ಕೆ.ಆರ್. ಆಸ್ಪತ್ರೆಗೆ ಸಚಿವ ಸೋಮ ಶೇಖರ್ ದಿಢೀರ್ ಭೇಟಿ:ಕೋವಿಡ್ ಪ್ರಕರಣಗಳ ಪರಿಸ್ಥಿತಿ ಅವಲೋಕನ

Team Newsnap
1 Min Read
  • ಸ್ವಚ್ಛತೆ, ಚಿಕಿತ್ಸೆ, ಸೋಂಕಿತರ ಸಮಸ್ಯೆಗಳ ಮಾಹಿತಿ ಸಂಗ್ರಹ
  • ಯಾವುದೇ ಕಾರಣಕ್ಕೂ ಕೊರತೆಯಾಗದಂತೆ ನೋಡಿಕೊಳ್ಳಲು ವೈದ್ಯರಿಗೆ ಸೂಚನೆ
  • ಸಚಿವ ಎಸ್ ಟಿ ಎಸ್ ಮಿಂಚಿನ ಸಂಚಲನ
  • ಕೋವಿಡ್ 2ನೇ ಅಲೆ ಬಗ್ಗೆ ಎಚ್ಚರದಿಂದಿರಲು ಜನತೆಗೆ ಮನವಿ.
    ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಮಂಗಳವಾರ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಕೋವಿಡ್ ಪ್ರಕರಣಗಳ ಸ್ಥಿತಿಗತಿಯನ್ನು ಅವಲೋಕಿಸಿದರು. ಸಚಿವ ಸೋಮಶೇಖರ್ ವಾರ್ಡ್ ಗಳ ಲಭ್ಯತೆ, ಕೋವಿಡ್ ಸೋಂಕಿತರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಔಷಧಗಳ ಲಭ್ಯತೆ, ಊಟ-ಉಪಹಾರ ಸರಬರಾಜು ಸೇರಿದಂತೆ ಕುಂದು-ಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿದರು. ವೈದ್ಯಾಧಿಕಾರಿಗಳು ಹಾಗೂ ಸೋಂಕಿತರಿಂದ ಮಾಹಿತಿ ಪಡೆದ ಸಚಿವರು, ಯಾವುದೇ ಸಮಸ್ಯೆಗಳಿದ್ದರೂ ತಮ್ಮ ಗಮನಕ್ಕೆ ತರುವಂತೆ ತಿಳಿಸಿದರು.

ಔಷಧಗಳು ಸೇರಿದಂತೆ ಯಾವುದೇ ನ್ಯೂನತೆಗಳು, ಸಮಸ್ಯೆಗಳಿದ್ದರೂ ತಮಗೆ ತಿಳಿಸಿದರೆ ಸರ್ಕಾರದ ಗಮನಕ್ಕೆ ತಂದು ತಕ್ಷಣ ಬಗೆಹರಿಸಿಕೊಡುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ಮೈಸೂರು ಹಾಗೂ ಸುತ್ತಮುತ್ತಲಿನ ಭಾಗದ ಜನತೆಗೆ ಸಮಸ್ಯೆಯಾಗಬಾರು. ಆ ನಿಟ್ಟಿನಲ್ಲಿ ನಾನೂ ಸೇರಿದಂತೆ ಇಲ್ಲಿನ ಜಿಲ್ಲಾಡಳಿತ, ಜನಪ್ರತಿನಿಧಿಗಳು ಬದ್ಧವಾಗಿದ್ದೇವೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಯವಾರದ ರೋಹಿಣಿ ಸಿಂಧೂರಿ, ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಎಲ್.ನಾಗೇಂದ್ರ ಸೇರಿದಂತೆ ಇನ್ನಿತರ ಮುಖಂಡರು ಇದೇ ವೇಳೆ ಉಪಸ್ಥಿತರಿದ್ದರು.

ಎಚ್ಚರದಿಂದಿರಲು ಜನತೆಗೆ ಮನವಿ

ಈಗ ಕಾಡುತ್ತಿರುವ ಕೋವಿಡ್ ಎರಡನೇ ಅಲೆ ಬಹಳ ಗಂಭೀರವಾಗಿದೆ. ಹೀಗಾಗಿ ಸಾರ್ವಜನಿಕರು ಸಹ ಇದನ್ನು ಅಷ್ಟೇ ಗಂಭೀರವಾಗಿ ಪರಿಗಣಿಸಬೇಕು. ಸ್ವಯಂಪ್ರೇರಿತವಾಗಿ ಸರ್ಕಾರದ ಜೊತೆಗೆ ಕೈಜೋಡಿಸಿ ನಮ್ಮ ನಾಡನ್ನು ಕೊರೋನಾ ಮುಕ್ತ ಮಾಡುವಲ್ಲಿ ಶ್ರಮವಹಿಸಬೇಕು. ಯಾರಿಗೇ ಸಹ ರೋಗದ ಲಕ್ಷಣಗಳು ಕಂಡುಬಂದರೆ ತಕ್ಷಣ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಸೋಂಕು ಉಲ್ಬಣವಾಗದಂತೆ ನೋಡಿಕೊಳ್ಳಬೇಕು. ಜೊತೆಗೆ ಅನಾವಶ್ಯಕವಾಗಿ ಹೊರಗಡೆ ಯಾರೂ ಸಂಚರಿಸಬಾರದು, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸಿ, ಆಗಾಗ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಜೊತೆಗೆ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಚಿವರು ಜನರಲ್ಲಿ ಮನವಿ ಮಾಡಿದರು.

Share This Article
Leave a comment