ಕರುನಾಡ ಜಿಲ್ಲೆಗಳ ಕಿರು ಪರಿಚಯ – 4-ವಿಜಯಪುರ

Team Newsnap
1 Min Read

ಕಲಾವತಿ ಪ್ರಕಾಶ್.
ಬೆಂಗಳೂರು.

ಕನ್ನಡ ನಾಡಿನ ಹೆಮ್ಮೆಯ ಶರಣ
ಬಸವಣ್ಣ ಹುಟ್ಟಿದ ಜಿಲ್ಲೆಯಿದು
ಜಗದೊಳಗಿರುವ ಏಳು ಅದ್ಭುತದೊಳು
ಗೋಳಗುಮ್ಮಟವೂ ಒಂದಹುದು

ಕರ್ನಾಟಕದ ಗೊಮ್ಮಟ ನಗರ
ಇದುವೇ ನಮ್ಮ ವಿಜಯಪುರ
ದೆಹಲಿ ಸುಲ್ತಾನರ ಬಹಮನಿ ರಾಜರ
ನಿಜಾಮರಾಳ್ವಿಕೆಗೊಳಪಟ್ಟ ಪುರ

ಇಸ್ಲಾಮಿಕ್ ಶೈಲಿಯ ವಾಸ್ತು ಶಿಲ್ಪಗಳ
ಶಿಲ್ಪ ಕಲೆಗಳ ತವರೂರು
ಇತಿಹಾಸದಲ್ಲೇ ಎಂಥ ಶತೃವೂ
ಈ ಕೋಟೆಯ ಭೇದಿಸಿರಲಾರರು

ಭಾರತದತಿ ದೊಡ್ಡ ಗೊಮ್ಮಟವು
ಜಗದೊಳೆರಡನೆ ಸ್ಥಾನ ಪಡೆದಿದೆ
ಯಾವ ಕಂಬದ ಆಧಾರವಿಲ್ಲದೆ
ಗೋಡೆಯ ಮೇಲೇ ನಿಂತಿದೆ

ಗೊಮ್ಮಟದೊಳಗೆ ಆಡಿದ ಮಾತು
ಏಳು ಬಾರಿ ಪ್ರತಿಧ್ವನಿಸುವುದು
ಗೋಡೆಯ ಬಳಿ ಪಿಸಿಗುಟ್ಟಿದ ಮಾತು
ಮತ್ತೊಂದು ಬದಿಯಲಿ ಕೇಳುವುದು

ಇಬ್ರಾಹಿಮ್ ರೋಜಾ ಜುಮ್ಮಾ ಮಸೀದಿ
ಬಾರಾ ಕಮಾನು ಇಲ್ಲಿಹವು
ಉಪ್ಲಿ ಬುರ್ಜಾ ತಾಜ್ ಬಾವಡಿ
ವಿಶೇಷತೆಯನು ಮೆರೆದಿಹವು

ಶಿವಗಿರಿ ಶಿವನ ದೊಡ್ಡ ಪ್ರತಿಮೆಯ
ಧಾರ್ಮಿಕ ನೆಲೆಯೂ ಈ ನಾಡು
ಸಿದ್ದೇಶ್ವರರ ಅಕ್ಕ ನಾಗಮ್ಮನ
ಗುಹಾಂತರ ದೇವಾಲಯ ಈ ಬೀಡು

ಫ.ಗು ಹಳಕಟ್ಟಿ ಸಂಗ್ರಹಿಸಿರುವ
ವಚನಕಾರರು ೨೫೦ಕ್ಕೂ ಹೆಚ್ಚಿಹರು
ಜಾನಪದ ಸಾಹಿತ್ಯಕೆ ಕೊಡುಗೆ ನಿಡಿದ
ಮಧುರ ಚನ್ನರದೂ ಈ ಊರು.

Share This Article
Leave a comment