January 10, 2025

Newsnap Kannada

The World at your finger tips!

coffee1

ಚಂಪಾನಂದ ಫ್ಯಾನ್ಸಿ ಸ್ಟೋರ್ಸ್

Spread the love

ಬೆಂಗಳೂರು ಬಿಟ್ಟು ಏಳೆಂಟು ವರ್ಷದ ನಂತರ ವಾಪಸ್ಸಾದೆ. ನನ್ನ ಹಳೆಯ ನೆನಪುಗಳನ್ನು ಕೆದಕಿಕೊಂಡು ಮಧುರ ನೆನಪುಗಳ ಕಲ್ಪನೆಗಳಲಿ ತೇಲುತ್ತಾ ನಗರದ ಮುಖ್ಯವಾದ ರಸ್ತೆಗಿಳಿದಾಗ ಒಂದು ದೊಡ್ಡ ಸುಸಜ್ಜಿತ ಫ್ಯಾನ್ಸಿ ಅಂಗಡಿ ಕಾಣಿಸಿತು. ಅರೆ ಇದು ತೀರಾ ಹೊಸತು. ಮೊದಲು ಅಲ್ಲಿ ಏನಿತ್ತು ಎಂದು ಯೋಚಿಸಿ ಯೋಚಿಸಿ ಸಾಕಾಯಿತು. ಅಲ್ಲೇನಿತ್ತೋ ತಿಳಿಯದು ಆದರೆ ಈ ಸುಂದರವಾದ ಅಂಗಡಿ ಮಾತ್ರ ಎಲ್ಲರನ್ನು ಆಕರ್ಷಿಸಿತ್ತು. ಪರಿವರ್ತನೆ ಜಗದ ನಿಯಮ. ಹಳೆಯ ನೀರು ಕೊಚ್ಚಿಕೊಂಡು ಹೋಗಬೇಕು ಹೊಸ ನೀರು ಬರಬೇಕು ಎಂದು ಹೆಚ್ಚು ತಲೆ ಕೆಡಿಸಿಕೊಳ್ಳದೇ ಮುಂದೆ ಸಾಗಿದೆ. ಕೆಲ ದಿನಗಳ ನಂತರ ನನ್ನ ಬ್ಯಾಂಕಿನ ಗೆಳೆಯ ಸಿಕ್ಕಿದ.
‘ಲೋ ಯಾವಾಗಲೋ ಬಂದೇ. ಮಗನೆ, ಬಂದವನು ಒಂದು ಫೋನು ಮಾಡಬಾರದೇ? ಹೋಗಲಿ ನಾನು ಫೋನು ಮಾಡಿದರೆ ನಿನ್ನ ಫೋನು ಸದಾ ನಿದ್ರಾವಸ್ಥೆಯಲ್ಲೇ ಇರುತ್ತದೆ. ಸಧ್ಯ ಈ ದಿನ ಸಿಕ್ಕಿದೆ. ನಾಳೆಯಿಂದ ಲಾಕ್ ಡೌನು. ನಡಿ ಸುತ್ತಾಡಿಕೊಂಡು ಬರೋಣ ಹಾಗೆ…. ನಮ್ಮ ಹಳೆಯ ಕಾಫೀ ಬಾರಿನಲ್ಲಿ ಒಂದು ಸ್ಟ್ರಾಂಗ್ ಕಾಫಿ ಕುಡಿಯೋಣ …..’ಎಂದು ಎಂಟು ವರ್ಷಗಳ ಹಿಂದೆ ನಾವು ಗೆಳೆಯರೆಲ್ಲಾ ಸೇರಿ ಆನಂದಿಸುತ್ತಿದ್ದ ಆ ಕ್ಷಣಗಳನ್ನು ಆ ಕಾಫಿಯ ಸ್ವಾದವನ್ನು ನೆನಪು ಮಾಡಿದ ಸುರೇಂದ್ರ. ಎಲ್ಲರಿಗೂ ಬರುವಂತೆ ತಿಳಿಸುತ್ತೇನೆ ಎಂದು ಗೆಳೆಯ ವೃಂದಕ್ಕೆಲ್ಲಾ ನಾನು ಬಂದಿರುವ ವಿಷಯ ತಿಳಿಸಿದ. ಅರ್ಧ ಗಂಟೆಯಲ್ಲಿ ಎಲ್ಲರೂ ನಮ್ಮ ಅಚ್ಚು ಮೆಚ್ಚಿನ ಕಾಫಿ ಬಾರಿನಲ್ಲಿ ಮಾತಾಡುತ್ತಾ ಕುಳಿತೆವು. ಮಾತುಗಳು ನಮ್ಮ ಬಾಲ್ಯದಿಂದ ಶುರುವಾಗಿ ಇಲ್ಲಿಯವರೆಗೂ ಸಾಗಿತ್ತು. ಆಗಲೇ ಮೂರನೇ ರೌoಡು ಕಾಫಿ ಸೇವನೆ ಆಗುತ್ತಿತ್ತು. ಸರಿಯಾಗಿ ಅದರ ಎದುರಿಗೆ ಈ ಫ್ಯಾನ್ಸಿ ಸ್ಟೋರ್ಸ್. ನನಗೆ ಕುತೂಹಲ ತಡೆಯಲಾರದೆ ಕೇಳಿದೆ. ‘ ‘ಇದ್ಯಾವುದ್ರೋ ಇದು ಹೊಸ ಅಂಗಡಿ ……ಮೊದಲು ಅಲ್ಲೇನಿತ್ತು ನೆನಪೇ ಆಗ್ತಾ ಇಲ್ಲ. ನಾವು ವರ್ಷಾನುಗಟ್ಟಲೆ ಈ ಕಾಫೀ ಬಾರಿನಲ್ಲಿ ಕುಳಿತು ಅತ್ತ ನೋಡಿದ್ದೇವೆ. ಆದರೆ ಅಲ್ಲೇನಿತ್ತು ಎಂದು ತಿಳಿಯುತ್ತಲೆ ಇಲ್ಲ. …’
ನನ್ನ ಮಾತಿಗೆ ಗೆಳೆಯರು ಮುಸಿ ಮುಸಿ ನಗಲು ಶುರು ಮಾಡಿದರು.
‘ಒ ಏನ್ ಗುರು. ಆ ಅಂಗಡಿ ಮೇಲೆ ಭಾಳಾ ಆಸಕ್ತಿ ಬಂದ ಹಾಗಿದೆ. …..’
‘ಏಯ್ ಪಾಪ ಅವನಿಗೇನೋ ಗೊತ್ತು. ಹೇಳೋ ಅದು ಯಾವ ಅಂಗಡಿ ಅಂತಾ….’
‘ ಹೌದಲ್ಲ ನಮ್ಮ ಗುಂಪಿನಲ್ಲಿ ಇವನೇ ಗಾಂಧಿ. ಯಾವ ಅಭ್ಯಾಸಾನು ಇಲ್ಲ. ಪಾಪ ನಿಜ ಹೇಳೋ….’
ಇವರ ಒಗಟಿನ ಮಾತುಗಳು ನನಗೆ ಮತ್ತಷ್ಟೂ ಕುತೂಹಲ ಕೆರಳಿಸಿತು.
ಲೋ ಜಗ್ಗಿ . ಚಂಪಾಬಾಯಿ ಅಂಗಡಿ ಕಣೋ ಅದು. ….’ ಕೇಶವ ಕಡೆಗೂ ಒಗಟನ್ನು ಬಿಡಿಸಿದ.
‘ಯಾವ ಚಂಪಾಬಾಯಿ…….?’
‘ಅದೇ ನಮ್ಮ ದೊಡ್ಡವರ ಚಪಲ ಚನ್ನಿಗರಾಯರ ಅಡ್ಡಾ…… ಅಲ್ಲಿಯ ಯಜಮಾನ್ತಿ ಚಂಪಾಬಾಯಿ….. ಏನೋ ನೀನು ಬೆಂಗಳೂರು ಬಿಟ್ಟವನು ಎಲ್ಲಾ ಮರೆತಿದೀಯ.
‘ಜಗ್ಗಿ ಅದೊಂದು ದೊಡ್ಡ ಕಥೆ ಕಣೋ . ಒಂದು ಸಿ೦ಹದ ಕಥೆ ನಿಂಗೆ ಗೊತ್ತಲ್ಲ ಇದ್ದಕ್ಕಿದ್ದಂತೆ ಸoನ್ಯಾಸ ತೊಗೋಬೇಕೂಂತ ನಿರ್ಧಾರ ಮಾಡುತ್ತೆ……. ಪ್ರಾಣಿಗಳೆಲ್ಲಾ ಅದಕ್ಕೆ ಕಾಟ ಕೊಡಕ್ಕೆ ಶುರು ಮಾಡುತ್ವೆ……..’
‘ಹೂಂ ….’
‘ಇದು ಅದೇ ಥರಾನೆ. ಇದ್ದಕ್ಕಿದ್ದಂತೆ ಒಂದು ದಿನ ಚಂಪಾಬಾಯಿಗೆ ಸಂನ್ಯಾಸ ತೆಗೆದುಕೊಳ್ಳೋ ಮನಸ್ಸಾಯಿತು. …..’
‘’ಯಾಕೆ….’
‘ಏಯ್ ಪಾಪ ವಯಸ್ಸಾಯಿತು. .. ಬೇಕಾದಷ್ಟೂ ದುಡ್ಡಿತ್ತು.
‘ಲೋ ಇಂಚಿಂಚಾಗಿ ಯಾಕ್ರೋ ಕೊಲ್ತಿರಾ. ಸರಿಯಾಗಿ ಹೇಳ್ರೋ … ನನ್ನ ಸಹನೆ ಮೀರುತ್ತಿತ್ತು.
‘ಸುರೇಂದ್ರ ಹೇಳಪ್ಪಾ….. ಇವನೂ ಪಾರ್ಟಿ ಅವಳು ಅಂಗಡಿ ತೆಗೆಯೋದರಲ್ಲಿ …’
ದಿನೇಶ ಅವನ ಕಾಲೆಳೆಯದೆ ಬಿಡಲಿಲ್ಲಾ.
‘ಅಯ್ಯೋ ಮಾರಾಯ. ನಾನು ಬರೀ ಲೋನ್ ಪೇಪರ್ಸ್ ರೆಡಿ ಮಾಡಿದೆ ಅಷ್ಟೇ….. ಜಗ್ಗಿ, ಆಯಮ್ಮ ಒಂದು ದಿನ ಸೀದಾ ಬ್ಯಾಂಕಿಗೆ ಬಂದ್ಲು ಕಣೋ. ಬಂದವಳೇ ತನ್ನ ಪೋಟಲಿ ತಿರುಗಿಸುತ್ತಾ ನಮ್ಮ ಮ್ಯಾನೇಜರ್ ಮುಂದೆ ಕೂತಳು.. ‘ಸಾರ್ ನಾನು ಫ್ಯಾನ್ಸಿ ಸ್ಟೋರ್ಸ್ ತೆಗಿಬೇಕೊಂತಿದೀನಿ. ನಂಗೆ ಸಾಲ ಬೇಕು. ನಿಮ್ಮನ್ನು ನೋಡಿದ ಹಾಗಿದೆ ….ನೀವು ನಮ್ಮ ಕಸ್ಟೋಮರ್ ಅಲ್ವಾ ಅಂದ್ಲು. ಮ್ಯಾನೇಜರ್ ಹೆದರಿ ಹೋದರು. ಆಗಿನ ಕಾಲಕ್ಕೆ ಚಂಪಾಬಾಯಿ ಹೆಸರು ದಿನ ಬೆಳಗಾದರೆ ಟಿ ವಿಯಲ್ಲಿ ಪೇಪರಿನಲ್ಲಿ ಫೇಮಸ್ಸೊ ಫೇಮಸ್ಸು. ಪಾಪ ಮ್ಯಾನೇಜರ್ ಏಯ್ ನಾನು ನಿನ್ನ ಕಸ್ಟೋಮರ್ ಅಲ್ಲಮ್ಮ . ನೀನು ನನ್ನ ಕಸ್ಟೋಮರ್ ಅಂದು ಬಿಟ್ಟರು ಗಾಭರಿಯಲ್ಲಿ. ಅವಳು ಪಟ್ಟು ಬಿಡದೆ ಎಲ್ಲ ಒಂದೇ ಅಲ್ವಾ…. ಈಗ ಸರಕಾರ ನಮಗೆ ಸ್ವ-ಉದ್ಯೂಗ ಮಾಡಕ್ಕೆ ಏನೇನೋ ಯೋಜನೆ ತಂದಿದ್ಯಂತಲ್ಲ. ಅದರಲ್ಲಿ ನನಗೆ ಸಾಲ ಬೇಕು. ಎಂದು ಮೇಜಿನ ಮೇಲೆ ಕೈಕುಟ್ಟಿದಳು. ಈಗ ನೀನು ಸ್ವ-ಉದ್ಯೋಗ ಮಾಡುತ್ತಿದ್ದೀಯಲ್ಲ ಅದಕ್ಕೇನು ಬಂಡವಾಳ ಬೇಡ ಏನು ಬೇಡ ಅಂದರು. ಅದಕ್ಕವಳು – ಬಂಡವಾಳ ಯಾಕಿಲ್ಲ ಮನೆಯೆಲ್ಲಾ furnish ಮಾಡಿಲ್ವಾ? ನೀವೆಲ್ಲಾ ಬಂದಾಗ ನಿಮಗೆ drinks ವಗೈರೆ ಗೆ ಹಣ ಸುರಿದಿಲ್ವಾ? ಪ್ರತಿಯೊಬ್ಬ ಕಸ್ಟೋಮರ್ ಬಂದು ಹೋದ ಮೇಲೆ ಹಾಸು-ಹೊದಿಕೆ ಎಲ್ಲಾ ಬದಲಾಯಿಸೋಲ್ವಾ? ಲಾಂಡ್ರಿಗೆ ನಮಗೆ ತಿಂಗಳಿಗೆ ಹತ್ತು ಸಾವಿರ ಆಗುತ್ತೇ ಸಾರ್. ಆದರೆ ಅದನ್ನ ನಡೆಸೋಕೆ ಯಾವ ಯೋಜನೆನೂ ಇಲ್ಲ. ಏನೋ ಕಸ್ಟೋಮರ್ಸ ಸ್ವಲ್ಪ ಧಾರಾಳ ಸ್ವಭಾವದವರಾದರೆ ಸರಿ ಇಲ್ದೇ ಓ ಸಿ ಕಸ್ಟೋಮರ್ಸ ಆದರೆ ಎಷ್ಟು ಕಷ್ಟ. ಹೆದರಿದ ಮ್ಯಾನೇಜರು ನನ್ನನ್ನು ಕರೆದು ನೋಡಿ ಸುರೇಂದ್ರ ಸ್ವಲ್ಪ ಇವರಿಗೆ ಹೆಲ್ಪ ಮಾಡಿ ಎಂದು ನನ್ನ ಟೇಬಲ್ ಮುಂದಕ್ಕೆ ಅವಳನ್ನು ತಳ್ಳಿ ತಾವು ನಿಶ್ಚಿಂತರಾದರು. ಚಂಪಾಬಾಯಿ ನನ್ನ ಮುಂದೆ ಕುಳಿತಿದ್ದರೆ ಎಲ್ಲರೂ ನನ್ನನ್ನು ನೋಡುವವರೆ, ನಗುವವರೆ. ಅವಳೋ ಎಲ್ಲರಿಗೂ ಹಲ್ಲು ಕಿರಿಯುತ್ತಾಳೆ. ಸ್ವಲ್ಪ ಚಿಕ್ಕವರಾದರೆ ನೀವು ಸೋನು ಕಸ್ಟೋಮರ್ ಅಲ್ವಾ? ಅಂತಾಳೆ ಸ್ವಲ್ಪ ವಯಸ್ಸಾದವರನ್ನು ಒ ಬಿಡಿ ನೋಡಿದೀನಿ. ನೀವು ಎಷ್ಟು ಸಲ ಬಂದಿದೀರಾ , ಎನ್ನುತ್ತಾಳೆ. ಅವಳ ಬಾಯಿ ಮುಚ್ಚಿಸಿ ಅವಳನ್ನು ಕಳುಹಿಸುವುದರೊಳಗೆ ಸಾಕಾಯಿತು. ಕೊನೆಗೊ ಅವಳ ಪೇಪರ್ಸ್ ಮೂವ್ ಮಾಡಿಸಿ ಅವಳಿಗೆ ಸಾಲ ಕೊಡಿಸುವ ಹೊತ್ತಿಗೆ ಸಾಕು ಬೇಕಾಯಿತು. …….’
‘ಅವಳಿಗ್ಯಾಕಪ್ಪ ಸಾಲ.. ಟ್ಯಾಕ್ಸ್ ತಪ್ಪಿಸಿಕೊಳ್ಳೋಕೆ. ಅಷ್ಟೇ. …’
‘ಇನ್ನೊಂದು ಮಜಾ ಏನು ಗೊತ್ತಾ. ಇವಳು ಒಂದು ಕಡೇನೂ ಲಂಚ ಕೊಡದೆ ಒಂದು ಹದಿನೈದು ದಿನಗಳಲ್ಲಿ ಅಂಗಡಿ ಇಟ್ಟೇ ಬಿಟ್ಟಳಪ್ಪ. ತನ್ನ ಜೊತೆ ಇದ್ದವರನ್ನೆಲ್ಲಾ ಸೇಲ್ಸ್ ಗರ್ಲ್ಸ್ ಮಾಡಿದಾಳೆ. ಮಜಾ ಅಂದ್ರೆ ಆ ರೋಲ್ಕಾಲ್ ಮಾಡೋವ್ರು ಒಂದು ದಿನ ಇವಳ ಅಂಗಡಿಗೆ ನುಗ್ಗಿ ಗಲಾಟೆ ಮಾಡಿದ್ರಂತೆ. ಅದಕ್ಕೆ ಇವಳು ಸೀದಾ ಪೊಲೀಸ್ ಸ್ಟೇಷನ್ ಗೆ ಫೋನು ಮಾಡಿ ಅವರಿಗೂ ಅದೇ ಡೈಲಾಗು …’ನೀವು ನಮ್ಮ ಕಸ್ಟೋಮರ್ ಅಲ್ವಾ… ನೋಡಿ ಸ್ವಲ್ಪ ಈ ರೋಲ್ಕಾಲ್ ಮಾಡೋವ್ರಿಗೆ ಸ್ವಲ್ಪ ಹೇಳಿ. ನಮಗೆ ದುಡ್ಡು ಕೊಡ್ತಾ ಇದ್ದವರೆಲ್ಲಾ ಈಗ ನಮ್ಮನ್ನೆ ದುಡ್ಡು ಕೇಳಿದ್ರೆ ಹೇಗೆ ಅಂದಳಂತೆ…. ಆ ಪೊಲೀಸಪ್ಪ ಸರಿ ನಮಗೇನು ಲಾಭ ನಮಗೇನಾದ್ರೂ ಸಿಗುತ್ತಾ ಅಂದನಂತೆ. ಈ ಚಂಪಾಬಾಯಿ, ನೀವು ಎಷ್ಟು ಸಲ ದುಡ್ಡು ಕೊಡದೆ ಹೋಗಿದಿರ. ಆಗ ನಾವು ಫ್ರೀಯಾಗಿ ನಿಮಗೆ ಮನರಂಜನೆ ಕೊಡಲಿಲ್ವಾ…. ಅಂತಾ ಬಾಯಿ ಮುಚ್ಚಿಸಿದಳಂತೆ……. ನಮ್ಮ ಗಿರಾಕಿಗಳು ಸಾಮಾನ್ಯರಲ್ಲ ಬಿಡು. ಫ್ಯಾನ್ಸಿ ಸ್ಟೋರ್ಸ್ ಗೆ ಹೋದವರು ಅಲ್ಲಿರುವ ವಸ್ತುಗಳ ಖರೀದಿ ಮಾಡಬೇಕು ಬರಬೇಕು. ಅದು ಬಿಟ್ಟು, ಇದರ ರೇಟೇಷ್ಟೂ , ನಿಂದು ಎಷ್ಟು ಅಂತಾ ಹೇಳಿ ಕಪಾಳ ಮೋಕ್ಷ ಮಾಡಿಸಿಕೊಂಡವರು, ಮುತ್ತಿನ ಸರಾ ಬೇಕೊಂತ ಹೋಗಿ ಮೂತಿ ಮುಂದೆ ಮಾಡಿ ಹಲ್ಲು ಉದುರಿಸಿಕೊಂಡವರೂ ಇದ್ದಾರೆ.
‘ಸರಿಯಪ್ಪ ಅವಳು ಮಾಡುತ್ತಿದ್ದುದು ಸ್ವ-ಉದ್ಯೋಗವೇ ಅಲ್ಲವಾ? ಅದು ಬಹಳ ಲಾಭದಾಯಕವಾಗಿತ್ತು. ಅದನ್ನ್ಯಾಕೆ ಬಿಟ್ಟಳು. ….ನನಗೆ ನೆನಪಿರುವ ಹಾಗೆ ಒಮ್ಮೆ ದೊಡ್ಡ ಹಗರಣ ಆಗಿತ್ತು. ಅವಳು ಒಂದು ಜಾಹೀರಾತು ಕೊಟ್ಟಿದ್ದಳು. ‘ ಸ್ವ-ಉದ್ಯೋಗಸ್ಥೆ, ಸುಂದರ , ಸುಶೀಲೆ, ಹಣವಂತೆ, ಸ್ವಂತ ಮನೆ ಹೊಂದಿರುವ, ಐದು ಅಡಿ ನಾಲ್ಕಿಂಚು ಗೌರವರ್ಣ ಹೊಂದಿರುವ ಕನ್ಯೆಗೆ ವರ ಬೇಕಾಗಿದೆ. ಜಾತಿ ಮತ ಯಾವುದಾದರೂ ಪರವಾಗಿಲ್ಲ. ಸ್ವ-ಉದ್ಯೋಗಕ್ಕೆ ಪ್ರೋತ್ಸಾಹಿಸುವ ಗುಣವಂತ ವರನಿಗೆ ಆದ್ಯತೆ…’ ಅಂತಾ. ಎಷ್ಟೋ ಜನ ಹೋಗಿ ಬೇಸ್ತು ಬಿದ್ದು ಬಂದಿದ್ದಾರೆ. ಅಂತೂ ಚಂಪಾಬಾಯಿ ಬರೀ ದಂಧೆ ನಡೆಸುವವಳಲ್ಲ. ನವ ನವೋನ್ಮೇಷಿ ಚಿಂತನೆ ಉಳ್ಳವಳು. ತನ್ನ ಕೈ ಕೆಳಗೆ ಕೆಲ್ಸ ಮಾಡುತ್ತಿದ್ದವರಿಗೂ ಉದ್ಯೋಗದಾತೆ. ಭಲೇ ಭಲೇ…..’
‘ಹೌದಪ್ಪ ಅಂಗಡಿ ತೆರೆಯುವಾಗ ಅವರಿಗೆ option ಕೊಟ್ಟಳಂತೆ. ನಿಮಗೆ ಬೇಕಾದರೆ ನನ್ನ ಜೊತೆ ಮುಂದುವರೆಯಬಹುದು ಇಲ್ಲವಾದರೆ ಬಿಟ್ಟು ಹೋಗಬಹುದೂಂತ. ಒಂದಿಬ್ಬರು ಬಿಟ್ಟರೆ ಎಲ್ಲರೂ ಅದೇ ಅಂಗಡಿಯಲ್ಲಿ ಸೇಲ್ಸ್ ಗರ್ಲ್ ಆಗಿದಾರಪ್ಪ. ಈಗ ತನ್ನ ಬಗ್ಗೆ ಜಾಹೀರಾತು ಕೊಡುವುದು ಬಿಟ್ಟು ಆ ಹುಡುಗಿಯರಿಗಾಗಿ ಜಾಹೀರಾತು ಕೊಡುತ್ತಿದ್ದಾಳೆ. …’
‘ ಜಗ್ಗಿ ಈ ಅಂಗಡಿಯ opening ceremony ನೋಡಬೇಕು. ರಾಜಕಾರಿಣಿಗಳು, ಚಿತ್ರ ಕಲಾವಿದರು, ದೊಡ್ಡ ದೊಡ್ಡ ಉದ್ಯೋಗಪತಿಗಳು, ಇನ್ನು ಇವರನ್ನೆಲ್ಲಾ ರಕ್ಷಿಸಲು ಪೊಲೀಸ್ ವಿಭಾಗ . ಹಾಗಾಗಿ ಎಲ್ಲರ ಕೃಪಾ ಕಟಾಕ್ಷ ಇದೆಯಪ್ಪ. ….’
ನನಗೆ ಕುತೂಹಲ ಹುಟ್ಟಿದ್ದು ಆ ಅಂಗಡಿಯ ಹೆಸರಿಗೆ ‘ ಇದ್ಯಾರ ಹೆಸರು ಅವಳ ಅಂಗಡಿಗೆ ಇಟ್ಟಿರುವುದು…… ಬಹಳ ವಿಚಿತ್ರವಾಗಿದೆ ?
‘ಚಂಪಾನಂದ ಫ್ಯಾನ್ಸಿ ಸ್ಟೋರ್ಸ್ …….’
ಗೆಳೆಯರು ನಗಲು ಶುರು ಮಾಡಿದರು.
ಲೋ ದಡ್ಡಾ …. ಅವಳ ಹೆಸರ ಜೊತೆ ಅವಳ ಪರಮಾಪ್ತರಾದ ಭಗ್ನಾನಂದಸ್ವಾಮಿಗಳ ನಂದಾ’ ಎರಡೂ ಸೇರಿಸಿ ಇಟ್ಟಿದ್ದಾಳಪ್ಪ. ಅವರ ಕೃಪೆ ಇಲ್ಲದೆ ಅಂಗಡಿಗೆ ಈ ಜಾಗ ಸಿಗುತ್ತಿತ್ತೇ? ಅವಳ ಹಳೆಯ ಸ್ವ-ಉದ್ಯೋಗದಲ್ಲಿ ಇವಳೊಂದಿಗೆ ಪುಕ್ಕಟ್ಟೆಯಾಗಿ ಐಕ್ಯವಾಗಿದ್ದ ಸ್ವಾಮಿಗಳು ಈಗ ಆಶೀರ್ವಾದಪೂರ್ವಕವಾಗಿ ಈ ಜಾಗವನ್ನು ದಾನವಾಗಿ ನೀಡಿ ತಮ್ಮ ಪಾಪವನ್ನು ಪರಿಹರಿಸಿಕೊಂಡಿದ್ದಾರೆ. ನನಗೂ ನಗು ತಡೆಯಲಾಗಲಿಲ್ಲ. ನನಗೆ ಥಟ್ಟನೆ ಹೊಳೆಯಿತು ‘ ಅರೆ ಇಲ್ಲಿ ಅವರ ಆಶ್ರಮದ ಕಛೇರಿ ಇತ್ತಲ್ಲವೇ?
‘ಒಂದು ಕೆಲ್ಸ ಮಾಡೋಣ ನಾವು ಅಂಗಡೀಲಿ ಏನಾದ್ರೂ ಕೊಂಡುಕೊಳ್ಳೋಣ .. ಅವಳ ಹಿಂದಿನ ಸ್ವ-ಉದ್ಯೋಗದಲ್ಲಿ ನಾವು ಅವಳಿಗೆ ಯಾವ ಸಹಾಯವನ್ನು ಮಾಡಲಿಲ್ಲ ಈಗಲಾದರೂ ……ನಮ್ಮ ಕೈಲಾದಷ್ಟೂ ಸಹಾಯ ಮಾಡೋಣ .’ ನನಗನಿಸಿದ್ದನು ನಾನು ಹೇಳಿದೆ. ಅದಕ್ಕೆ ಕೇಶವಾ
‘ಯಾಕಪ್ಪಾ ಅವಳ ಬಾಯಿಂದ ಕೇಳೋದಕ್ಕೆ ಅಷ್ಟು ಆಸೇನಾ -ನೀವು ನಮ್ಮ old customer – ಅಂತ’
ನಾಲ್ಕನೇ ಡೋಸ್ ಕಾಫಿ ಬಾಯಿಗಿಡುವವರೆಗೂ ನಗುತ್ತಲೇ ಇದ್ದೆವು.

ravi sharma
ಕೆ. ರವಿಶರ್ಮ ಬೆಂಗಳೂರು 9845382142
Copyright © All rights reserved Newsnap | Newsever by AF themes.
error: Content is protected !!