ಕುಮಾರಸ್ವಾಮಿಗೆ ಮತ್ತೆ ಸಿಎಂ ಪಟ್ಟಾಭಿಷೇಕ ? ಬಿಜೆಪಿಯ ಒಳಸುಳಿ ಏನು?

Team Newsnap
3 Min Read

ಕುಮಾರಸ್ವಾಮಿ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ವದಂತಿ ಎಲ್ಲೆಡೆ ಸಂಚಲನ ಮೂಡಿಸಿದೆ.

ರೆಕ್ಕೆ ಪುಕ್ಕಗಳಿಲ್ಲದೇ ಹುಟ್ಟಿ ಕೊಂಡಿರುವ‌ ಇಂತಹ ಸುದ್ದಿಗಳಿಗೆ ಆಧಾರ ನೀಡುವುದು ಕಷ್ಟ ಸಾಧ್ಯ. ಆದರೆ ಮಾಜಿ ಸಿ ಎಂ ಎಚ್ ಡಿ ಕೆ ಹೇಳುತ್ತಾರೆ, ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುತ್ತಾರೆ. ಹೀಗಾಗಿ ಇಂತಹ ವದಂತಿಗಳನ್ನು ತಳ್ಳಿಹಾಕುವಂತಿಲ್ಲ ಎಂಬ ಮಾತುಗಳು ಇದಕ್ಕೆ ಪುಷ್ಠಿ ನೀಡುತ್ತವೆ.

ಬಿಜೆಪಿ ಬಳಿ ಸರ್ಕಾರದ ರಚನೆಗೆ ಅಗತ್ಯವಾದ ಸಂಖ್ಯಾ ಬಲವಿದ್ದರೂ ಜೆಡಿಎಸ್ ಮೈತ್ರಿ ಅಥವಾ ವಿಲೀನ ಏಕೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ಒಂದೇ ಕಲ್ಲಿಗೆ ಎರಡು ಹಕ್ಕಿ:

ರಾಷ್ಟ್ರೀಯ ಬಿಜೆಪಿಯ ನಾಯಕರ ಲೆಕ್ಕಾಚಾರವೇ ಬೇರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ಹತ್ತಿಕ್ಕುವುದು. ಎರಡನೇ ಕಾರಣ, ಸಿಎಂ ಯಡಿಯೂರಪ್ಪನವರನ್ನು ಗುರಿಯಾಗಿ ಇಟ್ಟುಕೊಂಡು ರಾಜ್ಯದ ಬಿಜೆಪಿಯಲ್ಲಿ ಯಾವುದೇ ಅಧಿಕಾರ ಒಬ್ಬ ವ್ಯಕ್ತಿ ಅಥವಾ ಒಂದು ಜಾತಿಗೆ ಕೇಂದ್ರೀಕೃತವಾಗಬಾರದು ಹಾಗೂ ಯಡಿಯೂರಪ್ಪನವರಿಗೆ ವಯೋಮಾನದ ಸಹಜ ಕಾರಣ ನೀಡಿರುವ ಹೈಕಮಾಂಡ್ ಹೊಸ ತಂತ್ರದ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ತಂತ್ರ ಇದರ ಹಿಂದೆ ಅಡಿಗಿರುವ ಸೂಕ್ಷ್ಮತೆ ಎದ್ದು ಕಾಣುತ್ತದೆ. ಅದಕ್ಕಾಗಿ ಕುಮಾರಸ್ವಾಮಿ ಶಕ್ತಿ ಯನ್ನು ಬಳಕೆ ಮಾಡಿಕೊಳ್ಳುವ ಪ್ಲಾನ್ ಇಲ್ಲಿದೆ.

ಕಾಂಗ್ರೆಸ್ ಮುಗಿಸಲು ಬಿಜೆಪಿ ಸಂಚು :

ದೇಶದ ಪ್ರತಿ ರಾಜ್ಯದಲ್ಲಿ ಕಾಂಗ್ರೆಸ್ ಅಧೋಗತಿ ಇಳಿದಿದೆ. ಆದರೆ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ – ಬಿಜೆಪಿಗೆ ನೇರ ಹಣಾಹಣಿ ಇದ್ದೇ ಇದೆ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಗ್ರಾಮ ಪಂಚಾಯತಿ ಹಂತದಿಂದಲೂ ನಿರ್ನಾಮ ಮಾಡುವ ಉದ್ದೇಶ ಅಡಗಿದೆ.

ರಾಜ್ಯದಲ್ಲಿ ಸಧ್ಯಕ್ಕೆ ಬಿಜೆಪಿಯಲ್ಲಿ ಅಧಿಕಾರ ಯಡಿಯೂರಪ್ಪ ನವರು ಹಾಗೂ ಅವರ ಸುತ್ತಮುತ್ತಲಿನ ಪಟಾಲಂಗಳಿಗೆ ಸೀಮಿತವಾಗಿದೆ ಎಂಬ ಆರೋಪದ ವಕ್ರದೃಷ್ಠಿಯನ್ನು ಹೈಕಮಾಂಡ್ ಗಮನಹರಿಸಿದೆ. ಈ ಕಾರಣಕ್ಕಾಗಿ ನಾಯಕತ್ವ ಬದಲಾವಣೆಗೆ ಲೆಕ್ಕಾಚಾರ ಹಾಕಲಾಗುತ್ತದೆ ಎಂದು ತಿಳಿದು ಬಂದಿದೆ.

ಕುಮಾರಸ್ವಾಮಿ, ಜೆಡಿಎಸ್ ಗೆ
ಬಿಜೆಪಿಯತ್ತ ಒಲವು ಹೆಚ್ಚಾಗಿದ್ದೇಕೆ?

ಬಿಜೆಪಿಯ ಬಗ್ಗೆ ಕುಮಾರಸ್ವಾಮಿ ಈಗ ಮೃದು ಧೋರಣೆ ತಳೆದಿದ್ದಾರೆ. ಅನೇಕ ಬಿಜೆಪಿಯಲ್ಲಿರುವ ನಾಯಕರು ಹಾಗೂ ಸಂಸದರು ಕುಮಾರಸ್ವಾಮಿ ಪರ ಭಾರಿ ಬ್ಯಾಟಿಂಗ್ ಆರಂಭಿಸಿದ್ದಾರೆ.

ರೈತರು ಭಾರಿ ವಿರೋಧ ಮಾಡಿದರೂ ಸಹ ರಾಜ್ಯ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ಕೃಷಿ ಹಾಗೂ ಭೂಸ್ವಾಧೀನ ತಿದ್ದುಪಡಿ ಕಾಯ್ದೆ ಯನ್ನು ಜೆಡಿಎಸ್ ಬೆಂಬಲಿಸಿದೆ. ಇದರ ಹಿಂದಿನ ಲೆಕ್ಕಾಚಾರವೇ ಯಾರಿಗೂ ಅರ್ಥವಾಗುವುದಿಲ್ಲ. ಒಟ್ಟಾರೆ ಗಾಳಿ ಬಂದಂತೆ ತೂರಿಕೊಳ್ಳುವ ತಂತ್ರ ಮಾತ್ರ ಅಡಗಿದೆ. ಒಂದು ಮಾತ್ರ ಸತ್ಯ ರಾಜ್ಯದ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಹೆಚ್ ಡಿ ಕೆ ಮಾತುಗಳು ಎಲ್ಲಾ ಲೆಕ್ಕಾಚಾರಕ್ಕೆ ಸರಿ ಹೊಂದುತ್ತವೆ.

vermicompost 1111

ಬಿಜೆಪಿಯ ಬತ್ತಳಿಕೆಯಿಂದ ಹೊರ ಬಿದ್ದ ಹೊಸ ಅಸ್ತ್ರಗಳು:

1) ಜನವರಿ 5 ರ ನಂತರ ರಾಜ್ಯ ರಾಜಕಾರಣಕ್ಕೆ ಹೊಸ ತಿರುವು

2 ) ಜನವರಿ 15 ರ ನಂತರ ಜೆಡಿಎಸ್ ಮತ್ತು ಬಿಜೆಪಿಗೆ ಸಂಕ್ರಮಣ ಕಾಲ ಆರಂಭ.

3) ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಅಥವಾ ವಿಲೀನವಾಗುವ ಸಾಧ್ಯತೆ ಇದ್ದೇ ಇದೆ.

4) ವಿಲೀನವಾದರೆ ಎಚ್. ಡಿ. ಕುಮಾರಸ್ವಾಮಿ ಸಿಎಂ ಅಥವಾ ಮೈತ್ರಿಯಾದರೆ ಎಚ್ ಡಿ ರೇವಣ್ಣನಿಗೆ ಡಿಸಿಎಂ ಪಟ್ಟ.

5) ಜೆಡಿಎಸ್ ಈಗಾಗಲೇ ಬಿಜೆಪಿ ಜೊತೆ ಪರೋಕ್ಷವಾಗಿ ಕೈ ಜೋಡಿಸಿದೆ.ಮಂಡ್ಯ ಡಿಸಿಸಿ ಬ್ಯಾಂಕ್ ಜೆಡಿಎಸ್ ಗೆ ಬಿಜೆಪಿ ನೆರವು ನೀಡಿದೆ. ಮುಂದಿನ ದಿನಗಳಲ್ಲಿ ಬಸವಕಲ್ಯಾಣ ಮತ್ತು ಮಸ್ಕಿ ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೇ ಇರುವ ಜೆಡಿಎಸ್ ಚಿಂತನೆಗಳು ಬಿಜೆಪಿಗೆ ವರದಾನವಾಗಲಿದೆ. ಇವೆಲ್ಲವೂ ರಾಜ್ಯ ರಾಜಕಾರಣ ಬದಲಾವಣೆ ದಾರಿಯಲ್ಲಿ ಸಾಗುತ್ತವೆ ಎನ್ನುವುದಕ್ಕೆ ಸಾಕ್ಷಿ ಸಂದೇಶಗಳು.

6) ರಾಷ್ಟ್ರೀಯ ಬಿಜೆಪಿ ನಾಯಕರು ಇತ್ತ ಯಡಿಯೂರಪ್ಪನವರ ಶಕ್ತಿಯೂ ಕೂಡ ಬಳಕೆ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದಾರೆ. ಮಗ ವಿಜಯೇಂದ್ರನಿಗೆ ರಾಜಕೀಯ ಶಕ್ತಿ ತುಂಬುವ ಮೂಲಕ ಯಡಿಯೂರಪ್ಪ ನವರ ಅಸಮಾಧಾನ ತಣ್ಣಗಾಗುವಂತೆ ಮಾಡುವ ಆಲೋಚನೆಯಲ್ಲಿ ಇದ್ದಾರೆ.

ಒಟ್ಟಾರೆ ರಾಜಕೀಯದಲ್ಲಿ ಏನಾಗುತ್ತದೆ ಎಂದು ನಿಖರವಾಗಿ ಹೇಳುವುದೇ ಕಷ್ಟ. ಏಕೆಂದರೆ ಯಡಿಯೂರಪ್ಪ ನವರ ಅಗಾಧ ಶಕ್ತಿ ಮತ್ತು ಸಿಎಂ ಪರಮಾಧಿಕಾರ ಇದ್ದರೂ ಕೂಡ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಮಾಡಲು ಇದುವರೆಗೂ ಸಾಧ್ಯವಾಗಲಿಲ್ಲ ಎಂದರೆ ಬಿಜೆಪಿ ಹೈಕಮಾಂಡ್ ಅನೇಕ ಒಳಸುಳಿ, ಲೆಕ್ಕಾಚಾರ ಇಟ್ಟುಕೊಂಡು ಹೆಜ್ಜೆ ಹಾಕುತ್ತಿದೆ ಎಂಬುದು ಎದ್ದು ಕಾಣುತ್ತದೆ.

Share This Article
Leave a comment