ಬಿಜೆಪಿ ‘ಜನ ಸೇವಕ್‌’ ಸಮಾವೇಶಕ್ಕೆ ಚಾಲನೆ ನೀಡಿದ ಸಿಎಂ ಯಡಿಯೂರಪ್ಪ

Team Newsnap
1 Min Read

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದವರನ್ನು ಅಭಿನಂದಿಸಲು, ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ಹಾಗೂ ಸರ್ಕಾರದ ಯೋಜನೆ ಸಾರಲು ಮೈಸೂರಿನ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ‘ಜನ ಸೇವಕ್‌’ ಸಮಾವೇಶಕ್ಕೆ ಸಿಎಂ ಯಡಿಯೂರಪ್ಪ ಅವರು ಸೋಮವಾರ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಜನಪ್ರತಿನಿಧಿಗಳಿಗೆ ಹಾಗೂ ಮುಂದಿನ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಗೆಲುವಿಗೆ ಪಕ್ಷವನ್ನು ಮತ್ತಷ್ಟು ಸಂಘಟಿಸಲು ಬಿಜೆಪಿ ರಾಜ್ಯ ಘಟಕದಿಂದ ಜನಸೇವಕ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಮೂರು ದಿನಗಳ ಕಾಲ ನಡೆಯಲಿರುವ ಈ ಸಮಾವೇಶವು ರಾಜ್ಯ ಬಿಜೆಪಿ ಅಧ್ಯಕ್ಷ ‌ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಜರುಗಲಿದೆ. ಜನಸೇವಕರ ಪರಿಶ್ರಮದಿಂದ ಗ್ರಾಮಪಂಚಾಯಿತಿಯಲ್ಲಿ ಬಿಜೆಪಿ ಹೆಚ್ಚು ಸದಸ್ಯರು ಜಯಗಳಿಸಿದ್ದಾರೆ. ಗ್ರಾಮರಾಜ್ಯವನ್ನು
ರಾಮರಾಜ್ಯ ಮಾಡಲು ಹೊರಟಿದ್ದೇವೆ ಎಂದರು.

ಭಾರತ ಹಳ್ಳಿಗಳ ದೇಶವಾಗಿದ್ದು, ಗ್ರಾಮ ಬೆಳೆದರೆ ದೇಶವು ಅಭಿವೃದ್ಧಿಯಾಗುತ್ತದೆ‌. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದಿರುವ ಹೆಣ್ಣುಮಕ್ಕಳು ತಮ್ಮ ಮನೆಯ ಜವಾಬ್ದಾರಿ ಜೊತೆಗೆ ಗ್ರಾಮಾಭಿವೃದ್ಧಿಯ ಜವಾಬ್ದಾರಿ ಹೊತ್ತಿದ್ದಾರೆ. ಇದರಿಂದ ಸಮಸಮಾಜ ರೂಪುಗೊಳ್ಳಲು ಸಾಧ್ಯವಾಗಿದೆ ಎಂದರು.

ಸಮಾವೇಶದಲ್ಲಿ ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸಚಿವರಾದ ಎಸ್‌.ಟಿ.ಸೋಮಶೇಖರ್‌, ಸಂಸದರಾದ ವಿ.ಶ್ರೀನಿವಾಸ ಪ್ರಸಾದ್, ಪ್ರತಾಪಸಿಂಹ, ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಹರ್ಷವರ್ದನ್, ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್‌, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌ ಉಪಸ್ಥಿತದ್ದರು.

Share This Article
Leave a comment