ನ್ಯೂಸ್ ಸ್ನ್ಯಾಪ್
ಬೆಂಗಳೂರು
ಕಳೆದ ವರ್ಷ ಭಾರೀ ಕೋಲಾಹಲವನ್ನೇ ಸೃಷ್ಠಿ ಮಾಡಿದ್ದ ಐಎಂಎ (ಐ ಮಾನಿಟರಿ ಅಡ್ವೈಸರಿ) ಬಹುಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬ ಆರೋಪವನ್ನು ಎದುರಿಸುತ್ತಿರುವ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಮತ್ತು ಅಜಯ್ ಹಿಲೋರಿ ಸೇರಿದಂತೆ ಒಟ್ಟು ಐದು ಜನ ಪೋಲೀಸ್ ಅಧಿಕಾರಿಗಳ ವಿಚಾರಣೆ ನಡೆಸಲು ರಾಜ್ಯ ಸರ್ಕಾರವು ಸಿಬಿಐಗೆ ಅನುಮತಿಯನ್ನು ನೀಡಿದೆ.
ಪ್ರಸ್ತುತ ಐಜಿಪಿ ಮತ್ತು ಹೆಚ್ಚುವರಿ ಪೋಲೀಸ್ ಕಮೀಷನರ್ ಆಗಿರುವ ಹೇಮಂತ್ ನಿಂಬಾಳ್ಕರ್ ಪ್ರಕರಣ ನಡೆದ ಸಂದರ್ಭದಲ್ಲಿ ಆರ್ಥಿಕ ಅಪರಾಧಗಳ ವಿಭಾಗ ಮತ್ತು ಸಿಐಡಿ ವಿಭಾಗದ ಐಜಿಪಿಯಾಗಿದ್ದರು.
ಆಗ ಬೆಂಗಳೂರು ಪೂರ್ವ ವಲಯದ ಡಿಸಿಪಿಯಾಗಿದ್ದ ಅಜಯ್ ಹಿಲೋರಿ, ಆರ್ಥಿಕ ಅಪರಾಧಗಳ ವಿಭಾಗದಲ್ಲಿ ಡಿಎಸ್ಪಿ ಆಗಿದ್ದಂತಹ ಇ.ಬಿ. ಶ್ರೀಧರ್, ಕಮರ್ಷಿಯಲ್ ಸ್ಟ್ರೀಟ್ ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂ. ರಮೇಶ ಮತ್ತು ಅದೇ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪಿ. ಗೌರಿಶಂಕರ ಮೇಲೂ ಸಿಬಿಐ ತನಿಖೆ ಕೈಗೊಳ್ಳಲಿದೆ.
‘ಶ್ರೀಧರ್ ಪ್ರಕರಣದ ತನಿಖೆಯನ್ನು ಮಾಡಿದ ಬಳಿಕ ಹೇಮಂತ್ ನಿಂಬಾಳ್ಕರ್ ಮೇಲ್ವಿಚಾರಣೆ ಮಾಡಿ ಕೆಪಿಐಡಿ ಕಾಯ್ದೆಯಡಿ ಐಎಂಎ ಹಣಕಾಸು ಸಂಸ್ಥೆಯಲ್ಲ ಎಂದು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಪಟ್ಟಿದ್ದರು. ಹಾಗೆಯೇ ಐಎಂಎ ಕೆಪಿಐಡಿ ಕಾಯ್ದೆಯ ನಿಯಮಗಳನ್ನು ಉಲ್ಲಂಘನೆ ಮಾಡಿಲ್ಲ ಎಂದು ಹೇಳಿ, ಅನಗತ್ಯವಾಗಿವಾಗಿ ಐಎಂಎ ಮತ್ತು ಕಂಪನಿಯ ಮುಖ್ಯಸ್ಥ ಮಹಮದ್ ಮನ್ಸೂರ್ ಖಾನ್ ಅವರನ್ನು ಪ್ರಕರಣದಿಂದ ಆಚೆ ತರಲು ಪ್ರಯತ್ನ ಪಟ್ಟಿದ್ದಾರೆ’ ಎಂದು ಸಿಬಿಐ ವರದಿ ಹೇಳುತ್ತದೆ.
ಅಲ್ಲದೇ, ‘ಐಎಂಎ ಕಾರ್ಯಾಚರಣೆ ವ್ಯವಸ್ಥಾಪಕ ನಿಜಾಮುದ್ದೀನ್ ಅವರಿಂದ ಹಿಲೋರಿಯವರು ಕಾನೂನು ಬಾಹಿರವಾಗಿ ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ. ಶ್ರೀಧರ್ ಸಾಕಷ್ಟು ಅವಕಾಶಗಳಿದ್ದರೂ ತನಿಖೆಯಲ್ಲಿ ಸರಿಯಾದ ಪುರಾವೆಗಳನ್ನು ಸಂಗ್ರಹಿಸಲು ಅಸಮರ್ಥರಾಗಿದ್ದರು ಮತ್ತು ಕಮರ್ಷಿಯಲ್ ಸ್ಟ್ರೀಟ್ ಪೋಲೀಸ್ ಠಾಣೆ ಸಿಐ ಮತ್ತು ಎಸ್ಐ ಐಎಂಎ ವಿರುದ್ಧ ದೂರುಗಳು ಬಂದಾಗ ಸರಿಯಾದ ಕ್ರಮ ಕೈಗೊಂಡಿಲ್ಲ ಹಾಗೂ ಮನ್ಸೂರ್ ಖಾನ್ ಅವರಿಂದ ಕಾನೂನು ಬಾಹಿರವಾಗಿ ಕೊಡುಗೆಗಳನ್ನು ಸ್ವೀಕರಿಸಿದ್ದಾರೆ’ ಎಂದು ಸಿಬಿಐ ವರದಿ ಹೇಳುತ್ತದೆ.
ಈ ಎಲ್ಲ ಅಂಶಗಳ ಆಧಾರದ ಮೇಲೆ ರಾಜ್ಯ ಸರ್ಕಾರವು ಸಿಬಿಐ ವಿಚಾರಣೆಗೆ ಅನುಮತಿಯನ್ನು ನೀಡಿದೆ.
More Stories
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ
ಬೆಂಗಳೂರು-ಮೈಸೂರು ರೈಲು ಸಂಚಾರ ವಿಳಂಬ
ವಿರೋಧ ಲೆಕ್ಕಿಸದ ಮೋದಿ ಸರ್ಕಾರ