಬಗ್ಗೆ ಪ್ರತಿಧ್ವನಿಸುತ್ತಿದ್ದ ಅವರು ಎಲ್ಲಾ ಜಾತಿ ಮತಗಳ ಎಲ್ಲೆಯನ್ನು ಮೀರಿ ವಿಶ್ವ ಮಾನವ ತತ್ತ್ವದ ಮೂಲಕ ವಿಶ್ವ ಬಾತೃತ್ವವನ್ನು ಏಕತೆಯನ್ನು
ಎತ್ತಿಹಿಡಿದರು. ಮಾನವತೆ ಅವರ ಹೆಬ್ಬಯಕೆಯಾಗಿತ್ತು.


ಅವರ ಮಾನವ ತತ್ವಗಳು ಒಂದು ರಾಷ್ಟ್ರ ಒಂದು ಭಾಷೆಗೆ ಮಾತ್ರ ಅನ್ವಯಿಸುವಂತದ್ದಾಗಿರಲಿಲ್ಲ.
“ರೂಪ ರೂಪಗಳನ್ನು ದಾಟಿ ನಾಮ ಕೋಟಿ ಎಲ್ಲೆ ಮೀಟಿ” ಎಂಬಂತೆ ಜಗತ್ತಿನ ಪ್ರತಿಯೊಬ್ಬರು ವಿಶ್ವ ಮಾನವರಾಗಬೇಕು. ಜಾತಿ ಅನ್ನುವುದಿದ್ದರೆ, ಅದು ಮಾನವ ಜಾತಿ ಮಾತ್ರ ಎಂಬ ಸತ್ಯವನ್ನು ವಿಶ್ವ ಒಪ್ಪಬೇಕೆಂದು ಆಶಿಸುತ್ತಿದ್ದರು.


”ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ ಆ ನಂತರ ಆ ಮಗುವನ್ನು ‘ಜಾತಿ,ಮತ’ದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು,ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು” ಮಾನವರೆಲ್ಲರೂ ಸಮಾನರು, ವ್ಯಕ್ತಿಯ ಬದುಕಿನಲ್ಲಿ, ನಡೆ ನುಡಿಗಳಲ್ಲಿ ಮೌಲ್ಯಗಳಿದ್ದರೆ ಮಾತ್ರ ಅವನು ಮುಖ್ಯನಾಗಲು ಸಾಧ್ಯ. ಜಾತಿ,ಧರ್ಮಗಳಿಂದ ಯಾವುದೇ ವ್ಯಕ್ತಿಯ ಮೌಲ್ಯಮಾಪನ ಸಾಧ್ಯವಿಲ್ಲ ಎಂದು ಹೇಳುತ್ತಾರೆ ರಾಷ್ಟ್ರಕವಿ ಕುವೆಂಪು.

1986 ರಲ್ಲಿ ಕುವೆಂಪು ಅವರು ಬರೆದ ‘ಜಯ ಭಾರತ ಜನನಿಯ ತನುಜಾತೆ’ ಗೀತೆಯನ್ನು ಕರ್ನಾಟಕ ಸರ್ಕಾರ 2004 ನಾಡ ಗೀತೆಯಾಗಿ ಸ್ಟಿಕರಿಸಿದೆ. ಕನ್ನಡ ಸಾರಸ್ವತ ಲೋಕದಲ್ಲಿ ವಿಶೇಷ ಸ್ಥಾನ ಪಡೆದ ಕೊಂಡ ಕುವೆಂಪು ಅವರಿಗೆ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು1964ರಲ್ಲಿ ಗೌರವಾನ್ವಿತ ರಾಷ್ಟ್ರಕವಿ ಮತ್ತು 1992 ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಹಾಗೆ ಭಾರತ ಸರ್ಕಾರವು ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕುವೆಂಪು ಅವರ ಜನ್ಮದಿನದ ಸ್ಮರಣಾರ್ಥ ಡಿಸೆಂಬರ್‌ 29ರನ್ನು “ವಿಶ್ವ ಮಾನವ” ದಿನವನ್ನಾಗಿ ಆಚರಿಸುವುದಾಗಿ.


ಕರ್ನಾಟಕ ಸರ್ಕಾರವು ೨೦೧೫ರಲ್ಲಿ ಆದೇಶ ಹೊರಡಿಸಿದೆ. ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ ಕುವೆಂಪು ಅವರ ಹೆಸರಿನಲ್ಲಿ ”ಕುವೆಂಪು ವಿಶ್ವವಿದ್ಯಾಲಯ” ಸ್ಥಾಪನೆಗೊಂಡಿರುವುದು ಮಾನವೀಯ ಮೌಲ್ಯಗಳು ಸಾರುವ ಕುವೆಂಪು ಸಾಹಿತ್ಯಗಳು ಕನ್ನಡಿಗರು ಮತ್ತು ಕನ್ನಡೇತರರ ಮನಸ್ಸಿನಲ್ಲಿ ಹಾಸುಹೊಕ್ಕಾಗಿದೆ ಎಂಬುದಕ್ಕೆ ಇರುವ ಒಂದು ನಿದರ್ಶನವಾಗಿದೆ.

Copyright © All rights reserved Newsnap | Newsever by AF themes.
error: Content is protected !!