Editorial

ಎಲ್ಲರಿಗೂ ಇಹುದು ವೃತ್ತಿ ಗೌರವ (ಬ್ಯಾಂಕರ್ಸ್ ಡೈರಿ)

ಅಂದು ಮಧ್ಯಾಹ್ನ ಮೂರು ಗಂಟೆ ಇರಬೇಕೆನಿಸುತ್ತದೆ. ಸಂಬಳದ ಮೇಲಿನ ಸಾಲ ಪಡೆಯಲು ಲೋಕೇಶ್ (ಹೆಸರು ಬದಲಿಸಲಾಗಿದೆ) ಬಂದಿದ್ದರು.

ಸಾಲವನ್ನು ಪಡೆಯದವರು ಯಾರಾದರೂ ಇದ್ದಾರೆಯೇ ಜಗದೊಳಗೆ ಎಂದರೆ ನನಗೇನೋ ಅನುಮಾನ. ಸಾಲ ಪಡೆಯಲು ಅನೇಕ ವೈಯಕ್ತಿಕ ಕಾರಣಗಳಿರುತ್ತವೆ. ದೊಡ್ಡ ದೊಡ್ಡ ಉದ್ಯಮಿಗಳು ಕೋಟಿ ಕೋಟಿಗಳ ಸಾಲವನ್ನು ಪಡೆದರೆ, ಉದ್ಯೋಗಿಗಳು ಲಕ್ಷ ಲಕ್ಷ ರೂಗಳ ಸಾಲವನ್ನು ಪಡೆಯುತ್ತಾರೆ ಮತ್ತು ಬೀದಿ ಬದಿ ವ್ಯಾಪಾರಿಗಳು ಹತ್ತೋ ಇಪ್ಪತ್ತೋ ಸಾವಿರ ರೂಪಾಯಿಗಳ ಸಾಲಕ್ಕಾಗಿಯೇ ಒದ್ದಾಡುತ್ತಾರೆ. ಹತ್ತು ಸಾವಿರ ರೂಪಾಯಿಗಳ ಸಾಲ ಅವರ ಖಾತೆಗೆ ಬಂದಾಗ ಅವರ ಮುಖದಲ್ಲಿ ಕಾಣುವ ಧನ್ಯತೆಯೋ, ಉಪಕೃತ ಭಾವವೋ, ನಿರಾಳವೋ, ಸಂತೋಷವೋ ಅಥವಾ ಸಾಲದ ಹೊರೆಯ ಒಂದು ಭಾರವೋ ಎಲ್ಲವೂ ಮಿಶ್ರಿತವಾದ ಭಾವವನ್ನು ಕಂಡಿದ್ದೇನೆ. ಅದೇ ತುಂಬ ದೊಡ್ಡವರಿಗೆ ಸಾಲ ಕೊಟ್ಟಾಗ ಅವರೇ ನಮಗೆ ಉಪಕಾರ ಮಾಡುತ್ತಿದ್ದಾರೆಂಬ ಒಂದು ಬಗೆಯ ಗತ್ತಿನಿಂದ ಹೋಗುವುದನ್ನೂ ನೋಡಿದ್ದೇನೆ.

ಸಾಲ ಪಡೆಯುವಲ್ಲಿ ಚಿಕ್ಕ ಸಾಲ ದೊಡ್ಡ ಸಾಲ ಆಂತೇನಿಲ್ಲ. ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ. ಆದರೆ ಸಾಲವನು ಕೊಂಬಾಗ ಹಾಲೋಗರುಂಡಂತೆ . . . .

ಹತ್ತು ಲಕ್ಷ ಸಾಲ ಪಡೆಯಲು ಬಂದವರನ್ನೂ ನಾವು ನಮ್ಮ ಮುಂದಿನ ಕುರ್ಚಿಯಲ್ಲೇ ಕೂರಿಸೋದು, ಹತ್ತು ಸಾವಿರ ಸಾಲ ಪಡೆಯಲು ಬಂದವರನ್ನೂ ನಾವು ಅದೇ ಕುರ್ಚಿಯಲ್ಲೇ ಕೂರಿಸೋದು. ಸಮಾನತೆ ಎಂದರೆ ಇದೇನೇ ಅನ್ನೋಣವೇ?

ಸರಿ, ಲೋಕೇಶ್ ಅವರ ವಿಷಯಕ್ಕೆ ಬರೋಣ. ಆ ಹುಡುಗ ನಗರ ಸಭೆಯಲ್ಲಿ ರಸ್ತೆ ಗುಡಿಸುವ ಕೆಲಸದಲ್ಲಿ ಇದ್ದವನು. ಅವನಿಗೆ ಎರಡು ಲಕ್ಷ ರೂ ಸಾಲ ಮಂಜೂರಾಗಿತ್ತು. ರಸ್ತೆಯಲ್ಲಿ ಅವರು ಕಸ ಗುಡಿಸುವಾಗ ಬಹುತೇಕರು ನಾಲ್ಕಡಿ ದೂರ ನಿಂತು ಮಾತಾಡ್ತಾರಲ್ಲಾ ಆದರೆ ಬ್ಯಾಂಕುಗಳಲ್ಲಿ ಅವರಿಗೂ ಇತರರಿಗೂ ಒಂದೇ ರೀತಿಯ ಉಪಚಾರ. ಅವರನ್ನೂ ಎಲ್ಲರಂತೆಯೇ ನೋಡುತ್ತೇವೆ. ನಮ್ಮೆದುರೇ ಕೂಡಿಸಿ, ಮಾತನಾಡಿಸಿ, ಸಹಿಗೆ ನಮ್ಮ ಪೆನ್ನನ್ನೇ ಕೊಟ್ಟು ಸಾಲ ಕೊಡುತ್ತೇವೆ. ಹೀಗೇ ಮಾತಿನ ಕುಶಾಲಿಯಲ್ಲಿ ನಾನು ‘ಲೋಕೇಶ್ ಏನಕ್ಕೆ ಈ ಸಾಲ? ದುಡ್ಡು ಬಂತು ಅಂತ ಸುಮ್ಮ ಸುಮ್ಮನೆ ಖರ್ಚು ಮಾಡಬೇಡಿ. ಜೋಪಾನ’ ಎಂದೆ. ಹಿರಿಯಳಾಗಿ ಹಾಗೆ ಹೇಳುವುದು ನನ್ನ ಕರ್ತವ್ಯ ಎಂದು ನನ್ನ ಭಾವನೆ. ಅಷ್ಟೇ ಹುಷಾರಿಂದ ಲೋಕೇಶ್ ‘ಮೇಡಂ ನನ್ನ ಮಗಳು ಮೆಜಾರಿಟಿಗೆ ಬಂದವ್ಳೆ. ಎಲ್ರನ್ನೂ ಕರ್ದು ಫಂಕ್ಷನ್ ಮಾಡ್ಬೇಕಲ್ಲಾ. ಅದಕ್ಕೆ ಅರವತ್ತು ಸಾವಿರ ಖರ್ಚಾಗುತ್ತೆ. ಇನ್ನುಳಿದಿದ್ದು ಮನೆಗೆ ಸುಣ್ಣ ಬಣ್ಣ ಮತ್ತು ಸಣ್ಣ ಪುಟ್ಟ ರಿಪೇರಿ ಖರ್ಚಿದೆ ಅದಕ್ಕೆ ಸರ್ಯಾಗುತ್ತೆ’ ಎಂದ. ‘ಅರೆ ಮೆಜಾರಿಟಿಗೆ ಬಂದಿದ್ದಕ್ಕೆ ಅಷ್ಟೊಂದು ಖರ್ಚು ಮಾಡಿ ಫಂಕ್ಷನ್ ಮಾಡಬೇಕಾ?’ ಎಂದು ಕೇಳಿದೆ. ಫಟ್ ಎಂಬ ಉತ್ತರ ಅವನಿಂದ ಬಂದಿತು ‘ಮೇಡಂ ನಾನೂ ನಮ್ ನೆಂಟರೆಲ್ಲರ ಮನೆಗೂ ಈ ಥರದ್ದಕ್ಕೆ ಹೋಗಿ ಮುಯ್ಯಿ ಮಾಡಿ ಬಂದಿಲ್ವಾ? ಐದು ಸಾವಿರ, ಹತ್ತು ಸಾವಿರ, ಚಿನ್ನದ ಡಾಲರು, ಉಂಗುರ ಎಲ್ಲಾ ಮುಯ್ಯಿ ಮಾಡಿಲ್ವಾ? ಈಗ ನಮ್ ಮಗ್ಳಿಗೂ ಮಾಡ್ಲಿ. ಕರೀದೇ ಇದ್ರೆ ಮುಯ್ಯಿ ಹೇಗೆ ವಾಪಸು ಬರುತ್ತೆ ಹೇಳಿ? ಇದೊಂದು ಫಂಕ್ಷನ್ ಆಗ್ಲಿ ಕಡ್ಮೆ ಅಂದ್ರೂ ಎರಡ್ ಲಕ್ಷ ನಂಗೆ ವಾಪಸ್ ಬರುತ್ತೆ. ನಿಮ್ ಸಾಲ ಅರ್ಧ ಅಲ್ಲೇ ತೀರಿಸ್ಬಿಡ್ತೀನಿ’ ಅಂದು ಹೋದ. ಎಷ್ಟೋ ಜನ ಕೆಳ ಮಧ್ಯಮ, ಮೇಲ್ಮಧ್ಯಮ ವರ್ಗದ ಜನರು ಐನೂರು, ಸಾವಿರ ಉಡುಗೊರೆ ಕೊಡೋಕೇನೇ ನಾಲ್ಕಾರು ಬಾರಿ ಯೋಚಿಸುವಾಗ ಇವರು ಅಷ್ಟು ದೊಡ್ಡದಾಗಿ ಯೋಚಿಸುತ್ತಾರಲ್ಲಾ ಎಂದು ಆಶ್ಚರ್ಯವೂ, ಸಂತೋಷವೂ ಆಯಿತು.

ಆ ಕ್ಷಣಕ್ಕೆ ಶ್ರೀಮಂತರು ಯಾರು ಎಂಬ ಒಂದು ಭಾಷಣದ ತುಣುಕು ನೆನಪಿಗೆ ಬಂತು. ಮನೆಯ ಯಜಮಾನತಿ ತಮ್ಮ ಮಗಳ ಮದುವೆಗೆ ತಮ್ಮ ಕೆಲಸದಾಕೆಗೆ ಸೀರೆ ಕೊಡಬೇಕೆಂದು ಅಂಗಡಿಯವನಿಗೆ ತುಂಬಾ ಕಡಿಮೆ ಬೆಲೆಯ ಒಂದು ಸೀರೆ ಕೊಡಿ ಅಂದರಂತೆ. ಅದೇ ಆಂಗಡಿಗೆ ಕೆಲಸದಾಕೆ ಬಂದು ನಮ್ಮ ಯಜಮಾನತಿಯ ಮಗಳ ಮದುವೆ, ಒಂದು ಒಳ್ಳೆ ಸೀರೆ ಕೊಡಿ ಎಂದು ಕೇಳಿದಳಂತೆ.

ಇದಾಗಿ ಎರಡು ದಿನಗಳಿಗೇ ಒಂದು ಗಂಡ ಹೆಂಡತಿ ವೈಯಕ್ತಿಕ ಸಾಲಕ್ಕಾಗಿ ಬಂದಿದ್ದರು. ಆ ಹುಡುಗ ಓದಿಕೊಂಡವನಂತೆ ಕಾಣುತ್ತಿದ್ದ. ಅರ್ಜಿಯನ್ನು ಸುಲಭವಾಗಿ ಭರ್ತಿ ಮಾಡುತ್ತಿದ್ದ. ಹುಡುಗಿ ತಿದ್ದಿ ತೀಡಿದಂಥ ರೂಪ. ಉದ್ದನೆಯ ಕೂದಲು, ಕಿವಿಯಲ್ಲಿ ಚಂದದ ಚಿನ್ನದೋಲೆ, ಒಳ್ಳೆಯ ಬಟ್ಟೆ ಧರಿಸಿದ್ದಳು. ನಾ ತಿಳಿದೆ ಇವರಿಬ್ಬರು ಬಹುತೇಕ ಶಾಲಾ ಶಿಕ್ಷಕರೇ ಇರಬೇಕು ಎಂದು. ಅರ್ಜಿ ಬರೆದು ಕೊಟ್ಟ ಮೇಲೆ ಗೊತ್ತಾಗಿದ್ದು ನಗರಸಭೆಯ ಉದ್ಯೋಗಿಗಳು ಎಂದು. ‘ಏನು ಕೆಲಸ ನಗರ ಸಭೆಯಲ್ಲಿ ನಿಮಗೆ’ ಎಂದು ಕೇಳಿದೆ. ಇಬ್ಬರೂ ಒಟ್ಟಿಗೇ ‘ಬೀದಿ ಕಸ ಗುಡಿಸೋದು’ ಎಂದರು. ನನ್ನ ಮುಖ ಕರೆಂಟ್ ಶಾಕ್ ಹೊಡೆದ ಕಾಗೆಯಂತೆ ಆಯಿತು. ಸುಧಾರಿಸಿಕೊಳ್ಳಲು ಸ್ವಲ್ಪ ಸಮಯವೇ ಆಯಿತು ಎನ್ನಿ. ಸಾವರಿಸಿಕೊಂಡು ‘ಏನು ಓದಿದ್ದೀರಿ’ ಎಂದೆ. ಹುಡುಗ ‘ನಾನು ಐ ಟಿ ಐ. ಇವಳು ಡಿಗ್ರಿ ಓದುತ್ತಿದ್ದಳು. ಮದುವೆ ಆದ ಮೇಲೆ ದಿಸ್ಕಂಟಿನ್ಯೂ ಮಾಡಿದ್ದಾಳೆ’ ಎಂದ. ‘ಯಾಕಮ್ಮಾ ಮುಂದೆ ಓದಲಿಲ್ಲ’ ನನ್ನ ಪ್ರಶ್ನೆ. ‘ಮದುವೆಗೆ ಮುಂಚೇನೇ ಮುಂದೆ ಓದೋಕೆ ಅವಕಾಶ ಕೊಟ್ಟರೇನೇ ನಾನು ಮದುವೆ ಆಗೋದು ಎಂದು ಹೇಳಿದ್ದೆ. ಇವರೂ ಹೂ ಅಂದಿದ್ದರು. ಮದುವೆ ಆದ ತಕ್ಷಣಾನೇ ಮಕ್ಕಳು, ಮನೆ ಕೆಲಸ ಇದರಲ್ಲಿ ಓದೋದು ಎಲ್ಲಿ ಬಂತು? ನನಗೆ ಈಗಲೂ ಓದೋಕೆ ಆಸೆ’ ಎಂದಳು. ಹುಡುಗ ಕೂಡಲೇ ‘ಮೇಡಂ ಮನೆ ನಿಭಾಯಿಸಿ, ಹೊರಗೆ ಕೆಲಸ ಮಾಡೋದ್ರಲ್ಲೇ ಸಾಕಾಗುತ್ತೆ. ಮಕ್ಕಳು ದೊಡ್ಡೋರಾಗ್ಲಿ ಆಮೇಲೆ ಇವಳು ಓದಲಿ ಯಾರು ಬೇಡ ಅಂತಾರೆ?’ ಎಂದು ಮರು ಉತ್ತರ ನೀಡಿದ. ‘ಅಲ್ಲ ಈವುಗಳು ಇಷ್ಟು ಓದಿ ಬೇರೆ ಕೆಲಸ ಹುಡುಕಿಕೊಳ್ಳೋಕೆ ಆಗುತ್ತಾ ಇರಲಿಲ್ವಾ?’ ಎಂದು ಕುತೂಹಲದಿಂದ ಕೇಳಿದೆ. ಆ ಹುಡುಗ ‘ಅಯ್ಯೋ ಮೇಡಂ ನಮ್ಮಲ್ಲಿ ಡಿಗ್ರಿ, ಡಬಲ್ ಡಿಗ್ರಿ ಆದೋರೂ ಇದಾರೆ. ಎಲ್ಲೂ ಸರಿ ಕೆಲಸ ಸಿಗದಿದ್ದಕ್ಕೇ ಇಲ್ಲಿಗೆ ಬಂದಿರೋದು. ಕೆಲವರು ಫ್ಯಾಕ್ಟ್ರಿ ಕೆಲಸ ಸರಿ ಹೋಗದೇ ಬೆಂಗಳೂರಿನಿಂದ ವಾಪಸ್ ಬಂದವ್ರೆ. ಬೆಳಿಗ್ಗೆ ಐದಕ್ಕೇ ಮೇಸ್ತ್ರಿ ಹತ್ರ ನಿಂತುಕೊಂಡು ಯಾವ ಏರಿಯಾ ಹೇಳ್ತಾನೋ ಅಲ್ಲಿಗೆ ರಸ್ತೆ ಗುಡಿಸೋಕೆ ಹೋಗ್ತೀವಿ. ಮೊದಮೊದಲು ತುಂಬ ಸಂಕಟ, ದುಃಖ, ಬೇಜಾರು ಎಲ್ಲಾ ಆಗ್ತಿತ್ತು. ಅಸಹ್ಯ ಕೂಡ ಆಗ್ತಿತ್ತು. ಆದರೆ ಈಗ ಅಂಥಾ ಬೇಜಾರು ಏನಿಲ್ಲ. ಸ್ವಚ್ಛ ಮಾಡೋದು ದೇವರ ಕೆಲಸ ಎಂದು ಮನಸ್ಸಿಗೆ ತರಬೇತಿ ಕೊಟ್ಟುಬಿಟ್ಟಿದ್ದೇವೆ. ಸ್ವಚ್ಛ ಭಾರತ್ ಗೆ ನಮ್ಮ ಕೊಡುಗೆ ಇದೆ ಅನ್ನೋ ಖುಷಿ ಮೇಡಂ. ನಾವು ಒಂದು ತಿಂಗಳು ಸ್ಟ್ರೈಕ್ ಮಾಡ್ಬಿಟ್ರೆ ಎಲ್ಲಾರ ಮನೆ ಹಿತ್ತಲೂ ಗಬ್ಬು, ರಸ್ತೇನೂ ಗಬ್ಬು. ನಮ್ಮನ್ನು ನೋಡಿ ಮೂಗು ಮುಚ್ಚಿಕೊಳ್ಳೋ ಜನ, ನಾವಿಲ್ದೇ ಇದ್ರೆ ಅವರ ಮನೆಯೊಳಗೂ ಮೂಗು ಮುಚ್ಚಿಕೊಳ್ಳಬೇಕಾಗುತ್ತೆ. ನಮ್ಮ ಕೆಲಸದ ಬಗ್ಗೆ ನಮಗೆ ಗೌರವ ಇದೆ. ಕೆಲಸ ಯಾವುದಾದರೂ ಸರಿಯೇ ಅಚ್ಚುಕಟ್ಟಾಗಿ, ಶ್ರದ್ಧೆಯಿಂದ, ಪ್ರಾಮಾಣಿಕವಾಗಿ ಮಾಡಬೇಕು ಅಂತ ಗಾಂಧೀಜೀನೇ ಹೇಳಿಲ್ವಾ? ಮಧ್ಯಾಹ್ನ ಎಲ್ಲಾ ಕೆಲಸ ಮುಗಿಸಿ ಬಂದು ಎರಡೆರಡು ಸಲ ತಿಕ್ಕಿ ಶುದ್ಧ ಆಗೋ ಹಾಗೆ ಸ್ನಾನ ಮಾಡಿ ದೇವರ ಪೂಜೆ ಮಾಡೀನೇ ನಾವು ಊಟ ಮಾಡೋದು. ನಾವೂ ಮನೆಗೆ ಬಂದ ಮೇಲೆ ಎಲ್ಲರ ಹಾಗೆ ಶುದ್ಧವಾದ ಬಟ್ಟೆ ಹಾಕೊಂಡು ಶುದ್ಧವಾದ ಊಟಾನೇ ಮಾಡೋದು. ನಾವು ಓದಿದ ಓದಿಗೂ ಮಾಡೋ ಕಲಸಕ್ಕೂ ಸಂಬಂಧ ಇರಬೇಕಂತ ಏನಿಲ್ಲ. ದೇವರು ಕೊಟ್ಟಿರೊ ಕೆಲಸಾನ ಶ್ರದ್ಧೆ ಭಕ್ತಿಯಿಂದ ಮಾಡಿದರೆ ಸಾಕು’ ಎಂದು ಹೇಳಿ ಹೊರಟರು.

ಗಂಟೆಗಟ್ಟಲೆ ಭಾಷಣ ಮಾಡಿ ಉಪದೇಶ ಮಾಡೋರಿಗಿಂತ, ನಾಲ್ಕು ಮಾತನಾಡಿದರೂ ತಾವು ಮಾಡುವ ಕೆಲಸದ ಮೇಲಿನ ಶ್ರದ್ಧೆಯಿಂದ ಇವರೇ ದೊಡ್ಡವರಾಗಿ ಕಂಡರು ನನಗೆ.

ಕಲಿಯುವುದು ಎಂದಿಗೂ ಮುಗಿಯುವುದಿಲ್ಲ. ತೆರೆದು ಕಲಿಯುವ ಮನಸ್ಸು, ನೋಡುವ ಕಣ್ಣು, ಕೇಳುವ ಕಿವಿ ಇರಬೇಕಷ್ಟೇ.

-ಡಾ.ಶುಭಶ್ರೀಪ್ರಸಾದ್, ಮಂಡ್ಯ.

Team Newsnap
Leave a Comment
Share
Published by
Team Newsnap

Recent Posts

ರೇವಣ್ಣ ಕೇಂದ್ರ ಕಾರಾಗೃಹಕ್ಕೆ ಶಿಪ್ಟ್ : 4567 ಖೈದಿ ಸಂಖ್ಯೆ ನೀಡಿಕೆ

ಬೆಂಗಳೂರು : ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಜೆಡಿಎಸ್​ ಶಾಸಕ ಹಾಗೂ ಮಾಜಿ ಸಚಿವ ಹೆಚ್.… Read More

May 8, 2024

SSLC ಫಲಿತಾಂಶ ಪರಿಶೀಲಿಸಲು ಸುಲಭ ಹಂತಗಳು : ವಿವರ

ಬೆಂಗಳೂರು: ನಾಳೆ ( ಮೇ 9 ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ-… Read More

May 8, 2024

ಈಜು ಕಲಿಯಲು ಹೋದ 10 ವರ್ಷದ ಬಾಲಕ ನೀರುಪಾಲು

ರಾಯಚೂರು: ತಾಲೂಕಿನ ಹೆಂಬೆರಾಳ ಗ್ರಾಮದಲ್ಲಿ ಈಜು ಕಲಿಯಲು ಹೋಗಿದ್ದ ಬಾಲಕ ನೀರುಪಾಲಾದ ಘಟನೆ ನಡೆದಿದೆ. ವಿನಾಯಕ (10) ಜೇಗರ್‌ಕಲ್ ಮಲ್ಲಾಪೂರು… Read More

May 8, 2024

ನಾಳೆ ( May 9 ) SSLC ಫಲಿತಾಂಶ ಪ್ರಕಟ

ಬೆಂಗಳೂರು: ನಾಳೆ ( ಮೇ 9 ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ-… Read More

May 8, 2024

ರಾಜ್ಯದ ಎರಡೂ ಹಂತದ ಮತದಾನದ ವಿವರ : ಮಂಡ್ಯ ಪ್ರಥಮ – ಬೆಂಗಳೂರು ದಕ್ಷಿಣ ಕೊನೆ

ಬೆಂಗಳೂರು : ರಾಜ್ಯದಲ್ಲಿ ನಡೆದ ಎರಡು ಹಂತದ ಚುನಾವಣೆಯಲ್ಲಿ 28 ಕ್ಷೇತ್ರಗಳ ಮತದಾನ ಸಮಗ್ರ ವಿವರ. Join WhatsApp Group… Read More

May 8, 2024

ಹೆಚ್‌.ಡಿ ರೇವಣ್ಣಗೆ ಹೊಟ್ಟೆ ಉರಿ, ಎದೆನೋವು: ದಿಢೀರ್‌ ಆಸ್ಪತ್ರೆಗೆ ಶಿಫ್ಟ್‌!

ಹೆಚ್‌.ಡಿ ರೇವಣ್ಣಗೆ ಮಧ್ಯಾಹ್ನದಿಂದ ಹೊಟ್ಟೆ ಉರಿ, ಎದೆನೋವು ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್‌ ಟೆಸ್ಟ್ ಮಾಡಿಸಿದ್ದ ಎಸ್‌ಐಟಿ ಅಧಿಕಾರಿಗಳು ಎದೆ ಉರಿ… Read More

May 7, 2024