ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರಿಂದ ಈಗಿನ ಸಿದ್ದರಾಮಯ್ಯನವರವರೆಗೂ, ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರಿಂದ ಈಗಿನ ನರೇಂದ್ರ ಮೋದಿಯವರೆಗೆ ……..
ಈ ರಾಜ್ಯ ಮತ್ತು ರಾಷ್ಟವನ್ನು ಅನೇಕ ನಾಯಕರು ವಿವಿಧ ಪಕ್ಷಗಳ ಮುಖಾಂತರ ಮುನ್ನಡೆಸಿದ್ದಾರೆ. ಜನರ ಒಳಿತಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಕಾಲಕಾಲಕ್ಕೆ ತಕ್ಕಂತೆ ತಾಂತ್ರಿಕ ಪ್ರಗತಿಯಿಂದ, ಜಾಗತೀಕರಣದಿಂದ ಆಗಬಹುದಾದ ಒಂದಷ್ಟು ಉತ್ತಮ ಪ್ರಗತಿಗಳು ಬಿಟ್ಟರೆ ಇಡೀ ವ್ಯವಸ್ಥೆಯ ಸಮಾನ ಅಭಿವೃದ್ಧಿ ಸಾಧ್ಯವಾಗಿಲ್ಲ.
ಈ ಕ್ಷಣಕ್ಕೂ ಅನೇಕ ಜನರಿಗೆ ಸರ್ಕಾರವೇ ತಲುಪಿಲ್ಲ. ಬಡತನ ರೇಖೆಗಿಂತ ಕೆಳಗೆ ( BPL) ಕೋಟ್ಯಾಂತರ ಜನ ವಾಸಿಸುತ್ತಿದ್ದಾರೆ. ನಾಯಕರು ರೂಪಿಸಿದ ಯೋಜನೆಗಳು ಅದರ ಮೂಲ ಸ್ವರೂಪದಲ್ಲೇ ಜಾರಿಯಾಗಿದ್ದಿದ್ದರೆ ಇವತ್ತು ನಮ್ಮ ದೇಶ ಬಹಳ ಮುನ್ನಡೆಯಲ್ಲಿ ಇರುತ್ತಿತ್ತು. ಅದು ವಿಫಲವಾಗಲು ಬಹುಮುಖ್ಯ ಕಾರಣ ಆಡಳಿತ ಯಂತ್ರ.
ಇಡೀ ದೇಶದ ಆಡಳಿತ ವ್ಯವಸ್ಥೆಯನ್ನು ಮನುಷ್ಯನ ದೇಹಕ್ಕೆ ಹೋಲಿಸಬಹುದು. ಹೃದಯದಿಂದ ಪಂಪ್ ಆದ ರಕ್ತ ರಕ್ತನಾಳಗಳ ಮೂಲಕ ಸಂಪೂರ್ಣ ದೇಹಕ್ಕೆ ತಲುಪುತ್ತದೆ. ಆ ಮೂಲಕ ಎಲ್ಲಾ ಅಂಗಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಕಾಲ ಬೆರಳಿನ ತುದಿಯಿಂದ ನೆತ್ತಿಯವರೆಗೂ ಎಲ್ಲಾ ಕಡೆ ಚಲಿಸುತ್ತಿರುತ್ತದೆ. ಈ ಕ್ರಿಯೆಯಲ್ಲಿ ಎಲ್ಲೇ ಅಡಚಣೆಯಾದರು ಆ ಭಾಗಕ್ಕೆ ರಕ್ತ ಸಂಚಾರ ನಿಂತು ಅದು ಕ್ರಮೇಣ ಕೊಳೆಯುತ್ತಾ ನಿಷ್ಪ್ರಯೋಜಕವಾಗುತ್ತದೆ.
ಹಾಗೇ ಈ ಸರ್ಕಾರಗಳು ದೆಹಲಿ ಅಥವಾ ಬೆಂಗಳೂರಿನಲ್ಲಿ ಕುಳಿತು ಹೊರಡಿಸುವ ಆದೇಶಗಳು ಸರಾಗವಾಗಿ ಜನರಿಗೆ ತಲುಪುವುದು ಆಡಳಿತ ಯಂತ್ರದ ಮುಖಾಂತರ. ಅಂದರೆ ಅಧಿಕಾರಿಗಳು..ಆದರೆ ಈಗ ಆ ಯಂತ್ರವೇ ಬಹುತೇಕ ಬ್ಲಾಕ್ ಆಗಿದೆ ಅಥವಾ ಅಸಮರ್ಕವಾಗಿ ಕಾರ್ಯನಿರ್ವಹಿಸುತ್ತಿದೆ. ಅದರ ಚಾನಲ್ ಗಳು ಬಹಳ ಕಿರಿದಾಗಿವೆ. ಕೇವಲ ಸುಳ್ಳು ಮತ್ತು ಭ್ರಮೆಯ ಅಂಕಿ ಅಂಶ ನೀಡಿ ಜನರನ್ನು ವಂಚಿಸುತ್ತಿವೆ.
ಸರ್ಕಾರವೆಂಬುದು ರಾಜಕೀಯ ಪಕ್ಷಗಳಿಗೆ ಬಾಡಿಗೆ ಅಥವಾ ಲೀಸ್ ಮನೆಯಂತಾಗಿದೆ. ಹಣ,ಹೆಂಡ, ಜಾತಿ ಧರ್ಮದ ಹುಸಿ ಭರವಸೆಯೊ೦ದಿಗೆ ಮತದಾರರನ್ನು ಮರುಳು ಮಾಡಿ ಅಧಿಕಾರ ಗಳಿಸುವುದು.
ಮನೆ ಖಾಲಿ ಮಾಡುವಾಗ ( ಎಲ್ಲರೂ ಅಲ್ಲ) ಗಲೀಜು ಮಾಡಿ ಹೋಗುವುದು. ಹೊಸ ಸರ್ಕಾರ ಮತ್ತೆ ಸುಣ್ಣ ಬಣ್ಷ ಬಳಿದು ಮತ್ತದೇ 5 ವರ್ಷ ………….
Owner ಗಳೆಂಬ ಪ್ರಜೆಗಳಿಗೆ ಬಾಡಿಗೆ ಮನೆಯ ಆದಾಯವೇ ಗತಿ. ಒಮ್ಮೆ ಬಾಡಿಗೆ ಅಥವಾ ಲೀಸ್ ಗೆ ಕೊಟ್ಟ ಮೇಲೆ ಕರಾರಿನಂತೆ 5 ವರ್ಷ ಮಾತನಾಡುವ ಹಾಗೇ ಇಲ್ಲ. ಬಾಯಿ ಮುಚ್ಚಿಕೊಂಡು ಎಲ್ಲಾ ನವರಂಗಿ ಆಟಗಳನ್ನೂ ಸಹಿಸಿಕೊಳ್ಳಬೇಕು. ಇದನ್ನೆಲ್ಲಾ ನೋಡಿಕೊಳ್ಳಲು ನೇಮಿಸಿದ ಅಧಿಕಾರಿಗಳೆಂಬ ಮ್ಯಾನೇಜರ್ ಗಳು ಅಥವಾ ದಲ್ಲಾಳಿಗಳು ಒಂದು ಕಡೆಯಿಂದ ಸಂಬಳ ಇನ್ನೊಂದು ಕಡೆಯಿಂದ ಲಂಚ ಮತ್ತೊಂದು ಕಡೆಯಿಂದ ಕಮೀಷನ್ ಪಡೆದು ಕೊಬ್ಬಿದ ಗೂಳಿಗಳಾಗಿದ್ದಾರೆ.
ಹೇಗೆ ಬದಲಾಯಿಸುವುದು ಈ ವ್ಯವಸ್ಥೆಯನ್ನು,
ಯಾವಾಗ ಸುಧಾರಿಸುತ್ತದೆ ಬಡವರ ರೈತರ ಕೂಲಿ ಕಾರ್ಮಿಕರ ಸ್ಥಿತಿ, ಎಂದು ಸಿಗುತ್ತದೆ ಮಹಿಳೆಯರಿಗೆ ಸ್ವಾತಂತ್ರ್ಯ – ಸಮಾನತೆ,
ಎಲ್ಲಾ ಪ್ರಜೆಗಳ ಯೋಗ ಕ್ಷೇಮದ ಕನಸು ನನಸಾಗುವುದೆಂದು .
ವಾಸ್ತವಿಕ ಪರಿಹಾರದ ಆಲೋಚನೆಯಲ್ಲಿ ನಿಮ್ಮೊಂದಿಗೆ
- ವಿವೇಕಾನಂದ. ಹೆಚ್.ಕೆ
More Stories
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ