ನೆರೆ ರಾಜ್ಯ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿ ಕಾವೇರಿ ಕೊಳ್ಳದ ರೈತರಿಗೆ ಅನ್ಯಾಯ ಮಾಡಿರುವ ರಾಜ್ಯ ಸರ್ಕಾರದ ನಡೆ ವಿರೋಧಿಸಿ ರಾಜ್ಯ ಬಿಜೆಪಿ ಮಂಡ್ಯದ ಸಂಜಯ್ ವೃತ್ತದಲ್ಲಿ ಸೋಮವಾರ ತೀವ್ರವಾಗಿ ಪ್ರತಿಭಟನೆ ನಡೆಸಿದರು.
ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ವೃತ್ತದಲ್ಲಿ ಬೆಂಕಿ ಹಾಕಿ ಅಕ್ರೋಶಿಸಿದ ಪ್ರತಿಭಟನಾಕಾರರು ಬೆಂಕಿ ನಂದಿಸಲು ಮುಂದಾದ ಪೊಲೀಸರ ಜೊತೆ ನೂಕಾಟ ನಡೆಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಪ್ರತಿಭಟನಕಾರರು ಕಾವೇರಿ ಕೊಳ್ಳದ ಪ್ರದೇಶದ ರೈತರಿಗೆ ನೀರು ಕೊಡದೆ ಜಮೀನು ಒಣಗಿಸಿ ಹುರು ಚೆಲ್ಲಿಸಲು ಮುಂದಾಗಿದೆ ಎಂದು ಕಿಡಿಕಾರಿದರು.
ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ ತಕ್ಷಣ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಣತಿಯಂತೆ ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನದಿ ಪ್ರಾಧಿಕಾರ ಮೆಚ್ಚಿಸಲು ಕಾವೇರಿ ಕೊಳ್ಳದ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿ ರಾಜ್ಯದ ರೈತರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಕೆ ಆರ್ ಎಸ್ ನಲ್ಲಿ113 ಅಡಿ ಇದ್ದ ನೀರು ಇದೀಗ 105 ಅಡಿಗೆ ಕುಸಿದಿದೆ, ಇದುವರೆಗೆ ಒಂದು ವಾರದಲ್ಲಿ 10 ಟಿಎಂಸಿ ನೀರು ಹರಿದು ಹೋಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಅಭಾವ ಎದುರಾಗಲಿದೆ, ಕರ್ನಾಟಕ ರಾಜ್ಯದ ರೈತರಿಗೆ ದ್ರೋಹ ಮಾಡಲಾಗಿದೆ ಎಂದು ಹೇಳಿದರು.
ನೀರನ್ನು ಬಿಟ್ಟು ಇದೀಗ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಅಷ್ಟೇ ಅಲ್ಲದೆ ಸರ್ವಪಕ್ಷ ಸಭೆ ಕರೆದಿರುವುದು ಕಾಂಗ್ರೆಸ್ ಸರ್ಕಾರದ ಹುನ್ನಾರವಾಗಿದ್ದು, ಮಂಡ್ಯ ಜಿಲ್ಲೆಯ ಶಾಸಕರು ಡಬಲ್ ಆಕ್ಟಿಂಗ್ ಬಿಡಬೇಕು, ರೈತರ ಎದುರು ನೀರು ಬಿಡಬೇಡಿ ಎಂದು ನಾಟಕವಾಡಿ ಅಲ್ಲಿ ಮುಖ್ಯಮಂತ್ರಿ,ಉಪ ಮುಖ್ಯಮಂತ್ರಿ ಎದುರು ತಲೆಕೆರೆದು ನಿಂತುಕೊಳ್ಳುತ್ತಾರೆ, ಏಕೆ ನೀರು ಬಿಟ್ಟಿದ್ದೀರಿ, ನಿಲ್ಲಿಸಿ ಎಂದು ಹೇಳುವ ತಾಕತ್ತು ಇವರಿಗಿಲ್ಲ ಎಂದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದುರಂಕಾರದ ಪರಮಾವಧಿಯಾಗಿದ್ದಾರೆ, ರೈತರೇ ಸುಪ್ರೀಂ ಕೋರ್ಟ್ ಗೆ ಹೋಗುವುದಾದರೆ ನೀವು ಏಕೆ ಇದ್ದೀರಿ, ಕಾವೇರಿ ಕಣಿವೆ ರೈತರಿಗೆ ದ್ರೋಹ ಮಾಡಿರುವ ನಿಮಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಸದೆ ಸುಮಲತಾ ಅಂಬರೀಶ್, ಅಶ್ವಥ್ ನಾರಾಯಣ ಗೌಡ, ಮೋಹನ್ ವಿಶ್ವ , ಕೆ.ಸಿ.ನಂಜುಂಡೇಗೌಡ, ಕೆ ಎಸ್ ಸಚ್ಚಿದಾನಂದ, ಅಶೋಕ್ ಜಯರಾಮ್ ನೇತೃತ್ವ ವಹಿಸಿದ್ದರು.