November 19, 2024

Newsnap Kannada

The World at your finger tips!

WhatsApp Image 2023 03 20 at 5.04.46 PM

ಚಿಂವ್ ಚಿಂವ್ ಗುಬ್ಬಚ್ಚಿ (Chim chim sparrow)

Spread the love

ಇಂದು ವಿಶ್ವ ಗುಬ್ಬಚ್ಚಿ ದಿನ. ಪ್ರತಿ ವರ್ಷ ಮಾರ್ಚ್ 20 ರಂದು ಚಿಂವ್ ಚಿಂವ್ ಗುಬ್ಬಚ್ಚಿಗಳಿಗೂ ಒಂದು ದಿನ ಮೀಸಲಿಟ್ಟಿದ್ದಾರೆ. ಇದಕ್ಕೆ ಕಾರಣ ಸ್ವಚ್ಚಂದವಾಗಿ ವಿಹರಿಸಿಕೊಂಡಿದ್ದ ಗುಬ್ಬಚ್ಚಿಗಳು ಈಗ ಅವಸಾನದ ಅಂಚಿಗೆ ತಲುಪಿವೆ.

WhatsApp Image 2023 03 20 at 5.03.15 PM

ಗುಬ್ಬಚ್ಚಿಗಳು ಯಾವಾಗಲು ಜೋಡಿಯಾಗಿರುತ್ತದೆ. ಅವುಗಳ ಬಣ್ಣ ಕಂದು. ಬೆನ್ನು ಮತ್ತು ಪಕ್ಕಗಳಲ್ಲಿ ಬಿಳಿ ಮತ್ತು ಕಪ್ಪು ಬಣ್ಣಗಳು ಮಿಶ್ರಿತವಾಗಿರುತ್ತದೆ. ಮುಂಭಾಗ ಬೆಳ್ಳಗಿರುತ್ತದೆ. ಗಂಡು ಗುಬ್ಬಿಗೆ ಗಂಟಲ ಮೇಲೆ ಕಪ್ಪು ಕಲೆ ಇರುತ್ತದೆ.

ಗುಬ್ಬಚ್ಚಿ, ಧಾನ್ಯಗಳನ್ನು, ಹುಳು-ಹುಪ್ಪಟೆ ಮತ್ತು ಗಿಡದ ಎಳೆ ಕುಡಿಗಳನ್ನು ತಿನ್ನುತ್ತವೆ. ಬೇಯಿಸಿದ ಆಹಾರ ಸಹ ಅದಕ್ಕೆ ತುಂಬ ಇಷ್ಟ. ತಾಯಿ ಗುಬ್ಬಿ ನಸು ಹಸಿರು ಮಿಶ್ರಿತ ಬಿಳಿ ಬಣ್ಣದ ಮೂರು ಅಥವ ನಾಲ್ಕು ಮೊಟ್ಟೆಗಳನ್ನು ವರುಷದಲಿ ಮೂರ್ನಾಲ್ಕು ಬಾರಿ ಇಡುತ್ತದೆ.

ಗುಬ್ಬಿಗಳು ಕೂಡ ವಿಶ್ವವ್ಯಾಪಿ. ಗುಬ್ಬಿ ಕಿಟಕಿಯ ಅಡಿಭಾಗ, ಬಾಗಿಲಿನ ಮೇಲ್ಭಾಗ, , ಮನೆಯ ಮೂಲೆಗಳು, ಗೋಡೆಗಳಲ್ಲಿನ ರಂಧ್ರಗಳು ಎಲ್ಲಿ ಜಾಗ ಸಿಕ್ಕರೆ ಅಲ್ಲಿ ಗೂಡು ಕಟ್ಟುತ್ತದೆ. ಮರಿ ಇಡುವ ಕಾಲ ಬಂದಾಗ ಒಟ್ಟಾಗಿಯೇ ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿಮಾಡಿ ಆ ಮರಿಗಳಿಗೆ ಹಾರಲು ಕಲಿಸುವವರೆಗೆ ಆದರ್ಶ ದಂಪತಿಗಳಂತೆ ಜೊತೆಯಾಗಿರುತ್ತದೆ.

ಗುಬ್ಬಿ ನಮಗೆ ಹೆಚ್ಚು ಪರಿಚಿತ, ಹೆಚ್ಚು ಆತ್ಮೀಯ. ಅಕ್ಕಿ ಆರಿಸುವಾಗ ಚೀಂವ್, ಚೀಂವ್ ಎಂದು ಹೆದರದೆ, ಕಾಳುಗಳನ್ನು ಕಬಳಿಸುತ್ತಾ ಕೈಗೆ ಸಿಗದಂತೆ ಸುರಕ್ಷಿತ ಅಂತರವನ್ನು ಕಾಪಾಡಿಕೊಂಡು ಹತ್ತಿರ ಹೋದಲ್ಲಿ ಪುರ್ರನೆ ಹಾರುತ್ತಿತ್ತು ಪುಟಾಣಿ ಗುಬ್ಬಿ.

ದಿನಬೆಳಗಾದರೆ ಮನೆಯೊಳಗೆ ಬಂದು ಲೂಟಿಮಾಡುತ್ತಾ, ಸಂಜೆಯಾದೊಡನೆ ಬೀದಿ ಬದಿಯ ವಿದ್ಯುತ್ ತಂತಿಯ ಮೇಲೆ ತೋರಣದಂತೆ ಸಾಲಾಗಿ ಕುಳಿತು ಮೀಟಿಂಗ್ ಮಾಡುತ್ತಿದ್ದ ಪರಿ ನೋಡಲು ಸೊಗಸಿತ್ತು. ಚಿಕ್, ಚಿಕ್ ಚೀಂವ್, ಚೀಂವ್ ಸಂವಾದ ನೋಡಲು ಕೇಳಲು ಇಂಪಿತ್ತು. ಎಲ್ಲಿ ನೀರು ಕಂಡರೂ ಪಟಪಟನೆ ರೆಕ್ಕೆ ಅರಳಿಸಿ ಮುಳುಗುಹಾಕಿ ಸ್ನಾನ ಮಾಡಿ ನಮಗೆ ಶುದ್ಧತೆಯ ಪಾಠ ಹೇಳಿಕೊಡುತ್ತಿದ್ದವು.

ದೇವರ ಹಿಂದಿನ ಪಟದಲ್ಲಿ, ಅಟ್ಟದಲ್ಲಿ ತಮ್ಮದೇ ಮನೆ ಮಾಡಿಕೊಂಡು ಎಷ್ಟೇ ಓಡಿಸಿದರೂ ಮತ್ತೆ ಮತ್ತೆ ಮನೆಯೊಳಗೆ ನುಗ್ಗಿ ಸಂಸಾರ ಮಾಡಿಕೊಂಡಿರುತ್ತಿದ್ದ ಗುಬ್ಬಚ್ಚಿಗಳು. ಮನೆಮನೆಯಲಿ ಚಿಲಿಪಿಲಿ ಗುಟ್ಟುತ್ತಿದ್ದ ಗುಬ್ಬಚ್ಚಿ, ಬಾಲ್ಯದ ನಿತ್ಯ ಸಂಗಾತಿಯಾಗಿದ್ದ ಗುಬ್ಬಚ್ಚಿ ಇದೀಗ ಅಪರೂಪದ ಅತಿಥಿಗಳಾಗಿವೆ.

ಕಾಂಕ್ರೀಟ್ ಕಾಡು, ಸೇತುವೆಗಳು, ಮೆಟ್ರೊ, ವಾಣಿಜ್ಯ ಸಂಕೀರ್ಣ, ಮೊಬೈಲ್ ಟವರುಗಳ ರೇಡಿಯೇಷನ್, ಗೂಡುಕಟ್ಟಲು ಜಾಗವಿಲ್ಲದ ಗಗನ ಚುಂಬಿ ಕಟ್ಟಡ ಎಂದು ಅಭಿವೃದ್ಧಿಯತ್ತ ಸಾಗುತ್ತಿರುವ ನಾವು ಕಾಗೆ-ಗುಬ್ಬಚ್ಚಿಗಳ ಆವಾಸಸ್ಥಾನವಾಗಿದ್ದ ಗಿಡ-ಗಂಟೆಗಳನ್ನು ಕಡಿಯುತ್ತಿದ್ದೇವೆ. ಗೂಡು ಕಟ್ಟಲು ಪಕ್ಷಿಗಳಿಗೆ ಸ್ಥಳವಿಲ್ಲ. ಕಲುಷಿತ ವಾತಾವರಣ, ಕೀಟನಾಶಕಗಳ ಬಳಕೆ, ಹುಳು ಹುಪ್ಪಟೆಗಳನ್ನು ಕಮ್ಮಿ ಮಾಡಿದೆ. ಇದರಿಂದಾಗಿ ಆಹಾರಕ್ಕೂ ಸಂಚಕಾರ.

ಬೆಚ್ಚನೆಯ ಗೂಡಿಗೆ ನೆರವಾಗುತ್ತಿದ್ದ ಹೆಂಚಿನ ಮನೆ, ಅಟ್ಟ, ಫೋಟೋ ಹಿಂಬಂದಿ, ಹಾಗೂ ಸಾಂಪ್ರದಾಯಿಕ ಮನೆಗಳೂ ಇಲ್ಲವಾಗಿ ಆಹಾರ-ನಿವಾಸ ಎರಡೂ ಕ್ಷೀಣವಾಗಿ ಗುಬ್ಬಿ ಸಂತತಿ ನಶಿಸುತ್ತಿದೆ. ಮುಂದೊಂದು ದಿನ ನಾವು ಮಕ್ಕಳಿಗೆ ಗುಬ್ಬಚ್ಚಿ ಅಂದರೆ ಹೀಗಿತ್ತು ಎಂದು ತೋರಿಸಬೇಕಾದ ಪರಿಸ್ಥಿತಿಯೂ ಬರಬಹುದು.

ಜಗತ್ತಿನ ಜೀವ ಸರಪಳಿಯಲ್ಲಿ ನಾವೂ ಒಂದು ಕೊಂಡಿ. ಈ ಭೂಮಿಯ ಮೇಲೆ ನಮ್ಮಷ್ಟೇ ಜೀವಿಸಲು ಪ್ರಾಣಿ ಪಕ್ಷಿಗಳಿಗೂ ಹಕ್ಕಿದೆ. ಅವುಗಳಿಗೂ ನಮ್ಮಂತೆಯೇ ಆತ್ಮವಿದೆ. ಅವನ್ನು ನಾವು ಗೌರವಿಸಬೇಕು.

WhatsApp Image 2023 03 20 at 5.02.41 PM

ಕವಿ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಿಗಾಗಿ ಬರೆದ ಕವನಗಳ ಸಂಕಲನ

ಗುಬ್ಬಿ ಗುಬ್ಬಿ
ಚಿಂವ್ ಚಿಂವ್
ಎಂದು ಕರೆಯುವೆ ಯಾರನ್ನು?

ಆಚೆ ಈಚೆ
ಹೊರಳಿಸಿ ಕಣ್ಣು
ನೋಡುವೆ ಏನನ್ನು?

ಮೇಲೆ ಕೆಳಗೆ
ಕೊಂಕಿಸಿ ಕೊರಳನು
ಹುಡುಕುವೆ ಏನಲ್ಲಿ?

ಕಾಳನು ಹುಡುಕುತ
ನೀರನು ನೋಡುತ
ಅಲೆಯುವೆ ಏಕಿಲ್ಲಿ?

ಕಾಳನು ಕೊಟ್ಟು
ನೀರನು ಕುಡಿಸುವೆ
ಆಡಲು ಬಾ ಇಲ್ಲಿ

ಹಣ್ಣನು ಕೊಟ್ಟು
ಹಾಲನು ನೀಡುವೆ
ನಲಿಯಲು ಬಾ ಇಲ್ಲಿ

Copyright © All rights reserved Newsnap | Newsever by AF themes.
error: Content is protected !!